ಕಿರಣ್ ರಿಜಿಜು ಮತ್ತು ರಾಹುಲ್ ಗಾಂಧಿ
ನವದೆಹಲಿ: ಇತ್ತೀಚೆಗೆ ನಡೆದ ದೆಹಲಿಯ ಜಂತರ್ ಮಂತರ್ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಯಾವುದೇ ಪ್ರತಿಭಟನಾಕಾರರಿಗೆ ಗಂಭೀರ ಗಾಯಗಳಾಗಿಲ್ಲ ಎಂಬ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನೀಡಿದ್ದ ಹೇಳಿಕೆಗೆ ಕಿಡಿಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi), ಮಂಗಳವಾರ(ಆ. 18) ದೇಶದ ಮಕ್ಕಳಿಗೆ ಸುಳ್ಳು ಹೇಳಬೇಡಿ, ಅವರಿಗೆ ಕಣ್ಣು, ಕಿವಿಗಳಿವೆ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಮೋದಿ ಸರ್ಕಾರದ ಸಚಿವರು ದೆಹಲಿ ಪೊಲೀಸರನ್ನು ಶ್ಲಾಘಿಸಬೇಕು ಎಂದು ಹೇಳುತ್ತಿದ್ದಾರೆ. ಸಂಸತ್ತಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಹಾರಿಸಲಾಗಿದೆ, ಮೊಳೆಗಳಿರುವ ಲಾಠಿಗಳಿಂದ ಹಲ್ಲೆ ಮಾಡಲಾಗಿದೆ, ಒಬ್ಬ ಯುವಕನ ಕಣ್ಣು ಕಳೆದುಹೋಗಿದೆ, ಒರ್ವ ಬಾಲಕಿಯ ಕಿವಿ ಕಟ್ ಆಗಿದೆ. ಈ ಕ್ರೌರ್ಯವನ್ನು ಶ್ಲಾಘಿಸಬೇಕೇ? ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಸರ್ಕಾರದ ಮೂಲಮಂತ್ರವೇ ಅಸತ್ಯ ಮತ್ತು ಹಿಂಸೆ. ಮೊದಲು ಮಕ್ಕಳ ಮೇಲೆ ಲಾಠಿ ಪ್ರಹಾರ ಮಾಡಿ, ನಂತರ ಏನೂ ನಡೆದಿಲ್ಲ ಎಂದು ಹೇಳಿಬಿಡೋದು. ನಾನು ಸ್ವತಃ ಆ ಗಾಯಗೊಂಡ ಮಕ್ಕಳನ್ನು ಭೇಟಿಯಾಗಿದ್ದೇನೆ. ಸಾವಿರಾರು ವೀಡಿಯೊಗಳನ್ನು ದೇಶವೇ ನೋಡಿದೆ. ಈ ದೇಶಕ್ಕೆ ಅತ್ಯಂತ ದೊಡ್ಡ ಅಪಾಯವೆಂದರೆ ಈ ಬುದ್ಧಿಹೀನ ಜನರೇ, ಇವರಿಗೆ ತಮ್ಮ ತಪ್ಪು ಕಾಣುವುದಿಲ್ಲ, ಮತ್ತು ಕಂಡರೂ ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹರಿಹಾಯ್ದಿದ್ದಾರೆ.
ಇಡೀ ಅಧಿವೇಶನದುದ್ದಕ್ಕೂ ನಾಪತ್ತೆಯಾಗಿದ್ದ ಅಮಿತ್ ಶಾ ಅವರು ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರ ನೀಡದೇ ಓಡಿ ಹೋದರು. ಮತ್ತು ಪ್ರಧಾನಮಂತ್ರಿಯವರು ಇಂದಿನವರೆಗೂ ವಿದ್ಯಾರ್ಥಿಗಳ ಬಳಿ ಕ್ಷಮೆ ಯಾಚಿಸಿಲ್ಲ. ದೇಶದ ಮಕ್ಕಳೊಂದಿಗೆ ಸುಳ್ಳು ಹೇಳಬೇಡಿ. ಅವರ ಬಳಿ ಕಣ್ಣುಗಳೂ ಇವೆ ಮತ್ತು ಜ್ಞಾಪಕಶಕ್ತಿಯೂ ಇದೆ ಎಂದಿದ್ದಾರೆ.
ಕಿರಣ್ ರಿಜಿಜು ಹೇಳಿದ್ದೇನು?
ಸುದ್ದಿ ಸಂಸ್ಥೆ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ರಿಜಿಜು, ದೆಹಲಿ ಪೊಲೀಸರು ಪ್ರತಿಭಟನೆಯನ್ನು ನಿರ್ವಹಿಸಿದ ರೀತಿಯನ್ನು ಸಮರ್ಥಿಸಿಕೊಂಡಿದ್ದರು. ಒಬ್ಬ ವ್ಯಕ್ತಿಗೂ ಹಾನಿಯಾಗಿಲ್ಲ, ಯಾವುದೇ ಪ್ರತಿಭಟನಾಕಾರನ ಮೂಳೆ ಮುರಿತ ಅಥವಾ ಆಸ್ಪತ್ರೆಗೆ ದಾಖಲಾಗುವಷ್ಟು ಗಂಭೀರ ಗಾಯವಾಗಿಲ್ಲ. ಈ ಪ್ರತಿಭಟಯನ್ನು ಗಮನಿಸಿ ಸಾವಿರಾರು ಜನರು ಸೇರಿದ್ದರು. ಮತ್ತು ವಿದ್ಯಾರ್ಥಿಗಳ ಸೋಗಿನಲ್ಲಿ ಅನೇಕ ಅಪರಾಧಿಗಳು ಭಾಗವಹಿಸಿದ್ದರು ಎಂದು ಹೇಳಿದ್ದರು.
ಮುಂದುವರೆದು, ಆಮ್ ಆದ್ಮಿ ಪಕ್ಷ, ಭೀಮ್ ಆರ್ಮಿ ಅಥವಾ ಸಮಾಜವಾದಿ ಪಕ್ಷದವರು ಸೇರಿದಂತೆ ಅರ್ಧಕ್ಕೂ ಹೆಚ್ಚು ಜನರು ಬಂದು ಇತರರನ್ನು ಹಿಂಸಾಚಾರಕ್ಕೆ ಪ್ರಚೋದಿಸಿದರು. ಆದರೂ, ಒಬ್ಬರೂ ಪ್ರಾಣ ಕಳೆದುಕೊಳ್ಳಲಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಇಂತಹ ಚಳುವಳಿ ನಡೆದಿದ್ದರೆ, ಸಾವಿರಾರು ಸಾವುಗಳು ಸಂಭವಿಸುತ್ತಿದ್ದವು. ಒಬ್ಬರಿಗೂ ಗಾಯವಾಗದಂತೆ ಇಷ್ಟು ದೊಡ್ಡ ಪ್ರತಿಭಟನೆಯನ್ನು ನಿಭಾಯಿಸಿದ್ದಕ್ಕಾಗಿ ದೆಹಲಿ ಪೊಲೀಸರು ಮತ್ತು ಆಡಳಿತವನ್ನು ಶ್ಲಾಘಿಸಬೇಕು ಎಂದಿದ್ದರು (ಏಜೆನ್ಸೀಸ್).