ಬಿಜೆಪಿ ಸುನಾಮಿಯಲ್ಲಿ ಕೊಚ್ಚಿ ಹೋಗುತ್ತಾ ದೀದಿ ಭದ್ರಕೋಟೆ? ಸುವೇಂದು ಮೈಂಡ್ ಗೇಮ್! ಭವಾನಿಪುರ ರಣಕಣದಲ್ಲಿ ಮಮತಾ ಸೈಲೆಂಟ್ ಆಗಿದ್ದೇಕೆ..?
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯದ ಹೃದಯಭಾಗ ಎನಿಸಿಕೊಂಡಿರುವ ಭವಾನಿಪುರ( Bhavanipur Battle) ವಿಧಾನಸಭಾ ಕ್ಷೇತ್ರವು ಇಂದು ದೇಶದ ಗಮನ ಸೆಳೆದಿದೆ. ಇದು ಕೇವಲ ಒಂದು ಕ್ಷೇತ್ರವಲ್ಲ, ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರಾಜಕೀಯ ಅಸ್ಮಿತೆಯ ನೆಲೆಯಾಗಿದೆ. ಆದರೆ, 2026ರ ಈ ಚುನಾವಣೆಯಲ್ಲಿ ಪರಿಸ್ಥಿತಿ ಬದಲಾಗಿದೆ. ಒಂದು ಕಾಲದಲ್ಲಿ ಮಮತಾರ ಸುರಕ್ಷಿತ ಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಈಗ ಬಿಜೆಪಿಯ ಸುವೇಂದು ಅಧಿಕಾರಿ ಭೀಕರ ಸವಾಲು ಒಡ್ಡುತ್ತಿದ್ದಾರೆ. ನಂದಿಗ್ರಾಮದಲ್ಲಿ ಮಮತಾರನ್ನು ಸೋಲಿಸಿದ್ದ ಅಧಿಕಾರಿ, ಈಗ ಭವಾನಿಪುರದಲ್ಲೂ ಇತಿಹಾಸ ಮರುಕಳಿಸುವ ಮುನ್ಸೂಚನೆ ನೀಡಿದ್ದಾರೆ.
ಮಿನಿ ಭಾರತದಲ್ಲಿ ಮಮತಾ ಕೋಟೆ ಅಲುಗಾಡುತ್ತಿದೆಯೇ?
ಭವಾನಿಪುರ ಕ್ಷೇತ್ರವನ್ನು 'ಮಿನಿ ಭಾರತ' ಎಂದು ಕರೆಯಲಾಗುತ್ತದೆ. ಇಲ್ಲಿ ಕೇವಲ ಬಂಗಾಳಿ ಹಿಂದೂಗಳಷ್ಟೇ ಅಲ್ಲದೆ, ಗುಜರಾತಿಗಳು, ಮಾರ್ವಾಡಿಗಳು, ಸಿಖ್ಖರು ಮತ್ತು ಬಿಹಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಜನಸಂಖ್ಯಾ ಲೆಕ್ಕಾಚಾರ: ಸುಮಾರು ಶೇ.42 ರಷ್ಟು ಬಂಗಾಳಿ ಹಿಂದೂಗಳು, ಶೇ. 34 ಬಂಗಾಳೇತರ ಹಿಂದೂಗಳು ಮತ್ತು ಶೇ.24 ಮುಸ್ಲಿಂ ಮತದಾರರು ಇಲ್ಲಿದ್ದಾರೆ.
ಬದಲಾದ ಸಮೀಕರಣ: ಈ ಮೊದಲು ಬಂಗಾಳೇತರ ವ್ಯಾಪಾರಿ ಸಮುದಾಯ ಮಮತಾರನ್ನು ಬೆಂಬಲಿಸುತ್ತಿತ್ತು. ಆದರೆ, ಇತ್ತೀಚೆಗೆ ಟಿಎಂಸಿಯ ಹೊರಗಿನವರು ಎಂಬ ರಾಜಕೀಯ ಭಾಷಣಗಳಿಂದ ಈ ಸಮುದಾಯವು ಬಿಜೆಪಿಯತ್ತ ವಾಲಿರುವುದು ತೃಣಮೂಲ ಕಾಂಗ್ರೆಸ್‌ಗೆ ಆತಂಕ ತಂದಿದೆ.
ಸುವೇಂದು ಅಧಿಕಾರಿ: ದೀದಿಗೆ ಸಿಗುತ್ತಿರುವ 'ಹೆವಿವೇಟ್' ಸವಾಲು
2011 ಮತ್ತು 2016ರಲ್ಲಿ ಮಮತಾ ವಿರುದ್ಧ ಪ್ರಬಲ ಅಭ್ಯರ್ಥಿಗಳಿರಲಿಲ್ಲ. ಆದರೆ ಈ ಬಾರಿ ಬಿಜೆಪಿ ತನ್ನ ಅತಿ ದೊಡ್ಡ ಅಸ್ತ್ರವನ್ನೇ ಪ್ರಯೋಗಿಸಿದೆ.
ನಂದಿಗ್ರಾಮದ ಸೇಡು: 2021ರಲ್ಲಿ ನಂದಿಗ್ರಾಮದಲ್ಲಿ ಮಮತಾರನ್ನು 2,000 ಮತಗಳ ಅಂತರದಿಂದ ಸೋಲಿಸಿದ್ದ ಸುವೇಂದು ಅಧಿಕಾರಿ, ಈ ಬಾರಿ ಭವಾನಿಪುರದಲ್ಲಿ ದೀದಿಯನ್ನು ಮಾಜಿ ಮುಖ್ಯಮಂತ್ರಿ ಮಾಡುತ್ತೇನೆ ಎಂದು ಶಪಥ ಮಾಡಿದ್ದಾರೆ.
ಬೂತ್ ಮಟ್ಟದ ತಂತ್ರಜ್ಞಾನ: ಬಿಜೆಪಿ ಕೇವಲ ಭಾಷಣಕ್ಕೆ ಸೀಮಿತವಾಗದೆ, ಪ್ರತಿಯೊಂದು ಬೂತ್ ಮತ್ತು ಜಾತಿವಾರು ಲೆಕ್ಕಾಚಾರ ಹಾಕಿ ಮನೆಮನೆಗೆ ತಲುಪುತ್ತಿದೆ. ವೃದ್ಧರಿಗೆ ಮತಗಟ್ಟೆಗೆ ಬರಲು ವೀಲ್‌ಚೇರ್ ವ್ಯವಸ್ಥೆ ಮಾಡುವಷ್ಟು ಸಿದ್ಧತೆ ಮಾಡಿಕೊಂಡಿದೆ.
ಮತದಾರರ ಪಟ್ಟಿಯ ರಹಸ್ಯ ಮತ್ತು ಟಿಎಂಸಿ ಆತಂಕ
ಇತ್ತೀಚೆಗೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸುಮಾರು 47,000 ಹೆಸರುಗಳನ್ನು ಕೈಬಿಡಲಾಗಿದೆ. ಇದರಲ್ಲಿ ಶೇ.40 ಕ್ಕೂ ಹೆಚ್ಚು ಮುಸ್ಲಿಂ ಮತದಾರರ ಹೆಸರುಗಳಿವೆ ಎನ್ನಲಾಗುತ್ತಿದೆ. ಮುಸ್ಲಿಂ ಮತದಾರರು ಟಿಎಂಸಿಯ ಭದ್ರಕೋಟೆಯಾಗಿದ್ದು, ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಸರುಗಳು ನಾಪತ್ತೆಯಾಗಿರುವುದು ಮಮತಾ ಬ್ಯಾನರ್ಜಿ ಅವರ ನಿದ್ದೆಗೆಡಿಸಿದೆ.
ಸಾಧ್ಯವಾದರೆ ನನಗೆ ಮತ ನೀಡಿ..ದೀದಿ ಭಾವುಕ ಮನವಿ?
ಭಾನುವಾರ ನಡೆದ ರ್‍ಯಾಲಿಯಲ್ಲಿ ಮಮತಾ ಬ್ಯಾನರ್ಜಿ ಅವರು ಅರೆಬರೆ ಭಾಷಣ ಮಾಡಿ ವೇದಿಕೆಯಿಂದ ಇಳಿದು ನಡೆದ ಘಟನೆ ಭಾರಿ ಚರ್ಚೆಗೆ ಕಾರಣವಾಗಿದೆ. ಪಕ್ಕದಲ್ಲೇ ಬಿಜೆಪಿ ನಡೆಸುತ್ತಿದ್ದ ಅಬ್ಬರದ ಪ್ರತಿಭಟನೆಯಿಂದಾಗಿ ಕಿರಿಕಿರಿಗೊಂಡ ಮಮತಾ, ಸಾಧ್ಯವಾದರೆ ನನಗೆ ಮತ ನೀಡಿ ಎಂದು ಹೇಳಿ ಹೊರನಡೆದರು. ಇದು ಅವರಲ್ಲಿರುವ ಆತ್ಮವಿಶ್ವಾಸದ ಕೊರತೆಯೋ ಅಥವಾ ಜನರ ಕನಿಕರ ಗಿಟ್ಟಿಸುವ ತಂತ್ರವೋ ಎಂಬ ಪ್ರಶ್ನೆ ಎದ್ದಿದೆ.
ಮನೆಯ ಮಗಳು 'ವರ್ಸಸ್ 'ರಾಮರಾಜ್ಯ'
ಟಿಎಂಸಿ ನಾಯಕರು ಮಮತಾರನ್ನು ಭವಾನಿಪುರದ ಮನೆಯ ಮಗಳು ಎಂದು ಬಿಂಬಿಸುತ್ತಿದ್ದಾರೆ. ಲಕ್ಷ್ಮೀರ್ ಭಂಡಾರ್ ಮತ್ತು ಕನ್ಯಾಶ್ರೀಯಂತಹ ಜನಪ್ರಿಯ ಯೋಜನೆಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಆದರೆ ಬಿಜೆಪಿ ತುಷ್ಟೀಕರಣದ ರಾಜಕಾರಣ ಅಂತ್ಯಗೊಳಿಸಿ ರಾಮರಾಜ್ಯ ಸ್ಥಾಪಿಸುವುದಾಗಿ ಜನರಿಗೆ ಭರವಸೆ ನೀಡುತ್ತಿದೆ.
ಭವಾನಿಪುರದ ಈ ಹೋರಾಟ ಯಾಕೆ ಮುಖ್ಯ..?
ಪ್ರತಿಷ್ಠೆಯ ಕಣ: ಇದು ಮಮತಾ ಬ್ಯಾನರ್ಜಿ ಅವರ ಸ್ವಂತ ಕ್ಷೇತ್ರ. ಇಲ್ಲಿನ ಸೋಲು ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಮತ್ತು ರಾಷ್ಟ್ರ ರಾಜಕಾರಣದ ವರ್ಚಸ್ಸಿಗೆ ದೊಡ್ಡ ಪೆಟ್ಟು ನೀಡಲಿದೆ.
ಬಿಜೆಪಿಯ ಮನೋಬಲ: ಒಂದು ವೇಳೆ ಸುವೇಂದು ಅಧಿಕಾರಿ ಇಲ್ಲಿ ಗೆದ್ದರೆ, ಅದು ಬಂಗಾಳದಲ್ಲಿ ಟಿಎಂಸಿಯ ಅಂತ್ಯದ ಆರಂಭ ಎಂದು ಬಿಜೆಪಿ ಬಿಂಬಿಸಲಿದೆ.
ಭವಾನಿಪುರ ಕ್ಷೇತ್ರದ ಹಿಂದಿನ ವಿಜೇತರು
2011 (ಉಪಚುನಾವಣೆ)- ಮಮತಾ ಬ್ಯಾನರ್ಜಿ - ಟಿಎಂಸಿ 54,213 ಮತದ ಅಂತರ
2016- ಮಮತಾ ಬ್ಯಾನರ್ಜಿ - ಟಿಎಂಸಿ -25,301 ಮತದ ಅಂತರ
2021 (ಉಪಚುನಾವಣೆ)- ಮಮತಾ ಬ್ಯಾನರ್ಜಿ- ಟಿಎಂಸಿ 58,000 ಮತದ ಅಂತರ
ಮೇ 4ರ ಫಲಿತಾಂಶ ಇಡೀ ದೇಶದ ರಾಜಕೀಯ ದಿಕ್ಸೂಚಿಯನ್ನು ನಿರ್ಧರಿಸಲಿದೆ. ದೀದಿ ತನ್ನ ಕೋಟೆಯನ್ನು ಉಳಿಸಿಕೊಳ್ಳುತ್ತಾರಾ ಅಥವಾ ಸುವೇಂದು ಅಧಿಕಾರಿ ಮತ್ತೊಮ್ಮೆ ಜೈಂಟ್ ಕಿಲ್ಲರ್ ಆಗಿ ಹೊರಹೊಮ್ಮುತ್ತಾರಾ ಎಂದು ಇಡೀ ಭಾರತವೇ ಕಾದು ನೋಡುತ್ತಿದೆ,(ಏಜೆನ್ಸೀಸ್).