ಸರಿಯಾಗಿ ಬ್ಲೌಸ್ ಹೊಲಿಯದ ಟೈಲರಿಂಗ್ ಕಂಪನಿಗೆ ಶಾಕ್ ಕೊಟ್ಟ ಕೋರ್ಟ್: ದಂಡದ ಮೊತ್ತ ಕೇಳಿದ್ರೆ ದಂಗಾಗ್ತೀರಾ! Blouse
- ತಪ್ಪು ಮಾಡಿದರೆ ಅಥವಾ ನಿಯಮಗಳನ್ನು ಉಲ್ಲಂಘಿಸಿದರೆ ನ್ಯಾಯಾಲಯ ದಂಡ ವಿಧಿಸುವುದು ಸಾಮಾನ್ಯ
- ಆದರೆ, ಇತ್ತೀಚೆಗೆ ಹೈದರಾಬಾದ್ನಲ್ಲಿ ಒಂದು ವಿಚಿತ್ರ ಘಟನೆ ವರದಿಯಾಗಿದೆ
- ರವಿಕೆಯನ್ನು ಸರಿಯಾಗಿ ಹೊಲಿಯದ ಕಾರಣ ಟೈಲರಿಂಗ್ ಕಂಪನಿಯೊಂದಕ್ಕೆ ದಂಡ ವಿಧಿಸಲಾಗಿದೆ
- ಇಂಥದ್ದೊಂದು ತೀರ್ಪನ್ನು ಹೈದರಾಬಾದ್ ಜಿಲ್ಲಾ ಗ್ರಾಹಕ ಆಯೋಗ ನೀಡಿದೆ
ಹೈದರಾಬಾದ್: ಯಾರಾದರೂ ಏನಾದರೂ ತಪ್ಪು ಮಾಡಿದರೆ ಅಥವಾ ನಿಯಮಗಳನ್ನು ಉಲ್ಲಂಘಿಸಿದರೆ ನ್ಯಾಯಾಲಯ ದಂಡ ವಿಧಿಸುವುದು ಸಾಮಾನ್ಯ ಅನ್ನೋದು ನಿಮಗೆಲ್ಲರಿಗೂ ತಿಳಿದೇ ಇದೆ. ಆದರೆ, ಇತ್ತೀಚೆಗೆ ಒಂದು ವಿಚಿತ್ರ ಘಟನೆ ವರದಿಯಾಗಿದೆ. ಅದೇನೆಂದರೆ, ರವಿಕೆಯನ್ನು ( Blouse ) ಸರಿಯಾಗಿ ಹೊಲಿಯದ ಕಾರಣ ಟೈಲರಿಂಗ್ ಕಂಪನಿಯೊಂದಕ್ಕೆ ಬರೋಬ್ಬರಿ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಇಂಥದ್ದೊಂದು ತೀರ್ಪನ್ನು ಹೈದರಾಬಾದ್ ಜಿಲ್ಲಾ ಗ್ರಾಹಕ ಆಯೋಗ ನೀಡಿದೆ. ಅಲ್ಲದೆ, ಈ ಪ್ರಕರಣದ ವೆಚ್ಚವಾಗಿ 10 ಸಾವಿರ ರೂ. ಹೆಚ್ಚುವರಿಯಾಗಿ ಪಾವತಿಸಲು ಕೋರ್ಟ್ ಆದೇಶ ಹೊರಡಿಸಿದೆ.
ಈ ಪ್ರಕರಣದ ವಿವರಣೆಗೆ ಬರುವುದಾದರೆ, ಗಾಂಧಿನಗರದ ಮುಶೀರಾಬಾದ್ ನಿವಾಸಿಯಾಗಿರುವ ಕೆ. ಅಮೃತ ವರ್ಷಿಣಿ, ತನ್ನ ಸಹೋದರನ ಮದುವೆಗೆ ಕಾಂಚಿವರಂ ರೇಷ್ಮೆ ಸೀರೆಯನ್ನು ಉಡುಗೊರೆಯಾಗಿ ಪಡೆದರು. ಅದಕ್ಕೆ ತಕ್ಕಂತೆ ರವಿಕೆ ಹೊಲಿಸಲು 2025, ಜನವರಿ 25 ರಂದು ಬಂಜಾರ ಹಿಲ್ಸ್‌ನಲ್ಲಿರುವ 'ಬಿ ಡಿಸೈನ್ ಫಾರ್ ಯು' ಎಂಬ ಟೈಲರಿಂಗ್ ಕಂಪನಿಗೆ ಬ್ಲೌಸ್ ಮೆಟೀರಿಯಲ್ ಕೊಂಡೊಯ್ದರು. ಫೆಬ್ರವರಿ 12ರ ಸಂಜೆಯೊಳಗೆ ಜಾಕೆಟ್ ಹೊಲಿಯಬೇಕು ಮತ್ತು ಅದನ್ನು ನಮಗೆ ತಲುಪಿಸಬೇಕೆಂದು ಅಮೃತ ಅವರು ಆ ಕಂಪನಿಗೆ ತಿಳಿಸಿದರು. ಅಲ್ಲದೆ, ಮುಂಗಡವಾಗಿ 2,500 ರೂ.ಗಳನ್ನು ಪಾವತಿಸಿದರು.
ಈ ಹಿನ್ನೆಲೆಯಲ್ಲಿ ಫೆಬ್ರವರಿ 5 ರಂದು ಕಂಪನಿಯ ಸಿಬ್ಬಂದಿಯು ಅಮೃತ ವರ್ಷಿಣಿಯವರಿಗೆ ಕರೆ ಮಾಡಿ, ನಾವು ಬ್ಲೌಸ್ ಮೆಟೀರಿಯಲ್ ಅನ್ನು ತಪ್ಪಾಗಿ ಕತ್ತರಿಸಿದ್ದೇವೆ, ಕ್ಷಮಿಸಿ ಎಂದು ಕೇಳಿದರು. ಇದರಿಂದ ಆತಂಕಕ್ಕೊಳಗಾದ ಅಮೃತ ವರ್ಷಿಣಿಯವರು, ಇದಕ್ಕೆ ಪರಿಹಾರ ಏನು ಅಂತ ವಿಚಾರಿಸಿದಾಗ, ಆ ತಪ್ಪನ್ನು ಯಾರೂ ಕಂಡುಹಿಡಿಯದ ರೀತಿಯಲ್ಲಿ ಮಗ್ಗದ ಕೆಲಸ ಮಾಡಿ ಮತ್ತೆ ಜೋಡಿಸಿಕೊಡುವುದಾಗಿ ಸಿಬ್ಬಂದಿ ಭರವಸೆ ನೀಡಿದರು. ಆದರೆ ಅಂತಿಮವಾಗಿ, ಕಂಪನಿಯು ತಾನು ನೀಡಿದ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ.
ಅಮೃತ ವರ್ಷಿಣಿಗೆ ನೀಡಿದ್ದ ರವಿಕೆ ಮದುವೆಗೆ ಧರಿಸಲು ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಇದರಿಂದ ಕೋಪಗೊಂಡ ಅಮೃತ ಅವರು ಕಂಪನಿಯು ತನಗೆ ಹೊಸ ಸೀರೆ ನೀಡಬೇಕು ಅಥವಾ ಸೀರೆಯ ಬೆಲೆಯನ್ನು ನನಗೆ ಪಾವತಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಅಮೃತ ಅವರ ಬೇಡಿಕೆಗೆ ಕಂಪನಿ ಒಪ್ಪಿಕೊಂಡಿತು. ಆದರೆ, ಆ ಬೇಡಿಕೆಯನ್ನು ಕಂಪನಿ ಪೂರೈಸಲಿಲ್ಲ. ಅಲ್ಲದೆ, ಎಷ್ಟೇ ಕರೆ ಮಾಡಿದರೂ ಅದಕ್ಕೆ ಉತ್ತರಿಸಲೇ ಇಲ್ಲ.
ಟೈಲರಿಂಗ್ ಕಂಪನಿಯ ವರ್ತನೆಗೆ ಬೇಸತ್ತ ಅಮೃತ, ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಗ್ರಾಹಕ ಆಯೋಗವನ್ನು ಸಂಪರ್ಕಿಸಿದರು. ವಾಟ್ಸ್ಆ್ಯಪ್ ಚಾಟ್‌ಗಳು, ಫೋಟೋಗಳು, ಸೀರೆ ಮತ್ತು ರಶೀದಿಗಳನ್ನು ಸಾಕ್ಷಿಯಾಗಿ ಪ್ರಸ್ತುತಪಡಿಸಿದರು. ಎಲ್ಲವನ್ನು ಪರಿಶೀಲಿಸಿದ ಆಯೋಗ, ಟೈಲರಿಂಗ್ ಕಂಪನಿ ತಪ್ಪು ಮಾಡಿದೆ ಎಂದು ನಿರ್ಣಯಿಸಿತು. ಅಮೃತ ವರ್ಷಿಣಿ ಅವರಿಗೆ ದಂಡದ ರೂಪದಲ್ಲಿ 1 ಲಕ್ಷ ರೂ. ಮತ್ತು ಪ್ರಕರಣದ ವೆಚ್ಚವಾಗಿ 10 ಸಾವಿರ ರೂ. ಪಾವತಿಸಬೇಕೆಂದು ತೀರ್ಪು ನೀಡಿತು, (ಏಜೆನ್ಸೀಸ್).