ನಟ ವಿಜಯ್ ಅವರ ತಂದೆ ಎಸ್ಎ ಚಂದ್ರಶೇಖರ್
- ತಮಿಳುನಾಡು ಚುನಾವಣೆಯಲ್ಲಿ ದಾಖಲೆಯ ಗೆಲುವು ನೋಡಿದ ಟಿವಿಕೆ ಪಕ್ಷ
- ಚೊಚ್ಚಲ ಚುನಾವಣೆಯಲ್ಲೇ ಭರ್ಜರಿ ಗೆಲುವಿನಲ್ಲಿ ನಟ ವಿಜಯ್
- ವಿಜಯ್ ಅವರ ತಂದೆ ಎಸ್ಎ ಚಂದ್ರಶೇಖರ್ ಹೆಸರು ಮುನ್ನೆಲೆಗೆ
- ಅಷ್ಟಕ್ಕೂ ಯಾರು ಇವರು? ಕನ್ನಡಕ್ಕೆ ಇವರ ನಂಟೇನು?
TamilNadu Elections: ಪ್ರಸ್ತುತ, ತಮಿಳುನಾಡಿನ ರಾಜಕೀಯ ಭೂಪಟ ಬದಲಾಗಿದ್ದು, 2026ರ ವಿಧಾನಸಭಾ ಚುನವಾಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ತಮ್ಮ ಚೊಚ್ಚಲ ಸ್ಪರ್ಧೆಯಲ್ಲೇ ಐತಿಹಾಸಿಕೆ ಗೆಲುವು ದಾಖಲಿಸಿರುವುದು ಹೊಸ ಸಂಚಲನ ಸೃಷ್ಟಿಸಿದೆ. 100ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದಿರುವ ವಿಜಯ್ ಪಕ್ಷ, ತಮಿಳುನಾಡು ಜನತೆಯ ವಿಶ್ವಾಸ ಪಡೆಯುವಲ್ಲಿ ಮೇಲುಗೈ ಸಾಧಿಸಿದೆ.
ಡಿಎಂಕೆಯಂತಹ ಬಲಿಷ್ಠ ಪಕ್ಷವನ್ನೇ ಹಿಂದಿಕ್ಕಿರುವ ದಳಪತಿ ವಿಜಯ್ಗೆ ತಮಿಳು ಚಿತ್ರರಂಗದ ನಟರು, ಹಲವು ಕ್ಷೇತ್ರಗಳ ಗಣ್ಯರು ಮತ್ತು ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ. ಈ ಮಧ್ಯೆ, ವಿಜಯ್ ಅವರ ತಂದೆ ಎಸ್ಎ ಚಂದ್ರಶೇಖರ್ ಹೆಸರು ಮುನ್ನೆಲೆಗೆ ಬಂದಿದ್ದು, ಹಲವು ಕುತೂಹಲಕಾರಿ ವಿಷಯಗಳ ಮೂಲಕ ಜಾಲತಾಣಗಳಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದ್ದಾರೆ.
ಯಾರು ಈ ಎಸ್ಎ ಚಂದ್ರಶೇಖರ್?
ಮೂಲತಃ ತಮಿಳುನಾಡಿನವರೇ ಆದ ಎಸ್ಎ ಚಂದ್ರಶೇಖರ್ ಅವರು, ಭಾರತೀಯ ಚಿತ್ರೋದ್ಯಮದಲ್ಲಿ ಹಲವು ಭಾಷೆಯ ಚಿತ್ರಗಳಲ್ಲಿ ನಿರ್ದೇಶಕ, ನಿರ್ಮಾಪಕ ಮತ್ತು ನಟರಾಗಿಯೂ ಕೆಲಸ ಮಾಡಿದ್ದಾರೆ. ಆರಂಭದಲ್ಲಿ ಕೇವಲ ಕಾಲಿವುಡ್ನ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದ ಅವರು, ನಂತರದಲ್ಲಿ ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ಕೊಟ್ಟಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.
ಸ್ಯಾಂಡಲ್ವುಡ್ ದಿಗ್ಗಜರಿಗೆ ಆ್ಯಕ್ಷನ್ ಕಟ್
ಕನ್ನಡದಲ್ಲಿ ಮೇರು ನಟರಾದ ಶಂಕರ್ನಾಗ್ ಅವರ 'ನ್ಯಾಯ ಎಲ್ಲಿದೆ'?, 'ಗೆದ್ದ ಮಗ', ವಿಷ್ಣುವರ್ಧನ್ ಅಭಿನಯದ ಸಿಂಹ ಘರ್ಜನೆ ಮತ್ತು ಅಂಬರೀಷ್ ನಟನೆಯ ಹಸಿದ ಹೆಬ್ಬುಲಿ ಸೇರಿ ಮುಂತಾದ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಈ ವಿಷಯಗಳು ಬಹುತೇಕ ಕನ್ನಡ ಸಿನಿಪ್ರೇಮಿಗಳಿಗೂ ಅಷ್ಟಾಗಿ ಗೊತ್ತಿಲ್ಲ. ಸದ್ಯ ಇಂತಹ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಅನೇಕರ ಕುತೂಹಲ ಕೆರಳಿಸಿದೆ.