ಕಾಂಗ್ರೆಸ್-ಬಿಜೆಪಿಗೆ ಡಿಎಂಕೆ ಸೆಡ್ಡು: ರಾಷ್ಟ್ರ ರಾಜಕಾರಣದಲ್ಲಿ ಶೀಘ್ರದಲ್ಲೇ ಮೂರನೇ ರಂಗ ಉದಯ?
ಚೆನ್ನೈ: ದೇಶದ ರಾಜಕಾರಣದಲ್ಲಿ ಮತ್ತೊಂದು ಭಾರಿ ಸಂಚಲನ ಸೃಷ್ಟಿಯಾಗುವ ಲಕ್ಷಣಗಳು ಕಾಣಿಸುತ್ತಿವೆ. ತಮಿಳುನಾಡಿನ ಡಿಎಂಕೆ ಪಕ್ಷವು ಈಗ ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಪರ್ಯಾಯವಾಗಿ ರಾಷ್ಟ್ರ ಮಟ್ಟದಲ್ಲಿ ಮೂರನೇ ರಂಗ(Third Front) ರಚಿಸುವ ಕುರಿತು ಗಂಭೀರ ಚಿಂತನೆ ನಡೆಸಿದೆ ಎಂದು ಅತ್ಯಂತ ನಂಬಿಕಸ್ಥ ಮೂಲಗಳು ತಿಳಿಸಿವೆ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ಉನ್ನತ ಮಟ್ಟದ ಸಭೆಯನ್ನು ಡಿಎಂಕೆ ಸಂಪೂರ್ಣವಾಗಿ ಬಹಿಷ್ಕರಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ಹೊರಬಿದ್ದಿದೆ.
ರಾಷ್ಟ್ರ ರಾಜಕಾರಣದಲ್ಲಿ ಡಿಎಂಕೆ ತನ್ನ ಮುಂದಿನ ಹಾದಿಯನ್ನು ನಿರ್ಧರಿಸಲು ಶೀಘ್ರದಲ್ಲೇ ಹೈಕಾವಂಡ್ ಸಭೆ ಕರೆಯಲಿದ್ದು, ಅಲ್ಲಿ ಬಿಜೆಪಿ-ಕಾಂಗ್ರೆಸ್ ರಹಿತ ಫೆಡರಲ್ ರಂಗದ ಪ್ರಸ್ತಾಪ ಅಧಿಕೃತವಾಗಿ ಚರ್ಚೆಗೆ ಬರಲಿದೆ ಎನ್ನಲಾಗಿದೆ.
ಮೈತ್ರಿ ಮುರಿದ ‘ವಿಜಯ್’ ಫ್ಯಾಕ್ಟರ್: ತಮಿಳುನಾಡಿನಲ್ಲಿ ಮಹಾ ದ್ರೋಹದ ಕಿಡಿ!
ಕಳೆದ ಹಲವು ವರ್ಷಗಳಿಂದ ತಮಿಳುನಾಡು ಮತ್ತು ಕೇಂದ್ರ ರಾಜಕಾರಣದಲ್ಲಿ ಅತ್ಯಂತ ಆಪ್ತ ಮಿತ್ರರಾಗಿದ್ದ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಜಗಳ ಈಗ ಬೀದಿಗೆ ಬಂದಿದೆ. ಅಲ್ಲದೆ, ಇತ್ತೀಚೆಗೆ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭೆ ಚುನಾವಣೆಯ ನಂತರ ಉಭಯ ಪಕ್ಷಗಳ ಸಂಬಂಧ ಸಂಪೂರ್ಣವಾಗಿ ಹಳಸಿದೆ. ತಮಿಳುನಾಡಿನಲ್ಲಿ ನಟ ವಿಜಯ್ ಅವರ ಹೊಸ ಪಕ್ಷವಾದ ಟಿವಿಕೆ ಜತೆ ಕಾಂಗ್ರೆಸ್ ಗುಟ್ಟಾಗಿ ಕೈಜೋಡಿಸಿರುವುದೇ ಈ ಬಿಕ್ಕಟ್ಟಿಗೆ ಮುಖ್ಯ ಕಾರಣ. ಇದನ್ನು ಕಾಂಗ್ರೆಸ್ ಮಾಡಿದ ಮಹಾ ರಾಜಕೀಯ ದ್ರೋಹ ಎಂದು ಡಿಎಂಕೆ ನಾಯಕರು ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.
ಈ ಮೈತ್ರಿ ಮುರಿತದ ಬಿಸಿ ಈಗ ಸಂಸತ್ತಿಗೂ ತಟ್ಟಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರ ಜೊತೆ ಕುಳಿತುಕೊಳ್ಳಲು ನಿರಾಕರಿಸಿರುವ ಡಿಎಂಕೆ ಸಂಸದರು, ತಮಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸ್ಪೀಕರ್ ಅವರಲ್ಲಿ ಲಿಖಿತ ಮನವಿ ಸಲ್ಲಿಸಿ, ಪ್ರತ್ಯೇಕವಾಗಿ ಕುಳಿತುಕೊಳ್ಳುತ್ತಿದ್ದಾರೆ.
ಪ್ರಾದೇಶಿಕ ಪಕ್ಷಗಳ ಒಕ್ಕೂಟಕ್ಕೆ ಡಿಎಂಕೆ ಪ್ಲಾನ್
ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಸಮಾನ ಅಂತರ ಕಾಯ್ದುಕೊಳ್ಳಲು ಬಯಸಿರುವ ಡಿಎಂಕೆಯ ಒಂದು ಪ್ರಭಾವಿ ಬಣ, ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಬಲಿಷ್ಠ ಫೆಡರಲ್ ಫ್ರಂಟ್ ರಚಿಸಲು ಇದು ಸೂಕ್ತ ಸಮಯ ಎಂದು ನಂಬಿದೆ. ಅಲ್ಲದೆ, ದೇಶದ ಎರಡು ಪ್ರಮುಖ ಧ್ರುವಗಳಾದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಕೂಟಕ್ಕೆ ಸಡ್ಡು ಹೊಡೆಯಲು ಪ್ರಾದೇಶಿಕ ನಾಯಕರನ್ನು ಸಂಪರ್ಕಿಸಲು ಡಿಎಂಕೆ ರಹಸ್ಯ ಸ್ಕೆಚ್ ಸಿದ್ಧಪಡಿಸುತ್ತಿದೆ.
ಭಾರತದ ರಾಜಕಾರಣದಲ್ಲಿ ಮೂರನೇ ರಂಗದ ಪ್ರಯೋಗಗಳು ಹೊಸದೇನಲ್ಲ. ಕಳೆದ ಕೆಲವು ದಶಕಗಳಲ್ಲಿ ಪ್ರಾದೇಶಿಕ ಪಕ್ಷಗಳು ಹಲವು ಬಾರಿ ಇಂತಹ ಒಕ್ಕೂಟ ರಚಿಸಲು ಯತ್ನಿಸಿದ್ದರೂ, ನಾಯಕರ ವೈಯಕ್ತಿಕ ಮಹತ್ವಾಕಾಂಕ್ಷೆ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಸಂಘರ್ಷದಿಂದಾಗಿ ಅವು ದೀರ್ಘಕಾಲ ಉಳಿದಿರಲಿಲ್ಲ. ಆದರೆ, ಬದಲಾದ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಡಿಎಂಕೆಯ ಈ ಹೊಸ ಹೆಜ್ಜೆ ರಾಷ್ಟ್ರೀಯ ರಾಜಕಾರಣದ ಸಮೀಕರಣವನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಧ್ಯತೆಯಿದೆ,(ಏಜೆನ್ಸೀಸ್).