Digvijaya Singh | ಕಾಂಗ್ರೆಸ್ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ 
ದೇಶ

Digvijaya Singh | ಪ್ರಜಾಪ್ರಭುತ್ವವನ್ನು ನಿರಂಕುಶಾಧಿಕಾರವಾಗಿ ಪರಿವರ್ತಿಸುವ ಪ್ರಯತ್ನ: ಚುನಾವಣಾ ಆಯೋಗದ ವಿರುದ್ಧ ದಿಗ್ವಿಜಯ್ ಸಿಂಗ್ ವಾಗ್ದಾಳಿ

ಇದೋರ್: ದೇಶದಲ್ಲಿ ನಡೆಯುತ್ತಿರುವ SIRನ ಸಂಪೂರ್ಣವಾಗಿ ದೋಷಪೂರಿತ ಪ್ರಕ್ರಿಯೆಯಾಗಿದ್ದ, ಪ್ರಜಾಪ್ರಭುತ್ವವನ್ನು ನಿರಂಕುಶ ಪ್ರಭುತ್ವವನ್ನಾಗಿ ಪರಿವರ್ತಿಸುವ ಕುತಂತ್ರದ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್(Digvijaya Singh) ಬುಧವಾರ (ನ.26) ಆರೋಪಿಸಿದ್ದಾರೆ.
ಈ ಬಗ್ಗೆ ಸಂವಿಧಾನ ದಿನದಂದು ಇಂದೋರ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದಿಗ್ವಿಜಯ್ ಸಿಂಗ್, SIR ಪ್ರಕ್ರಿಯೆಯು ಸಂಪೂರ್ಣವಾಗಿ ದೋಷಪೂರಿತವಾಗಿದೆ ಎಂದು ಹೇಳಿದ್ದಾರೆ.
ಭಾರತದ ಸಂವಿಧಾನವನ್ನು ಪ್ರಜಾಪ್ರಭುತ್ವದಿಂದ ನಿರಂಕುಶಾಧಿಕಾರಕ್ಕೆ ಬದಲಾಯಿಸಲು ಕುತಂತ್ರದ ಪ್ರಯತ್ನ ನಡೆಯುತ್ತಿದೆ. ನಮ್ಮ ಮತದಾರರ ಪಟ್ಟಿಗಳನ್ನು ತಿರುಚಲಾಗುತ್ತಿದೆ. ಈ ತಿರುಚುವಿಕೆ ಕೇವಲ ಮತದಾರರ ಪಟ್ಟಿಗಳಿಗೆ ಸೀಮಿತವಾಗಿಲ್ಲ. ನಿಮ್ಮ ಪೌರತ್ವವನ್ನೂ ಪ್ರಶ್ನಿಸಲಾಗುತ್ತಿದೆ ಎಂದು ದಿಗ್ವಿಜಯ ಸಿಂಗ್ SIR ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಂದುವರೆದು ಮಾತನಾಡಿದ ಸಿಂಗ್, ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅಲ್ಲದೆ, ದೇಶವು ನಿರಂಕುಶಾಧಿಕಾರವನ್ನು ಹೊಂದಬೇಕೇ ಅಥವಾ ಪ್ರಜಾಪ್ರಭುತ್ವವನ್ನು ಹೊಂದಬೇಕೇ ಎಂದು ನಾವು ನಿರ್ಧರಿಸಬೇಕು. ಹಿಟ್ಲರ್ ಮತ್ತು ಮುಸೊಲಿನಿಯಂತಹ ಸರ್ವಾಧಿಕಾರಿಗಳ ಉದಾಹರಣೆಗಳನ್ನು ಉಲ್ಲೇಖಿಸಿದ ಸಿಂಗ್, ನಿರಂಕುಶಾಧಿಕಾರದಲ್ಲಿ ಒಬ್ಬ ವ್ಯಕ್ತಿ ಮಾತ್ರ ಆಳುತ್ತಾನೆ ಮತ್ತು ಸಾಮಾನ್ಯ ಜನರಿಗೆ ಯಾವುದೇ ಅಭಿಪ್ರಾಯವಿಲ್ಲ ಎಂದಿದ್ದಾರೆ.

ಈ ಜವಾಬ್ದಾರಿ ಸರ್ಕಾರ ಮತ್ತು ಆಯೋಗದ್ದಾಗಿತ್ತು - ದಿಗ್ವಿಜಯ್ ಸಿಂಗ್

2003 ರವರೆಗೆ ದೇಶದಲ್ಲಿ ಜಾರಿಯಲ್ಲಿದ್ದ SIRನಲ್ಲಿ, ಪ್ರತಿಯೊಬ್ಬ ಅರ್ಹ ನಾಗರಿಕನ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವ ಜವಾಬ್ದಾರಿ ಸರ್ಕಾರ ಮತ್ತು ಚುನಾವಣಾ ಆಯೋಗದದ್ದಾಗಿತ್ತು. ಆದರೆ SIRನ ಪ್ರಸ್ತುತ ಪ್ರಕ್ರಿಯೆಯ ಅಡಿಯಲ್ಲಿ, ಮತದಾರರಾಗಿರುವ ಪುರಾವೆಗಳನ್ನು ನಾಗರಿಕರಿಂದಲೇ ಪಡೆಯಲಾಗುತ್ತಿದೆ ಎಂದು ದಿಗ್ವಿಜಯ್​ ಸಿಂಗ್​ ತಿಳಿಸಿದ್ದಾರೆ.
ಒಳನುಸುಳುಕೋರರ ಬಗ್ಗೆ ಆಗಾಗ್ಗೆ ಮಾತನಾಡಲಾಗುತ್ತದೆ. ಆದರೆ ಚುನಾವಣಾ ಆಯೋಗವು ಬಿಹಾರದಲ್ಲಿ ಒಬ್ಬ ನುಸುಳುಕೋರನನ್ನಾದರೂ ಕಂಡುಕೊಂಡಿದ್ದಾರೆಯೇ? ಎಂದು ಸಿಂಗ್​ ಪ್ರಶ್ನಿಸಿದ್ದಾರೆ,(ಏಜೆನ್ಸೀಸ್).