TVK Rally | ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್
ಚೆನ್ನೈ: ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ, ನಟ ವಿಜಯ್ ಚುನಾವಣಾ ಪ್ರಚಾರ (TVK Rally) ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದು, ಚೆನ್ನೈನಲ್ಲಿ ನಿಗದಿಯಾಗಿದ್ದ ಪ್ರಚಾರದ ವೇಳೆ ಭದ್ರತಾ ವ್ಯವಸ್ಥೆಯಲ್ಲಿ ಗಂಭೀರ ಲೋಪಗಳಾಗಿವೆ ಎಂದು ಆರೋಪಿಸಿದ ವಿಜಯ್, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತಮ್ಮ ಪ್ರಚಾರವನ್ನು ಹಠಾತ್ತನೆ ರದ್ದುಗೊಳಿಸಿದರು.
ವಿಜಯ್ ಪೆರಂಬೂರು ಕ್ಷೇತ್ರದಿಂದ ಸ್ಪರ್ಧಿಸಲು ಮಧ್ಯಾಹ್ನ 12:15 ರ ಸುಮಾರಿಗೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಇದಾದ ಬಳಿಕ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ, ಅಂದರೆ ಮಧ್ಯಾಹ್ನ 1:05 ರ ಸುಮಾರಿಗೆ ತಮ್ಮ ಪ್ರಚಾರ ಕಾರ್ಯವನ್ನು ಆರಂಭಿಸಿದರು. ಆದರೆ ಭದ್ರತಾ ವೈಫಲ್ಯ ಮತ್ತು ಸಂಚಾರ ದಟ್ಟಣೆಯಿಂದಾಗಿ ಪ್ರಚಾರಕ್ಕೆ ಅಡೆತಡೆಗಳು ಎದುರಾದವು.
ಪೆರಂಬೂರಿನಿಂದ ಕೊಲತ್ತೂರಿಗೆ ಕೇವಲ 5 ಕಿಲೋಮೀಟರ್ ದೂರವನ್ನು ಕ್ರಮಿಸಲು ವಿಜಯ್ ಬೆಂಗಾವಲು ಪಡೆಗೆ ಸುಮಾರು ಎರಡು ಗಂಟೆಗಳ ಕಾಲಾವಕಾಶ ಬೇಕಾಯಿತು ಎನ್ನಲಾಗಿದ್ದು, ಅಂತಿಮವಾಗಿ ಮಧ್ಯಾಹ್ನ 3:37 ರ ಸುಮಾರಿಗೆ ಎರಡನೇ ಪ್ರಚಾರ ಸ್ಥಳವನ್ನು ತಲುಪಿದರು. ಈ ವಿಳಂಬದ ಹೊರತಾಗಿಯೂ ಕೊಲತ್ತೂರಿನಲ್ಲಿ ಜಮಾಯಿಸಿದ್ದ ಭಾರಿ ಜನಸಮೂಹವು ವಿಜಯ್ಗೆ ಅದ್ಧೂರಿ ಸ್ವಾಗತವನ್ನು ಕೋರಿತು.
ಈ ಘಟನೆಯ ಬೆನ್ನಲ್ಲೇ ಟಿವಿಕೆ ಪಕ್ಷವು ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಪೊಲೀಸ್ ನಿಯೋಜನೆಯಲ್ಲಿ ಅಸಮರ್ಪಕತೆ ಇದ್ದುದರಿಂದ ಜನಸಂದಣಿ ನಿರ್ವಹಣೆ ಸರಿ ಇರಲಿಲ್ಲ, ಇದರಿಂದಾಗಿಯೇ ಬೆಂಗಾವಲು ವಾಹನವು ದೀರ್ಘಕಾಲದವರೆಗೆ ರಸ್ತೆಯಲ್ಲಿ ಸಿಲುಕಿಕೊಂಡಿತು, ಡಿಎಂಕೆ ಸೂಚನೆಯ ಮೇರೆಗೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಜಯ್ ಪ್ರಚಾರಕ್ಕೆ ಅಡೆಚಣೆ ಮಾಡುತ್ತಿದ್ದಾರೆ ಎಂದು ಟಿವಿಕೆ ಆರೋಪಿಸಿದೆ.
ಈ ಭದ್ರತಾ ಲೋಪಗಳ ಕುರಿತು ಟಿವಿಕೆ ಜಂಟಿ ಕಾರ್ಯದರ್ಶಿ ನಿರ್ಮಲ್ ಕುಮಾರ್ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಚೆನ್ನೈ ಪೊಲೀಸ್ ಆಯುಕ್ತರು ಮತ್ತು ಇತರ ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಕರೂರ್‌ನಲ್ಲಿ ನಡೆದ ಕಾಲ್ತುಳಿತ ಘಟನೆಯನ್ನು ನೆನಪಿಸಿಕೊಂಡ ಟಿವಿಕೆ ನಾಯಕರು, ಮುನ್ನೆಚ್ಚರಿಕಾ ಕ್ರಮವಾಗಿ ಮತ್ತು ಅಭಿಮಾನಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಲ್ಲಿವಕ್ಕಂನಲ್ಲಿ ನಡೆಯಬೇಕಿದ್ದ ಅಂತಿಮ ಹಂತದ ಪ್ರಚಾರವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಇದರಿಂದಾಗಿ ಅಲ್ಲಿ ಸೇರಿದ್ದ ಸಾವಿರಾರು ಬೆಂಬಲಿಗರಿಗೆ ಪಕ್ಷದ ಸ್ಥಳೀಯ ಉಸ್ತುವಾರಿಗಳು ಕ್ಷಮೆಯಾಚಿಸಿದರು.
ನಮ್ಮ ತಪ್ಪಿಲ್ಲ...
ಟಿವಿಕೆಯ ಆರೋಪಗಳನ್ನು ಡಿಎಂಕೆ ನಿರಾಕರಿಸಿದ್ದು, ಚುನಾವಣಾ ಅವಧಿಯಲ್ಲಿ ಸಂಪೂರ್ಣ ಅಧಿಕಾರವು ಚುನಾವಣಾ ಆಯೋಗದ ಕೈಯಲ್ಲಿರುತ್ತದೆ, ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ವಕ್ತಾರ ಟಿ.ಕೆ.ಎಸ್. ಎಳಂಗೋವನ್ ಸ್ಪಷ್ಟಪಡಿಸಿದ್ದಾರೆ. ಸ್ಪಷ್ಟನೆಯ ಬಳಿಕವೂ ರಾಜಕೀಯ ವಾಗ್ವಾದ ಕೆಸರೆರೆಚಾಟ ಇಲ್ಲಿಗೆ ನಿಂತಿಲ್ಲ.
ಟಿವಿಕೆ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದು, ಸಿಎಂ ಉದ್ದೇಶಪೂರ್ವಕವಾಗಿ ನಮ್ಮ ನಾಯಕರ ಪ್ರಯಾಣವನ್ನು ವಿಳಂಬಗೊಳಿಸುವ ಮೂಲಕ ಕರೂರು ದುರಂತದಂತಹ ಪರಿಸ್ಥಿತಿಯನ್ನು ಮರುಸೃಷ್ಟಿಸಲು ಸಂಚು ರೂಪಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಯು ಏಪ್ರಿಲ್ 23 ರಂದು ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ(ಏಜೆನ್ಸೀಸ್).