K Annamalai | ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ
ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಿಂದ ತಮ್ಮ ಹೆಸರು ಕೈಬಿಟ್ಟಿರುವ ಕುರಿತು ಎದ್ದಿದ್ದ ಭಾರಿ ಚರ್ಚೆಗಳಿಗೆ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (K Annamalai) ತೆರೆ ಎಳೆದಿದ್ದು, ಚುನಾವಣಾ ಕಣದಿಂದ ಹೊರಗುಳಿಯುವ ನಿರ್ಧಾರ ಸಂಪೂರ್ಣವಾಗಿ ತಮ್ಮದೇ ಆಗಿದೆ, ಇದನ್ನು ಮೊದಲೇ ಪಕ್ಷದ ನಾಯಕತ್ವಕ್ಕೆ ಲಿಖಿತವಾಗಿ ತಿಳಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ, ತಮಗೆ ಟಿಕೆಟ್ ನಿರಾಕರಿಸಲಾಗಿದೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದ್ದು, ತಾವು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಕೋರ್ ಕಮಿಟಿಗೆ ಮೊದಲೇ ಮನವರಿಕೆ ಮಾಡಿಕೊಟ್ಟಿದ್ದಾಗಿ ತಿಳಿಸುತ್ತಾ, ಸ್ವತಃ ತಾವೇ ಸ್ಪರ್ಧಿಸಲು ಇಚ್ಛಿಸದಿದ್ದಾಗ ಟಿಕೆಟ್ ಹಂಚಿಕೆ ಮಾಡಲು ಹೇಗೆ ಸಾಧ್ಯ ಎಂದು ಪತ್ರಕರ್ತರನ್ನೆ ಮರುಪ್ರಶ್ನಿಸಿದರು.
ತಮ್ಮ ನಿರ್ಧಾರವನ್ನು ಗೌರವಿಸಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಪಕ್ಷದ ಕೇಂದ್ರ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದ ಸಿಂಗಂ, ರಾಜ್ಯದಾದ್ಯಂತ ಮೈತ್ರಿಕೂಟದ ಅಭ್ಯರ್ಥಿಗಳ ಪರ ಸಕ್ರಿಯವಾಗಿ ಪ್ರಚಾರ ಮಾಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚೆನ್ನೈ ಭೇಟಿಯನ್ನು ಉಲ್ಲೇಖಿಸಿದ ಅವರು, ಪುದುಚೇರಿಯಲ್ಲಿ ಪ್ರಚಾರ ಮುಗಿಸಿ ಬರುವ ಪ್ರಧಾನಿಯವರು ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ ಮತ್ತು ನಂತರ ಕೇರಳದ ಕೊಚ್ಚಿಗೆ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಡಿಯಲ್ಲಿ ಬಿಜೆಪಿ 27 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಅಣ್ಣಾಮಲೈ ಅನುಪಸ್ಥಿತಿ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿತ್ತು. ಅಣ್ಣಾಮಲೈ ಅವರ ಹೆಸರು ಕೊಯಮತ್ತೂರು ಪ್ರದೇಶದ ಕ್ಷೇತ್ರಗಳೊಂದಿಗೆ ಪ್ರಬಲವಾಗಿ ಕೇಳಿಬಂದಿತ್ತು. ಆದರೆ, ಬಿಜೆಪಿಯ ಭದ್ರಕೋಟೆ ಎನ್ನಲಾದ ಕೊಯಮತ್ತೂರಿನ ಪ್ರಮುಖ ಕ್ಷೇತ್ರಗಳನ್ನು ಎಐಎಡಿಎಂಕೆ ತನ್ನ ಬಳಿಯೇ ಉಳಿಸಿಕೊಂಡಿದ್ದು ಅಣ್ಣಾಮಲೈ ಅತೃಪ್ತಿಗೆ ಕಾರಣವಾಗಿತ್ತು ಎಂದು ಮೂಲಗಳು ತಿಳಿಸಿವೆ.
ವಿಶೇಷವಾಗಿ ಸಿಂಗನಲ್ಲೂರು ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಬೇಕೆಂಬ ಅವರ ಬೇಡಿಕೆಯನ್ನು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಪುರಸ್ಕರಿಸದ ಕಾರಣ, ಅಣ್ಣಾಮಲೈ ಸೀಟು ಹಂಚಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಚುನಾವಣೆಯಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ.
ಹೈ ಕಮಾಂಡ್ಗೆ ಪತ್ರ ಬರೆದಿದ್ದ ಅಣ್ಣಾಮಲೈ
ಹೈ ಕಮಾಂಡ್ ನಾಯಕರಿಗೆ ಪತ್ರ ಬರೆದಿದ್ದ ಅಣ್ಣಾಮಲೈ, ಬಿಜೆಪಿಗೆ ಗೆಲುವಿನ ಸುಲಭ ಅವಕಾಶಗಳಿದ್ದ ಕಿಣತುಕಡವು ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳನ್ನು ಎಐಎಡಿಎಂಕೆ ಬಿಟ್ಟುಕೊಟ್ಟಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಹೈಕಮಾಂಡ್‌ಗೆ ತಿಳಿಸಿದ್ದರು.
ಈ ಸೀಟು ಹಂಚಿಕೆಯ ವಿವಾದವು ಕೇವಲ ನಾಯಕರಿಗೆ ಮಾತ್ರ ಸೀಮಿತವಾಗದೆ ಪಕ್ಷದ ತಳಮಟ್ಟದ ಕಾರ್ಯಕರ್ತರಿಗೂ ಹರಡಿದೆ. ಕಿಣತುಕಡವು ಕ್ಷೇತ್ರದಲ್ಲಿ ಬಿಜೆಪಿಗೆ ಅವಕಾಶ ಸಿಗದಿದ್ದಕ್ಕೆ ಆಕ್ರೋಶಗೊಂಡ ಕಾರ್ಯಕರ್ತರು ಕಳೆದ ವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಎನ್‌ಡಿಎ ಮೈತ್ರಿಕೂಟದ ಅಂತಿಮ ಒಪ್ಪಂದದಂತೆ, ಒಟ್ಟು 234 ಕ್ಷೇತ್ರಗಳ ಪೈಕಿ ಎಐಎಡಿಎಂಕೆ 169 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಬಿಜೆಪಿಗೆ ಕೇವಲ 27 ಸ್ಥಾನಗಳನ್ನು ನೀಡಲಾಗಿದೆ.
ಉಳಿದಂತೆ ಮೈತ್ರಿ ಪಾಲುದಾರರಾದ ಪಿಎಂಕೆಗೆ 18 ಮತ್ತು ಎಎಂಎಂಕೆಗೆ 11 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ಬಿಜೆಪಿಯ ಶಕ್ತಿ ಹೆಚ್ಚಿರುವ ಕಡೆಗಳಲ್ಲಿ ಕ್ಷೇತ್ರಗಳನ್ನು ಪಡೆಯಲು ವಿಫಲವಾಗಿರುವುದು ಪಕ್ಷದಲ್ಲಿ ಅಸಮಾಧಾನದ ಕಿಚ್ಚು ಹಚ್ಚಿದೆ ಎಂದು ಈ ಹಿಂದೆಯೇ ವರದಿಯಾಗಿತ್ತು. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 23 ರಂದು ಮತದಾನ ನಡೆಯಲಿದೆ(ಏಜೆನ್ಸೀಸ್).