ಬಂಗಾಳದಲ್ಲಿ ದೀದಿ ಉಗ್ರರೂಪ: ರಾಜೀನಾಮೆಗೆ ನಕಾರ, ರಾಷ್ಟ್ರಪತಿ ಆಳ್ವಿಕೆಗೆ ಸವಾಲು! ಸೋಲೊಪ್ಪದ ಮಮತಾ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಲು ಕರೆ! 
ದೇಶ

ಬಂಗಾಳದಲ್ಲಿ ದೀದಿ ಉಗ್ರರೂಪ: ರಾಜೀನಾಮೆಗೆ ನಕಾರ, ರಾಷ್ಟ್ರಪತಿ ಆಳ್ವಿಕೆಗೆ ಸವಾಲು! ಸೋಲೊಪ್ಪದ ಮಮತಾ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಲು ಕರೆ! Mamata Banerjee

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಭೀಕರ ಸೋಲನುಭವಿಸಿದರೂ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅಧಿಕಾರದಿಂದ ಕೆಳಗಿಳಿಯಲು ನಿರಾಕರಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ.
ಈ ಬಗ್ಗೆ ಬುಧವಾರ ಕಾಳಿಘಾಟ್‌ನಲ್ಲಿ ನಡೆದ ನೂತನ ಶಾಸಕರ ಸಭೆಯಲ್ಲಿ ಮಾತನಾಡಿದ ದೀದಿ, ತಮ್ಮ ಈ ನಿರ್ಧಾರವನ್ನು ಸಾಂಕೇತಿಕ ಪ್ರತಿಭಟನೆ ಎಂದು ಬಣ್ಣಿಸಿದ್ದಾರೆ. ಅಷ್ಟೇ ಅಲ್ಲದೆ, ಧೈರ್ಯವಿದ್ದರೆ ನನ್ನನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಿ ಎಂದು ಕೇಂದ್ರಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ.

ಇದು ಜನರ ತೀರ್ಪಲ್ಲ, ಇಂಜಿನಿಯರ್ಡ್ ಮ್ಯಾಂಡೇಟ್": ಮಮತಾ ಆಕ್ರೋಶ

ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸೋಲೊಪ್ಪಿಕೊಳ್ಳದ ಮಮತಾ ಬ್ಯಾನರ್ಜಿ, ಬಿಜೆಪಿ ಚುನಾವಣೆಯನ್ನು ಲೂಟಿ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದು ಜನರ ನೈಜ ತೀರ್ಪಲ್ಲ, ಬದಲಾಗಿ ಮ್ಯಾನ್ಯುಪುಲೇಷನ್ ಫಲಿತಾಂಶವಾಗಿದೆ. ಎಣಿಕೆಯ ಸಮಯದಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ. ನಾವು ಈ ಕೂಡಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಗುಡುಗಿದ್ದಾರೆ.
ರಾಜ್ಯದಾದ್ಯಂತ ಇರುವ ಟಿಎಂಸಿಯ 1,500ಕ್ಕೂ ಹೆಚ್ಚು ಕಚೇರಿಗಳನ್ನು ಬಿಜೆಪಿ ಕಾರ್ಯಕರ್ತರು ಹೈಜಾಕ್ ಮಾಡಿದ್ದಾರೆ ಎಂದು ಮಮತಾ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸಭಾ ಅಧಿವೇಶನದ ಮೊದಲ ದಿನದಂದು ಎಲ್ಲಾ ಟಿಎಂಸಿ ಶಾಸಕರು ಕಪ್ಪು ಬಟ್ಟೆ ಧರಿಸಿ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ರಾಷ್ಟ್ರಪತಿ ಆಳ್ವಿಕೆಗೆ ಮುಕ್ತ ಆಹ್ವಾನ!

ಹಾಲಿ ವಿಧಾನಸಭೆಯ ಅವಧಿ ಮೇ 7ಕ್ಕೆ ಅಂತ್ಯಗೊಳ್ಳಲಿದೆ. ಅಲ್ಲಿಯವರೆಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿರುವ ದೀದಿ, ಅವರಿಗೆ ಬೇಕಿದ್ದರೆ ರಾಷ್ಟ್ರಪತಿ ಆಳ್ವಿಕೆ ಹೇರಲಿ. ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಲಿ. ಅದು ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ದಾಖಲಾಗಲಿ. ನಾನು ನೈತಿಕವಾಗಿ ಗೆದ್ದಿದ್ದೇನೆ, ನಾನು ಸ್ವತಂತ್ರ ಹಕ್ಕಿ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಬಿಜೆಪಿ ನಿರ್ಮಿಸಿದ ಐತಿಹಾಸಿಕ ದಾಖಲೆ

294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಬರೊಬ್ಬರಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ 15 ವರ್ಷಗಳ ಟಿಎಂಸಿ ಆಡಳಿತಕ್ಕೆ ಅಂತ್ಯ ಹಾಡಿದೆ. ಕಳೆದ ಬಾರಿ 212 ಸ್ಥಾನಗಳನ್ನು ಗೆದ್ದಿದ್ದ ಟಿಎಂಸಿ, ಈ ಬಾರಿ ಕೇವಲ 80 ಸ್ಥಾನಗಳಿಗೆ ಕುಸಿದು ಅತೀ ದೊಡ್ಡ ಹಿನ್ನಡೆ ಅನುಭವಿಸಿದೆ. ಈ ಸೋಲು 2011ರಲ್ಲಿ ಅಧಿಕಾರಕ್ಕೆ ಬಂದ ನಂತರ ಟಿಎಂಸಿ ಕಂಡ ಅತ್ಯಂತ ಕಹಿ ಅನುಭವವಾಗಿದೆ.

ಹಿಂಸಾಚಾರದ ಕಾರ್ಮೋಡ: ನೂಪುರದಿಂದ ಕಾಸ್ಬಾವರೆಗೆ ರಕ್ತಪಾತ

ಫಲಿತಾಂಶದ ನಂತರ ಬಂಗಾಳದಾದ್ಯಂತ ಹಿರಿಯ ನಾಯಕರ ಕಚೇರಿಗಳ ಮೇಲೆ ದಾಳಿ ಮತ್ತು ಹಿಂಸಾಚಾರ ವರದಿಯಾಗಿದೆ. ಬೀರ್‌ಭೂಮ್‌ನ ನಾನೂರ್‌ನಲ್ಲಿ ಟಿಎಂಸಿ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ ಎಂದು ಪಕ್ಷ ಆರೋಪಿಸಿದೆ. ಮತ್ತೊಂದೆಡೆ, ಟೋಲಿಗಂಜ್, ಕಾಸ್ಬಾ, ಕಮರಹಟಿ ಮತ್ತು ಹೌರಾ ಸೇರಿದಂತೆ ಹಲವೆಡೆ ಟಿಎಂಸಿ ಕಚೇರಿಗಳನ್ನು ಜನಸಮೂಹ ಧ್ವಂಸಗೊಳಿಸಿದೆ. ಈ ಹಿಂಸಾಚಾರಕ್ಕೆ ಬಿಜೆಪಿ ಮತ್ತು ಟಿಎಂಸಿ ಪರಸ್ಪರ ದೂಷಿಸಿಕೊಳ್ಳುತ್ತಿವೆ.

ಪಕ್ಷದಲ್ಲಿ ಶಿಸ್ತು ಕ್ರಮದ ಚಾಟಿ

ಸೋಲಿನ ಬೆನ್ನಲ್ಲೇ ಪಕ್ಷದೊಳಗೆ ಅಸಮಾಧಾನ ಸ್ಫೋಟಗೊಳ್ಳುವ ಭೀತಿ ಎದುರಿಸುತ್ತಿರುವ ಮಮತಾ, ಈ ಕೂಡಲೇ ಶಿಸ್ತು ಸಮಿತಿಯನ್ನು ರಚಿಸುವುದಾಗಿ ಘೋಷಿಸಿದ್ದಾರೆ. ಪಕ್ಷಕ್ಕೆ ದ್ರೋಹ ಬಗೆದವರನ್ನು ಮುಲಾಜಿಲ್ಲದೆ ಹೊರಹಾಕಲಾಗುವುದು. ನಾವು ಸೋತಿರಬಹುದು, ಆದರೆ ಹೋರಾಟ ನಿಲ್ಲಿಸುವುದಿಲ್ಲ ಎಂದು ದೀದಿ ಶಾಸಕರಿಗೆ ಧೈರ್ಯ ತುಂಬಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ಮತ್ತು ಹಿರಿಯ ನಾಯಕರ ಸಮ್ಮುಖದಲ್ಲಿ ನಡೆದ ಈ ಸಭೆಯು ಟಿಎಂಸಿಯ ಮುಂದಿನ ಕಾರ್ಯತಂತ್ರ ಮತ್ತು ಸಾಂಸ್ಥಿಕ ಪುನರ್ರಚನೆಯ ಮೇಲೆ ಕೇಂದ್ರೀಕೃತವಾಗಿತ್ತು. ಮೇ 7ರ ನಂತರ ಬಂಗಾಳದಲ್ಲಿ ಹೊಸ ಸರ್ಕಾರದ ಪರ್ವ ಆರಂಭವಾಗಲಿದೆಯೇ ಅಥವಾ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಲಿದೆಯೇ ಎಂಬುದು ಈಗ ಕುತೂಹಲದ ವಿಷಯವಾಗಿದೆ,(ಏಜೆನ್ಸೀಸ್​).