ದೀದಿಗೆ ರಾಜಕೀಯದ ಎಬಿಸಿಡಿಯೂ ಗೊತ್ತಿಲ್ಲ! ಮಗನ ಪಟ್ಟಾಭಿಷೇಕದ ಬಳಿಕ ಮಮತಾ ವಿರುದ್ಧ ಗುಡುಗಿದ ಶಿಶಿರ್ ಅಧಿಕಾರಿ!  
ದೇಶ

ದೀದಿಗೆ ರಾಜಕೀಯದ ಎಬಿಸಿಡಿಯೂ ಗೊತ್ತಿಲ್ಲ! ಮಗನ ಪಟ್ಟಾಭಿಷೇಕದ ಬಳಿಕ ಮಮತಾ ವಿರುದ್ಧ ಗುಡುಗಿದ ಶಿಶಿರ್ ಅಧಿಕಾರಿ! Suvendu Adhikari's Father

ಕೋಲ್ಕತ್ತಾ: ನನ್ನ ಮಗ ಕಾಲೇಜು ದಿನಗಳಿಂದಲೂ ಜನರ ಸೇವೆಗಾಗಿ ತನ್ನನ್ನು ಸಮರ್ಪಿಸಿಕೊಂಡವನು. ಇಂದು ಅವನು ಬಂಗಾಳದ ಮುಖ್ಯಮಂತ್ರಿಯಾಗಿರುವುದು ಇಡೀ ಕುಟುಂಬಕ್ಕೆ ಹೆಮ್ಮೆಯ ವಿಷಯ ಎಂದು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ತಂದೆ ಹಾಗೂ ಮಾಜಿ ಕೇಂದ್ರ ಸಚಿವ ಶಿಶಿರ್ ಅಧಿಕಾರಿ(Suvendu Adhikari's Father) ಹೇಳಿದ್ದಾರೆ.
ಬಿಜೆಪಿಯ ಐತಿಹಾಸಿಕ ವಿಜಯದ ನಂತರ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಶಿರ್ ಅಧಿಕಾರಿ, ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಲ್ಲದೆ, ಬಂಗಾಳದ ಭವಿಷ್ಯದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ.

ದೀದಿಗೆ ರಾಜಕೀಯದ ಎಬಿಸಿಡಿಯೂ ಗೊತ್ತಿಲ್ಲ!

ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಕಿಡಿಕಾರಿದ ಶಿಶಿರ್ ಅಧಿಕಾರಿ, ಮಮತಾ ಬ್ಯಾನರ್ಜಿಗೆ ರಾಜಕೀಯದ ABCD ಕೂಡ ತಿಳಿದಿಲ್ಲ. ಅವರ ಆಡಳಿತದಿಂದ ಬಂಗಾಳವು ದಶಕಗಳ ಕಾಲ ಹಿನ್ನಡೆ ಅನುಭವಿಸಿದೆ ಎಂದು ಗುಡುಗಿದ್ದಾರೆ. ಸುವೇಂದು ಅಧಿಕಾರಿ ಅವರು ನಂದಿಗ್ರಾಮದ ನಂತರ ಈಗ ಭವಾನಿಪುರದಲ್ಲೂ ಮಮತಾ ಅವರನ್ನು ಸೋಲಿಸಿರುವುದು ಅವರ ರಾಜಕೀಯ ಸಾಮರ್ಥ್ಯಕ್ಕೆ ಸಾಕ್ಷಿ ಎಂದು ಶಿಶಿರ್​ ಶ್ಲಾಘಿಸಿದ್ದಾರೆ.

ಅಕ್ರಮ ವಲಸಿಗರಿಗೆ ಗೇಟ್ ಪಾಸ್: ಕಠಿಣ ಸಂದೇಶ

ಹೊಸ ಬಿಜೆಪಿ ಸರ್ಕಾರದ ಆದ್ಯತೆಗಳ ಬಗ್ಗೆ ಮಾತನಾಡಿದ ಶಿಶಿರ್ ಅಧಿಕಾರಿ, ಬಂಗಾಳದಲ್ಲಿ ಅಕ್ರಮ ವಲಸಿಗರ ಹಾವಳಿಯನ್ನು ತಡೆಯುವುದು ಮೊದಲ ಕೆಲಸವಾಗಬೇಕು ಎಂದಿದ್ದಾರೆ.
ಅಕ್ರಮವಾಗಿ ಬಂಗಾಳಕ್ಕೆ ನುಸುಳಿರುವ ವಲಸಿಗರನ್ನು ಹೊರಹಾಕಬೇಕು. ಬಂಗಾಳವು ಕೇವಲ ರಾಷ್ಟ್ರೀಯತಾವಾದಿ ಚಿಂತನೆ ಉಳ್ಳವರ ನೆಲೆಯಾಗಬೇಕು. ನಮ್ಮ ಸರ್ಕಾರದ ಮೊದಲ ಆದ್ಯತೆ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸುವುದೇ ಆಗಿರುತ್ತದೆ ಎಂದು ಶಿಶಿರ್ ಸ್ಪಷ್ಟಪಡಿಸಿದ್ದಾರೆ.

ಮೋದಿ-ಷಾ ಮಾರ್ಗದರ್ಶನದಲ್ಲಿ 'ಸೋನಾರ್ ಬಾಂಗ್ಲಾ'

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರ ನೇತೃತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಶಿಶಿರ್ ಅಧಿಕಾರಿ, ಕೇಂದ್ರದ ಮಾರ್ಗದರ್ಶನದಲ್ಲಿ ಬಂಗಾಳವು ಈಗ ನಿಜವಾದ ಅರ್ಥದಲ್ಲಿ 'ಸೋನಾರ್ ಬಾಂಗ್ಲಾ' ಆಗಲಿದೆ. ಡಬಲ್ ಎಂಜಿನ್ ಸರ್ಕಾರದ ಲಾಭ ಇಂದಿನಿಂದ ಬಂಗಾಳದ ಜನತೆಗೆ ಸಿಗಲಿದೆ ಎಂದರು.

ಐತಿಹಾಸಿಕ ದಿನದ ವಿಶೇಷತೆ

ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಅವರ ಜಯಂತಿಯಂದೇ ಸುವೇಂದು ಅಧಿಕಾರಿ ಅವರು ಪದಗ್ರಹಣ ಮಾಡಿರುವುದು ವಿಶೇಷವಾಗಿದೆ. ಪ್ರಮಾಣವಚನಕ್ಕೂ ಮುನ್ನ 'X' ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಸುವೇಂದು ಅಧಿಕಾರಿ, ಇದನ್ನು ಐತಿಹಾಸಿಕ ಮುಂಜಾವು ಎಂದು ಬಣ್ಣಿಸಿದ್ದರು. ದಶಕಗಳ ಕಾಲದ ಕುಸಿತದ ನಂತರ ಬಂಗಾಳವು ಈಗ ಅಭಿವೃದ್ಧಿ, ಶಾಂತಿ ಮತ್ತು ಸಮೃದ್ಧಿಯ ಹಾದಿಗೆ ಮರಳಿದೆ ಎಂದು ಸುವೇಂದು ಘೋಷಿಸಿದ್ದಾರೆ.

ಗಣ್ಯರ ಉಪಸ್ಥಿತಿ

ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್, ನಿತಿನ್ ಗಡ್ಕರಿ ಮತ್ತು ಎನ್‌ಡಿಎ ಆಡಳಿತವಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಸುವೇಂದು ಅವರೊಂದಿಗೆ ದಿಲೀಪ್ ಘೋಷ್, ಅಗ್ನಿಮಿತ್ರಾ ಪಾಲ್ ಸೇರಿದಂತೆ ಐವರು ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಿದರು.
ಬಂಗಾಳದ ಈ ಮಹತ್ವದ ಬದಲಾವಣೆಯು ಭಾರತದ ರಾಜಕೀಯ ಭೂಪಟದಲ್ಲಿ ಪಶ್ಚಿಮ ಬಂಗಾಳದ ಸ್ಥಾನಮಾನವನ್ನು ಮತ್ತಷ್ಟು ಎತ್ತರಿಸಲಿದೆ ಎಂಬ ಆಶಯ ಎಲ್ಲೆಡೆ ವ್ಯಕ್ತವಾಗುತ್ತಿದೆ,(ಏಜೆನ್ಸೀಸ್​).