Anitha Radhakrishnan | ಡಿಎಂಕೆ ಶಾಸಕ ಅನಿತಾ ರಾಧಾಕೃಷ್ಣನ್ ಬಂಧನ! 
ದೇಶ

ಸಿಎಂ ವಿಜಯ್ ವಿರುದ್ಧ ಅವಹೇಳನಕಾರಿ ಹೇಳಿಕೆ; ಡಿಎಂಕೆ ಶಾಸಕ ಅನಿತಾ ರಾಧಾಕೃಷ್ಣನ್ ಬಂಧನ! | Anitha Radhakrishnan

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಡಿಎಂಕೆ ಶಾಸಕ ಅನಿತಾ ಆರ್ ರಾಧಾಕೃಷ್ಣನ್ (Anitha Radhakrishnan) ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಮದ್ರಾಸ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಕೆಲವೇ ಗಂಟೆಗಳಲ್ಲಿ ಈ ಬಂಧನ ನಡೆದಿದೆ.
ಜೂನ್ 20 ರಂದು ತೂತುಕುಡಿ ಜಿಲ್ಲೆಯ ಆತೂರ್‌ನಲ್ಲಿ ನಡೆದ ಡಿಎಂಕೆ ಸಾರ್ವಜನಿಕ ಸಭೆಯಲ್ಲಿ ಅನಿತಾ ರಾಧಾಕೃಷ್ಣನ್, ಸಿಎಂ ಸಿ. ಜೋಸೆಫ್ ವಿಜಯ್ ವಿರುದ್ಧ ನಿಂದನಾತ್ಮಕವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಮಾನಹಾನಿ ಮೊಕದ್ದಮೆ ದಾಖಲಿಸಲಾಗಿತ್ತು.

ಹೈಕೋರ್ಟ್ ಹೇಳಿದ್ದೇನು..?

ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಿ.ಕೆ. ಇಳಂತಿರೈಯನ್ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದರು. ಈ ವೇಳೆ ಮಹತ್ವದ ಉಲ್ಲೇಖ ಮಾಡಿದ ನ್ಯಾಯಾಲಯ, 1967 ರಿಂದಲೂ ತಮಿಳುನಾಡು ರಾಜ್ಯವನ್ನು ಚಿತ್ರರಂಗದ ಹಿನ್ನೆಲೆಯುಳ್ಳ ನಾಯಕರೇ ಆಳುತ್ತಿದ್ದಾರೆ ಎಂದು ನೆನಪಿಸಿದ್ದಲ್ಲದೆ, ಸಾರ್ವಜನಿಕ ಸಭೆಯಲ್ಲಿ ರಾಧಾಕೃಷ್ಣನ್ ಮಾಡಿದ ಭಾಷಣದ ಶೈಲಿಯನ್ನು ಪ್ರಶ್ನಿಸಿದೆ. ತಿರುಚೆಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಾಧಾಕೃಷ್ಣನ್, ಆತೂರ್ ಟೌನ್ ಪಂಚಾಯಿತಿಯಲ್ಲಿ ನಡೆಯುತ್ತಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗೆ ತೆರಳಿದ್ದರು. ಹೊಸ ಕಚೇರಿ ಕಟ್ಟಡದ ಪರಿಶೀಲನೆ ಮುಗಿಸಿ ಹೊರಬರುತ್ತಿದ್ದಂತೆ ಪೊಲೀಸರು, ಅವರನ್ನು ವಶಕ್ಕೆ ಪಡೆದರು. ಬಳಿಕ ಮುಂದಿನ ವಿಚಾರಣೆಗಾಗಿ ತೂತುಕುಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಅಷ್ಟಕ್ಕೂ ಡಿಎಂಕೆ ಶಾಸಕ ಹೇಳಿದ್ದೇನು..?

ಇತ್ತೀಚೆಗೆ ತಮಿಳುನಾಡು ವಿಧಾನಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತ ಚರ್ಚೆಯ ವೇಳೆ ಡಿಎಂಕೆ ಶಾಸಕ ಎಸ್. ಆಸ್ಟಿನ್ ಮತ್ತು ಮುಖ್ಯಮಂತ್ರಿ ವಿಜಯ್ ನಡುವೆ ನಡೆದಿದ್ದ ಮಾತಿನ ಚಕಮಕಿಯನ್ನು ಪ್ರಸ್ತಾಪಿಸಿದ ರಾಧಾಕೃಷ್ಣನ್, ನಮ್ಮ ಸಹೋದರ ಆಸ್ಟಿನ್ ಮುಖ್ಯಮಂತ್ರಿಗಳತ್ತ ಬೆರಳು ಮಾಡಿ, ನೀವು ಬಾಯಿ ತೆರೆದು ಮಾತನಾಡಲ್ವಾ..? ಎಂದು ನೇರವಾಗಿ ಪ್ರಶ್ನಿಸಿದ್ದರು. ಆ ಸಮಯದಲ್ಲಿ ಮುಖ್ಯಮಂತ್ರಿಗಳು ಅಸಹಾಯಕರಾಗಿ ಸಿಕ್ಕಿಬಿದ್ದವರಂತೆ ಮುಖ ಮಾಡಿದ್ದರು. ಅವರ ಮುಖಭಾವ ನೋಡಿದರೆ, ಅಯ್ಯೋ.. ನಾನು ಬಂದು ಇಲ್ಲಿ ಹೇಗೆ ಸಿಕ್ಕಿಹಾಕಿಕೊಂಡೆ..? ನಟಿಯ ಜೊತೆ ಮನೆಯಲ್ಲಿ ನಾನು ಎಷ್ಟು ಸುಖವಾಗಿದ್ದೆ, ಈಗ ಇಲ್ಲಿ ಬಂದು ಸಿಕ್ಕಿಬಿದ್ದಿದ್ದೇನಲ್ಲ ಎಂದು ಅವರು ಮನಸ್ಸಿನಲ್ಲೇ ಅಂದುಕೊಳ್ಳುತ್ತಿರುವ ಹಾಗಿತ್ತು ಎಂದು ಲೇವಡಿ ಮಾಡಿದ್ದರು.

ಸಾಲ ಕೇಳಲು ಬಂದ ಗ್ರಾಹಕನಂತೆ ಸಿಎಂ ಮುಖವಿರುತ್ತೆ!

ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ನಡೆದುಕೊಳ್ಳುವ ರೀತಿಯನ್ನು ವ್ಯಾಪಾರಿಯೊಬ್ಬನ ಅಂಗಡಿಗೆ ಬರುವ ಗ್ರಾಹಕನಿಗೆ ಹೋಲಿಸಿ ಮಾತನಾಡಿದ ಡಿಎಂಕೆ ಶಾಸಕ, ನಾನೊಬ್ಬ ವ್ಯಾಪಾರಿ, ನನ್ನ ಅಂಗಡಿಗೆ ಬರುವ ವ್ಯಕ್ತಿ ಏನನ್ನಾದರೂ ಖರೀದಿಸಲು ಬಂದಿದ್ದಾನೋ ಅಥವಾ ಸಾಲ ಕೇಳಲು ಬಂದಿದ್ದಾನೋ ಎಂಬುದು ಅವನ ಮುಖ ನೋಡಿದ ತಕ್ಷಣ ನನಗೆ ಗೊತ್ತಾಗಿಬಿಡುತ್ತದೆ. ಅದೇ ರೀತಿ, ನಮ್ಮ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಕುಳಿತಾಗಲೆಲ್ಲಾ ಯಾವುದೋ ಬಲೆಯಲ್ಲಿ ಸಿಕ್ಕಿಬಿದ್ದವರಂತೆ ಸಾಲ ಕೇಳಲು ಬಂದವನ ಮುಖಭಾವ ಹೊಂದಿರುತ್ತಾರೆ ಎಂಬುದನ್ನು ನಾನು ಸ್ಪಷ್ಟವಾಗಿ ಗುರುತಿಸಬಲ್ಲೆ ಎಂದು ಸಿಎಂ ವಿಜಯ್ ಆಡಳಿತ ಶೈಲಿಯನ್ನು ಅಣಕಿಸಿದ್ದರು
(ಏಜೆನ್ಸೀಸ್​).