ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಸಂಬಂಧ ಇಬ್ಬರು ಚುನಾವಣಾ ಆಯುಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ಸಂಗತಿ ಈಗ ದೇಶದಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆಯಾದರೂ, ಆಯೋಗದ ಒಳಗಿನ ಅಪಸ್ವರ ಹಲವು ಬಗೆಯ ಚರ್ಚೆಗಳನ್ನು ಹುಟ್ಟುಹಾಕಿದೆ. ಅಷ್ಟಕ್ಕೂ, ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ನಡುವಿನ ಈ ಭಿನ್ನಾಭಿಪ್ರಾಯದ ಸಮರ ಎಲ್ಲಿಗೆ ತಲುಪಲಿದೆ? ಈ ಭಿನ್ನಾಭಿಪ್ರಾಯಕ್ಕೆ ಕಾರಣವೇನು? ಆಯೋಗದಲ್ಲಿ ಏನೆಲ್ಲ ನಡೆಯಿತು? ಈ ಕುರಿತಾದ ವಿವರ ಇಲ್ಲಿದೆ.
ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸಲು 2025ರ ಜೂನ್ನಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಪರಿಷ್ಕರಣೆಯ ನಂತರ ಪ್ರಕಟಿಸಲಾದ ಮೊದಲ ಕರಡು ಮತದಾರರ ಪಟ್ಟಿಯಿಂದ ದೇಶಾದ್ಯಂತ 13 ಕೋಟಿಗೂ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಯಿತು! ಆಡಳಿತಾರೂಢ ಬಿಜೆಪಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಆಯೋಗವು ಅನಿಯಂತ್ರಿತವಾಗಿ ಮತದಾರರ ಹೆಸರುಗಳನ್ನು ಕೈಬಿಟ್ಟಿದೆ ಎಂದು ವಿರೋಧ ಪಕ್ಷಗಳು ನಿರಂತರವಾಗಿ ಆರೋಪಿಸುತ್ತಿವೆ.
ಸೆಪ್ಟೆಂಬರ್ 23ರಂದು ಆಂಗ್ಲ ಪತ್ರಿಕೆಯೊಂದರಲ್ಲಿ ಪ್ರಕಟವಾದ ತನಿಖಾ ವರದಿಯ ಪ್ರಕಾರ, ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಎಸ್ಐಆರ್ ಕುರಿತಾಗಿ ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಅಧಿಕೃತ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ. ಹಲವು ಸಂದರ್ಭಗಳಲ್ಲಿ ಆಯೋಗದ ಹೆಸರಿನಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಇಬ್ಬರೂ ಆಯುಕ್ತರಿಗೆ ಮಾಹಿತಿಯೇ ಇರಲಿಲ್ಲ. ವರದಿಯ ಪ್ರಕಾರ, ಚುನಾವಣಾ ಆಯೋಗವು ತಮ್ಮ ಹಾಗೂ ಜೋಶಿ ಅವರ ಲಿಖಿತ ಸಲಹೆಗೆ ವಿರುದ್ಧವಾಗಿ ಕಾನೂನುಬಾಹಿರ ಕೆಲಸ ಮಾಡಿದೆ ಎಂದು ಸಂಧು ಹೇಳಿದ್ದಾರೆ.
ಹದಿನೆಂಟು ವರ್ಷ ಮೇಲ್ಪಟ್ಟ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಳ್ಳಲು ಫಾಮ್ರ್-6 ಅನ್ನು ಭರ್ತಿ ಮಾಡಬೇಕು. ಇದರಲ್ಲಿ ಹಲವು ವಿವರಗಳನ್ನು ಒದಗಿಸಬೇಕು. ಇದರೊಂದಿಗೆ, ಮತದಾರರ ಪಾಲಕರು ಅಥವಾ ಅಜ್ಜ-ಅಜ್ಜಿ ಈ ಹಿಂದೆ ನಡೆದ ಎಸ್ಐಆರ್ ಮತದಾರರ ಪಟ್ಟಿಯಲ್ಲಿ ಇದ್ದರೇ? ಎಂಬ ಪ್ರಶ್ನೆಯನ್ನೂ ಕೇಳಲಾಯಿತು. ಫಾಮ್ರ್ ಭರ್ತಿ ಮಾಡುವಾಗ ಈ ಪ್ರಶ್ನೆಗೆ ಉತ್ತರಿಸುವುದು ಕಡ್ಡಾಯವಾಗಿತ್ತು. ‘ಫಾಮ್ರ್-6 ಅನ್ನು ಈ ರೀತಿ ಬದಲಾಯಿಸಲು ಸಾಧ್ಯವಿಲ್ಲ, ಇದಕ್ಕಾಗಿ ಸರ್ಕಾರವೇ ನಿಯಮಗಳನ್ನು ತಿದ್ದುಪಡಿ ಮಾಡಬೇಕಾಗುತ್ತದೆ’ ಎಂದು ಚುನಾವಣಾ ಆಯುಕ್ತ ವಿವೇಕ್ ಜೋಶಿ ಮೇ ತಿಂಗಳಲ್ಲಿ ತಿಳಿಸಿದ್ದರು. ಸಂಧು ಕೂಡ ಅವರ ಈ ಮಾತಿಗೆ ಸಮ್ಮತಿಸಿದ್ದರು. ಅನಧಿಕೃತ ಹಾಗೂ ಕಾನೂನುಬಾಹಿರವಾಗಿ ಸೇರಿಸಲಾದ ಈ ಪ್ರಶ್ನೆಯನ್ನು ಕೂಡಲೇ ತೆಗೆದುಹಾಕಬೇಕೆಂದು ಸಂಧು ಆಗಸ್ಟ್ 13ರಂದು ಅಧಿಕೃತವಾಗಿ ಸೂಚಿಸಿದ್ದರು, ಆದರೆ ಸೆಪ್ಟೆಂಬರ್ 21ರವರೆಗೂ ಈ ಪ್ರಶ್ನೆ ಹಾಗೆಯೇ ಉಳಿದುಕೊಂಡಿತ್ತು.
ಚುನಾವಣಾ ಕ್ಷೇತ್ರಗಳ ಸ್ಥಳೀಯ ಮತದಾರರ ಪಟ್ಟಿಯನ್ನು ಆಯಾ ಪ್ರದೇಶದ ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್ಒ) ಸಿದ್ಧಪಡಿಸುತ್ತಾರೆ. ಸಾಮಾನ್ಯವಾಗಿ ಆ ಭಾಗದ ಎಸ್ಡಿಎಂ ಅವರೇ ಇಆರ್ಒ ಆಗಿರುತ್ತಾರೆ. ಈ ಮತದಾರರ ಪಟ್ಟಿಯು ಆಯೋಗದ ಸಾಫ್ಟ್ವೇರ್ ಆದ ಇಸಿನೆಟ್ನಲ್ಲಿ (ಉಇಐಘಛಿಠಿ- ಈ ಹಿಂದೆ ಇದರ ಬದಲಿಗೆ ಇಆರ್ಒನೆಟ್ ಇತ್ತು) ಇರುತ್ತದೆ. ಆಗಸ್ಟ್ನಲ್ಲಿ ಸಂಧು ಮಾತನಾಡಿ, ಹಲವು ರಾಜ್ಯಗಳ ಚುನಾವಣಾ ಅಧಿಕಾರಿಗಳು ತಮಗೆ ಇಆರ್ಒನೆಟ್ ಪೋರ್ಟಲ್ನ ಸಂಪೂರ್ಣ ಪ್ರವೇಶಾವಕಾಶ ಸಿಗುತ್ತಿಲ್ಲ ಎಂದು ತಿಳಿಸಿರುವುದಾಗಿ ಹೇಳಿದರು. ಕಾನೂನುಬದ್ಧವಾಗಿ ಅಧಿಕಾರಿಗಳಿಗೆ ಸಿಕ್ಕಿರುವ ಕಾರ್ಯಸ್ವಾತಂತ್ರ್ಯ ಮತ್ತು ಅವರ ಪ್ರವೇಶಾವಕಾಶವನ್ನು ಕಡಿತಗೊಳಿಸಲು ಚುನಾವಣಾ ಆಯೋಗದ ಐಟಿ ಮಹಾನಿರ್ದೇಶಕಿ ಸೀಮಾ ಖನ್ನಾ ಅವರಿಗೆ ಯಾವುದೇ ಕಾನೂನು ಹಕ್ಕಿಲ್ಲ ಎಂದು ಸಂಧು ತಿಳಿಸಿದರು.
ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಪ್ರಕ್ರಿಯೆಯ ವೇಳೆ 60 ಲಕ್ಷ ಮತದಾರರ ಹೆಸರುಗಳಲ್ಲಿ ‘ರ್ತಾಕ ದೋಷ’ (ಲಾಜಿಕಲ್ ಎರರ್), ಅಂದರೆ ಅವರ ವಿವರಗಳು ತಾಳೆಯಾಗದಿರುವುದು ಕಂಡುಬಂದಿತ್ತು. ಇದರ ಕುರಿತು ತೀರ್ಮಾನ ಕೈಗೊಳ್ಳುವ ಹೊಣೆಯನ್ನು ಸುಪ್ರೀಂ ಕೋರ್ಟ್ ನ್ಯಾಯಾಂಗ ಅಧಿಕಾರಿಗಳಿಗೆ ವಹಿಸಿತು. ಇವರಲ್ಲಿ 27 ಲಕ್ಷ ಮತದಾರರ ಹೆಸರುಗಳನ್ನು ನಂತರ ಚುನಾವಣಾ ಆಯೋಗವು ಕೈಬಿಟ್ಟಿತ್ತು. ಬಳಿಕ ಸುಪ್ರೀಂ ಕೋರ್ಟ್, ಈ ಮತದಾರರ ಮೇಲ್ಮನವಿಗಳನ್ನು ಆಲಿಸುವ ಜವಾಬ್ದಾರಿಯನ್ನು ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರ ನ್ಯಾಯಮಂಡಳಿಗೆ (ಟ್ರಿಬ್ಯೂನಲ್) ಒಪ್ಪಿಸಿತು. ಕಳೆದ ವಾರ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಟ್ರಿಬ್ಯೂನಲ್ ಮುಂದೆ 38 ಲಕ್ಷ ಮೇಲ್ಮನವಿಗಳು ಬಾಕಿ ಉಳಿದಿವೆ ಎಂದು ತಿಳಿಸಿತು.
ಇವುಗಳಲ್ಲಿ 22.21 ಲಕ್ಷ ಮೇಲ್ಮನವಿಗಳು ತಮ್ಮ ಹೆಸರನ್ನು ಪಟ್ಟಿಗೆ ಸೇರಿಸಲು ಬಯಸಿದ್ದ ಮತದಾರರದ್ದಾಗಿದ್ದವು. ಆದರೆ 16.10 ಲಕ್ಷ ಮೇಲ್ಮನವಿಗಳು, ಈಗಾಗಲೇ ನ್ಯಾಯಾಂಗ ಅಧಿಕಾರಿಗಳು ಪಟ್ಟಿಗೆ ಸೇರಿಸಿದ್ದ ಮತದಾರರ ವಿರುದ್ಧವಾಗಿದ್ದವು. ಅಂದರೆ ಈ 16.10 ಲಕ್ಷ ಮೇಲ್ಮನವಿಗಳಲ್ಲಿ ಪಟ್ಟಿಯಲ್ಲಿರುವ ಜನರ ಮತದಾನದ ಹಕ್ಕನ್ನು ರದ್ದುಗೊಳಿಸುವಂತೆ (ಹೆಸರು ತೆಗೆದುಹಾಕುವಂತೆ) ಕೋರಲಾಗಿತ್ತು. ‘ನ್ಯಾಯಾಂಗ ಅಧಿಕಾರಿಗಳೇ ಖುದ್ದು ಪಟ್ಟಿಗೆ ಸೇರಿಸಿದ್ದ ಮತದಾರರ ವಿರುದ್ಧವೇ ಚುನಾವಣಾ ಆಯೋಗವು ಮೇಲ್ಮನವಿ ಸಲ್ಲಿಸುತ್ತಿತ್ತು’ ಎಂದು ಸಂಧು ಹೇಳಿದರು. ವಾಸ್ತವವಾಗಿ, ಈ ಮೇಲ್ಮನವಿಗಳನ್ನು ಯಾರು ಸಲ್ಲಿಸಿದ್ದರು ಎಂಬ ವಿವರವನ್ನು ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ತಿಳಿಸಿಲ್ಲ.
ಚುನಾವಣಾ ಆಯೋಗವು ಮೂವರು ಸದಸ್ಯರನ್ನೊಳಗೊಂಡ ಒಂದು ಸಾಂವಿಧಾನಿಕ ಸಂಸ್ಥೆ. ಇದು ಕೇವಲ ಮುಖ್ಯ ಚುನಾವಣಾ ಆಯುಕ್ತರ ಇನ್ನೊಂದು ಹೆಸರಲ್ಲ. ಬಹುಮತವಿಲ್ಲದೆ ತೆಗೆದುಕೊಂಡ ಯಾವುದೇ ನಿರ್ಧಾರಗಳು ಹೇಗೆ ಜಾರಿಯಾದವು ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು. ಫಾಮ್ರ್-6 ಅನ್ನು ನಿಯಮಗಳಿಗೆ ಅನುಗುಣವಾಗಿ ಮರುರೂಪಿಸಬೇಕು. ಇಸಿನೆಟ್ ಸಾಫ್ಟ್ವೇರ್ನ ಸ್ವತಂತ್ರ ಆಡಿಟ್ ನಡೆಯಬೇಕು. | ಎಸ್.ವೈ.ಖುರೇಷಿ ಮಾಜಿ ಮುಖ್ಯ ಚುನಾವಣಾ ಆಯುಕ್ತ
ಮೇಲ್ಮನವಿಗಳನ್ನು ಸಲ್ಲಿಸಲು ಅಧಿಕಾರ ಹೊಂದಿದ ಪ್ರಾಧಿಕಾರ (ಅಥಾರಿಟಿ) ಯಾರು ಎಂಬ ವಿವರವನ್ನು ನ್ಯಾಯಾಲಯಕ್ಕೆ ತಿಳಿಸಲಾಗಿಲ್ಲ. ಸಂಧು ಪ್ರಕಾರ, ತಮಗೆ, ಜೋಶಿ ಮತ್ತು ಪಶ್ಚಿಮ ಬಂಗಾಳದ ಪ್ರಸ್ತುತ ಮುಖ್ಯ ಚುನಾವಣಾ ಅಧಿಕಾರಿ ಅವರಿಗೂ ಮೇಲ್ಮನವಿ ಸಲ್ಲಿಸುವ ಈ ಪ್ರಕ್ರಿಯೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. 2026ರ ಮೇ 25ರಂದು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ಮನೋಜ್ ಅಗರ್ವಾಲ್ ಅವರನ್ನು ಆ ಹುದ್ದೆಯಿಂದ ಬದಲಾಯಿಸಿ, ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ಅವರ ಈ ನೇಮಕಾತಿಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಅವರ ಸ್ಥಾನಕ್ಕೆ ನೀಲಂ ಮೀನಾ ಅವರನ್ನು ಸಿಇಒ ಆಗಿ ನೇಮಿಸಲಾಗಿತ್ತು. ಚುನಾವಣಾ ಆಯೋಗದ ಕೆಲ ಅಧಿಕಾರಿಗಳಿಗೆ ಪತ್ರ ಬರೆದಿದ್ದ ಸಂಧು, ‘ಆಯೋಗದ ಪರವಾಗಿ ಈ ಮೇಲ್ಮನವಿಗಳನ್ನು ಯಾರು ಸಲ್ಲಿಸಿದರು?’ ಎಂದು ಪ್ರಶ್ನಿಸಿದ್ದರು.
ಯಾವ ಮತದಾರರ ವಿವರಗಳಲ್ಲಿ ’ರ್ತಾಕ ದೋಷ’ (ಲಾಜಿಕಲ್ ಎರರ್) ಕಂಡುಬಂದಿದೆಯೋ, ಅವರಿಗೆ ದಾಖಲೆಗಳನ್ನು ಸಲ್ಲಿಸಲು ಮತ್ತು ಅಂತಿಮ ಮತದಾರರ ಪಟ್ಟಿ ಪ್ರಕಟವಾಗುವ ಮೊದಲು ತಮ್ಮ ವಾದವನ್ನು ಮಂಡಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಜನವರಿ 29ರಂದು ಹೇಳಿತ್ತು. ಗೋವಾದ ಚುನಾವಣಾ ನೋಂದಣಿ ಅಧಿಕಾರಿಗಳು ಇಂತಹ ಪ್ರಕರಣಗಳ ವಿಚಾರಣೆ ಹಾಗೂ ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ ‘97 ಮತದಾರರು’ ಅಂತಿಮ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಹರು ಎಂದು ಕಂಡುಕೊಂಡರು. ಆದರೆ ಸಾಫ್ಟ್ವೇರ್ನಲ್ಲಿ ಅವರ ಹೆಸರುಗಳನ್ನು ಮತ್ತೆ ಸೇರಿಸಲು ಯಾವುದೇ ಆಯ್ಕೆಯಿರಲಿಲ್ಲ.
ಫೆಬ್ರವರಿ 11ರಿಂದ 17ರ ನಡುವೆ ಗೋವಾದ ಮುಖ್ಯ ಚುನಾವಣಾ ಅಧಿಕಾರಿಯ (ಸಿಇಒ) ಕಚೇರಿಯು, ರಾಜ್ಯದ ಉಸ್ತುವಾರಿ ಹಾಗೂ ಹಿರಿಯ ಉಪ ಚುನಾವಣಾ ಆಯುಕ್ತ ಜ್ಞಾನೇಶ್ ಭಾರತಿ ಅವರಿಗೆ 8 ಬಾರಿ ಪತ್ರ ಬರೆದು ಸಾಫ್ಟ್ವೇರ್ನಲ್ಲಿ ‘ರೋಲ್ಬ್ಯಾಕ್’ (ಮರುಸ್ಥಾಪನೆ) ಮಾಡುವ ಆಯ್ಕೆಯನ್ನು ನೀಡುವಂತೆ ಕೋರಿತು. ಪ್ರತಿ ಬಾರಿಯೂ ಸೀಮಾ ಖನ್ನಾ ಅವರಿಗೂ ಪತ್ರದ ಪ್ರತಿಯನ್ನು ಕಳುಹಿಸಲಾಗಿತ್ತು. ಆದರೆ ಅಂತಿಮ ಮತದಾರರ ಪಟ್ಟಿ ಪ್ರಕಟವಾಗುವವರೆಗೂ ಈ ಪತ್ರಗಳಿಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಮತ್ತು ಆ 97 ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.
2023ರಲ್ಲಿ ಕಾನೂನು ತಿದ್ದುಪಡಿಯಾದ ನಂತರ, ಈಗ ಚುನಾವಣಾ ಆಯುಕ್ತರು ತಮ್ಮ ಅಧಿಕೃತ ಕರ್ತವ್ಯದ ಸಮಯದಲ್ಲಿ ಮಾಡಿದ ಯಾವುದೇ ಕೆಲಸ ಅಥವಾ ಆಡಿದ ಮಾತಿಗೆ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಹೂಡುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಂದೆ ಎರಡು ಸಾಧ್ಯತೆಗಳು ಕಂಡುಬರುತ್ತಿವೆ.
* ಮುಖ್ಯ ಚುನಾವಣಾ ಆಯುಕ್ತರನ್ನು ಸಂಸತ್ತಿನಲ್ಲಿ ಮಹಾಭಿಯೋಗ (ಇಂಪೀಚ್ವೆುಂಟ್) ತರುವ ಮೂಲಕ ಮಾತ್ರವೇ ಹುದ್ದೆಯಿಂದ ಕೆಳಗಿಳಿಸಲು ಸಾಧ್ಯ. ಮೂಲಗಳ ಪ್ರಕಾರ, ವಿರೋಧ ಪಕ್ಷಗಳು ಶೀಘ್ರದಲ್ಲೇ ಮಹಾಭಿಯೋಗ ನೋಟಿಸ್ ನೀಡಬಹುದು. ಆದರೆ ಇದು ದೀರ್ಘಾವಧಿಯ ಪ್ರಕ್ರಿಯೆಯಾಗಿದೆ. 2026ರ ಏಪ್ರಿಲ್ನಲ್ಲೂ ಇಂತಹ ನೋಟಿಸ್ ನೀಡಲಾಗಿತ್ತು, ಆದರೆ ಆಗ ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭಾ ಸಭಾಪತಿ ಇಬ್ಬರೂ ಅದನ್ನು ಅಂಗೀಕರಿಸಿರಲಿಲ್ಲ.
* ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ವಕೀಲ ಬ್ರಜೇಶ್ ಸಿಂಗ್ ಅವರು ಸುಪ್ರೀಂ ಕೋರ್ಟ್ನಲ್ಲಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ವಕೀಲ ವಿರಾಗ್ ಗುಪ್ತಾ ಅವರ ಪ್ರಕಾರ, ಫಾಮ್ರ್-6 ನಿಯಮವನ್ನು ಬದಲಾಯಿಸುವಲ್ಲಿ ನಿಯಮಗಳ ಉಲ್ಲಂಘನೆಯಾಗಿದ್ದರೆ, ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಬಹುದು. ಆದರೆ, ಚುನಾವಣಾ ಆಯೋಗವು ತನ್ನ ಎಲ್ಲ ನಿರ್ಧಾರಗಳು ಕಾನೂನು ಮತ್ತು ಸಂಸ್ಥೆಯ ಸಂಪ್ರದಾಯಗಳಿಗೆ ಅನುಗುಣವಾಗಿಯೇ ಇವೆ ಎಂದು ತಿಳಿಸಿದೆ. ಈ ನಿರ್ಧಾರಗಳು ಮೂವರೂ ಆಯುಕ್ತರ ಸಮ್ಮತಿಯೊಂದಿಗೆ ನಡೆದಿವೆ.