ಲೋಹಗಢ ಕೋಟೆಯಲ್ಲಿ ಪ್ರವಾಸಿಗರ ಅನುಚಿತ ವರ್ತನೆ
- ಲೋಹಗಢ ಕೋಟೆಯಲ್ಲಿ ಪ್ರವಾಸಿಗರ ಅನುಚಿತ ವರ್ತನೆ
- ಕೋಟೆ ಎದುರಿಗೆ ಸಿಗರೇಟ್ ಹಚ್ಚಿದ ಯುವಕರು
- ಪ್ರವಾಸಿಗರನ್ನು ತರಾಟೆಗೆ ತೆಗೆದುಕೊಂಡ ಯುವಕ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ಪುಣೆ: ಮಳೆಗಾಲ ಪ್ರಾರಂಭವಾದರೆ ಸಾಕು ಗುಡ್ಡ-ಬೆಟ್ಟಗಳಿಗೆ ಪ್ರವಾಸ ತೆರಳಲು ಯುವಕ/ಯುವತಿಯರು ಸಜ್ಜಾಗುತ್ತಾರೆ. ಆದರೆ ಪ್ರವಾಸಕ್ಕೆಂದು ತೆರಳುವ ಅವರಲ್ಲಿ ಎಷ್ಟು ಹುಮ್ಮಸ್ಸಿರುತ್ತದೆಯೋ, ಅಷ್ಟೇ ಸ್ವಚ್ಛತೆ ಬಗ್ಗೆ ಅರಿವಿದ್ದರೆ ನಮ್ಮ ಯಾವುದೇ ಪರಿಸರ ತಾಣಗಳ ಅಂದಗೆಡುತ್ತಿರಲಿಲ್ಲ. ಆದರೆ, ಹೋದ ಹೋದಲ್ಲಿ ನಮ್ಮ ಜನರು ಪ್ಲಾಸ್ಟಿಕ್ಗಳನ್ನು ಎಸೆಯುವುದು, ಎಣ್ಣೆ ಪಾರ್ಟಿ ಮಾಡುವ ಮೂಲಕ ಪ್ರವಾಸಿತಾಣದ ಅಸ್ಮಿತೆಗೆ ಧಕ್ಕೆ ತರುತ್ತಿರುತ್ತಾರೆ.
ಈಗ ಇದೇ ರೀತಿಯ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿರುವ ಐತಿಹಾಸಿಕ ಲೋಹಗಢ ಕೋಟೆಯಲ್ಲಿ (Tourist Misbehavior in Lohagad Fort) ನಡೆದಿದ್ದು, ಕೋಟೆ ವೀಕ್ಷಣೆಗೆ ಬಂದಿದ್ದ ದೆಹಲಿ ಮೂಲಕ ಯುವಕರ ಗುಂಪೊಂದು ಸಿಗರೇಟ್ ಸೇದುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ವಿಡಿಯೋನಲ್ಲಿ, ದೆಹಲಿ ಮೂಲದ ಕೆಲ ಯುವಕ/ತಿ ಯರ ಗುಂಪೊಂದು ಐತಿಹಾಸಿಕ ಲೋಹಗಢ ಕೋಟೆಯನ್ನು ವೀಕ್ಷಿಸಲು ಬಂದಿದ್ದಾರೆ. ಕೋಟೆ ನೋಡಿ, ಫೋಟೊ ಕ್ಲಿಕ್ಕಿಸಿಕೊಂಡು ಹೋಗುವ ಬದಲು, ಅಲ್ಲಿಯೇ ಧಮ್ ಎಳೆಯಲು ಮುಂದಾಗಿದ್ದಾರೆ.
ಇದನ್ನು ನೋಡಿದ ಸ್ಥಳೀಯ ವ್ಯಕ್ತಿಯೊಬ್ಬ ಅವರನ್ನು ತಡೆದಿದ್ದು, ಇಲ್ಲಿ ಸಿಗರೇಟ್ನ್ನು ಸೇದುವಂತಿಲ್ಲ ಎಂದಿದ್ದಾನೆ. ಆಗ ಅವರು ಇಲ್ಲಿ ಸಿಗರೇಟ್ ಸೇದಬಾರದು ಎಂದು ಯಾವುದೇ ಸೂಚನಾ ಫಲಕವಿಲ್ಲ ಎಂದು ವಾದಿಸಿದ್ದಾರೆ. ಆಗ ಆ ವ್ಯಕ್ತಿ, ಈ ಕೋಟೆ ನಮಗೆ ದೇವಸ್ಥಾನವಿದ್ದಂತೆ, ನೀವು ನಿಮ್ಮ ದೇವರ ಮನೆಯಲ್ಲಿ ಸಿಗರೇಟ್ ಸೇದುತ್ತಿರಾ? ನಿಮ್ಮ ಮೇಲೆ ಪೊಲೀಸ್ರಲ್ಲಿ ದೂರನ್ನು ನೀಡುತ್ತೇನೆ, ದೂರು ನೀಡಬಾರದೆಂದರೆ ನಿಮ್ಮಲ್ಲಿರುವ ಎಲ್ಲಾ ಸಿಗರೇಟ್ಗಳನ್ನು ನನಗೆ ನೀಡಿ ಎಂದು ಹೇಳಿ ಅವರಲ್ಲಿದ್ದ ಸಿಗರೇಟ್ನ್ನು ವಶಪಡಿಸಿಕೊಂಡಿದ್ದಾನೆ.
ಪುರಾತತ್ವ ಇಲಾಖೆ ನಿಯಮ ಏನು ಹೇಳುತ್ತದೆ?
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪುರಾತತ್ವ ಇಲಾಖೆ ಈ ರೀತಿಯ ಕೃತ್ಯಗಳನ್ನು ತಡೆಯಲು ನಿಯಮಗಳನ್ನು ಮಾಡಿಲ್ಲವೇ? ಎಂಬ ಪ್ರಶ್ನೆ ಜೋರಾಗಿದ್ದು, ಈಗಾಗಲೇ ಪುರಾತತ್ವ ಇಲಾಖೆ ಜಾರಿಗೊಳಿಸಿರುವ ನಿಯಮಗಳ ಪ್ರತಿ ಕೂಡ ಎಲ್ಲೆಡೆ ಹರಿದಾಡುತ್ತಿದೆ.
1. ಪುರಾತತ್ವ ಇಲಾಖೆಯ ಮೇಲ್ವಿಚಾರಣೆಯಲ್ಲಿರುವ ಐಸಿಹಾಸಿಕ ಪ್ರದೇಶದಲ್ಲಿ ತಂಬಾಕು, ಸರಾಯಿ, ಸಿಗರೇಟ್ ಅಥವಾ ಯಾವುದೇ ಅಮಲು ಉಂಟಾಗುವ ಪದಾರ್ಥಗಳನ್ನು ಸೇವಿಸುವಂತಿಲ್ಲ.
2. ಪುರಾತತ್ವ ಇಲಾಖೆಯ ಮೇಲ್ವಿಚಾರಣೆಯಲ್ಲಿರುವ ಐಸಿಹಾಸಿಕ ಪ್ರದೇಶಗಳಲ್ಲಿ ಲೈಟರ್, ಬೆಂಕಿಪೊಟ್ಟಣ ಮೊದಲಾದ ಅಗ್ನಿ ಉತ್ಪಾದಕ ವಸ್ತುಗಳನ್ನು ಕೊಂಡೊಯ್ಯುವಹಾಗಿಲ್ಲ.
3. ಐತಿಹಾಸಿಕ ಕಟ್ಟಡಗಳ ಮೇಲೆ ತಮ್ಮ ಹೆಸರುಗಳನ್ನು ಬರೆಯುವುದು, ಅಂದಗಡಿಸುವ ಕೆಲಸ ಮಾಡುವಂತಿಲ್ಲ.
4. ನಿಷೇಧಿತ ಪ್ರದೇಶದಲ್ಲಿ ಡ್ರೋನ್ಗಳನ್ನು ಹಾರಿಸುವಂತಿಲ್ಲ.
ಈ ನಿಯಮಗಳನ್ನು ಉಲ್ಲಂಘಿಸಿದರೆ ಗರಿಷ್ಟ 1 ಲಕ್ಷ ದಂಡ, ಎರಡು ವರ್ಷ ಕಾರಾಗ್ರಹ ಶಿಕ್ಷೆ ಹಾಗೂ ಕೆಲವೊಮ್ಮೆ ಎರಡು ಶಿಕ್ಷೆಗಳನ್ನು ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ, (ಏಜನ್ಸೀಸ್).