ತಮಿಳು ಗೀತೆ ವಿಚಾರಕ್ಕೆ ಭುಗಿಲೆದ್ದ ವಿವಾದ 
ದೇಶ

ಸಿಎಂ ಆಗ್ತಿದ್ದಂತೆ ವಿಜಯ್​ ಬೆನ್ನೇರಿದ ಹೊಸ ವಿವಾದ! ಪ್ರಮಾಣ ವಚನ ವೇಳೆ ಡಿಎಂಕೆ ಗರಂ; ಅಷ್ಟಕ್ಕೂ ಆಗಿದ್ದೇನು?

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಪ್ರಮಾಣ ವಚನ
  • ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಹೊಸದೊಂದು ವಿವಾದಕ್ಕೆ ಗುರಿ
  • ಪಟ್ಟಕೇರುವ ಸಂದರ್ಭದಲ್ಲಿ ಆದ ಎಡವಟ್ಟಿಗೆ ವಿರೋಧ ಪಕ್ಷ ಡಿಎಂಕೆ ತೀವ್ರ ಆಕ್ಷೇಪಣೆ
Tamil Nadu Song Row: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಪ್ರಮಾಣ ವಚನ ಸ್ವೀಕರಿಸಿ, ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಹೊಸದೊಂದು ವಿವಾದಕ್ಕೆ ಗುರಿಯಾಗಿದ್ದಾರೆ. ವಿಜಯ್​ ಸಿಎಂ ಆಗಿ ಪಟ್ಟಕೇರುವ ಸಂದರ್ಭದಲ್ಲಿ ಆದ ಎಡವಟ್ಟಿಗೆ ವಿರೋಧ ಪಕ್ಷ ಡಿಎಂಕೆ ತೀವ್ರ ಆಕ್ಷೇಪಣೆ ಹೊರಹಾಕಿದೆ..

ಅಷ್ಟಕ್ಕೂ ಆಗಿದ್ದೇನು?

ಪ್ರಮಾಣ ವಚನ ಸಮಾರಂಭದಲ್ಲಿ ಮೊದಲು 'ವಂದೇ ಮಾತರಂ' ಹಾಡುವುದಕ್ಕೆ ಡಿಎಂಕೆ ಆಕ್ಷೇಪ ವ್ಯಕ್ತಪಡಿಸಿತು. ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಮೊದಲು ರಾಜ್ಯ ಗೀತೆ ಮೊಳಗಬೇಕು. ಆ ನಂತರ ಉಳಿದದ್ದು ಎಂಬುದು ರಾಜಕೀಯ ನಾಯಕರ ವಾದ. ಇಲ್ಲಿ, ತಮಿಳು ರಾಜ್ಯ ಗೀತೆಯ ಬದಲಿಗೆ ವಂದೇ ಮಾತರಂ ಮತ್ತು ರಾಷ್ಟ್ರಗೀತೆಗೆ ಮೊದಲೆರೆಡು ಸ್ಥಾನ ಕೊಟ್ಟಿದ್ದೇ ಸದ್ಯ ವಿವಾದಕ್ಕೆ ಕಾರಣವಾಗಿದೆ.
ಈ ನಡೆಗೆ ಡಿಎಂಕೆ ಸಿಡಿಮಿಡಿಗೊಂಡಿದ್ದು, ವಿಜಯ್ ಪ್ರಮಾಣ ವಚನ ವೇಳೆ ತಮಿಳು ಗೀತೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದೆ. ಚೆನ್ನೈ ರಾಜಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಮೊದಲು ವಂದೇ ಮಾತರಂ, ನಂತರ ರಾಷ್ಟ್ರಗೀತೆ 'ಜನ ಗಣ ಮನ' ಮತ್ತು ಅಂತಿಮವಾಗಿ ರಾಜ್ಯ ಗೀತೆ 'ತಮಿಳು ತಾಯಿ' ಹಾಡಲಾಯಿತು. ತಮಿಳುನಾಡಿನಲ್ಲಿ ಮೊದಲು ತಮಿಳು ಗೀತೆಯನ್ನು ನುಡಿಸುವುದು ಮತ್ತು ನಂತರ ಕೊನೆಯಲ್ಲಿ ರಾಷ್ಟ್ರಗೀತೆ ನುಡಿಸುವುದು ವಾಡಿಕೆ ಎಂದು ಡಿಎಂಕೆ ನೆನಪಿಸುವ ಮೂಲಕ ಟಿವಿಕೆ ವಿರುದ್ಧ ಗುಡುಗಿದೆ.
ಈ ವಿವಾದದಿಂದ ಜಾರಿಕೊಂಡ ಟಿವಿಕೆ, ಕಾರ್ಯಕ್ರಮವು ರಾಜಭವನದಲ್ಲಿ ನಡೆದ ಕಾರಣ, ಆಯಾ ಗೀತೆಗಳನ್ನು ಯಾವ ಕ್ರಮದಲ್ಲಿ ಬಳಸಬೇಕಿತ್ತು ಎಂಬುದನ್ನು ರಾಜ್ಯಪಾಲರ ಕಚೇರಿ ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ, ಡಿಎಂಕೆ ಈ ಉತ್ತರಕ್ಕೆ ತೃಪ್ತಿ ಪಟ್ಟಿಲ್ಲ. ಬದಲಿಗೆ ಟಿವಿಕೆ ಯಾಕೋ ಬಿಜೆಪಿ ಕಡೆಗೆ ಹೋದಂತೆ ಕಾಣುತ್ತಿದೆ ಎಂದು ವಿಜಯ್​ ಪಕ್ಷವನ್ನು ಕುಟುಕಿದೆ.
ಡಿಎಂಕೆ ನಾಯಕ ಟಿಕೆಎಸ್ ಎಳಂಗೋವನ್ ಮಾತನಾಡಿ, ತಮಿಳು ಗೀತೆಯನ್ನು ಮೂರನೇ ಸ್ಥಾನಕ್ಕೆ ತಳ್ಳುವ ಮೂಲಕ ರಾಜ್ಯದ ಜನತೆಗೆ ನೋವುಂಟು ಮಾಡಲಾಗಿದೆ ಎಂದರು. ಇದಕ್ಕೆ ಟಿವಿಕೆ ಸರ್ಕಾರದಲ್ಲಿರುವ ಸಿಪಿಎಂ, ಸಿಪಿಐ, ವಿಸಿಕೆ ಪಕ್ಷಗಳು ಸಹ ತಮಿಳು ಗೀತೆಗೆ ಸೂಕ್ತ ಆದ್ಯತೆ ನೀಡುವಂತೆ ಸರ್ಕಾರವನ್ನು ಮನವಿ ಮಾಡಿವೆ. ಮತ್ತೊಂದೆಡೆ, ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ವಂದೇ ಮಾತರಂ ನಂತರ ರಾಷ್ಟ್ರಗೀತೆ ಮೊದಲು ಬರಬೇಕು ಎನ್ನಲಾಗಿದೆ.
"ತಮಿಳುನಾಡಿನ ಸಿಎಂ ಸಿ.ಜೋಸೆಫ್ ವಿಜಯ್ ಮತ್ತು ಹಂಗಾಮಿ ಸ್ಪೀಕರ್ ಅವರು ನಾಳೆಯ ವಿಧಾನಸಭಾ ಅಧಿವೇಶನದ ಕೊನೆಯಲ್ಲಿ ಮತ್ತು ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸಮಾರಂಭಗಳಲ್ಲಿ ಮೊದಲು ತಮಿಳ್ತೈ ವಾಝ್ತು ಹಾಡುವುದನ್ನು ಮತ್ತು ರಾಷ್ಟ್ರಗೀತೆ ನುಡಿಸುವುದನ್ನು ಖಚಿತಪಡಿಸಿಕೊಳ್ಳಬೇಕು" ಎಂದು ವೀರಪಾಂಡ್ಯನ್ ಪತ್ರದ ಮೂಲಕ ಕೋರಿದ್ದಾರೆ,(ಏಜೆನ್ಸೀಸ್).