- 'ಉತ್ತರ vs ದಕ್ಷಿಣ' ಕಿಡಿ ಹೊತ್ತಿಸಿದ ಡಿಎಂಕೆ ಸಂಸದ
- ಮಾರನ್ ಹೇಳಿಕೆಗೆ ಬಿಜೆಪಿ ಗರಂ
ಚೆನ್ನೈ: ( Dayanidhi Maran) ಡಿಎಂಕೆ (DMK) ಸಂಸದ ದಯಾನಿಧಿ ಮಾರನ್ ಅವರು ಉತ್ತರ ಭಾರತದ ಮಹಿಳೆಯರ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಯೊಂದು ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಉತ್ತರ ಭಾರತೀಯ ಮಹಿಳೆಯರು ಕೇವಲ ಮನೆಯಲ್ಲೇ ಇರಲು ಮತ್ತು ಮಕ್ಕಳನ್ನು ಹೆರಲು ಸೀಮಿತವಾಗಿದ್ದಾರೆ ಎಂಬರ್ಥದಲ್ಲಿ ಅವರು ನೀಡಿರುವ ಹೇಳಿಕೆಗೆ ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಮಾರನ್ ಹೇಳಿದ್ದೇನು?
ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ದಯಾನಿಧಿ ಮಾರನ್ ಅವರು, ದಕ್ಷಿಣ ಭಾರತ ಮತ್ತು ಉತ್ತರ ಭಾರತದ ನಡುವಿನ ಸಾಮಾಜಿಕ ಬದಲಾವಣೆಗಳ ಬಗ್ಗೆ ಮಾತನಾಡುತ್ತಿದ್ದರು. "ಉತ್ತರ ಭಾರತದ ಮಹಿಳೆಯರಿಗೆ ಕೆಲಸಕ್ಕೆ ಹೋಗಬೇಡಿ, ಮನೆಯಲ್ಲಿಯೇ ಇರಿ, ಅಡುಗೆಮನೆಯಲ್ಲಿಯೇ ಇರಿ ಮತ್ತು ಮಕ್ಕಳನ್ನು ಹೆರಲು ಹೇಳಲಾಗುತ್ತದೆ. ಅವರಿಗೆ ಶಿಕ್ಷಣ ಅಥವಾ ಉದ್ಯೋಗದ ಸ್ವಾತಂತ್ರ್ಯವಿಲ್ಲ. ಆದರೆ ದಕ್ಷಿಣದಲ್ಲಿ, ಅದರಲ್ಲೂ ತಮಿಳುನಾಡಿನಲ್ಲಿ ದ್ರಾವಿಡ ಮಾದರಿಯ ಆಡಳಿತದಿಂದ ಮಹಿಳೆಯರು ಹೆಚ್ಚು ಪ್ರಗತಿ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದು ತಮಿಳುನಾಡು, ದ್ರಾವಿಡ ರಾಜ್ಯ, ಕಲೈನಾರ್, ಅಣ್ಣಾ ಮತ್ತು ಎಂಕೆ ಸ್ಟಾಲಿನ್ ಅವರ ನಾಡು. ಇಲ್ಲಿ ನಿಮ್ಮ ಪ್ರಗತಿ ತಮಿಳುನಾಡಿನ ಪ್ರಗತಿಯಾಗಿದೆ. ಅದಕ್ಕಾಗಿಯೇ ಜಾಗತಿಕ ಕಂಪನಿಗಳು ಚೆನ್ನೈಗೆ ಬರುತ್ತವೆ ಏಕೆಂದರೆ ಇಲ್ಲಿರುವ ಎಲ್ಲರೂ ವಿದ್ಯಾವಂತರು. ತಮಿಳುನಾಡು ಭಾರತದ ಅತ್ಯುತ್ತಮ ರಾಜ್ಯ ಮತ್ತು ಎಂಕೆ ಸ್ಟಾಲಿನ್ ದೇಶದ ಅತ್ಯುತ್ತಮ ಮುಖ್ಯಮಂತ್ರಿ. ಮಹಿಳೆಯರ ಪ್ರಗತಿಯಲ್ಲಿ ಸರ್ಕಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಾರನ್ ಹೇಳಿದರು.
ಉತ್ತರ ಭಾರತೀಯರು ತಮಿಳುನಾಡಿಗೆ ಬಂದು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ ಎಂಬ ತಮ್ಮ ಹಳೆಯ ಹೇಳಿಕೆಯನ್ನು ಪುನರುಚ್ಚರಿಸುತ್ತಾ, ಅಲ್ಲಿನ ಮಹಿಳೆಯರ ಸ್ಥಿತಿಗತಿಯನ್ನು ಅವರು ಟೀಕಿಸಿದ್ದಾರೆ.
ಸಂಸದ ಮಾರನ್ ಅವರ ಈ ಹೇಳಿಕೆಯು "ಉತ್ತರ ಮತ್ತು ದಕ್ಷಿಣ" (North vs South) ಎಂಬ ವಿಭಜನೆಯನ್ನು ಸೃಷ್ಟಿಸುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ. ದೇಶದ ಪ್ರಗತಿಯಲ್ಲಿ ಉತ್ತರ ಭಾರತದ ಮಹಿಳೆಯರ ಪಾತ್ರ ದೊಡ್ಡದಿದೆ, ಇಂತಹ ಸಂಕುಚಿತ ಹೇಳಿಕೆಗಳು ಸಂಸದರೊಬ್ಬರಿಗೆ ಶೋಭೆ ತರುವುದಿಲ್ಲ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.
ಮಾರನ್ ಅವರ ಹೇಳಿಕೆಯು ಉತ್ತರ ಭಾರತೀಯ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಹೇಳಿದೆ. ಡಿಎಂಕೆ ಪಕ್ಷವು ಮಹಿಳಾ ವಿರೋಧಿ ಮತ್ತು ವಿಭಜಕ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಡಿಎಂಕೆ ಮಾರನ್ ಅವರನ್ನು ಸಮರ್ಥಿಸಿಕೊಂಡಿದೆ. ತಮಿಳುನಾಡಿನಲ್ಲಿ ನಾವು ಮಹಿಳಾ ಹಕ್ಕುಗಳು ಮತ್ತು ಶಿಕ್ಷಣಕ್ಕಾಗಿ ಹೋರಾಡಿದ್ದೇವೆ, ಆದರೆ ಉತ್ತರ ಭಾರತದಲ್ಲಿ ಮಹಿಳೆಯರಿಗಾಗಿ ಹೋರಾಡಲು ಯಾರೂ ಇಲ್ಲ ಎಂದು ಪಕ್ಷದ ನಾಯಕ ಟಿಕೆಎಸ್ ಎಳಂಗೋವನ್ ಹೇಳಿದ್ದಾರೆ.
ಈ ಹಿಂದೆ ದಯಾನಿಧಿ ಮಾರನ್ ಅವರು "ಹಿಂದಿ ಮಾತನಾಡುವವರು ಶೌಚಾಲಯ ತೊಳೆಯಲು ತಮಿಳುನಾಡಿಗೆ ಬರುತ್ತಾರೆ" ಎಂದು ಹೇಳಿ ದೊಡ್ಡ ವಿವಾದ ಸೃಷ್ಟಿಸಿದ್ದರು. ಈಗ ಮಹಿಳೆಯರ ಕುರಿತಾದ ಈ ಹೇಳಿಕೆ ಬೆಂಕಿಗೆ ತುಪ್ಪ ಸುರಿದಂತಾಗಿದೆ.