ಚೆನ್ನೈ: ವಿಧಾನಸಭೆ ಚುನಾವಣೆಯಲ್ಲಿ ತಮಿಳು ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಹೊಡೆತದಿಂದ ಅಧಿಕಾರ ಕಳೆದುಕೊಂಡಿದ್ದ ಆಡಳಿರೂಢ ಪಕ್ಷವಾಗಿದ್ದ ಡಿಎಂಕೆ, ಈಗ ಮರಳಿ ಯುವ ಪಡೆಯನ್ನು ತನ್ನತ್ತ ಸೆಳೆಯಲು ಸಾಮಾಜಿಕ ಜಾಲತಾಣವನ್ನು ಬಲಪಡಿಸಲು ಮುಂದಾಗಿದ್ದು ಅದರ ಭಾಗವಾಗಿಯೇ ‘ಜೆನ್ ಝಿ‘ ಸಭೆಯನ್ನು ನಡೆಸುತ್ತಿದೆ.
ಶನಿವಾರ(ಮೇ 30) ಡಿಎಂಕೆ ಪಕ್ಷದ ಪ್ರಧಾನ ಕಚೇರಿ ಅಣ್ಣಾ ಅರಿವಾಲಯಂನಲ್ಲಿ "ನಾವು ಚೇತರಿಸಿಕೊಳ್ಳುತ್ತೇವೆ, ನಾವು ಮತ್ತೆ ಹಿಂತಿರುಗುತ್ತೇವೆ ಎಂಬ ಘೋಷಣೆಯಡಿ ಡಿಎಂಕೆ ಯುವಘಟಕ ಜನರಲ್ ಝೆಡ್ ಡಿಎಂಕೆ ಎಂಬ ಸಭೆ ಆಯೋಜಿಸಿತ್ತು. ಸಭೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಸಿದ್ದಾಂತ, ಸಾಧನೆ ಹಾಗೂ ದ್ರಾವಿಡ ತತ್ವಗಳನ್ನು ಆಕ್ರಮಣಕಾರಿಯಾಗಿ ಪ್ರಚಾರ ಮಾಡಲು ಪ್ರತಿಜ್ಞೆ ಮಾಡಲಾಗಿದೆ.
ಸಭೆಯಲ್ಲಿ ಮಾತನಾಡಿದ್ದ ಮಾಜಿ ಸಚಿವ ಮತ್ತು ಡಿಎಂಕೆ ಐಟಿ ವಿಭಾಗದ ಕಾರ್ಯದರ್ಶಿ ಟಿಆರ್ಬಿ ರಾಜಾ, ದ್ರಾವಿಡ ಮಾದರಿ ಸರ್ಕಾರದ ಅಡಿಯಲ್ಲಿ ರಾಜ್ಯದ ಅಭಿವೃದ್ಧಿಯನ್ನು ಕೆಲವು ಮತದಾರರು ಲಘುವಾಗಿ ಪರಿಗಣಿಸಿದ್ದಾರೆ. ಸುಲಭವಾಗಿ ಬರುವ ಯಾವುದನ್ನಾದರೂ ಮೌಲ್ಯೀಕರಿಸಲು ವಿಫಲರಾಗುತ್ತಾರೆ. ಬಹುಶಃ ಅದು ಕಳೆದ ಚುನಾವಣೆಯಲ್ಲಿ ಹಾಗೆ ಆಗಿರಬಹುದು ಎಂದು ಹೇಳಿದ್ದಾರೆ.
ಇತ್ತೀಚೆಗೆ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವಾರು ಡಿಎಂಕೆ ನಾಯಕರು ಪಕ್ಷದ ಚುನಾವಣಾ ಹಿನ್ನಡೆಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪಕ್ಷದ ಪ್ರಚಾರದ ಕೊರತೆಯೇ ಕಾರಣ ಎಂದು ಬೊಟ್ಟು ಮಾಡಿದ್ದರು. ಈ ಹಿನ್ನೆಲೆ ಪಕ್ಷದ ಯುವಘಟಕ ತನ್ನ ಸೋಷಿಯಲ್ ಮೀಡಿಯಾವನ್ನು ಮತ್ತಷ್ಟು ವಿಸ್ತರಿಸಲು ಸಭೆ ನಡೆಸುತ್ತಿದೆ (ಏಜೆನ್ಸೀಸ್).