Murder Case 
ದೇಶ

Murder Case; ಕೈ ನರ ಕತ್ತರಿಸಿ, ತಲೆ ಜಜ್ಜಿ ಭೀಕರ ಕೊಲೆ: 1,400 ಕಿಮೀ ದೂರದಿಂದ ಬಂದು ಸ್ಕೆಚ್ ಹಾಕಿದ ದಂಪತಿ!

ನವದೆಹಲಿ:ಆಸ್ತಿ ವಿವಾದಕ್ಕಾಗಿ ದೆಹಲಿ ವಿಶ್ವವಿದ್ಯಾಲಯದ (DU) ಮಹಿಳಾ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರನ್ನು ಅತ್ಯಂತ ಭೀಕರವಾಗಿ ಕೊಲೆ (Murder Case) ಮಾಡಲಾದ ನಡುಕ ಹುಟ್ಟಿಸುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ಅವರ 13 ವರ್ಷದ ಅಪ್ರಾಪ್ತ ಮಗನನ್ನು ವಶಕ್ಕೆ ಪಡೆದಿದ್ದಾರೆ.
ಕೇವಲ ಒಂದು ಹಳೇ ಮನೆಗಾಗಿ ಇಡೀ ಕುಟುಂಬವೇ ಸೇರಿಕೊಂಡು, ಬಂಗಾಳದಿಂದ ದೆಹಲಿಗೆ ಬರೊಬ್ಬರಿ 1,400 ಕಿಲೋಮೀಟರ್ ರೈಲಿನಲ್ಲಿ ಪ್ರಯಾಣ ಬೆಳೆಸಿ ಈ ಹತ್ಯೆ ಮಾಡಿರುವುದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

ಸೋಫಾ ಬಳಿ ರಕ್ತದ ಮಡುವಿನಲ್ಲಿ ಶವ!

ಜೂನ್ 4 ರಂದು ಪೂರ್ವ ದೆಹಲಿಯ ವಸುಂಧರಾ ಎನ್‌ಕ್ಲೇವ್‌ನಲ್ಲಿರುವ ಹೈರೈಸ್ ಅಪಾರ್ಟ್‌ಮೆಂಟ್‌ನ 6ನೇ ಮಹಡಿಯ ಫ್ಲಾಟ್‌ನಲ್ಲಿ 45 ವರ್ಷದ ಮಹಿಳಾ ಪ್ರೊಫೆಸರ್ ಶವ ಪತ್ತೆಯಾಗಿತ್ತು. ಆಕೆ ಫೋನ್ ರಿಸೀವ್ ಮಾಡದಿದ್ದಾಗ ಆಕೆಯ ತಂಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಫ್ಲಾಟ್‌ನ ಬೀಗ ಮುರಿದು ಒಳಹೋದಾಗ, ಡ್ರಾಯಿಂಗ್ ರೂಮ್‌ನ ಸೋಫಾ ಬಳಿ ಪ್ರೊಫೆಸರ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರ ತಲೆ ಮತ್ತು ಮುಖಕ್ಕೆ ಭೀಕರವಾಗಿ ಹೊಡೆಯಲಾಗಿತ್ತು ಹಾಗೂ ಕೈ ನರಗಳನ್ನು ಬ್ಲೇಡ್‌ನಿಂದ ಕತ್ತರಿಸಲಾಗಿತ್ತು.

ಕೊಲೆಗೆ ಕಾರಣವಾಗಿದ್ದು ಒಂದು ಹಳೇ ಮನೆ!

ಕೊಲೆಯಾದ ಪ್ರೊಫೆಸರ್‌ಗೆ ಪಶ್ಚಿಮ ಬಂಗಾಳದ ಬರ್ಧಮಾನ್‌ನಲ್ಲಿ ಒಂದು ತಾತ-ಮುತ್ತಜ್ಜನ ಕಾಲದ ಆಸ್ತಿ (ಮನೆ) ಇತ್ತು. ಈ ಮನೆಯನ್ನು ಅವರು 2023 ರಲ್ಲಿ ಬಂಗಾಳದ ಈ ದಂಪತಿಗೆ(ಆರೋಪಿತ ದಂಪತಿ) ತಿಂಗಳಿಗೆ 10,000 ರೂಪಾಯಿ ಬಾಡಿಗೆಗೆ ನೀಡಿದ್ದರು. ವರ್ಷದ ಹಿಂದೆ ಈ ದಂಪತಿ ಆ ಮನೆಯನ್ನು ತಮಗೆ ಮಾರಿಬಿಡುವಂತೆ ಪ್ರೊಫೆಸರ್‌ಗೆ ಕೇಳಿದ್ದರು. ಆದರೆ, ಅದು ತನ್ನ ಅಜ್ಜಿಯ ನೆನಪಿನ ಮನೆ, ನಾನು ಮಾರುವುದಿಲ್ಲ ಎಂದು ಪ್ರೊಫೆಸರ್ ನಿರಾಕರಿಸಿದ್ದಲ್ಲದೆ, ಮನೆ ಖಾಲಿ ಮಾಡುವಂತೆ ಹೇಳಿದ್ದರು.
ಆದರೆ ದಂಪತಿ ಮನೆ ಖಾಲಿ ಮಾಡಲು ಒಪ್ಪಲಿಲ್ಲ. "ನಾವು ಮನೆ ರಿಪೇರಿಗೆ 1.5 ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ, ಹಣ ಕೊಡಿ" ಎಂದು ಜಗಳ ತೆಗೆದಿದ್ದರು. ಇತ್ತೀಚೆಗೆ ಪ್ರೊಫೆಸರ್ ಮನೆ ಖಾಲಿ ಮಾಡಲು ಕೊನೆಯ ವಾರ್ನಿಂಗ್ ನೀಡಿದ್ದರು. ಇದರಿಂದ ಕೋಪಗೊಂಡ ದಂಪತಿ ಆಕೆಯನ್ನು ಮುಗಿಸಲು ಸ್ಕೆಚ್ ಹಾಕಿದ್ದರು.

ಮಗನನ್ನೇ ದಾಳವಾಗಿ ಬಳಸಿದ ಕಿರಾತಕರು!

ಪೊಲೀಸರ ತನಿಖೆಯ ಪ್ರಕಾರ, ಈ ದಂಪತಿ ಒಂದು ವಾರ ಮುಂಚಿತವಾಗಿಯೇ ಕೊಲೆಗೆ ಪ್ಲಾನ್ ಮಾಡಿದ್ದರು. ಪೊಲೀಸರಿಗೆ ಅನುಮಾನ ಬಾರದಿರಲಿ ಎಂದು ತಮ್ಮ 13 ವರ್ಷದ ಮಗನನ್ನೂ ಜೊತೆಗೆ ಕರೆತಂದಿದ್ದರು. ಜೂನ್ 2 ರಂದು ಬಂಗಾಳದಿಂದ ರೈಲು ಹತ್ತಿದ ಇವರು, ಜೂನ್ 3 ರಂದು ದೆಹಲಿ ತಲುಪಿದ್ದರು. ಬರುವಾಗಲೇ ಕೊಲೆ ಮಾಡಲು ಇನಾಯ್ಕಲ್ (ಒರಳು ಕಲ್ಲು) ಮತ್ತು ರೇಜರ್ (ಗಡ್ಡ ಕೆರೆಯುವ ಕತ್ತಿ) ತಂದಿದ್ದರು.
ಬೇರೆಯವರ ಹೆಸರಿನ ನಕಲಿ ಗುರುತಿನ ಚೀಟಿಗಳನ್ನು ಕೊಟ್ಟು ದೆಹಲಿಯ ಗೆಸ್ಟ್‌ಹೌಸ್‌ನಲ್ಲಿ ರೂಮ್ ಮಾಡಿದ್ದರು. ಜೂನ್ 3 ರಂದು ಸಂಜೆ ಮಾಸ್ಕ್ ಧರಿಸಿ ಪ್ರೊಫೆಸರ್ ಫ್ಲಾಟ್‌ಗೆ ಹೋಗಿದ್ದರು. ಪರಿಚಯಸ್ಥರೇ ಆದ ಕಾರಣ ಪ್ರೊಫೆಸರ್ ಸುಲಭವಾಗಿ ಒಳಗೆ ಬಿಟ್ಟುಕೊಂಡಿದ್ದರು. ಮನೆ ಮಾರುವಂತೆ ಮತ್ತೊಮ್ಮೆ ಕೇಳಿದಾಗ ಪ್ರೊಫೆಸರ್ ಒಪ್ಪದಿದ್ದಾಗ, ತಲೆಯ ಮೇಲೆ ಕಲ್ಲಿನಿಂದ ಜಜ್ಜಿ, ರೇಜರ್‌ನಿಂದ ಕೈ ಕತ್ತರಿಸಿ ಕೇವಲ 15 ನಿಮಿಷದಲ್ಲಿ ಕೊಲೆ ಮಾಡಿ, ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದರು.

ಸಿಸಿಟಿವಿ ಮತ್ತು ನಕಲಿ ದಾಖಲೆ ತಂದುಕೊಟ್ಟ ಸುಳಿವು!

ಕೊಲೆ ಮಾಡಿದ ತಕ್ಷಣ ದಂಪತಿ ಬಟ್ಟೆ ಬದಲಾಯಿಸಿ ರೈಲು ನಿಲ್ದಾಣಕ್ಕೆ ಓಡಿ ಹೋಗಿ ಮತ್ತೆ ಬಂಗಾಳಕ್ಕೆ ರೈಲು ಹತ್ತಿದ್ದರು. ಆದರೆ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಪೊಲೀಸರಿಗೆ ಮಾಸ್ಕ್ ಧರಿಸಿದ್ದ ದಂಪತಿ ಮತ್ತು ಹುಡುಗನ ಸುಳಿವು ಸಿಕ್ಕಿತು. ಅವರು ಉಳಿದುಕೊಂಡಿದ್ದ ಗೆಸ್ಟ್‌ಹೌಸ್‌ನಲ್ಲಿದ್ದ ನಕಲಿ ದಾಖಲೆಗಳು ಮತ್ತು ಮೊಬೈಲ್ ಲೊಕೇಶನ್ ಆಧರಿಸಿ ಪೊಲೀಸರು ಬಂಗಾಳದ ಬರ್ಧಮಾನ್‌ನಲ್ಲಿ ಈ ಇಡೀ ಕುಟುಂಬವನ್ನು ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತಿದೆ,(ಏಜೆನ್ಸೀಸ್).​