ಆರ್ಜೆಡಿ ಕಾರ್ಯಾಧ್ಯಕ್ಷ ತೇಜಸ್ವಿ ಯಾದವ್
ಪಾಟ್ನಾ: ಕಳೆದ 2025 ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ, ಭವಿಷ್ಯದ ಎಲ್ಲಾ ಚುನಾವಣೆಗಳನ್ನು ಮತಪತ್ರದ ಮೂಲಕ ನಡೆಸುವಂತೆ ದೇಶಾದ್ಯಂತ ಅಭಿಯಾನ ಕೈಗೊಳ್ಳಲು ಆರ್ಜೆಡಿ ನಿರ್ಧಾರ ಮಾಡಿದೆ ಎಂದು (ಜ. 27) ವರದಿಯಾಗಿದೆ.
ಇತ್ತೀಚಿಗೆ ಪಾಟ್ನಾದಲ್ಲಿ ಆರ್ಜೆಡಿ ಪ್ರಧಾನ ಕಚೇರಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಾಕಾರಣಿ ಸಮಿತಿ ಸಭೆಯಲ್ಲಿ, ಆರ್ಜೆಡಿ ಕಾರ್ಯಾಧ್ಯಕ್ಷರಾಗಿ ತೇಜಸ್ವಿ ಯಾದವ್ ಅವರನ್ನು ಆಯ್ಕೆ ಮಾಡುವ ಜೊತೆಗೆ, 2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಹಣಬಲ ಮತ್ತು ಸರ್ಕಾರದ ಅಧಿಕಾರವನ್ನು ಜನರ ಆದೇಶದ ಮೇಲೆ ಪ್ರಭಾವ ಬೀರಲು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ನಿರ್ಣಯವನ್ನ ಅಂಗೀಕರಿಸಲಾಗಿದೆ.
ಆರ್ಜೆಡಿ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸಭೆಯಲ್ಲಿ ಮಾತನಾಡಿರುವ ತೇಜಸ್ವಿ ಯಾದವ್, ಭವಿಷ್ಯದ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್‌ಗಳ ಮೂಲಕ ನಡೆಸುವಂತೆ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಲು ದೇಶಾದ್ಯಂತ ಅಭಿಯಾನವನ್ನು ನಡೆಸಲಾಗುವುದು. ಇದಕ್ಕೆ ಬೆಂಬಲ ನೀಡುವಂತೆ ದೇಶಾದ್ಯಂತ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.
ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿನ ಸೋಲಿಗೆ ಆರ್ಜೆಡಿ, ಇವಿಎಂನಲ್ಲಿನ ಅಕ್ರಮವೇ ಕಾರಣ ಎಂದು ಆರೋಪಿಸಿದೆ. 243 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳಿಗೆ ಸ್ಥಾನ ಬಿಟ್ಟುಕೊಟ್ಟು, 144 ಸ್ಥಾನಗಳಲ್ಲಿ ಆರ್ಜೆಡಿ ಸ್ಪರ್ಧಿಸಿತ್ತು. ಕೇವಲ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಆರ್ಜೆಡಿ ಮಾಜಿ ರಾಜ್ಯಾಧ್ಯಕ್ಷ ಜಗದಾನಂದ ಸಿಂಗ್, ಚುನವಾಣೆಯಲ್ಲಿ ಮತದಾನ ಪ್ರಾರಂಭವಾಗುವ ಮೊದಲೇ ಪ್ರತಿ ಇವಿಎಂ 25,000 ಮತಗಳನ್ನು ಹೊಂದಿತ್ತು ಎಂದು ಆರೋಪಿಸಿದ್ದರು. ಇದನ್ನು ಬಿಹಾರದ ಮುಖ್ಯ ಚುನಾವಣಾಧಿಕಾರಿ ಅಲ್ಲಗೆಳೆದಿದ್ದರು. ಪ್ರತಿ ಇವಿಎಂ 25,000 ಪೂರ್ವ ಲೋಡ್ ಮಾಡಲಾದ ಮತಗಳನ್ನು ಹೊಂದಿದೆ ಎಂದು ಜಗದಾನಂದ್ ಸಿಂಗ್ ಮಾಡಿದ ಆರೋಪವು ತಾಂತ್ರಿಕವಾಗಿ ಅಸಾಧ್ಯ, ಕಾರ್ಯವಿಧಾನದ ಪ್ರಕಾರ ಸುಳ್ಳು ಎಂದಿದ್ದರು (ಏಜೆನ್ಸೀಸ್).