ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್  
ದೇಶ

ಸಿಜೆಪಿ, ವಿದ್ಯಾರ್ಥಿಗಳ ಸಿಟ್ಟಿಗೆ ಸಿಲುಕಿರುವ ಧರ್ಮೇಂದ್ರ ಪ್ರಧಾನ್​ ಹಿನ್ನೆಲೆ ಏನು? ಒಟ್ಟು ಆಸ್ತಿ ಮೌಲ್ಯವೆಷ್ಟು? ಇಲ್ಲಿದೆ ವಿವರ

ಪ್ರಮುಖ ಮುಖ್ಯಾಂಶಗಳು

  • ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆ ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು
  • ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ರಾಜೀನಾಮೆಗೆ ಪಟ್ಟು
  • ಅಷ್ಟಕ್ಕೂ ಧರ್ಮೇಂದ್ರ ಪ್ರಧಾನ್​ ಅವರ ಹಿನ್ನೆಲೆ ಏನು? ಎಷ್ಟಿದೆ ಒಟ್ಟು ಆಸ್ತಿ?
ನವದೆಹಲಿ: ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಸಿಜೆಪಿ, ಕಾಂಗ್ರೆಸ್​ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ಸದ್ಯ ದೇಶದ ಜನತೆಯನ್ನು ಅಕ್ಷರಶಃ ಬೆರಗಾಗಿಸಿದೆ. ದೆಹಲಿ ಪೊಲೀಸರ ಜೊತೆ ಜಿದ್ದಾಜಿದ್ದಿಗೆ ಬೀಳುತ್ತಿರುವ ಪ್ರತಿಭಟನಾಕಾರರು ಪಟ್ಟು ಹಿಡಿಯುತ್ತಿರುವುದೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆಗೆ. ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿರುವ ಸಚಿವರ ಹಿನ್ನೆಲೆ? ಇವರ ಒಟ್ಟು ಆಸ್ತಿ ಮೌಲ್ಯ ಎಷ್ಟು? ಎಂಬುದರ ಸಂಪೂರ್ಣ ವಿವರ ಹೀಗಿದೆ ಗಮನಿಸಿ.
ಧರ್ಮೇಂದ್ರ ಪ್ರಧಾನ್ ಜೂನ್ 26, 1969ರಂದು ಒಡಿಶಾದ ತಾಲ್ಚೆರ್ನಲ್ಲಿ ಜನಿಸಿದರು. ಅವರ ತಂದೆ ದೇವೇಂದ್ರ ಪ್ರಧಾನ್ ಕೂಡ ಬಿಜೆಪಿಯ ಹಿರಿಯ ನಾಯಕರಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆದರೆ, ಧರ್ಮೇಂದ್ರ ಅವರು ವಿದ್ಯಾರ್ಥಿ ದಿನಗಳಿಂದಲೂ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿದ್ದರು. ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಚಟುವಟಿಕೆಗಳಲ್ಲಿ ಆ್ಯಕ್ಟೀವ್ ಆಗಿದ್ದರು.

2004ರಲ್ಲಿ ಮೊದಲ ಬಾರಿಗೆ

ಒಡಿಶಾದ ತಾಲ್ಚರ್ ಕಾಲೇಜಿನಲ್ಲಿ ಮಾನವಶಾಸ್ತ್ರದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು (MA) ಪೂರ್ಣಗೊಳಿಸಿದ್ದಾರೆ. ಎಬಿವಿಪಿಯಿಂದ ಆರಂಭವಾದ ಅವರ ರಾಜಕೀಯ ಪಯಣ ಬಿಜೆಪಿ ಯುವ ಮೋರ್ಚಾದ ಜತೆಗೆ ಪಕ್ಷದ ಸಂಘಟನಾ ಜವಾಬ್ದಾರಿಯವರೆಗೂ ವಿಸ್ತರಿಸಿತು. 2004ರಲ್ಲಿ ಮೊದಲ ಬಾರಿಗೆ ಸಂಸತ್ತಿನ ಚುನಾವಣೆಗೆ ಸ್ಪರ್ಧಿಸಿದರು. ಚುನಾವಣಾ ನಿರ್ವಹಣೆ ಮತ್ತು ಪಕ್ಷದ ವಿಸ್ತರಣೆ ಕಾರ್ಯತಂತ್ರಗಳಲ್ಲಿ ಉತ್ತಮ ಅನುಭವ ಹೊಂದಿದ್ದಾರೆ. ಅವರು ಹಲವಾರು ರಾಜ್ಯಗಳಲ್ಲಿ ಬಿಜೆಪಿ ಚುನಾವಣಾ ಜವಾಬ್ದಾರಿಗಳನ್ನು ನಿಭಾಯಿಸಿ, ಪಕ್ಷದ ಹೈಕಮಾಂಡ್ ದೃಷ್ಟಿಯಲ್ಲಿ ವಿಶ್ವಾಸಾರ್ಹ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಧರ್ಮೇಂದ್ರ ಪ್ರಧಾನ್ 2014ರಲ್ಲಿ ನರೇಂದ್ರ ಮೋದಿ ಸಂಪುಟದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾಗಿ ಸೇವೆ ಸಲ್ಲಿಸಿದರು. ಬಳಿಕ 2021ರಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಉಸ್ತುವಾರಿ ನೀಡಲಾಯಿತು. ಇತ್ತೀಚೆಗೆ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಪ್ರಧಾನ್ ಅವರಿಗೆ ದೊಡ್ಡ ರಾಜಕೀಯ ಸವಾಲಾಗಿ ಪರಿಣಮಿಸಿವೆ. ಪರೀಕ್ಷೆಯಲ್ಲಿನ ಲೋಪದೋಷಗಳ ಹೊಣೆ ಹೊತ್ತು ಅವರ ರಾಜೀನಾಮೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದು ನಿಂತಿವೆ.

ಧರ್ಮೇಂದ್ರ ಪ್ರಧಾನ್ ಆಸ್ತಿ ಎಷ್ಟು?

2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿದ ಚುನಾವಣಾ ಅಫಿಡವಿಟ್ ಪ್ರಕಾರ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಅವರ ಕುಟುಂಬದ ಒಟ್ಟು ಚರ ಮತ್ತು ಸ್ಥಿರ ಆಸ್ತಿಗಳು ಅಂದಾಜು 6.92 ಕೋಟಿ ರೂ. ಇದೆ. ಇದರಲ್ಲಿ 4.61 ಕೋಟಿ ಚರ ಆಸ್ತಿ ಹಾಗೂ 2.30 ಕೋಟಿ ಸ್ಥಿರಾಸ್ತಿ ಸೇರಿದೆ. ಅಫಿಡವಿಟ್ ಪ್ರಕಾರ, ಧರ್ಮೇಂದ್ರ ಅವರ ಹೆಸರಿನಲ್ಲಿರುವ ಚರ ಆಸ್ತಿಗಳಲ್ಲಿ ಬ್ಯಾಂಕ್ ಠೇವಣಿಗಳು, ಮ್ಯೂಚುವಲ್ ಫಂಡ್‌ಗಳು, ಜೀವ ವಿಮಾ ಪಾಲಿಸಿಗಳು ಮತ್ತು ಆಭರಣಗಳು ಸೇರಿವೆ. ಎಸ್‌ಬಿಐ ಮ್ಯೂಚುವಲ್ ಫಂಡ್‌ಗಳು ಮತ್ತು ಜೀವ ವಿಮಾ ಪಾಲಿಸಿಗಳಲ್ಲಿ ಹೂಡಿಕೆಗಳಿವೆ. ಅವರ ಬಳಿ ವಾಹನಗಳು, ಕುಟುಂಬದ ಚಿನ್ನ ಮತ್ತು ಬೆಳ್ಳಿ ಆಭರಣಗಳೂ ಇವೆ.
ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಿರ ಆಸ್ತಿಗಳಲ್ಲಿ ವಸತಿ, ವಸತಿ ರಹಿತ ಭೂಮಿ ಮತ್ತು ಆಸ್ತಿಗಳನ್ನು ಹೊಂದಿದ್ದಾರೆ. ಕೃಷಿ ಭೂಮಿಯ ಒಟ್ಟು ಮೌಲ್ಯ 1.35 ಕೋಟಿ ರೂ., ವಸತಿ ಕಟ್ಟಡಗಳು 95 ಲಕ್ಷ ರೂ. ಅವರ ಒಟ್ಟು ಆಸ್ತಿ ಸುಮಾರು 6.92 ಕೋಟಿ ರೂ. ಆಗಿದೆ. ಇದರೊಟ್ಟಿಗೆ, ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಸುಮಾರು 53.37 ಲಕ್ಷ ರೂ. ಅವರ ಪತ್ನಿ ಮೃದುಲಾ ಠಾಕೂರ್ ಪ್ರಧಾನ್ ಅವರ ಹೆಸರಿನಲ್ಲೂ 2.95 ಕೋಟಿ ರೂ. ಚರ ಆಸ್ತಿ ಮತ್ತು 1.37 ಕೋಟಿ ರೂಪಾಯಿ ಸ್ಥಿರ ಆಸ್ತಿ ಇದೆ. ಧರ್ಮೇಂದ್ರ ಪ್ರಧಾನ್ ಅವರ ಸ್ಥಿರ ಆಸ್ತಿಗಳಲ್ಲಿ ವಸತಿ ಮತ್ತು ವಸತಿಯೇತರ ಜಮೀನುಗಳು ಮತ್ತು ಆಸ್ತಿಗಳು ಸೇರಿವೆ. ಇವುಗಳಲ್ಲಿ ಭುವನೇಶ್ವರ ಮತ್ತು ಒಡಿಶಾ ಸೇರಿ ಇತರ ಸ್ಥಳಗಳಲ್ಲಿ ಅವರು ಮತ್ತು ಅವರ ಕುಟುಂಬಕ್ಕೆ ಸೇರಿದ ಒಂದಷ್ಟು ಜಮೀನು, ಮನೆಗಳು ಸೇರಿವೆ ಎಂದು ವರದಿಯಾಗಿದೆ.

ಧರ್ಮೇಂದ್ರ ರಾಜೀನಾಮೆಗೆ ಬಿಡದ ಹಠ

ಮತ್ತೊಂದೆಡೆ, ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ಘೋಷಿಸುವವರೆಗೂ ನಾವು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಸಿಜೆಪಿ, ಕಾಂಗ್ರೆಸ್​ ಮತ್ತು ಪ್ರತಿಭಟನಾನಿರತ ವಿದ್ಯಾರ್ಥಿಗಳು ಪಣತೊಟ್ಟಿದ್ದಾರೆ. ಇದರಿಂದ, ದೆಹಲಿಯ ಜಂತರ್​ ಮಂತರ್​ನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಭಾರಿ ಗಲಭೆ ಸೃಷ್ಟಿಯಾಗಿದ್ದು, ಖಾಕಿ ಪಡೆ ಸೇರಿದಂತೆ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ,(ಏಜೆನ್ಸೀಸ್).