Dilip Ghosh | ಬಿಜೆಪಿ ಹಿರಿಯ ನಾಯಕ ದಿಲೀಪ್ ಘೋಷ್ 
ದೇಶ

ಚುನಾವಣಾ ಪ್ರಚಾರದಲ್ಲಿ ಎನ್‌ಕೌಂಟರ್ ಸದ್ದು...ಅಪರಾಧಿಗಳಿಗೆ ಸೆರೆವಾಸದ ಎಚ್ಚರಿಕೆ ನೀಡಿದ ಬಿಜೆಪಿ ಅಭ್ಯರ್ಥಿ ಘೋಷ್! | Dilip Ghosh

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಿ ಅಧಿಕಾರಕ್ಕೆ ಬರುತ್ತಿದ್ದಂತೆ ಕಾನೂನು ಸುವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದಾಗಿ ಬಿಜೆಪಿ ಹಿರಿಯ ನಾಯಕ ದಿಲೀಪ್ ಘೋಷ್ (Dilip Ghosh) ಘೋಷಿಸಿದ್ದಾರೆ.
ಖರಗ್‌ಪುರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಘೋಷ್​​, ಪಶ್ಚಿಮ ಬಂಗಾಳವು ಶೀಘ್ರದಲ್ಲೇ ಅಪರಾಧಿಗಳ ವಿರುದ್ಧ ಉತ್ತರ ಪ್ರದೇಶ ಶೈಲಿಯ ಎನ್‌ಕೌಂಟರ್​​ಗಳಿಗೆ ಸಾಕ್ಷಿಯಾಗಲಿದೆ ಎಂದು ಗುಡುಗಿದ್ದಾರೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಒತ್ತಡಕ್ಕೆ ಮಣಿದು ಪಶ್ಚಿಮ ಬಂಗಾಳ ಪೊಲೀಸರು ಎಲ್ಲಾ ರೀತಿಯ ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಘೋಷ್, ಮೇ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಇಂದು ಭ್ರಷ್ಟ ನಾಯಕರ ಅಣತಿಯಂತೆ ಮಾಫಿಯಾಗಳೊಂದಿಗೆ ಕುಳಿತು ಚಹಾ ಕುಡಿಯುತ್ತಿರುವ ಪೊಲೀಸರು, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ತಮ್ಮ ಸ್ವಭಾವವನ್ನು ಬದಲಿಸಿಕೊಳ್ಳಲಿದ್ದಾರೆ ಎಂದಿರುವ ಬಿಜೆಪಿ ನಾಯಕ, ಉತ್ತರ ಪ್ರದೇಶದ ಮಾದರಿಯಲ್ಲೇ ಅಪರಾಧಿಗಳನ್ನು ಬೇಟೆಯಾಡಿ ಎನ್‌ಕೌಂಟರ್ ನಡೆಸಿ ಕಂಬಿಗಳ ಹಿಂದೆ ಹಾಕುವ ದಿನಗಳು ಹತ್ತಿರದಲ್ಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ 2016 ರಿಂದ 2019 ರವರೆಗೆ ಖರಗ್‌ಪುರ ಸದರ್‌ನ ಶಾಸಕರಾಗಿ ಸೇವೆ ಸಲ್ಲಿಸಿದ ಅನುಭವವಿರುವ ಘೋಷ್​​ಗೆ ಬಿಜೆಪಿ ಮತ್ತೆ ಅದೇ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಈ ಭಾಗದಲ್ಲಿ ಗೂಂಡಾಗಳು ಮತ್ತು ಮಾಫಿಯಾಗಳ ವಿರುದ್ಧ ತಾವು ಮೊದಲಿನಿಂದಲೂ ಹೋರಾಡುತ್ತಾ ಬಂದಿದ್ದು, ಇನ್ನು ಮುಂದೆ ಆ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಲಿದೆ ಮತ್ತು ಅಪರಾಧದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಜೈಲಿಗೆ ತಳ್ಳಲಾಗುವುದು ಎಂದು ತಿಳಿಸಿದ್ದಾರೆ
ರಾಜ್ಯಾದ್ಯಂತ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದ್ದು, ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ವಾಕ್ಸಮರ ನಡೆಯುತ್ತಿದೆ. ಈಗಾಗಲೇ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿ ಆಕ್ರಮಣಕಾರಿ ಪ್ರಚಾರಕ್ಕಿಳಿದಿವೆ. ಈ ನಡುವೆ, ಚುನಾವಣಾ ಆಯೋಗವು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಟಿಎಂಸಿ ಟೀಕಿಸುತ್ತಿದ್ದು, ಆರೋಪ-ಪ್ರತ್ಯಾರೋಪಗಳ ನಡುವೆ ಬಂಗಾಳದ ಚುನಾವಣಾ ಅಖಾಡ ಕಾವೇರಿದೆ.
ಪಶ್ಚಿಮ ಬಂಗಾಳದ 294 ವಿಧಾನಸಭಾ ಸ್ಥಾನಗಳಿಗೆ ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್​​).