ಬಂಗಾಳದಲ್ಲಿ 'ದೀದಿ' ದರ್ಬಾರ್: ಸೋದರಳಿಯ ಅಭಿಷೇಕ್ ರೆಕ್ಕೆ ಕತ್ತರಿಸಿದ ಮಮತಾ! ಟಿಎಂಸಿಯಲ್ಲಿ ಶುರುವಾಯ್ತು ಹೊಸ ಆಟ!
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಚುನಾವಣಾ ಸೋಲಿನ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಪಕ್ಷದ ಇತಿಹಾಸದಲ್ಲೇ ಕಂಡರಿಯದ ಇಂತಹ ಭೀಕರ ಸೋಲಿಗೆ ಮಮತಾ ಬ್ಯಾನರ್ಜಿಗಿಂತ(Mamata Banerjee) ಹೆಚ್ಚಾಗಿ, ಅವರ ಸೋದರಸಳಿಯ ಹಾಗೂ ಪಕ್ಷದ ಎರಡನೇ ಅತ್ಯುನ್ನತ ನಾಯಕ ಅಭಿಷೇಕ್ ಬ್ಯಾನರ್ಜಿ ಅವರೇ ನೇರ ಕಾರಣ ಎಂಬ ಆಕ್ರೋಶ ಬಂಗಾಳದ ಗಲ್ಲಿ ಗಲ್ಲಿಗಳಲ್ಲಿ ಕೇಳಿಬರುತ್ತಿದೆ. ಜನಸಾಮಾನ್ಯರಿಂದ ಹಿಡಿದು ಪಕ್ಷದ ಹಿರಿಯ ನಾಯಕರವರೆಗೆ ಎಲ್ಲರೂ ಅಭಿಷೇಕ್ ವಿರುದ್ಧ ತಿರುಗಿಬಿದ್ದಿದ್ದಾರೆ.
ಈ ಭಾರಿ ಆಕ್ರೋಶ ಮತ್ತು ಪಕ್ಷದೊಳಗಿನ ಬಂಡಾಯವನ್ನು ಶಮನಗೊಳಿಸಲು ಅಖಾಡಕ್ಕಿಳಿದಿರುವ ಟಿಎಂಸಿ ಸುಪ್ರೀಂ ಮಮತಾ, ತಮ್ಮ ಸೋದರಸಳಿಯನಿಗೆ ರಾಜಕೀಯವಾಗಿ ದೊಡ್ಡ ಶಾಕ್ ನೀಡಿದ್ದಾರೆ. ಅಭಿಷೇಕ್ ಅವರ ಸರ್ವಾಧಿಕಾರಿ ಧೋರಣೆಗೆ ಬ್ರೇಕ್ ಹಾಕಲು ಪಕ್ಷದ ಸಾಂಸ್ಥಿಕ ರಚನೆಯನ್ನೇ ಮಮತಾ ಬದಲಾಯಿಸಿದ್ದು, ಅವರ ರೆಕ್ಕೆಗಳನ್ನು ಕತ್ತರಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಸರ್ವಾಧಿಕಾರಕ್ಕೆ ಬ್ರೇಕ್: ಅಭಿಷೇಕ್‌ಗೆ ಚೆಕ್ ಅಂಡ್ ಬ್ಯಾಲೆನ್ಸ್!
ಶುಕ್ರವಾರ ಮಮತಾ ಅವರು ಪಕ್ಷದ ಉನ್ನತ ಮಟ್ಟದ ಪುನರ್ರಚನೆ ಮಾಡಿದ್ದಾರೆ. ಈ ಹೊಸ ಬದಲಾವಣೆಯಲ್ಲಿ ಅಭಿಷೇಕ್ ಬ್ಯಾನರ್ಜಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಸಲಾಗಿದೆಯಾದರೂ, ಅವರ ಅಧಿಕಾರವನ್ನು ಸೀಮಿತಗೊಳಿಸಲಾಗಿದೆ. ಅಭಿಷೇಕ್ ಅವರ ಒಂಟಿ ನಿರ್ಧಾರಗಳಿಗೆ ಕಡಿವಾಣ ಹಾಕಲು ಮಮತಾ ಅವರ ಅತ್ಯಂತ ಆಪ್ತರಾದ ರಾಜ್ಯಸಭಾ ಸದಸ್ಯರಾದ ಡೆರೆಕ್ ಒಬ್ರಿಯಾನ್ ಮತ್ತು ಡೋಲಾ ಸೇನ್ ಅವರನ್ನು ಜಂಟಿ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಇಬ್ಬರು ನಾಯಕರ ನೇಮಕ ಕೇವಲ ಆಡಳಿತಾತ್ಮಕ ಬದಲಾವಣೆಯಲ್ಲ. ಇದು ಅಭಿಷೇಕ್ ಅವರ ಏಕಪಕ್ಷೀಯ ನಿರ್ಧಾರಗಳ ಮೇಲೆ ಕಣ್ಣಿಡಲು ಮಮತಾ ಮಾಡಿರುವ ಚಾಣಾಕ್ಷ ತಂತ್ರವಾಗಿದೆ. ವಿಶೇಷವಾಗಿ ಡೋಲಾ ಸೇನ್ ಅವರು ಮಮತಾ ಅವರ ಕಣ್ಣು ಮತ್ತು ಕಿವಿಯಾಗಿ ಸಂಘಟನೆಯಲ್ಲಿ ಕೆಲಸ ಮಾಡಲಿದ್ದಾರೆ. ಇದರೊಂದಿಗೆ ಪಕ್ಷದಲ್ಲಿ ಅಧಿಕಾರ ಒಬ್ಬರ ಕೈಯಲ್ಲಿ ಇರದೆ, ಸಾಮೂಹಿಕ ನಾಯಕತ್ವಕ್ಕೆ ಮಮತಾ ಒತ್ತು ನೀಡಿದ್ದಾರೆ. ಇದಲ್ಲದೆ, ಅಭಿಷೇಕ್ ಅವರ ಆಪ್ತರಾಗಿದ್ದ ತೃಣಾಂಕುರ್ ಭಟ್ಟಾಚಾರ್ಯ ಅವರನ್ನು ವಿದ್ಯಾರ್ಥಿ ಘಟಕದ ಅಧ್ಯಕ್ಷ ಸ್ಥಾನದಿಂದ ಕಿತ್ತೆಸೆದು ಪ್ರಿಯಾಂಕಾ ಅಧಿಕಾರಿ ಅವರಿಗೆ ಜವಾಬ್ದಾರಿ ನೀಡಲಾಗಿದೆ.
ಭುಗಿಲೆದ್ದ 'ಭಾಯಿಪೋ ಚೋರ್' ಆಕ್ರೋಶ! ಸೋಲಿಗೆ ಕಾರಣವಾಯ್ತಾ ಕಾರ್ಪೊರೇಟ್ ಶೈಲಿ?
ಬಂಗಾಳದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಭಾಯಿಪೋ (ಸೋದರಸಳಿಯ) ಎಂದೇ ಕರೆಯಲಾಗುತ್ತದೆ. ಇತ್ತೀಚೆಗೆ ಸೋಲಿನ ಬಳಿಕ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಅಭಿಷೇಕ್ ಮೇಲೆ ಸಾರ್ವಜನಿಕರು ಮೊಟ್ಟೆ ಮತ್ತು ಕಲ್ಲುಗಳಿಂದ ದಾಳಿ ನಡೆಸಿದ್ದರು. ಹಳ್ಳಿ ಹಳ್ಳಿಗಳಲ್ಲಿ ಭಾಯಿಪೋ ಚೋರ್ ಎಂಬ ಘೋಷಣೆಗಳು ಕೇಳಿಬರುತ್ತಿವೆ. ಹೈವೇಗಳಲ್ಲಿ ನಡೆಯುತ್ತಿದ್ದ ಅಕ್ರಮ ವಸೂಲಿಗೆ ಸಾರ್ವಜನಿಕರು ಭಾಯಿಪೋ ಟ್ಯಾಕ್ಸ್ ಎಂದೇ ಹೆಸರಿಟ್ಟಿದ್ದರು. ಪ್ರಸ್ತುತ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಈ ವಸೂಲಿ ದಂಧೆಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಮತ್ತೊಂದೆಡೆ, ಪಕ್ಷದ ಹಿರಿಯ ನಾಯಕರಾದ ಕಾಕೋಲಿ ಘೋಷ್ ದಸ್ತಿದಾರ್ ಮತ್ತು ಕೃಷ್ಣೇಂದು ಚೌಧರಿ ಅವರು ಅಭಿಷೇಕ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಅಭಿಷೇಕ್ ಅವರು ತಂದಿದ್ದ ಐ-ಪ್ಯಾಕ್ ಎಂಬ ಕಾರ್ಪೊರೇಟ್ ರಾಜಕೀಯ ಸಲಹಾ ಸಂಸ್ಥೆಯು ತಳಮಟ್ಟದ ಕಾರ್ಯಕರ್ತರನ್ನು ಕಡೆಗಣಿಸಿತು. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಬೂತ್ ನಿರ್ವಹಣೆಯವರೆಗೆ ಎಲ್ಲವನ್ನೂ ಕಾರ್ಪೊರೇಟ್ ಶೈಲಿಯಲ್ಲಿ ನಡೆಸಿದ ಕಾರಣಕ್ಕೇ ಟಿಎಂಸಿ ಧೂಳೀಪಟವಾಯಿತು ಎಂದು ಹಿರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ಪಕ್ಷವನ್ನು ಹಂತ ಹಂತವಾಗಿ ನಾಶ ಮಾಡಿದರು. ಅವರ ದರ್ಪದ ಆಡಳಿತದಿಂದ ಶಾಸಕರು ಮತ್ತು ಹಿರಿಯ ನಾಯಕರು ಬೇಸತ್ತಿದ್ದರು ಎಂದು ಮಾಜಿ ಸಂಸದ ಜವಾಹರ್ ಸಿರ್ಕಾರ್ ಬೇಸರ ಹೊರಹಾಕಿದ್ದಾರೆ.
58 ಶಾಸಕರ ಬಂಡಾಯ ಮತ್ತು ನಕಲಿ ಸಹಿ ವಿವಾದ
ಟಿಎಂಸಿ ಪಕ್ಷದೊಳಗಿನ ಬಿಕ್ಕಟ್ಟು ಕೇವಲ ಮಾತಿಗೆ ಸೀಮಿತವಾಗಿಲ್ಲ. ವಿರೋಧ ಪಕ್ಷದ ನಾಯಕ ರಿತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ಬರೋಬ್ಬರಿ 58 ಶಾಸಕರು ಮಮತಾ ನಾಯಕತ್ವದ ವಿರುದ್ಧವೇ ಬಂಡಾಯ ಎದ್ದಿದ್ದಾರೆ. ವಿಧಾನಸಭಾ ಸ್ಪೀಕರ್‌ಗೆ ಕಳುಹಿಸಲಾದ ಪತ್ರವೊಂದರಲ್ಲಿ ಶಾಸಕರ ನಕಲಿ ಸಹಿಗಳನ್ನು ಮಾಡಲಾಗಿತ್ತು ಎಂಬ ಗಂಭೀರ ಆರೋಪ ಅಭಿಷೇಕ್ ಮೇಲಿದೆ. ಈ ನಕಲಿ ಸಹಿ ಹಗರಣದ ತನಿಖೆಯನ್ನು ಈಗ ಸಿಐಡಿ ನಡೆಸುತ್ತಿದೆ.
ಮಮತಾ ಅವರು ಅಭಿಷೇಕ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಸಿದ್ದಕ್ಕೆ ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಯಾರ ನಾಯಕತ್ವದಲ್ಲಿ ಪಕ್ಷ ನೆಲಕಚ್ಚಿತೋ ಅವರ ಮೇಲೆಯೇ ಮತ್ತೆ ನಂಬಿಕೆ ಇಡುವುದು ಜನರಿಗೆ ಮಾಡುವ ದ್ರೋಹ ಎಂದು ಗುಡುಗಿದ್ದಾರೆ.
ಹೋರಾಟದಿಂದ ಬೆಳೆದ 'ದೀದಿ' ಎಲ್ಲಿ? ಪ್ಯಾರಾಶೂಟ್ ಮೂಲಕ ಬಂದ 'ಭಾಯಿಪೋ' ಎಲ್ಲಿ?
ಮಮತಾ ಅವರು ಪಶ್ಚಿಮ ಬಂಗಾಳದಲ್ಲಿ ದೀದಿಯಾಗಿ ಬೆಳೆದಿದ್ದು ಒಂದೇ ದಿನದಲ್ಲಲ್ಲ. ಅವರು ಬೀದಿಗಿಳಿದು ಹೋರಾಟ ಮಾಡಿದವರು, ಪೊಲೀಸರ ಲಾಠಿ ಏಟು ತಿಂದವರು, ಸಿಂಗೂರು-ನಂದಿಗ್ರಾಮ ಚಳವಳಿಯ ಮೂಲಕ 34 ವರ್ಷಗಳ ಕಮ್ಯುನಿಸ್ಟ್ ಆಡಳಿತವನ್ನು ಕಿತ್ತೆಸೆದ ರಣಚಂಡಿ. ಅವರು ಅಧಿಕಾರವನ್ನು ಹೋರಾಟದ ಮೂಲಕ ಗಳಿಸಿಕೊಂಡರು.
ಆದರೆ ಅಭಿಷೇಕ್ ಬ್ಯಾನರ್ಜಿ ಅವರಿಗೆ ಅಂತಹ ಯಾವುದೇ ಹಿನ್ನೆಲೆ ಇಲ್ಲ. ಮಮತಾ ಅವರ ಸೋದರಸಳಿಯ ಎಂಬ ಒಂದೇ ಕಾರಣಕ್ಕೆ ಅವರನ್ನು ಪಕ್ಷದ ನಂ. 2 ಸ್ಥಾನದಲ್ಲಿ ತಂದು ಕೂರಿಸಲಾಯಿತು. ಇದು ಮುಕುಲ್ ರಾಯ್ ಮತ್ತು ಸುವೇಂದು ಅಧಿಕಾರಿ ಅವರಂತಹ ಕಷ್ಟಪಟ್ಟು ಪಕ್ಷ ಕಟ್ಟಿದ ನಾಯಕರಿಗೆ ತೀವ್ರ ಬೇಸರ ತರಿಸಿತ್ತು. ಇದೇ ಕಾರಣಕ್ಕೆ ಸುವೇಂದು ಅಧಿಕಾರಿ 2020 ರಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು, ಇಂದು ಅವರು ಬಂಗಾಳದ ಮುಖ್ಯಮಂತ್ರಿಯಾಗಿದ್ದಾರೆ.
ಸದ್ಯಕ್ಕೆ ಮಮತಾ ಅವರು ಮಧ್ಯಮ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಕುಟುಂಬದ ಪ್ರೀತಿಗಾಗಿ ಸೋದರಸಳಿಯನನ್ನು ಹುದ್ದೆಯಿಂದ ತೆಗೆದುಹಾಕದಿದ್ದರೂ, ಪಕ್ಷವನ್ನು ಬಚಾವ್ ಮಾಡಲು ಅವನ ಅಧಿಕಾರಕ್ಕೆ ದೊಡ್ಡ ಬೇಲಿ ಹಾಕಿದ್ದಾರೆ. ಮಮತಾ ಅವರ ಈ 'ಮಾಸ್ಟರ್ ಸ್ಟ್ರೋಕ್' ಪಕ್ಷದೊಳಗಿನ ಬಂಡಾಯವನ್ನು ತಣ್ಣಗಾಗಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕು,(ಏಜೆನ್ಸೀಸ್).