ಹೈದರಾಬಾದ್ : ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ 38 ವರ್ಷದ ವೈದ್ಯೆಯೊಬ್ಬರು ಅಮೆರಿಕಾದ ವೀಸಾ ಸಿಗದ ಕಾರಣ ಮನನೊಂದು, ಖಿನ್ನತೆಗೊಳಗಾಗಿ ತಮ್ಮ ಫ್ಲಾಟ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ(Doctor suicide) ಘಟನೆ ಹೈದರಾಬಾದ್ನಲ್ಲಿ ನಡೆದಿದೆ (ನ. 24) ವರದಿಯಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ರೋಹಿಣಿ (38) ಆತ್ಮಹತ್ಯೆ ಮಾಡಿಕೊಂಡಿರುವ ವೈದ್ಯೆ. ಮನೆಯ ಬಾಗಿಲು ತೆರಯದ ಹಿನ್ನೆಲೆ ಆಕೆಯ ಸಹಾಯಕಿಯೇ ಮಾಹಿತಿ ಮೇರೆಗೆ ಕುಟುಂಬ ಸದಸ್ಯರು ಬಾಗಿಲು ಒಡೆದು ನೋಡಿದಾಗ ಆಕೆ ಮೃತಪಟ್ಟಿರುವುದು ಶನಿವಾರ ಬೆಳಕಿಗೆ ಬಂದಿದೆ. ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತಲುಪಿ ಪರಿಶೀಲಿಸಲಾಗಿದೆ. ಶುಕ್ರವಾರ ರಾತ್ರಿ ಆಕೆ ಅತಿಯಾದ ನಿದ್ರೆ ಮಾತ್ರೆಗಳನ್ನು ಸೇವಿಸಿರಬಹುದು ಅಥವಾ ಸ್ವತಃ ಚುಚ್ಚುಮದ್ದು ಸೇವಿಸಿರಬಹುದು ಎಂದು ಶಂಕಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿರುವುದರಿಂದ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಮನೆಯಲ್ಲಿ ಡೆತ್ನೋಟ್ ಪತ್ತೆಯಾಗಿದೆ. ಅದರಲ್ಲಿ ಅವರು ಖಿನ್ನತೆಗೆ ಒಳಗಾಗಿದ್ದಾರೆಂದು ಬರೆದಿದ್ದು, ಅಮೆರಿಕಾದ ವೀಸಾ ಅರ್ಜಿ ತಿರಸ್ಕೃತಗೊಂಡ ಬಗ್ಗೆಯೂ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮೃತ ವೈದ್ಯೆ ರೋಹಿಣಿ ತಾಯಿ ಲಕ್ಷ್ಮಿ ಪಿಟಿಐ ಜೊತೆ ಮಾತನಾಡಿದ್ದು, ತಮ್ಮ ಮಗಳು ಕೆಲಸಕ್ಕಾಗಿ ಅಮೆರಿಕಕ್ಕೆ ಹೋಗಲು ಕಾತರದಿಂದ ಕಾಯುತ್ತಿದ್ದಳು. ಆದರೆ ವೀಸಾ ನಿರಾಕರಣೆಯಿಂದ ಖಿನ್ನತೆಗೆ ಒಳಗಾಗಿದ್ದಳು. ಹತ್ತಿರದಲ್ಲಿ ಗ್ರಂಥಾಲಯಗಳು ಇದ್ದ ಕಾರಣ ರೋಹಿಣಿ ಹೈದರಾಬಾದ್‌ನ ಪದ್ಮಾ ರಾವ್ ನಗರದಲ್ಲಿ ಉಳಿದುಕೊಂಡಿದ್ದಳು. ಆಂತರಿಕ ಔಷಧದಲ್ಲಿ ಪರಿಣತಿ ಪಡೆಯಲು ಅವಳು ಬಯಸಿದ್ದಳು ಎಂದು ಹೇಳಿದ್ದಾರೆ.
ಮಗಳು ಪ್ರತಿಭಾನ್ವಿತೆಯಾಗಿದ್ದು, ಭವಿಷ್ಯದ ಬಗ್ಗೆ ದೊಡ್ಡ ಕನಸುಗಳನ್ನು ಕಂಡಿದ್ದಳು. 2005 ಮತ್ತು 2010ರ ನಡುವೆ ಕಿರ್ಗಿಸ್ತಾನ್‌ನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದಳು. ಶೈಕ್ಷಣಿಕ ದಾಖಲೆ ಅತ್ಯುತ್ತಮವಾಗಿತ್ತು. ರೋಹಿಣಿಗೆ ಭಾರತದಲ್ಲಿಯೇ ಇದ್ದು ವೈದ್ಯಕೀಯ ವೃತ್ತಿ ಮಾಡುವಂತೆ ಸಲಹೆ ನೀಡಿದ್ದೆ, ಆದರೆ ಅಮೆರಿಕದಲ್ಲಿ ದಿನಕ್ಕೆ ರೋಗಿಗಳ ಸಂಖ್ಯೆ ಸೀಮಿತವಾಗಿದೆ. ಮತ್ತು ಆದಾಯ ಉತ್ತಮವಾಗಿದೆ ಎಂದು ಹೇಳಿದ್ದಳು ಎಂದು ತಿಳಿಸಿದ್ದಾರೆ (ಏಜೆನ್ಸೀಸ್).