Amit Shah | ಗೃಹ ಸಚಿವ ಅಮಿತ್ ಷಾ 
ದೇಶ

ಎರಡನೇ ಹಂತ ಮುಗಿಯುವಷ್ಟರಲ್ಲಿ ಬಿಜೆಪಿ ಸರ್ಕಾರ ರಚನೆ; ಟಿಎಂಸಿಯ ಭಯೋತ್ಪಾದನೆಯ ಆಡಳಿತಕ್ಕೆ ಅಂತ್ಯ ಹಾಡುತ್ತೇವೆ ಎಂದ ಅಮಿತ್​ ಷಾ | Amit Shah

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ದಾಖಲಾದ ಮತದಾನವು ರಾಜ್ಯದಲ್ಲಿ ದೊಡ್ಡ ರಾಜಕೀಯ ಬದಲಾವಣೆಯ ಮುನ್ಸೂಚನೆ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಶುಕ್ರವಾರ (ಏ. 24) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಷಾ, ದಾಖಲೆಯ ಮತದಾನವು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ಪತನವನ್ನು ಮತ್ತು ಬಿಜೆಪಿಯ ಭರ್ಜರಿ ಜಯವನ್ನು ಖಚಿತಪಡಿಸಿದೆ ಎಂದು ಹೇಳಿದರು.

110 ಸ್ಥಾನಗಳಲ್ಲಿ ಗೆಲುವಿನ ವಿಶ್ವಾಸ

ಮೊದಲ ಹಂತದ ಚುನಾವಣಾ ಪ್ರಕ್ರಿಯೆಯನ್ನು ವಿಶ್ಲೇಷಿಸಿದ ಅಮಿತ್ ಷಾ, ಮೊದಲ ಹಂತದ ಒಟ್ಟು ಕ್ಷೇತ್ರಗಳ ಪೈಕಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಅಂದಾಜಿಸಿದ್ದಾರೆ. ನಮಗೆ ಬಂದಿರುವ ಆರಂಭಿಕ ಪ್ರತಿಕ್ರಿಯೆಗಳ ಪ್ರಕಾರ, 152 ಸ್ಥಾನಗಳ ಪೈಕಿ ಬಿಜೆಪಿ ಕನಿಷ್ಠ 110 ಸ್ಥಾನಗಳನ್ನು ಗೆಲ್ಲಲಿದೆ. ಬಂಗಾಳದ ಜನರು ಮೊದಲ ಹಂತದಲ್ಲೇ ತಮ್ಮ ಭವಿಷ್ಯವನ್ನು ನಿರ್ಧರಿಸಿದ್ದಾರೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದರು.
ಈ ಭೂಮಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಅಭಿವೃದ್ಧಿಯನ್ನು ಆರಿಸಿಕೊಂಡಿದೆ ಎಂಬುದು ಮತದಾನದ ಪ್ರಮಾಣದಿಂದ ಸ್ಪಷ್ಟವಾಗಿದೆ. ಮೊದಲ ಹಂತದ ಮತದಾರರ ಉತ್ಸಾಹವು ದೀದಿ (ಮಮತಾ ಬ್ಯಾನರ್ಜಿ) ಅಧಿಕಾರದಿಂದ ಹೊರಬರುತ್ತಿದ್ದಾರೆ ಮತ್ತು ಬಿಜೆಪಿ ಅಧಿಕಾರ ವಹಿಸಿಕೊಳ್ಳಲಿದೆ ಎಂಬುದನ್ನು ಬಹಿರಂಗಪಡಿಸಿದೆ. ರಾಜ್ಯದ ಜನರು ಹಿಂಸಾಚಾರ ಮುಕ್ತ ಮತ್ತು ಅಭಿವೃದ್ಧಿಶೀಲ ಬಂಗಾಳಕ್ಕಾಗಿ ಕೇಸರಿ ಪಕ್ಷಕ್ಕೆ ಮತ ನೀಡಿದ್ದಾರೆ ಎಂದು ಷಾ ಇದೇ ಸಂದರ್ಭದಲ್ಲಿ ತಿಳಿಸಿದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಸ್ತುತ ಇರುವ ಭಯೋತ್ಪಾದನೆಯ ಆಡಳಿತವನ್ನು ಕೊನೆಗೊಳಿಸುವುದಾಗಿ ಷಾ ವಾಗ್ದಾನ ಮಾಡಿದ್ದು, ನಮ್ಮ ಪಾಲಿಗೆ ಬದಲಾವಣೆ ಎಂದರೆ ನುಸುಳುವಿಕೆ ಮುಕ್ತ ಬಂಗಾಳ, ಭ್ರಷ್ಟಾಚಾರದಿಂದ ಮುಕ್ತಿ, ತುಷ್ಟೀಕರಣ ಮತ್ತು ಸುಲಿಗೆಕೋರತನಕ್ಕೆ ಅಂತ್ಯ ಹಾಡುವುದು ಎಂದರ್ಥ. ನೂತನ ಸರ್ಕಾರದ ಅಡಿಯಲ್ಲಿ ಮಹಿಳೆಯರ ಸುರಕ್ಷತೆಯು ಮೊದಲ ಆದ್ಯತೆಯಾಗಿರುತ್ತದೆ ಎಂದು ಒತ್ತಿ ಹೇಳಿದರು. ಯುವಜನತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ತಮ್ಮ ಗುರಿಯಾಗಿದ್ದು, ದಶಕಗಳಿಂದ ಬಾಧಿಸುತ್ತಿರುವ ನುಸುಳುವಿಕೆ ಸಮಸ್ಯೆಯನ್ನು ಬುಡಸಮೇತ ಕಿತ್ತೆಸೆಯುವ ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಸುರಕ್ಷತೆಯ ಭಾವನೆ ಮೂಡಿಸುವ ಆಡಳಿತವನ್ನು ನೀಡುತ್ತೇವೆ ಎಂದರು.

ಈ ಮಣ್ಣಿನ ಮಗನಿಂದಲೇ ಆಡಳಿತ

ಮೊದಲ ಹಂತವು ಶಾಂತಿಯುತವಾಗಿ ಮುಕ್ತಾಯಗೊಂಡ ಬೆನ್ನಲ್ಲೇ ಅಮಿತ್ ಷಾ, ಚುನಾವಣಾ ಆಯೋಗ, ಸಿಎಪಿಎಫ್ (CAPF) ಮತ್ತು ಬಂಗಾಳ ಪೊಲೀಸರಿಗೆ ನಾನು ಧನ್ಯವಾದ ಅರ್ಪಿಸಿದ್ದು, ಬಹಳ ವರ್ಷಗಳ ನಂತರ ಬಂಗಾಳದಲ್ಲಿ ಒಬ್ಬ ವ್ಯಕ್ತಿಯೂ ಪ್ರಾಣ ಕಳೆದುಕೊಳ್ಳದ ಚುನಾವಣೆ ನಡೆದಿದೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಂಗಾಳವು ಈಗ ಅಭಿವೃದ್ಧಿಯ ಹಾದಿಯನ್ನು ಆರಿಸಿಕೊಂಡಿದೆ ಎಂಬುದು ಈ ಶಾಂತಿಯುತ ಮತದಾನದಿಂದ ಸಾಬೀತಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಿಎಂ ಮಮತಾ ಬ್ಯಾನರ್ಜಿಗೆ ನೇರ ಸವಾಲು ಎಸೆದ ಷಾ, ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ದೀದಿ ಹರಡುತ್ತಿರುವ ವದಂತಿಗಳನ್ನು ತಳ್ಳಿಹಾಕುತ್ತಾ, ಇಲ್ಲೇ ಹುಟ್ಟಿ, ಬಂಗಾಳಿ ಮಾಧ್ಯಮದಲ್ಲೇ ಶಿಕ್ಷಣ ಪಡೆದವರು, ಈ ಭಾಷೆಯನ್ನು ನಿರರ್ಗಳವಾಗಿ ಮಾತನಾಡಬಲ್ಲವರು ರಾಜ್ಯವನ್ನು ಆಳಲಿದ್ದಾರೆ, ಆದರೆ, ಸಿಎಂ ಸ್ಥಾನದಲ್ಲಿ ನಿಮ್ಮ ಸೋದರಳಿಯ (ಅಭಿಷೇಕ್ ಬ್ಯಾನರ್ಜಿ) ಇರುವುದಿಲ್ಲ, ಬದಲಿಗೆ ಒಬ್ಬ ಸಾಮಾನ್ಯ ಬಿಜೆಪಿ ಕಾರ್ಯಕರ್ತ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.

ಬಂಗಾಳದಲ್ಲಿ ದಾಖಲೆಯ ಮತದಾನ!...

ಗುರುವಾರ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಈ ಹಂತದಲ್ಲಿ ರಾಜ್ಯವು ಅಚ್ಚರಿಯ ರೀತಿಯಲ್ಲಿ ಶೇಕಡಾ 91.88 ರಷ್ಟು ಮತದಾನವನ್ನು ದಾಖಲಿಸಿದೆ. ಇದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಪಶ್ಚಿಮ ಬಂಗಾಳದ ಚುನಾವಣಾ ಇತಿಹಾಸದಲ್ಲಿಯೇ ದಾಖಲಾದ ಅತ್ಯಧಿಕ ಮತದಾನವಾಗಿದೆ. ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಎರಡನೇ ಹಂತದ ಮತದಾನವು ಏಪ್ರಿಲ್ 29 ರಂದು ನಡೆಯಲಿದ್ದು, ಇಡೀ ರಾಜ್ಯವೇ ಕುತೂಹಲದಿಂದ ಕಾಯುತ್ತಿರುವ ಫಲಿತಾಂಶವು ಮೇ 4 ರಂದು ಪ್ರಕಟವಾಗಲಿದೆ(ಏಜೆನ್ಸೀಸ್​).