DMK Alliance | ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ರಾಹುಲ್​ ಗಾಂಧಿ 
ದೇಶ

ಮಾರ್ಚ್ 6ರ ಒಳಗೆ ಒಪ್ಪದಿದ್ದರೆ ಮುಗಿಯಿತು ಕಥೆ!.. ಕಾಂಗ್ರೆಸ್‌ಗೆ ಡಿಎಂಕೆ ಹಾಕಿದ ಆ ಕಂಡಿಷನ್‌ ಏನು ಗೊತ್ತಾ..? | DMK Alliance

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದ್ದು, ಆಡಳಿತಾರೂಢ ಡಿಎಂಕೆ ಮತ್ತು ಮಿತ್ರಪಕ್ಷ ಕಾಂಗ್ರೆಸ್ (DMK Alliance) ನಡುವಿನ ಸೀಟು ಹಂಚಿಕೆ ಮಾತುಕತೆ ಈಗ ರೋಚಕ ಹಂತಕ್ಕೆ ತಲುಪಿದೆ. ಕಾಂಗ್ರೆಸ್ ಪಕ್ಷವನ್ನು ತನ್ನ ದಾರಿಗೆ ತರಲು ಪ್ರಯತ್ನಿಸುತ್ತಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ, ರಾಜ್ಯಸಭಾ ಸ್ಥಾನವನ್ನೇ ಅಸ್ತ್ರವಾಗಿ ಬಳಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ತಿಂಗಳು ತಮಿಳುನಾಡಿನ ಆರು ರಾಜ್ಯಸಭಾ ಸ್ಥಾನಗಳು ಖಾಲಿಯಾಗಲಿದ್ದು, ಈ ಪೈಕಿ ಡಿಎಂಕೆ ಬಳಿ ನಾಲ್ಕು ಸ್ಥಾನಗಳಿವೆ. ಕಾಂಗ್ರೆಸ್ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಿಗೆ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ, ಒಂದು ರಾಜ್ಯಸಭಾ ಸ್ಥಾನದ ಆಮಿಷ ಒಡ್ಡಿದೆ ಎನ್ನಲಾಗಿದ್ದು, ಮಾರ್ಚ್ 6ರೊಳಗೆ ಸೀಟು ಹಂಚಿಕೆ ಇತ್ಯರ್ಥವಾಗದಿದ್ದರೆ, ಕಾಂಗ್ರೆಸ್ ರಾಜ್ಯಸಭಾ ಸ್ಥಾನವನ್ನು ಕಳೆದುಕೊಳ್ಳಬೇಕಾಗಬಹುದು ಎಂಬ ಪರೋಕ್ಷ ಎಚ್ಚರಿಕೆಯನ್ನು ಡಿಎಂಕೆ ನೀಡಿರುವುದಾಗಿ ವರದಿಯಾಗಿದೆ.
ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಜೊತೆಗಿನ ಸೀಟು ಹಂಚಿಕೆ ಮಾತುಕತೆಯಲ್ಲಿ ಒತ್ತಡ ತಂತ್ರವಾಗಿ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ, ರಾಜ್ಯಸಭಾ ಸ್ಥಾನವನ್ನು ಮುಂದಿಟ್ಟಿದೆ ಎಂದು ಮೂಲಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ.

ಸೀಟು ಹಂಚಿಕೆ ಮಾತುಕತೆ ಆರಂಭಿಸಿದ ಡಿಎಂಕೆ

ಈ ವರ್ಷದ ಏಪ್ರಿಲ್‌ನಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ವೇಗಗೊಳ್ಳುತ್ತಿದ್ದಂತೆ, ಡಿಎಂಕೆ ಫೆಬ್ರವರಿ 22 ರಂದು ತನ್ನ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಮಾತುಕತೆಗಳನ್ನು ಔಪಚಾರಿಕವಾಗಿ ಪ್ರಾರಂಭಿಸಿತು. ಈ ಸಂಪರ್ಕದ ಭಾಗವಾಗಿ, ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ಸಿಎಂ ಸ್ಟಾಲಿನ್​​​​ರನ್ನು ಭೇಟಿಯಾದರು ಎಂದು ತಿಳಿದುಬಂದಿದೆ.
ಮುಂಬರುವ ಚುನಾವಣೆಯಲ್ಲಿ ಕಳೆದ ಸಲ ಸ್ಪರ್ಧಿಸಿದ್ದ 25 ಕ್ಷೇತ್ರಗಳಿಗಿಂತ ಹೆಚ್ಚಿನ ಸ್ಥಾನಗಳಿಗೆ ಕಾಂಗ್ರೆಸ್ ಬೇಡಿಕೆ ಇಟ್ಟಿದೆ ಎನ್ನಲಾಗಿದ್ದು, ಒಕ್ಕೂಟದೊಳಗಿನ ಇತರ ಮಿತ್ರಪಕ್ಷಗಳ ಬೇಡಿಕೆಗಳನ್ನು ಸಮತೋಲನಗೊಳಿಸುವ ಅನಿವಾರ್ಯತೆಯನ್ನು ಮುಂದಿಟ್ಟು, ಈ ಬಾರಿ ಸುಮಾರು 27 ರಿಂದ 28 ಸ್ಥಾನಗಳನ್ನು ನೀಡಲು ಡಿಎಂಕೆ ಸಿದ್ಧವಾಗಿದೆ ಎನ್ನುವುದು ಮೂಲಗಳ ಮಾಹಿತಿ.
ಡಿಎಂಕೆ ಕೆಲವು ನಾಯಕರ ಮಧ್ಯಸ್ಥಿಕೆಯ ಮೂಲಕವೇ ಮುಂದಿನ ಮಾತುಕತೆಗಳನ್ನು ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದು, ಇದು ರಚನಾತ್ಮಕ ವಿಧಾನವನ್ನು ಸೂಚಿಸುತ್ತದೆ. ಚುನಾವಣೆಯ ಬಳಿಕ ಆಡಳಿತದಲ್ಲಿ ಪಾಲು ನೀಡುವಂತೆ ರಾಜ್ಯ ಕಾಂಗ್ರೆಸ್ ಘಟಕದ ಕೆಲವು ವಿಭಾಗಗಳಿಂದ ಬಂದ ಬೇಡಿಕೆಗಳ ಮಧ್ಯೆಯೂ ಈ ಮಾತುಕತೆಗಳು ನಡೆಯುತ್ತಿವೆ, ಈ ವಿಚಾರವನ್ನು ಸ್ಟಾಲಿನ್ ಸಾರ್ವಜನಿಕವಾಗಿಯೇ ತಿರಸ್ಕರಿಸಿದ್ದು, ಆ ರೀತಿಯ ವ್ಯವಸ್ಥೆಗಳು ತಮಿಳುನಾಡಿನ ರಾಜಕೀಯ ಚೌಕಟ್ಟಿನೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ಡಿಎಂಕೆ ತನ್ನ ದೀರ್ಘಕಾಲದ ಮಿತ್ರ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಜೊತೆ ಚರ್ಚೆ ನಡೆಸಿದ್ದು, ಆ ಪಕ್ಷ ಐದು ಸ್ಥಾನಗಳಿಗೆ ಬೇಡಿಕರ ಇಟ್ಟಿದೆ. ಆದರೆ, ಎರಡು ಸ್ಥಾನಗಳನ್ನು ನೀಡಲು ಪಕ್ಷದ ನಾಯಕರು ತಯಾರಿದ್ದಾರೆ ಎಂದು ತಿಳಿದುಬಂದಿದೆ.
ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಮತ್ತು ನಟ-ರಾಜಕಾರಣಿ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀಧಿ ಮೈಯಂ (ಎಂಎನ್ಎಂ) ನಂತಹ ಮಿತ್ರಪಕ್ಷಗಳೊಂದಿಗೆ ಮುಂದಿನ ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆಯಿದೆ. ತಮಿಳುನಾಡಿನ 234 ಸ್ಥಾನಗಳಿಗೆ ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿರುವುದರಿಂದ, ಮುಂಬರುವ ವಾರಗಳಲ್ಲಿ ಮೈತ್ರಿಕೂಟದೊಳಗೆ ಸೀಟು ಹಂಚಿಕೆ ಮಾತುಕತೆಗಳು ವೇಗ ಪಡೆದುಕೊಳ್ಳಲಿವೆ(ಏಜೆನ್ಸೀಸ್​).