Satabdi Roy | ಮಾಜಿ ಸಿಎಂ ಮಮತಾ ಬ್ಯಾನರ್ಜಿ ಜೊತೆ ಸಂಸದೆ ಶತಬ್ದಿ ರಾಯ್  
ದೇಶ

ದೀದಿ ಬದಲಾಗಿಹೋದರು...ನಮ್ಮ ಧ್ವನಿ ಅಡಗಿಸಲಾಯಿತು; ಮಮತಾ ಬ್ಯಾನರ್ಜಿ ಆಡಳಿತ ವೈಖರಿಯನ್ನು ಜಗಜ್ಜಾಹೀರು ಮಾಡಿದ ಸಂಸದೆ ರಾಯ್! | Satabdi Roy

ನವದೆಹಲಿ: ಭ್ರಷ್ಟಾಚಾರದ ಆರೋಪ, ನಾಯಕರ ಅಸಮಾಧಾನ ಮತ್ತು ಪಕ್ಷದ ನಾಯಕತ್ವದ ಸರ್ವಾಧಿಕಾರಿ ಧೋರಣೆಯಿಂದಾಗಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನಲ್ಲಿ (TMC) ಆಂತರಿಕ ಸಂಘರ್ಷ ತೀವ್ರಗೊಂಡಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದ ವಿರುದ್ಧ ನಾಯಕರಲ್ಲಿ ವರ್ಷಗಳಿಂದ ಹೆಪ್ಪುಗಟ್ಟಿದ್ದ ಆಕ್ರೋಶ ಈಗ ಸ್ಫೋಟಗೊಂಡಿದೆ.
2009ರಿಂದಲೂ ಮಮತಾ ಬ್ಯಾನರ್ಜಿ ಅವರ ನೆರಳಿನಂತೆ ಜೊತೆಗಿದ್ದ ಪಕ್ಷದ ಹಿರಿಯ ನಾಯಕಿ ಹಾಗೂ ನಾಲ್ಕು ಬಾರಿಯ ಸಂಸದೆ ಶತಬ್ದಿ ರಾಯ್ ಎನ್​ಡಿಟಿವಿ ಜೊತೆ ಮಾತನಾಡುತ್ತಾ, ಮಮತಾ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ದೀದಿ ಬದಲಾಗಿಹೋದರು ಎಂದು ಬೇಸರ ವ್ಯಕ್ತಪಡಿಸಿರುವ ರಾಯ್​, ಕಳೆದ ಕೆಲವು ವರ್ಷಗಳಲ್ಲಿ ಮಮತಾ ಬ್ಯಾನರ್ಜಿ ಅವರ ವರ್ತನೆ ಮತ್ತು ಆಡಳಿತ ಶೈಲಿ ಸಂಪೂರ್ಣ ಬದಲಾಯಿತು. ಅವರೊಂದಿಗೆ ನನಗೆ ಭಾವನಾತ್ಮಕ ಸಂಬಂಧವಿದೆ ನಿಜ, ಆದರೆ ನನಗೆ ಜನರ ಕೆಲಸ ಮುಖ್ಯ. ಹಾಗಾಗಿಯೇ ನಾನು ಈ ಕಠಿಣ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಎನ್​​ಡಿಎ ಸೇರಲು ಸಜ್ಜಾದ್ರು 20ಕ್ಕೂ ಹೆಚ್ಚು ಸಂಸದರು!

ಬಿಜೆಪಿ ನಾಯಕರನ್ನು ಭೇಟಿಯಾಗಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (NDA) ಬೆಂಬಲ ಘೋಷಿಸಿರುವ ಸುಮಾರು ಒಂದು ಡಜನ್‌ಗೂ ಹೆಚ್ಚು ಬಂಡಾಯ ಟಿಎಂಸಿ ಸಂಸದರ ಗುಂಪಿಗೆ ಶತಬ್ದಿ ರಾಯ್ ಅವರನ್ನು ಉಪನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ತಾವು ತೃಣಮೂಲ ಕಾಂಗ್ರೆಸ್‌ನಿಂದ ಸಂಪೂರ್ಣವಾಗಿ ಹೊರನಡೆಯುತ್ತಿರುವುದಾಗಿ ಈ ನಾಯಕರು ಅಧಿಕೃತವಾಗಿ ಘೋಷಿಸಿದ್ದಾರೆ. ಬಂಡಾಯಗಾರರ ಮುಖ್ಯ ಸಚೇತಕರಾಗಿ (Chief Whip) ಆಯ್ಕೆಯಾಗಿರುವ ಮತ್ತೊಬ್ಬ ಹಿರಿಯ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್, ನಮ್ಮೊಂದಿಗೆ ಇರುವ ಬಂಡಾಯ ಸಂಸದರ ಸಂಖ್ಯೆ ಈಗ 20ಕ್ಕೆ ಏರಿಕೆಯಾಗಿದೆ ಎಂದಿದ್ದಾರೆ.

ಬಂಡಾಯಕ್ಕೆ ಮುಖ್ಯ ಕಾರಣವೇನು..?

ಪಕ್ಷದ ವಿರುದ್ಧ ದಂಗೆ ಏಳಲು ಕಾರಣ ಏನೆಂಬುದನ್ನು ಹಂಚಿಕೊಂಡ ಶತಬ್ದಿ ರಾಯ್, ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇರಲಿಲ್ಲ ಮತ್ತು ನಾಯಕತ್ವವನ್ನು ಸಂಪರ್ಕಿಸಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ದೂರಿದ್ದಾರೆ. ನಮ್ಮ ಧ್ವನಿಯನ್ನು ಯಾರೂ ಕೇಳಿಸಿಕೊಳ್ಳುತ್ತಿರಲಿಲ್ಲ ಎಂಬ ಕಾರಣಕ್ಕಾಗಿಯೇ ನಾನು ಪಕ್ಷ ಬಿಡುತ್ತಿದ್ದೇನೆ. ನನಗೆ ಜನರಿಗಾಗಿ ಕೆಲಸ ಮಾಡಬೇಕಿದೆ. ಆದರೆ ಟಿಎಂಸಿಯಲ್ಲಿ ಕೆಲವೇ ಕೆಲವು ಆಯ್ದ ನಾಯಕರಿಗೆ ಮಾತ್ರ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗುವ ಅವಕಾಶವಿತ್ತು, ಉಳಿದವರನ್ನು ಕಡೆಗಣಿಸಲಾಗುತ್ತಿತ್ತು ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಬಂಡಾಯ ಪಾಳಯದ ಮೂಲಗಳ ಪ್ರಕಾರ, ಮಮತಾ ಬ್ಯಾನರ್ಜಿ ಸರ್ಕಾರದಲ್ಲಿದ್ದ ಸಚಿವರು ಕೂಡ ಸಂಸದರಿಗೆ ಭೇಟಿಯಾಗಲು ಸಮಯ ನೀಡುತ್ತಿರಲಿಲ್ಲ ಮತ್ತು ಅವರ ಮನವಿಗಳನ್ನು ನಿರ್ಲಕ್ಷಿಸುತ್ತಿದ್ದರು ಎನ್ನಲಾಗಿದೆ. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಸಂಸದರನ್ನು ಸಂಪರ್ಕಿಸುತ್ತಿರಲಿಲ್ಲ. ಒಂದು ವೇಳೆ ಕಳೆದ ಕೆಲವು ವರ್ಷಗಳಲ್ಲಿ ಯಾರಾದರೂ ಧ್ವನಿ ಎತ್ತಲು ಪ್ರಯತ್ನಿಸಿದರೆ, ಅವರನ್ನು ಸುಮ್ಮನೆ ಕುಳಿತುಕೊಳ್ಳಿ ಎಂದು ಬೆದರಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಪಕ್ಷವು ಅಧಿಕಾರ ಕಳೆದುಕೊಂಡು ಅತ್ಯಂತ ದುರ್ಬಲ ಸ್ಥಿತಿಯಲ್ಲಿರುವಾಗ ಈ ವಿಷಯಗಳನ್ನು ಏಕೆ ಪ್ರಸ್ತಾಪಿಸುತ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಶತಬ್ದಿ ರಾಯ್, ಈಗ ಎಲ್ಲ ವಿಷಯಗಳು ಸಾರ್ವಜನಿಕವಾಗಿ ಸ್ಪಷ್ಟವಾಗುತ್ತಿವೆ. ತೃಣಮೂಲ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನಾಯಿತು ಎಂಬುದನ್ನು ನಾವು ನೋಡಿದ್ದೇವೆ. ಪರಿಸ್ಥಿತಿಯ ಗಂಭೀರತೆ ನನಗೆ ಈಗ ಅರ್ಥವಾಗಿದೆ ಮತ್ತು ನನ್ನ ಕ್ಷೇತ್ರದ ಜನರ ಹಿತದೃಷ್ಟಿಯಿಂದ ನಾನು ಈ ನಿರ್ಧಾರ ತೆಗೆದುಕೊಳ್ಳಲೇಬೇಕಾಗಿದೆ ಎಂದಿದ್ದಾರೆ. ಟಿಎಂಸಿಯಲ್ಲಿ ಮಿತಿಮೀರಿದ ಭ್ರಷ್ಟಾಚಾರವಿತ್ತು. ಕೆಳಹಂತದಿಂದ ಮೇಲ್ಮಟ್ಟದವರೆಗೆ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಕಂಡು ನನಗೆ ತೀವ್ರ ನಿರಾಶೆಯಾಗಿತ್ತು. ನನ್ನ ಇಮೇಜ್ ಈಗಾಗಲೇ ಅತ್ಯಂತ ಸ್ವಚ್ಛವಾಗಿದೆ ಎಂದರು. ಈಗಾಗಲೇ 20 ಸಂಸದರು ಎನ್‌ಡಿಎಗೆ ಬೆಂಬಲ ಸೂಚಿಸಿ ಲೋಕಸಭಾ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದು, ಬಂಗಾಳ ರಾಜಕಾರಣದಲ್ಲಿ ತೃಣಮೂಲ ಕಾಂಗ್ರೆಸ್ ಆಸ್ತಿತ್ವವೇ ಅಪಾಯಕ್ಕೆ ಸಿಲುಕಿದೆ(ಏಜೆನ್ಸೀಸ್​​).