Kiren Rijiju > ಪವನ್ ಖೇರಾ ಅರೆನಗ್ನ ಹೇಳಿಕೆಗೆ ಕಿರಣ್ ರಿಜಿಜು ಖಡಕ್ ತಿರುಗೇಟು!  
ದೇಶ

ಯಾರಾದ್ರೂ ಕೋಟ್-ಸೂಟ್ ಧರಿಸಿ ಈಜ್ತಾರಾ...?: ಪವನ್ ಖೇರಾ ಅರೆನಗ್ನ ಹೇಳಿಕೆಗೆ ಕಿರಣ್ ರಿಜಿಜು ಖಡಕ್ ತಿರುಗೇಟು! | Kiren Rijiju

ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಅರುಣಾಚಲ ಪ್ರದೇಶದ ನದಿಯೊಂದರಲ್ಲಿ ಈಜುತ್ತಿರುವ ವಿಡಿಯೋವನ್ನು ಹಂಚಿಕೊಂಡು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸವಾಲು ಎಸೆದ ಕೆಲವೇ ದಿನಗಳಲ್ಲಿ, ಈ ಫಿಟ್‌ನೆಸ್ ಚರ್ಚೆಯು ಕಾಂಗ್ರೆಸ್ ಸಂಸದ ಪವನ್ ಖೇರಾ ಮತ್ತು ಕಿರಣ್ ರಿಜಿಜು ನಡುವಿನ ವಾಗ್ದಾಳಿಗೆ ಕಾರಣವಾಗಿದೆ.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸಂಸದ ಪವನ್ ಖೇರಾ, ಕಿರಣ್ ರಿಜಿಜು ಅವರ ಈಜುವ ಉಡುಪನ್ನು ಅರೆನಗ್ನ ಎಂದು ವ್ಯಂಗ್ಯವಾಡಿದ್ದರು. ಅಲ್ಲದೆ, ಈಜುವಾಗಲೂ ಬಿಜೆಪಿ ನಾಯಕರಿಗೆ ರಾಹುಲ್ ಗಾಂಧಿ ಅವರೇ ನೆನಪಾಗುತ್ತಾರೆ ಎಂದು ಎಕ್ಸ್ ಖಾತೆಯಲ್ಲಿ ರಾಹುಲ್ ಗಾಂಧಿ ಅವರು ಬಿಜೆಪಿಯ ಮನಸ್ಸಿನಲ್ಲಿ ಎಷ್ಟು ತೀವ್ರವಾಗಿ ಮನೆಮಾಡಿದ್ದಾರೆ ನೋಡಿ ಎಂದು ಖೇರಾ ಬರೆದುಕೊಂಡಿದ್ದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಯಾರಾದರೂ ಕೋಟ್-ಸೂಟ್ ಧರಿಸಿ ಈಜಲು ಹೋಗುತ್ತಾರೆಯೇ..? ಎಂದು ಪ್ರಶ್ನಿಸಿದ್ದಾರೆ. ತಾವು ಎಂಟು ಬಾರಿ ಚುನಾವಣೆ ಎದುರಿಸಿರುವ ನಾಯಕನೆಂದು ನೆನಪಿಸಿದ ರಿಜಿಜು, ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ರಾಜ್ಯಸಭೆಗೆ ಬಂದಿರುವ ಖೇರಾ ಅವರಿಗೆ ಇಂತಹ ಸಭ್ಯತೆಯಿಲ್ಲದ ಹೇಳಿಕೆ ನೀಡುವ ಹಕ್ಕಿಲ್ಲ ಎಂದಿದ್ದಾರೆ. ತಮ್ಮ ತವರು ರಾಜ್ಯದ ಗ್ರಾಮೀಣ ಜನರಿಗೆ ಸ್ಪೂರ್ತಿಯಾಗಲು ಈಜಿದ್ದಾಗಿ ಸ್ಪಷ್ಟನೆ ನೀಡಿದ ಅವರು, ತಮ್ಮ ಈಜುವ ಸಾಮರ್ಥ್ಯವನ್ನು ರಾಹುಲ್ ಗಾಂಧಿಗೆ ಹೋಲಿಸಿದ ನಂತರವಷ್ಟೇ ತಾವು ಈ ಬಗ್ಗೆ ಪ್ರತಿಕ್ರಿಯಿಸಿದ್ದಾಗಿ ತಿಳಿಸಿದ್ದಾರೆ.

ಹಿಮಂತ ಬಿಸ್ವ ಶರ್ಮಾ ಹೆಸರು ಪ್ರಸ್ತಾಪಿಸಿ ಎಚ್ಚರಿಕೆ

ಪವನ್ ಖೇರಾ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಹೇಳಿಕೆಗಳನ್ನು ಮುಂದುವರಿಸಿದರೆ, ಅವರ 'ಅಶಿಸ್ತಿನ' ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ದೂರು ನೀಡುವುದಾಗಿ ರಿಜಿಜು ಎಚ್ಚರಿಸಿದ್ದಾರೆ. ಈ ಹಿಂದೆ ಪವನ್ ಖೇರಾ ಅವರು ಹಿಮಂತ ಬಿಸ್ವ ಶರ್ಮಾ ಮತ್ತು ಅವರ ಪತ್ನಿಯ ವಿರುದ್ಧ ವಿದೇಶಿ ಆಸ್ತಿ ಮತ್ತು ಪಾಸ್‌ಪೋರ್ಟ್‌ಗಳಿಗೆ ಸಂಬಂಧಿಸಿದಂತೆ ಆರೋಪಗಳನ್ನು ಮಾಡಿದ್ದಾಗ, ಅಸ್ಸಾಂ ಪೊಲೀಸರು ಖೇರಾ ಅವರ ದೆಹಲಿ ನಿವಾಸಕ್ಕೆ ತೆರಳಿದ್ದ ಘಟನೆಯನ್ನು ರಿಜಿಜು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

ಅರುಣಾಚಲ ಪ್ರದೇಶದ ರಭಸವಾಗಿ ಹರಿಯುವ ನದಿಯಲ್ಲಿ ಈಜುವ ವಿಡಿಯೋ ಹಂಚಿಕೊಂಡಿದ್ದ ರಿಜಿಜು, ತಾವು ಚಿಕ್ಕಂದಿನಿಂದಲೂ ನದಿಗಳಲ್ಲಿ ಈಜಿ ಬೆಳೆದವರು ಎಂದು ಹೇಳಿಕೊಂಡಿದ್ದರು. ರಾಹುಲ್ ಗಾಂಧಿ ಈಜು ಮತ್ತು ಸಮರ ಕಲೆಗಳಿಗೆ ತರಬೇತಿ ಪಡೆದಿರಬಹುದು, ಆದರೆ ನಮಗೆ ಇದು ಬಾಲ್ಯದ ಆಟ ಎಂದು ಹೇಳಿದ್ದರು. ಪ್ರಸ್ತುತ ಈ ಫಿಟ್‌ನೆಸ್ ಚರ್ಚೆಯು ಇಬ್ಬರೂ ನಾಯಕರ ನಡುವೆ ದೊಡ್ಡ ಮಟ್ಟದ ರಾಜಕೀಯ ವಾಗ್ದಾಳಿಗೆ ಹಾದಿಮಾಡಿಕೊಟ್ಟಿದೆ