ದೀದಿ ಸೋದರಳಿಯನಿಗೆ ಕುತ್ತು! ಗುಜರಾತಿ ಸಮುದಾಯವನ್ನು ಅಂಡರ್‌ವರ್ಲ್ಡ್ ಗ್ಯಾಂಗ್ಗೆ ಹೋಲಿಸಿದ್ದ ಅಭಿಷೇಕ್ ಬ್ಯಾನರ್ಜಿ ವಿರುದ್ಧ FIR ದಾಖಲು!
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ಭದ್ರಕೋಟೆ ಸಂಪೂರ್ಣವಾಗಿ ಧೂಳೀಪಟವಾಗಿರುವ ಬೆನ್ನಲ್ಲೇ, ಮಮತಾ ಬ್ಯಾನರ್ಜಿ ಅವರ ಸೋದರಳಿಯ ಹಾಗೂ ಟಿಎಂಸಿ ಪಕ್ಷದ ನಂಬರ್ 2 ನಾಯಕ, ಸಂಸದ ಅಭಿಷೇಕ್ ಬ್ಯಾನರ್ಜಿ(FIR Against Abhishek Banerjee) ವಿರುದ್ಧ ಕೊಲ್ಕತ್ತಾದ ಪ್ರಸಿದ್ಧ ಭವಾನಿಪುರ ಪೊಲೀಸ್ ಠಾಣೆಯಲ್ಲಿ ಕಠಿಣ ಕ್ರಿಮಿನಲ್ ಎಫ್‌ಐಆರ್ (FIR) ದಾಖಲಾಗಿದೆ.
ದೇಶದ ಅತ್ಯಂತ ಗೌರವಾನ್ವಿತ ಹಾಗೂ ಶಾಂತಿಪ್ರಿಯ ‘ಗುಜರಾತಿ ಸಮುದಾಯವನ್ನು ಅಪರಾಧ ಲೋಕದ ಗ್ಯಾಂಗ್ ಎಂದು ನಿಂದಿಸಿ, ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕವಾಗಿ ವಿಷ ಕಾರಿದ್ದಕ್ಕಾಗಿ ಪೊಲೀಸರು ಬುಧವಾರ ತಡರಾತ್ರಿ ಈ ಕಠಿಣ ಕ್ರಮ ಕೈಗೊಂಡಿದ್ದಾರೆ. ಲೋಕಸಭಾ ಸಂಸದರಾಗಿದ್ದುಕೊಂಡು ದೇಶದ ಏಕತೆ ಮತ್ತು ಸೌಹಾರ್ದತೆಗೆ ಧಕ್ಕೆ ತಂದಿರುವ ಅಭಿಷೇಕ್ ಬ್ಯಾನರ್ಜಿ ಅವರ ಈ ಕೃತ್ಯ ಇಡೀ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಭವಾನಿಪುರದ ಸ್ಥಳೀಯ ನಿವಾಸಿ ಅರ್ನಾಬ್ ಕಾಂತಿ ದಾಸ್ ಎಂಬುವವರು ನೀಡಿರುವ ಲಿಖಿತ ದೂರನ್ನು ಆಧರಿಸಿ ಪೊಲೀಸರು ಈ ಹೈ-ವೋಲ್ಟೇಜ್ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಹತ್ತು ಜನ್ಮ ಎತ್ತಿ ಬಂದರೂ ನನ್ನ ಮಾಡೆಲ್ ಮುಟ್ಟೋಕಾಗಲ್ಲ!": ದರ್ಪದ ಪೋಸ್ಟ್ ಮುಳುವಾಯ್ತು!
ದೂರುದಾರ ಅರ್ನಾಬ್ ಕಾಂತಿ ದಾಸ್ ಅವರು ಕಳೆದ ಮೇ 2 ರಂದು ಅಭಿಷೇಕ್ ಬ್ಯಾನರ್ಜಿ ತಮ್ಮ ಅಧಿಕೃತ Xನಲ್ಲಿ ಹಾಕಿದ್ದ ಅತ್ಯಂತ ಪ್ರಚೋದನಾತ್ಮಕ ಪೋಸ್ಟ್ ಅನ್ನು ಸಾಕ್ಷ್ಯವಾಗಿ ನ್ಯಾಯಾಲಯ ಮತ್ತು ಪೊಲೀಸರ ಮುಂದೆ ಮಂಡಿಸಿದ್ದಾರೆ. ಆ ಪೋಸ್ಟ್‌ನಲ್ಲಿ ಅಭಿಷೇಕ್, ನಿಮ್ಮ ಬಂಗಾಳ ವಿರೋಧಿ ಗುಜರಾತಿ ಗ್ಯಾಂಗ್ ಮತ್ತು ಅವರ ಚಮಚಾ ಜ್ಞಾನೇಶ್ ಕುಮಾರ್ ನನ್ನ ಡೈಮಂಡ್ ಹಾರ್ಬರ್ ಮಾಡೆಲ್‌ಗೆ ಸಣ್ಣ ಹಾನಿ ಮಾಡಬೇಕೆಂದರೂ ಇನ್ನು ಹತ್ತು ಜನ್ಮ ಎತ್ತಿ ಬಂದರೂ ಸಾಲುವುದಿಲ್ಲ ಎಂದು ಅಹಂಕಾರದ ಸಾಲುಗಳನ್ನು ಬರೆದುಕೊಂಡಿದ್ದರು.
ಈ ಕುರಿತು ದೂರಿನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅರ್ನಾಬ್ ಕಾಂತಿ ದಾಸ್, ಅಭಿಷೇಕ್ ಬ್ಯಾನರ್ಜಿ ಅವರು ದೇಶದ ಸಂವಿಧಾನ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಎತ್ತಿಹಿಡಿಯುವುದಾಗಿ ಪ್ರಮಾಣ ವಚನ ಸ್ವೀಕರಿಸಿರುವ ಒಬ್ಬ ಜವಾಬ್ದಾರಿಯುತ ಸಂಸದ. ಇಂತಹ ಉನ್ನತ ಹುದ್ದೆಯಲ್ಲಿದ್ದುಕೊಂಡು ಇಡೀ ಗುಜರಾತಿ ಸಮುದಾಯವನ್ನು ಗ್ಯಾಂಗ್ ಎಂದು ಕರೆದಿರುವುದು ಅತ್ಯಂತ ಅಪಾಯಕಾರಿ ನಡೆ. ಗ್ಯಾಂಗ್ ಎಂಬ ಪದವು ಕ್ರಿಮಿನಲ್ ಜಗತ್ತು, ಅಂಡರ್‌ವರ್ಲ್ಡ್ ಮತ್ತು ಕರಾಳ ಮಾಫಿಯಾಗಳನ್ನು ಸೂಚಿಸುವ ನೆಗೆಟಿವ್ ಪದವಾಗಿದೆ. ಬಂಗಾಳ ಹಾಗೂ ಇಡೀ ದೇಶದ ಆರ್ಥಿಕ ಪ್ರಗತಿಗೆ ಹಗಲಿರುಳು ಶ್ರಮಿಸುವ, ಅತ್ಯಂತ ಕಷ್ಟಪಟ್ಟು ದುಡಿಯುವ ಮತ್ತು ಕಾನೂನು ಪಾಲಿಸುವ ಶಾಂತಿಪ್ರಿಯ ಗುಜರಾತಿ ಸಮುದಾಯಕ್ಕೆ ಈ ರೀತಿ ನಿಂದಿಸಿರುವುದು ಸಮಾಜದಲ್ಲಿ ದೊಡ್ಡ ಮಟ್ಟದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದಂತಾಗಿದೆ ಎಂದು ಆಪಾದಿಸಿದ್ದಾರೆ.
ಭಾರತ ಗಣರಾಜ್ಯದ ವಿರುದ್ಧವೇ ಬಂಡಾಯ ಸಾರಿದರೇ ಅಭಿಷೇಕ್?; ತನಿಖೆ ತೀವ್ರ!
ಅಭಿಷೇಕ್ ಬ್ಯಾನರ್ಜಿ ತಮ್ಮ ವಿವಾದಾತ್ಮಕ ಪೋಸ್ಟ್‌ನಲ್ಲಿ ಕೇವಲ ಒಂದು ಸಮುದಾಯವನ್ನು ಮಾತ್ರ ನಿಂದಿಸಿಲ್ಲ, ಬದಲಿಗೆ ಇಡೀ ಯೂನಿಯನ್ ಆಫ್ ಇಂಡಿಯಾ ಮತ್ತು ಭಾರತದ ರಾಷ್ಟ್ರಪತಿಗಳಿಂದ ನೇಮಕಗೊಂಡ ಸಾಂವಿಧಾನಿಕ ಸಂಸ್ಥೆಗಳಿಗೆ ಮುಕ್ತ ಸವಾಲು ಹಾಕಿದ್ದರು. ತಮ್ಮ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಫಾಲ್ತಾ ವಿಧಾನಸಭಾ ಕ್ಷೇತ್ರಕ್ಕೆ ಬಂದು ತನ್ನ ಮಾಡೆಲ್ ಅನ್ನು ತಡೆಯುವ ತಾಕತ್ತು ಭಾರತದ ಯಾವುದೇ ವ್ಯವಸ್ಥೆಗೆ ಇಲ್ಲ ಎಂದು ಅವರು ದರ್ಪ ತೋರಿದ್ದರು.
ರಾಜಕೀಯ ವೈಷಮ್ಯ ಮತ್ತು ಸ್ಪರ್ಧೆಗಳು ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರಬೇಕು. ಆದರೆ, ರಾಜಕೀಯ ಲಾಭಕ್ಕಾಗಿ ಭಾರತದ ರಾಷ್ಟ್ರಪತಿಗಳು ನೇಮಿಸಿದ ಸಾಂವಿಧಾನಿಕ ಸಂಸ್ಥೆಗಳನ್ನು ಎಳೆದು ತರುವುದು ಮತ್ತು ಸ್ವತಃ ಭಾರತ ಗಣರಾಜ್ಯಕ್ಕೆ ಸವಾಲು ಹಾಕುವುದು ಕೇವಲ ರಾಜಕೀಯವಾಗಿ ಉಳಿಯುವುದಿಲ್ಲ. ಇದು ಸಂವಿಧಾನ, ದೇಶ ಮತ್ತು ಇಡೀ ರಾಷ್ಟ್ರದ ವಿರುದ್ಧ ಸಾರಿದ ಬಹಿರಂಗ ದ್ರೋಹ ಮತ್ತು ಮುಕ್ತ ಮುಖಾಮುಖಿ ಬಂಡಾಯದ ರೂಪವಾಗಿದೆ ಎಂದು ದೂರುದಾರರು ಪೊಲೀಸರ ಮುಂದೆ ವಿವರಿಸಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭೀಕರ ಸೋಲು ಕಂಡು ಅಧಿಕಾರ ಕಳೆದುಕೊಂಡಿರುವ ತೃಣಮೂಲ ಕಾಂಗ್ರೆಸ್, ಈಗ ಸಾಲು ಸಾಲು ಹಗರಣಗಳು ಮತ್ತು ಆಂತರಿಕ ಸರಣಿ ರಾಜೀನಾಮೆಗಳಿಂದ ನಲುಗಿಹೋಗಿದೆ. ಈ ಕರಾಳ ಬಿಕ್ಕಟ್ಟಿನ ಬೆನ್ನಲ್ಲೇ ಪಕ್ಷದ ಸಾರಥ್ಯ ವಹಿಸಿರುವ ಅಭಿಷೇಕ್ ಬ್ಯಾನರ್ಜಿ ವಿರುದ್ಧವೇ ಕ್ರಿಮಿನಲ್ ಎಫ್‌ಐಆರ್ ದಾಖಲಾಗಿರುವುದು ಟಿಎಂಸಿ ಪತನದ ಹಾದಿಯನ್ನು ಇನ್ನು ಹತ್ತು ಪಟ್ಟು ವೇಗಗೊಳಿಸಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್).