ಚೆನ್ನೈ: ಮೇಕೆದಾಟು ಅಣೆಕಟ್ಟು ಯೋಜನೆಯ ವಿಚಾರವನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಸಿನಿಮಾ ಶೈಲಿಯಲ್ಲಿ ನಿಭಾಯಿಸುತ್ತಿದ್ದಾರೆ ಎಂದು ವಿರೋಧ ಪಕ್ಷವಾದ ಡಿಎಂಕೆ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದೆ (DMK Slams Vijay). ಸಿನಿಮಾಗಳಲ್ಲಿ ಸೋಲೋ ಪರ್ಫಾರ್ಮೆನ್ಸ್ ನೀಡಿದಂತೆ, ರಾಜ್ಯದ ಜೀವನಾಡಿಯಾದ ಕಾವೇರಿ ಮತ್ತು ಮೇಕೆದಾಟು ವಿಚಾರದಲ್ಲಿ ಏಕಾಂಗಿಯಾಗಿ ನಿರ್ಧಾರ ತೆಗೆದುಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು ಎಂದು ಡಿಎಂಕೆ ತನ್ನ ಮುಖವಾಣಿ ಮುರಸೊಳಿ ಮೂಲಕ ಸಲಹೆ ನೀಡಿದೆ.
ಸೋಮವಾರ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಬಿಡುಗಡೆ ಸಮಾರಂಭದಲ್ಲಿ ಸಿಎಂ ವಿಜಯ್ ಮತ್ತು ನಮ್ಮ ರಾಜ್ಯದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಭೇಟಿಯ ಬೆನ್ನಲ್ಲೇ ಡಿಎಂಕೆ, ಎಐಎಡಿಎಂಕೆ ಮತ್ತು ಬಿಜೆಪಿ ಪಕ್ಷಗಳು ವಿಜಯ್ ವಿರುದ್ಧ ಮುಗಿಬಿದ್ದಿವೆ.
ತನ್ನ ಮುಖವಾಣಿ ಮುರಸೊಳಿಯಲ್ಲಿ ಲೇಖನ ಪ್ರಕಟಿಸಿರುವ ಡಿಎಂಕೆ, ಮೇಕೆದಾಟು ವಿವಾದವು ಸಿನಿಮಾ ಅಲ್ಲ, ಇದು ರಾಜ್ಯದ ಕೋಟ್ಯಂತರ ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ಗಂಭೀರ ವಿಷಯವಾಗಿದೆ. ಇಂತಹ ಸೂಕ್ಷ್ಮ ವಿಚಾರದಲ್ಲಿ ಸಿಎಂ ವಿಜಯ್ ಸಿನಿಮಾ ಡೈಲಾಗ್ಗಳನ್ನು ಹೊಡೆಯುತ್ತಾ ಆರು ತಿಂಗಳ ಸಮಯವನ್ನು ವ್ಯರ್ಥ ಮಾಡಿದ್ದಾರೆ. ಸಿನಿಮಾಗಳಲ್ಲಿ ಅವರು ಏಕವ್ಯಕ್ತಿ ಪ್ರದರ್ಶನ ನೀಡಲಿ, ಆದರೆ ಮುಖ್ಯಮಂತ್ರಿಯಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕು ಎಂದು ಟೀಕಿಸಿದೆ.
ಇದಷ್ಟೆ ಅಲ್ಲದೆ, ಮೇಕೆದಾಟು ಅಣೆಕಟ್ಟು ನಿರ್ಮಾಣವೇ ತಮ್ಮ ಗುರಿ ಎಂಬಂತೆ ಮಾತನಾಡುತ್ತಿರುವ ಸಿಎಂ ಡಿ ಕೆ ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ವಿರುದ್ಧವೂ ಮುರಸೊಳಿಯಲ್ಲಿ ಹರಿಹಾಯ್ದಿದ್ದು, ಮೇಕೆದಾಟು ಯೋಜನೆಗೆ ತಮಿಳುನಾಡಿನ ಒಗ್ಗಟ್ಟಿನ ವಿರೋಧವನ್ನು ಪ್ರದರ್ಶಿಸಲು ತಕ್ಷಣವೇ ಸರ್ವಪಕ್ಷ ಸಭೆ ಕರೆಯುವಂತೆ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಒತ್ತಾಯಿಸಿದ್ದಾರೆ.
ಇದೇ ವೇಳೆ, ಡಿಎಂಕೆ ವಕ್ತಾರ ಟಿ ಕೆಎಸ್ ಇಳಂಗೋವನ್ ಸಹ ಮಾತನಾಡಿದ್ದು, ಸಿಎಂ ವಿಜಯ್ ಅವರಿಗೆ ಮೇಕೆದಾಟು ಸಮಸ್ಯೆಯ ಬಗ್ಗೆ ಅರಿವಿಲ್ಲ. ತಮಿಳುನಾಡಿನಲ್ಲಿ ಕಾವೇರಿ ಎಂಬ ನದಿಯಿದೆ ಎಂಬುದೇ ಅವರಿಗೆ ತಿಳಿದಂತಿಲ್ಲ. ಕರ್ನಾಟಕಕ್ಕೆ ಹೋಗಿ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ ಬಂದಿದ್ದಾರೆ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.
ದೆಹಲಿಯಲ್ಲಿ ಕಾಂಗ್ರೆಸ್ ನಾಯಕರನ್ನು ಭೇಟಿಯಾದ ಸಂದರ್ಭದಲ್ಲಿ ಮೇಕೆದಾಟು ವಿಚಾರವನ್ನು ಪ್ರಸ್ತಾಪಿಸದಿರುವುದು ತಮಿಳುನಾಡಿನ ಜನರ ಬೆನ್ನಿಗೆ ಚೂರಿ ಹಾಕುವ ಕೆಲಸ ಎಂದು ಎಐಎಡಿಎಂಕೆ ಆರೋಪಿಸಿದೆ. ಪಕ್ಷದ ವಕ್ತಾರ ಕೋವೈ ಸತ್ಯನ್ ಮಾತನಾಡಿ, ಕಾಂಗ್ರೆಸ್ ಬೆಂಬಲ ಹಿಂಪಡೆದರೆ ಸರ್ಕಾರ ಬಿದ್ದುಹೋಗುತ್ತದೆ ಎಂಬ ಭಯದಿಂದ ಸಿಎಂ ವಿಜಯ್ ಕಾಂಗ್ರೆಸ್ ವಿರುದ್ಧ ತುಟಿಬಿಚ್ಚುತ್ತಿಲ್ಲ. ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸುವುದಕ್ಕಿಂತ ಮುಖ್ಯಮಂತ್ರಿ ಕುರ್ಚಿಯಲ್ಲಿ ಉಳಿಯುವುದೇ ಅವರಿಗೆ ಮುಖ್ಯವಾಗಿದೆ ಎಂದು ಕಿಡಿಕಾರಿದ್ದಾರೆ.
ಮತ್ತೊಂದೆಡೆ, ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಕೂಡ ವಿಜಯ್ ಅವರ ದೆಹಲಿ ಭೇಟಿಯನ್ನು ಪ್ರಶ್ನಿಸಿದ್ದು, ಕರ್ನಾಟಕದ ಕಾಂಗ್ರೆಸ್ ಮುಖ್ಯಮಂತ್ರಿ ತಮಿಳುನಾಡಿನ ಹಕ್ಕುಗಳನ್ನು ಬಹಿರಂಗವಾಗಿ ತಿರಸ್ಕರಿಸುತ್ತಿರುವಾಗ, ವಿಜಯ್ ಅವರು ದೆಹಲಿಗೆ ತೆರಳಿ ಕಾಂಗ್ರೆಸ್ ನಾಯಕರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಯಾವ ಸಂದೇಶವನ್ನು ರವಾನಿಸುತ್ತದೆ? ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಆಗಸ್ಟ್ 7ರಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದ ಸಿಎಂ ವಿಜಯ್, ಶತ್ರು ರಾಷ್ಟ್ರಗಳೇ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಾಗ ನೆರೆಯ ರಾಜ್ಯದೊಂದಿಗೆ ಏಕೆ ಮಾತುಕತೆ ನಡೆಸಬಾರದು ಎಂಬ ಸದುದ್ದೇಶದಿಂದ ಬೆಂಗಳೂರಿಗೆ ತೆರಳಿ ಚರ್ಚಿಸಲು ಮುಂದಾಗಿದ್ದೆ. ತಮಿಳುನಾಡಿನ ಜನರಿಗಾಗಿ ಅವಮಾನ ಸಹಿಸಲೂ ನಾನು ಸಿದ್ಧನಿದ್ದೇನೆ. ಆದರೆ ಕಾವೇರಿ ವಿಚಾರದಲ್ಲಿ ಮತ್ತು ಮೇಕೆದಾಟು ವಿರೋಧಿಸುವಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದ್ದರು.
ಇನ್ನು ದೆಹಲಿ ಭೇಟಿಯ ಬಳಿಕ ಪ್ರತಿಕ್ರಿಯಿಸಿರುವ ಸಿಎಂ ಡಿ ಕೆ ಶಿವಕುಮಾರ್, ನಾವೆಲ್ಲರೂ ಸ್ನೇಹಿತರು, ಅವರಿಗೆ ಅವರದೇ ಆದ ರಾಜಕೀಯ ಸಮಸ್ಯೆಗಳಿವೆ. ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಲು ನಾವು ಬದ್ಧರಾಗಿದ್ದೇವೆ ಮತ್ತು ಅದನ್ನು ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನೀರು ಹಂಚಿಕೆ ಸೂತ್ರವನ್ನು ಎತ್ತಿಹಿಡಿದಿದ್ದರೂ, ಕರ್ನಾಟಕವು ಹೆಚ್ಚುವರಿ ಮಳೆಯಾದಾಗ ಮಾತ್ರ ನೀರು ಬಿಡುತ್ತದೆ ಮತ್ತು ಸಂಕಷ್ಟದ ಸಮಯದಲ್ಲಿ ನೀರು ಬಿಡದೆ ತಮಿಳುನಾಡನ್ನು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡುತ್ತದೆ ಎಂಬುದು ತಮಿಳುನಾಡಿನ ವಾದವಾದರೆ, ಇದಕ್ಕೆ ಪ್ರತಿಯಾಗಿ, ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡಿಗೆ ಅದರ ಪಾಲಿನ ನೀರನ್ನು ಸಮರ್ಪಕವಾಗಿ ನೀಡಲು ಸಾಧ್ಯವಾಗುತ್ತದೆ ಎಂಬುದು ರಾಜ್ಯ ಪ್ರತಿಪಾದನೆಯಾಗಿದೆ. ಈ ವಿವಾದ ಇನ್ನು ಎಲ್ಲಿಗೆ ಹೋಗಿ ತಲುಪಲಿದೆಯೋ ಕಾದು ನೋಡಬೇಕಿದೆ(ಏಜೆನ್ಸೀಸ್).