ತೋಲ್ ತಿರುಮಾವಲವನ್ 
ದೇಶ

ವಿಜಯ್ ಸಿಎಂ ಆಗುವುದನ್ನು ತಡೆಯಲು ಡಿಎಂಕೆ-ಎಐಎಡಿಎಂಕೆ ನನ್ನ ಸಿಎಂ ಮಾಡಲು ಬಯಸಿದ್ದವು; ತೋಲ್ ತಿರುಮಾವಲವನ್ | Thol Thirumavalavan

ಚೆನ್ನೈ: ದಳಪತಿ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ ಪಕ್ಷವೂ ಅಧಿಕಾರಕ್ಕೆ ಬರುವುನ್ನು ತಡೆಯುವ ಸಲುವಾಗಿ ಬದ್ಧವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ನನ್ನನ್ನು ಸಿಎಂ ಮಾಡಲು ಮುಂದಾಗಿದ್ದವು ಮತ್ತು ಈ ಬಗ್ಗೆ ನನ್ನ ಬಳಿ ಪ್ರಸ್ತಾಪಿಸಿದ್ದವು ಎಂದು ವಿಡುತಲೈ ಚಿರತೆಗಳ ಕಚ್ಚಿ(ವಿಸಿಕೆ) ಮುಖ್ಯಸ್ಥ ತೋಲ್ ತಿರುಮಾವಲವನ್(Thol Thirumavalavan) ಸ್ಫೋಟಕ ಹೇಳಿಕೆ ನೀಡಿದ್ದಾರೆ.
AIADMK ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ವಿರೋಧಿ ಬಣದ ಶಾಸಕರು, ಟಿವಿಕೆಯನ್ನು ಅಧಿಕಾರದಿಂದ ದೂರವಿಡಲು ಪಳನಿಸ್ವಾಮಿ ಅವರು ಕಟ್ಟಾ ಎದುರಾಳಿ ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ ದಿನವೇ ವಿಸಿಕೆ ನಾಯಕನಿಂದ ಹೇಳಿಕೆ ಹೊರಬಿದ್ದಿದೆ.
ಈ ಕುರಿತು ಮಾತನಾಡಿರುವ ತೋಲ್ ತಿರುಮಾವಲವನ್, ಡಿಎಂಕೆ ಮತ್ತು ಎಐಎಡಿಎಂಕೆ ನಾಯಕರು ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ನನಗೆ ಸಿಕ್ಕಿತು. ಆದರೆ, ಪಕ್ಷದ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ನಾವು ಆ ಪ್ರಸ್ತಾಪವನ್ನು ತಿರಸ್ಕರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಟಿವಿಕೆಗೆ ಬೆಂಬಲ ಘೋಷಿಸುವಲ್ಲಿ ವಿಸಿಕೆ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾವು ಆತುರದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಮೇ 8ರಂದು ಜೂಮ್ ಸಭೆಯ ಮೂಲಕ ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದೆ. ನಾವು ಒಂದು ನಿರ್ಧಾರಕ್ಕೆ ಬಂದಿದ್ದರೂ, ಹೆಚ್ಚಿನ ಚರ್ಚೆಗಳು ಅಗತ್ಯವಿರುವುದರಿಂದ ಅದನ್ನು ತಕ್ಷಣ ಘೋಷಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಮೇ 9ರ ಬೆಳಿಗ್ಗೆ ವಿಸಿಕೆ ಮತ್ತು ಟಿವಿಕೆ ಬೆಂಬಲಿಗರು ಇಬ್ಬರೂ ಘೋಷಣೆಯನ್ನು ನಿರೀಕ್ಷಿಸಿದ್ದರು. ಮೇ 9 ರ ಬೆಳಿಗ್ಗೆ ವಿಸಿಕೆ ಹೇಳಿಕೆ ನೀಡುತ್ತದೆ ಎಂದು ನಾವು ಎಂದಿಗೂ ಹೇಳಿಲ್ಲ. ಚರ್ಚೆಗಳು ದೀರ್ಘ ಪ್ರಕ್ರಿಯೆ. ಆದ್ದರಿಂದ, ಟಿವಿಕೆಗೆ ಬೆಂಬಲ ನೀಡುವ ಮೊದಲು ನಾವು ನಮ್ಮದೇ ಆದ ಸಮಯವನ್ನು ತೆಗೆದುಕೊಂಡಿದ್ದೇವೆ ಎಂದಿದ್ದಾರೆ.
ಇನ್ನೂ ಡಿಎಂಕೆ ಮತ್ತು ಎಐಎಡಿಎಂಕೆ ಕೂಡಿ ಸರ್ಕಾರ ರಚಿಸಲು ಮುಂದಾಗಿದ್ದವು ಎಂಬ ಸುದ್ದಿಯನ್ನು ಅಲ್ಲಗೆಳೆದಿರುವ ಡಿಎಂಕೆ, ಅಂತಹ ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎಂದು ಹೇಳಿದೆ. ಎಐಎಡಿಎಂಕೆ ಕೂಡ ತಮ್ಮ ಪಕ್ಷದ ಶಾಸಕರ ಹೇಳಿಕೆಯನ್ನೂ ತಳ್ಳಿ ಹಾಕಿದೆ (ಏಜೆನ್ಸೀಸ್).