ಮುಂಬೈ: ಗಲ್ಫ್ ದೇಶಗಳಲ್ಲಿ ಉದ್ವಿಗ್ನತೆ ಮತ್ತು ಯುದ್ಧ ಭೀತಿ ಹೆಚ್ಚುತ್ತಿರುವ ಬೆನ್ನಲ್ಲೇ ದೇಶದಲ್ಲಿ ಡೀಸೆಲ್ ಸರಬರಾಜು(Diesel Crisis) ಕುರಿತು ಆತಂಕವೂ ಇದೀಗ ಹೆಚ್ಚಾಗಿದೆ. ಇದರ ಪರಿಣಾಮ ಮಹಾರಾಷ್ಟ್ರದ ವಿದರ್ಭ ಭಾಗದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು, ಖರೀಫ್ ಹಂಗಾಮಿನ ಮುನ್ನ ರೈತರು ಡೀಸೆಲ್‌ಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬುಲ್ಡಾಣಾ ಮತ್ತು ವಾಶಿಮ್ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ಡೀಸೆಲ್ ಪಡೆಯಲು ಉದ್ದ ಸಾಲುಗಳು ಕಂಡುಬರುತ್ತಿವೆ. ಟ್ರ್ಯಾಕ್ಟರ್‌ಗಳು ಹಾಗೂ ಕ್ಯಾನ್‌ಗಳನ್ನು ಹಿಡಿದು ರೈತರು ಗಂಟೆಗಟ್ಟಲೆ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಆದರೂ ಅಗತ್ಯ ಪ್ರಮಾಣದ ಡೀಸೆಲ್ ಸಿಗದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆಲವೆಡೆ ಡೀಸೆಲ್ ವಿಚಾರಕ್ಕೆ ಜಗಳ ಹಾಗೂ ಗಲಾಟೆಗಳೂ ನಡೆದಿರುವ ವರದಿಗಳು ಹೊರಬಿದ್ದಿವೆ.
80 ಕಿಲೋಮೀಟರ್ ದೂರ ಪ್ರಯಾಣಿಸಿ ಡೀಸೆಲ್ ಖರೀದಿ
ವಾಶಿಮ್ ಜಿಲ್ಲೆಯ ಧೇಪುಡ್ ಗ್ರಾಮದ ರೈತ ಧನಂಜಯ್ ಗಂಗಾವನೆ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ್ದಾರೆ. ಐದು ಎಕರೆ ಜಮೀನಿನಲ್ಲಿ ಕೃಷಿ ಮಾಡುವ ಅವರು, ಟ್ರ್ಯಾಕ್ಟರ್ ಮೂಲಕ ಹೊಲ ಒಡೆಯಲು ಡೀಸೆಲ್ ಅಗತ್ಯವಾಗಿದ್ದರಿಂದ ಸುಮಾರು 80 ಕಿಲೋಮೀಟರ್ ದೂರ ಪ್ರಯಾಣಿಸಿ ಅಕೋಲಾ ಜಿಲ್ಲೆಯ ಬಾರ್ಶಿ ಟಾಕಳಿ ಪೆಟ್ರೋಲ್ ಬಂಕ್‌ಗೆ ತೆರಳಿದರು. “8 ರಿಂದ 10 ಪೆಟ್ರೋಲ್ ಬಂಕ್‌ಗಳಲ್ಲಿ ಹುಡುಕಿದರೂ ಕ್ಯಾನ್‌ನಲ್ಲಿ ಡೀಸೆಲ್ ಸಿಗಲಿಲ್ಲ. ಕೊನೆಗೆ ಇಲ್ಲಿ ಸಾವಿರ ರೂಪಾಯಿಯ ಡೀಸೆಲ್ ಸಿಕ್ಕಿತು. ಆದರೆ ಅದಕ್ಕಾಗಿ 200 ರೂಪಾಯಿ ಮೌಲ್ಯದ ಪೆಟ್ರೋಲ್ ಖರ್ಚು ಮಾಡಬೇಕಾಯಿತು” ಎಂದು ಅವರು ಬೇಸರ ವ್ಯಕ್ತಪಡಿಸಿದರು ಎಂದು ಸುದ್ದಿಸಂಸ್ಥೆ ಉಲ್ಲೇಖಿಸಿದೆ. ಅವರ ಪ್ರಕಾರ, ಸಿಕ್ಕಿರುವ ಡೀಸೆಲ್ ಪ್ರಮಾಣ ಕೃಷಿ ಕೆಲಸಗಳಿಗೆ ಸಾಕಾಗುವುದಿಲ್ಲ. ಆದರೂ ಮಳೆಗಾಲಕ್ಕೂ ಮೊದಲು ಹೊಲ ಸಿದ್ಧಪಡಿಸಲು ಇದೂ ಸಹ ನೆರವಾಗುತ್ತಿದೆ ಎಂದಿದ್ದಾರೆ.
ಬಿಸಿಲಿನ ಹೊಡೆತದ ಜೊತೆಗೆ ಡೀಸೆಲ್ ಸಂಕಷ್ಟ
ವಿದರ್ಭ ಭಾಗದಲ್ಲಿ ತಾಪಮಾನ ಈಗಾಗಲೇ 45 ರಿಂದ 46 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಕುಡಿಯುವ ನೀರಿನ ಸಮಸ್ಯೆಯ ನಡುವೆ ಈಗ ಡೀಸೆಲ್ ಕೊರತೆ ರೈತರನ್ನು ಮತ್ತಷ್ಟು ಕಂಗೆಡಿಸಿದೆ. ಖರೀಫ್ ಹಂಗಾಮಿಗೆ ಸಮಯಕ್ಕೆ ಸರಿಯಾಗಿ ಜಮೀನು ಸಿದ್ಧಪಡಿಸದಿದ್ದರೆ ಬೆಳೆ ಉತ್ಪಾದನೆ ಮೇಲೆ ಪರಿಣಾಮ ಬೀಳುವ ಭೀತಿ ರೈತರಲ್ಲಿ ಹೆಚ್ಚಾಗಿದೆ.
ಪೆಟ್ರೋಲ್-ಡೀಸೆಲ್ ಮಾರಾಟದಲ್ಲಿ ಭಾರೀ ಏರಿಕೆ
ಪೆಟ್ರೋಲ್ ಬಂಕ್ ಮಾಲೀಕರ ಪ್ರಕಾರ, ಕಳೆದ ಕೆಲವು ದಿನಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಮಾರಾಟದಲ್ಲಿ 30 ರಿಂದ 40 ಶೇಕಡಾ ಏರಿಕೆ ಕಂಡುಬಂದಿದೆ. ಸಂಗ್ರಹಣೆಯಲ್ಲಿ ಇಂಧನ ಕೊರತೆ ಇಲ್ಲದಿದ್ದರೂ, ಸಾಗಣೆಯಲ್ಲಿ ವಿಳಂಬವಾಗುತ್ತಿರುವುದರಿಂದ ಸಮಯಕ್ಕೆ ಸರಿಯಾಗಿ ಪಂಪ್‌ಗಳಿಗೆ ತಲುಪುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಇದರಿಂದ ಕೆಲವೇ ಗಂಟೆಗಳಲ್ಲಿ ಪಂಪ್‌ಗಳಲ್ಲಿನ ಸ್ಟಾಕ್ ಖಾಲಿಯಾಗುತ್ತಿದೆ. ಪರಿಣಾಮ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚುತ್ತಿದೆ.
ಇದು ನಿಜವಾದ ಕೊರತೆ ಅಲ್ಲ, ಭಯದ ವಾತಾವರಣ
ಅಕೋಲಾ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಹುಲ್ ರಾಠಿ ಮಾತನಾಡಿ, “ಇದು ನಿಜವಾದ ಕೊರತಿಗಿಂತಲೂ ಭಯದಿಂದ ಉಂಟಾದ ಪರಿಸ್ಥಿತಿ. ಸರ್ಕಾರದ ಎಚ್ಚರಿಕೆ, ಇಂಧನ ದರ ಏರಿಕೆ ಮತ್ತು ಯುದ್ಧ ಭೀತಿಯಿಂದ ಜನರು ಅಗತ್ಯಕ್ಕಿಂತ ಹೆಚ್ಚು ಡೀಸೆಲ್ ಖರೀದಿಸಲು ಮುಂದಾಗಿದ್ದಾರೆ” ಎಂದರು.
“ಕಳೆದ ತಿಂಗಳಿಗಿಂತ ಈ ತಿಂಗಳು 30 ಶೇಕಡಾ ಹೆಚ್ಚು ಇಂಧನ ಮಾರಾಟವಾಗಿದೆ. ಜನರು 50-80 ಕಿಲೋಮೀಟರ್ ದೂರ ಹೋಗಿ ಡೀಸೆಲ್ ತರುತ್ತಿರುವುದು ಆತಂಕದ ಮಟ್ಟವನ್ನು ತೋರಿಸುತ್ತದೆ” ಎಂದು ಅವರು ಹೇಳಿದರು.
ರೈತರ ಬೇಡಿಕೆ ಏನು?
ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಪೆಟ್ರೋಲ್ ಬಂಕ್‌ನಲ್ಲೂ ಕೃಷಿ ಬಳಕೆಗೆ ಸಾಕಷ್ಟು ಡೀಸೆಲ್ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಜೊತೆಗೆ ಕ್ಯಾನ್‌ಗಳಲ್ಲಿ ಡೀಸೆಲ್ ನೀಡುವ ವ್ಯವಸ್ಥೆಯನ್ನು ಸುಲಭಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ,(ಏಜೆನ್ಸೀಸ್).