ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​  
ದೇಶ

ನಮ್ಮಲ್ಲಿ ಯಾವುದೂ ಗುಂಪಿಲ್ಲ! ಹಿಂದೆಯೂ... ಬ್ರೇಕ್​ಫಾಸ್ಟ್​ ಮೀಟಿಂಗ್​ ಬೆನ್ನಲ್ಲೇ ಕುರ್ಚಿ ಕದನಕ್ಕೆ ಡಿಕೆಶಿ ಪ್ರತಿಕ್ರಿಯೆ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರಾಜಕಾರಣದ ಗದ್ದುಗೆ ಗುದ್ದಾಟಕ್ಕೆ ಕಡೆಗೂ ವಿರಾಮ
  • ಜಂಟಿ ಸುದ್ದಿಗೋಷ್ಠಿಯಲ್ಲಿ ಸಿಎಂ-ಡಿಸಿಎಂ ಮಾತು
  • ಕುರ್ಚಿ ಕದನಕ್ಕೆ ಇಬ್ಬರೂ ಸೇರಿ ತೆರೆ
ಬೆಂಗಳೂರು: ರಾಜ್ಯ ರಾಜಕಾರಣದ ಗದ್ದುಗೆ ಗುದ್ದಾಟ ಇದೀಗ ಇಡೀ ದೇಶದ ಗಮನ ಸೆಳೆದಿದೆ. ಕಾಂಗ್ರೆಸ್​ ಸರ್ಕಾರದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​ ನಡುವೆ ನಡೆಯುತ್ತಿರುವ ಬಿರುಸಿನ ಜಟಾಪಟಿಗೆ ಇಂದು ಬ್ರೇಕ್​ ಫಾಸ್ಟ್​ ಮೂಲಕ ವಿರಾಮ ಬಿದ್ದಿದೆ.

ಡಿಕೆಶಿ vs ಸಿದ್ದರಾಮಯ್ಯ 

ಮುಖ್ಯಮಂತ್ರಿ ಆಗಿ ಮುಂದುವರಿಯಬೇಕು ಅಂತ ಸಿದ್ದರಾಮಯ್ಯ ಪರ ಅಹಿಂದ ಸಮುದಾಯ ಬ್ಯಾಟ್​ ಬೀಸಿದರೆ, ಡಿಕೆಶಿಗೂ ಒಂದು ಅವಕಾಶ ಕೊಡಿ ಎಂದು ಒಕ್ಕಲಿಗ ಸಮುದಾಯ ಅವರ ಬೆನ್ನಿಗೆ ನಿಂತಿದೆ. ಇಬ್ಬರ ನಡುವಿನ ಮುಸುಕಿನ ಗುದ್ದಾಟಕ್ಕೆ ಕಡೆಗೂ ಬೆಳಗ್ಗಿನ ಉಪಹಾರವೇ ಬ್ರೇಕ್​ ತಂದಿರುವುದು ಸದ್ಯ ಹಲವರ ಕುತೂಹಲ, ಗೊಂದಲಕ್ಕೆ ಕಾರಣವಾಗಿದೆ. 

ಡಿಕೆಶಿ ನುಡಿ

ಇಂದು ಸಿದ್ದರಾಮಯ್ಯ ಜತೆ ಕಾವೇರಿ ನಿವಾಸದಲ್ಲಿ ಬ್ರೇಕ್​ಫಾಸ್ಟ್​ ಮೀಟಿಂಗ್​ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್​, ಬಳಿಕ ಸಿಎಂ ಜತೆಗೂಡಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.   
"ಜನಸೇವೆ ಮಾಡಿಕೊಂಡು ಇಲ್ಲಿಯವರೆಗೆ ಬಂದಿದ್ದೇವೆ. ಜನರು ಸಹಕಾರ ಕೊಟ್ಟಿದ್ದು, ಅವರ ಆಶೋತ್ತರ ಈಡೇರಿಸುವುದೇ ನಮ್ಮ ಪ್ರಯತ್ನ. ಸಿದ್ದರಾಮಯ್ಯ ನಾಯಕತ್ವದಲ್ಲಿ ಸರ್ಕಾರ ನಡೆದಿದೆ. ಅಧಿವೇಶನದಲ್ಲಿ ಪ್ರತಿಪಕ್ಷವನ್ನು ಎದುರಿಸುವುದರ ಬಗ್ಗೆ ಯೋಜನೆ ಕೂಡ ರೂಪಿಸಿದ್ದೇವೆ. ರಾಜಕೀಯವಾಗಿ ನಮ್ಮಿಬ್ಬರದೂ ಒಂದೇ ತೀರ್ಮಾನ. ಹಿಂದೆಯೂ ನಿರ್ಧಾರ ಕೈಗೊಂಡಿದ್ದೇವೆ, ಮುಂದೆಯೂ ಅದೇ ಮುಂದುವರಿಯಲಿದೆ" ಎಂದರು. 
"ನಮ್ಮಲ್ಲಿ ಯಾವುದೂ ಗುಂಪಿಲ್ಲ. ಹಿಂದೆಯೂ ಅವಕಾಶ ಕೊಟ್ಟಿಲ್ಲ. ನಮ್ಮದು ಕಾಂಗ್ರೆಸ್ ಗುಂಪು‌ ಅಷ್ಟೇ.‌ ಜಂಟಿಯಾಗಿ ಕೆಲಸ ಮಾಡಿಕೊಂಡು ಹೋಗುತ್ತೇವೆ‌. ಒಟ್ಟಿಗೆ ತೆಗೆದುಕೊಂಡು ಹೋಗುವುದು ನಮ್ಮಿಬ್ಬರ ಕರ್ತವ್ಯ. 2028ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ. ಸಿಎಂ ಹೇಳಿದ್ದಕ್ಕೆ ನನ್ನ ಸಹಮತವಿದೆ. ಇಡೀ ದೇಶದಲ್ಲಿ ಪಕ್ಷ ಸಂಕಷ್ಟದಲ್ಲಿದ್ದು, ಆದರೆ ಆತ್ಮ ವಿಶ್ವಾಸ ಕಳೆದುಕೊಂಡಿಲ್ಲ. ಕರ್ನಾಟಕದಲ್ಲಿ ಮೇಜರ್ ರೋಲ್ ಇರುತ್ತದೆ" ಎಂದು ಹೇಳಿದರು.
"ಹೈಕಮಾಂಡ್ ಕರೆದರೆ ಖಂಡಿತ ದೆಹಲಿಗೆ ಹೋಗುತ್ತೇವೆ. ಕಬ್ಬು, ಮೆಕ್ಕೆಜೋಳ ವಿಚಾರದಲ್ಲಿ ಸಮಸ್ಯೆ ಇದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ತೀರ್ಮಾನ‌ ಮಾಡಬೇಕಾಗುತ್ತದೆ. ಸಂಸದರು ದನಿ ಎತ್ತಬೇಕು, ಒತ್ತಾಯ ಹೇರಲು ಹೋಗಬೇಕಾಗುತ್ತದೆ" ಎಂದು ಡಿಕೆಶಿ ನುಡಿದರು.