ಟಿವಿಕೆ ಪಕ್ಷದ ನಾಯಕ ವಿಜಯ್ 
ದೇಶ

ತಮಿಳುನಾಡಿನಲ್ಲಿ ವಿಜ್ಹಲ್​ ಪೋಡು ಸಕ್ಸಸ್​ಗೆ ಪ್ರಣಾಳಿಕೆಯೇ ಕಾರಣ! ಅಷ್ಟಕ್ಕೂ ಜನರಿಗೆ ವಿಜಯ್ ಕೊಟ್ಟ ಭರವಸೆಗಳೇನು? ​

ಪ್ರಮುಖ ಮುಖ್ಯಾಂಶಗಳು

  • ತಮಿಳು ರಾಜಕೀಯದಲ್ಲಿ ಹೊಸ ಅಧಿಪತ್ಯ ಸಾಧಿಸಿರುವ ವಿಜಯ್​
  • ಚೊಚ್ಚಲ ಚುನಾವಣೆಯಲ್ಲೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ​
  • ತಮಿಳುನಾಡು ಮತದಾರರನ್ನು ಸೆಳೆದ ವಿಜಯ್​ಗೆ ಚುನಾವಣಾ ಪ್ರಣಾಳಿಕೆಯೇ ಸಕ್ಸಸ್​?
TVK Manifesto: ತಮಿಳು ರಾಜಕೀಯದಲ್ಲಿ ಹೊಸ ಅಧಿಪತ್ಯ ಸಾಧಿಸಿರುವ ವಿಜಯ್​ ನೇತೃತ್ವದ ಟಿವಿಕೆ, ತನ್ನ ಚೊಚ್ಚಲ ಚುನಾವಣೆಯಲ್ಲೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ದೇಶದ ರಾಜಕೀಯ ವಲಯದಲ್ಲಿ ದೊಡ್ಡ ಸೆನ್ಸೇಷನ್​ ಕ್ರಿಯೇಟ್​ ಮಾಡಿದೆ. ಡಿಎಂಕೆ, ಎಐಡಿಎಂಕೆಯಂತಹ ಘಟಾನುಘಟಿ ಪಕ್ಷಗಳನ್ನೇ ಹಿಂದಿಕ್ಕಿ, ಹೆಚ್ಚಿನ ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿದ ವಿಜಯ್​ ಪಕ್ಷಕ್ಕೆ ತಮಿಳು ಚಿತ್ರರಂಗ, ಹಲವು ಕ್ಷೇತ್ರಗಳ ಗಣ್ಯರು ಮತ್ತು ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ತಮಿಳುನಾಡಿನ ಪೆರಂಬೂರು (ಚೆನ್ನೈ) ಮತ್ತು ತಿರುಚಿ (ಪೂರ್ವ) ಕ್ಷೇತ್ರಗಳಿಂದ ಚುನಾವಣಾ ಕಣಕ್ಕಿಳಿದಿದ್ದ ವಿಜಯ್​, ಈಗ ಎರಡರಲ್ಲೂ ಜಯ ಸಾಧಿಸಿರುವುದು ನಿಜಕ್ಕೂ ಗಮನಾರ್ಹ. ತನ್ನ ಪಕ್ಷದಿಂದ ಗೆದ್ದ ಸಾಮಾನ್ಯರನ್ನು ಕೊಂಡಾಡಿರುವ ದಳಪತಿ, ಈಗ ತಮಿಳುನಾಡಿನಲ್ಲಿ ತಮ್ಮ ಸರ್ಕಾರ ರಚಿಸಲು ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ಸ್ಟಾಲಿನ್​ರಂತಹ ಪ್ರಭಾವಿ ರಾಜಕಾರಣಿಯನ್ನೇ ಮೊದಲ ಚುನಾವಣೆಯಲ್ಲಿ ಹಿಂದಿಕ್ಕಲು ವಿಜಯ್​ಗೆ ಹೇಗೆ ಸಾಧ್ಯವಾಯಿತು? ಇದರ ಹಿಂದೆ ಏನಿದೆ? ಯಾವುದು ಅವರಿಗೆ ವರವಾಯಿತು? ಎಂಬ ಹತ್ತು ಹಲವು ಪ್ರಶ್ನೆಗಳು ಸದ್ಯ ಅನೇಕರಲ್ಲಿ ಕಾಡತೊಡಗಿದೆ.

ಲೋಕಲ್​ ಸ್ಟಾರ್​

ಈ ನಿಟ್ಟಿನಲ್ಲಿ, ಬಹುತೇಕರ ತಲೆಗೆ ಮೊದಲು ಬಂದಿದ್ದೇ ಚುನಾವಣಾ ಕಣದಲ್ಲಿ ನಟ ವಿಜಯ್ ಅವರು ಘೋಷಿಸಿದ ಪ್ರಣಾಳಿಕೆ. ಇದರಲ್ಲಿ ಟಿವಿಕೆ ಮುಖ್ಯಸ್ಥ ತಮಿಳುನಾಡು ಜನತೆಗೆ ನೀಡಿದ ಭರವಸೆಗಳೇ ಸದ್ಯ ಹೈಲೈಟ್​. ಅಷ್ಟಕ್ಕೂ ಚುನಾವಣಾ ಪರ್ವದಲ್ಲಿ ಎಲ್ಲರನ್ನೂ ಪ್ರೀತಿಯಿಂದಲೇ ಮಾತನಾಡಿಸಿ, ಅಪ್ಪುಗೆ ನೀಡಿ, ಸ್ಟಾರ್​ ನಟ ಎಂಬ ಪಟ್ಟವನ್ನು ಪಕ್ಕಕ್ಕಿಟ್ಟು ಕುಣಿದ ವಿಜಯ್​, ಪ್ರಣಾಳಿಕೆಯಲ್ಲಿ ತಿಳಿಸಿದ್ದೇನು? ಆ ಭರವಸೆಗಳು ಯಾವುವು? ಮತದಾರರನ್ನು ಆಕರ್ಷಿಸಿದ್ದೇನು? ಎಂಬುದಕ್ಕೆ ಇಲ್ಲಿದೆ ನೋಡಿ ಉತ್ತರ.

ತಿಂಗಳಿಗೆ 2,500 ರೂ.

ಟಿವಿಕೆ ಚುನಾವಣಾ ಪ್ರಣಾಳಿಕೆಯ ವಿಷಯಕ್ಕೆ ಬಂದರೆ, 60 ವರ್ಷದೊಳಗಿನ ಮಹಿಳೆಯರಿಗೆ ತಿಂಗಳಿಗೆ 2,500 ರೂ. ಆರ್ಥಿಕ ನೆರವು, ಮದುವೆಗೆ 8 ಗ್ರಾಂ ಚಿನ್ನ ಮತ್ತು ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಆರು ಉಚಿತ ಅಡುಗೆ ಅನಿಲ ಸಿಲಿಂಡರ್‌ಗಳು ಸೇರಿದಂತೆ ಹಲವಾರು ಭರವಸೆಗಳನ್ನು ವಿಜಯ್​ ನೀಡಿದ್ದಾರೆ. ಇದನ್ನು ಇನ್ನೂ ವಿವರವಾಗಿ ತಿಳಿಯೋಣ ಬನ್ನಿ.
ನಟನಾಗಿ ರಾಜಕೀಯ ಪ್ರವೇಶಿಸಿದ ವಿಜಯ್, ಬಡ ವಧುಗಳಿಗೆ ಚಿನ್ನ ಮತ್ತು ಗುಣಮಟ್ಟದ ರೇಷ್ಮೆ ಸೀರೆಗಳು ಮತ್ತು ಮಹಿಳೆಯರು ನಡೆಸುವ ಸ್ವಸಹಾಯ ತಂಡಗಳಿಗೆ (ಎಸ್‌ಎಚ್‌ಜಿ) 5 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ, ಪಕ್ಷ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ರಹಿತ ಉತ್ತಮ ಆಡಳಿತ, ವಿದ್ಯಾರ್ಥಿಗಳು ಶಾಲೆ ಬಿಡುವುದನ್ನು ತಡೆಯಲು, ಸರ್ಕಾರಿ ಹಾಗೂ ರಾಜ್ಯ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ತಾಯಂದಿರು ಅಥವಾ ಪೋಷಕರಿಗೆ ವಾರ್ಷಿಕವಾಗಿ 15,000 ರೂ. ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.

ಉನ್ನತ ಶಿಕ್ಷಣ ಸಾಲ

ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಕೀರ್ತಿಗೆ ಪಾತ್ರರಾದ ಪ್ರಮುಖ ನಾಯಕ ಕೆ. ಕಾಮರಾಜ್ ಅವರ ಹೆಸರಿನಲ್ಲಿ 100 ವಿಶೇಷ ವಸತಿ ಶಾಲೆಗಳನ್ನು ಹೆಸರಿಸುವುದಾಗಿ ವಿಜಯ್ ಭರವಸೆ ಕೊಟ್ಟಿದ್ದಾರೆ. ಇದರೊಟ್ಟಿಗೆ, 20 ಲಕ್ಷ ರೂ.ವರೆಗೆ ಉನ್ನತ ಶಿಕ್ಷಣ ಸಾಲಗಳನ್ನು ನೀಡುವುದು, ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ವಿಶ್ವವಿದ್ಯಾಲಯ ಮತ್ತು ನಗರವನ್ನು ಆಧುನಿಕ ಟೆಕ್ನಾಲಜಿಯ ಸಹಾಯದಿಂದ ಸ್ಥಾಪಿಸುವುದಾಗಿಯೂ ಹೇಳಿದ್ದಾರೆ.

ಕಬ್ಬಿಗೆ ಟನ್‌ಗೆ 4,500 ರೂ.

ಪ್ರಣಾಳಿಕೆಯು ಕೃಷಿ ಕಲ್ಯಾಣಕ್ಕೂ ಹೆಚ್ಚಿನ ಆದ್ಯತೆಯನ್ನು ನೀಡಿದ್ದು, ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರ ಕೃಷಿ ಸಹಕಾರಿ ಬೆಳೆ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಮತ್ತು ಐದು ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರಿಗೆ ಶೇ.50ರಷ್ಟು ಮನ್ನಾ ಮಾಡುವುದಾಗಿ ತಿಳಿಸಲಾಗಿದೆ. ಇದಲ್ಲದೆ, ಭತ್ತಕ್ಕೆ ಕ್ವಿಂಟಾಲ್‌ಗೆ 3,500 ರೂ. ಮತ್ತು ಕಬ್ಬಿಗೆ ಟನ್‌ಗೆ 4,500 ರೂ. ಕನಿಷ್ಠ ಬೆಂಬಲ ಬೆಲೆ (MSP) ನೀಡುವುದಾಗಿಯೂ ಪಕ್ಷ ಭರವಸೆ ನೀಡಿದೆ.

ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 4,000

ಐದು ಲಕ್ಷ ಹೊಸ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಸ್ಟೈಪೆಂಡಿಯರಿ (Stipend Fund) ಇಂಟರ್ನ್‌ಶಿಪ್‌ಗಳನ್ನು ನೀಡುವ ಮೂಲಕ ಯುವಜನರ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವುದಾಗಿ ವಿಜಯ್ ಮಹತ್ವದ ಭರವಸೆಯನ್ನು ನೀಡಿದ್ದಾರೆ. ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 4,000 ರೂ.ಗಳ ಆರ್ಥಿಕ ನೆರವು ನೀಡಲಾಗುವುದು, ಸರ್ಕಾರಿ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಪರಿಶೀಲಿಸುವುದಾಗಿ ಮತ್ತು ದಾದಿಯರು ಸೇರಿ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ ವಿಜಯ್​.
ಇನ್ನು ಆರೋಗ್ಯ ವಲಯದಲ್ಲಿ, ತಮಿಳುನಾಡನ್ನು ಮಾದಕ ದ್ರವ್ಯ ಮುಕ್ತಗೊಳಿಸುವುದಾಗಿ ಗಟ್ಟಿಯಾಗಿ ಹೇಳಿರುವ ಅವರು, ಆಸ್ಪತ್ರೆಗಳನ್ನು ಆಧುನೀಕರಿಸುವುದು, ಉಚಿತ ವಾರ್ಷಿಕ ಆರೋಗ್ಯ ತಪಾಸಣೆಗಳನ್ನು ಒದಗಿಸುವುದು ಮತ್ತು 25 ಲಕ್ಷ ರೂ. ಕುಟುಂಬ ಆರೋಗ್ಯ ವಿಮಾ ಯೋಜನೆಯನ್ನು ಪರಿಚಯಿಸುವುದಾಗಿ ತಮಿಳುನಾಡಿನ ಜನತೆಗೆ ಭರವಸೆ ಕೊಟ್ಟಿದ್ದಾರೆ.

ಮಾಸಿಕ 3 ಸಾವಿರ ರೂ. ಪಿಂಚಣಿ

ವೃದ್ಧರು ಮತ್ತು ಅಂಗವಿಕಲರಿಗೆ ಮಾಸಿಕ 3,000 ರೂ. ಪಿಂಚಣಿ, ಉಚಿತ ವಿದ್ಯುತ್ 200 ಯೂನಿಟ್, ಪಟ್ಟಾ (ಭೂ ಪತ್ರಗಳು) ಕ್ರಮಬದ್ಧಗೊಳಿಸುವಿಕೆ ಮತ್ತು ಎಲ್ಲಾ ಮನೆಗಳಿಗೆ ಶೇ.100ರಷ್ಟು ಪೈಪ್ ಮೂಲಕ ಕುಡಿಯುವ ನೀರಿನ ಪೂರೈಕೆಯನ್ನು ಸಹ ಪ್ರಣಾಳಿಕೆ ಒಳಗೊಂಡಿದೆ. ಜಾತಿ ಪ್ರಮಾಣಪತ್ರಗಳು ಮತ್ತು ಭೂ ಹಕ್ಕುಪತ್ರಗಳಂತಹ ಅಗತ್ಯ ಸರ್ಕಾರಿ ಸೇವೆಗಳನ್ನು ಕಟ್ಟುನಿಟ್ಟಾಗಿ ವ್ಯಾಖ್ಯಾನಿಸಲಾದ ಸಮಯದ ಚೌಕಟ್ಟಿನೊಳಗೆ ಒದಗಿಸಲು ಕಾನೂನು ಖಾತರಿಗಳನ್ನು ಒದಗಿಸುವಂತಹ ಕೆಲವು ನೀತಿ ಕ್ರಮಗಳನ್ನು ಟಿವಿಕೆ ಉಲ್ಲೇಖಿಸಿದೆ. ಜೊತೆಗೆ ಕೇವಲ 21 ದಿನಗಳಲ್ಲಿ ವ್ಯಾಪಾರ ಪರವಾನಗಿಯನ್ನು ನೀಡಲಾಗುವುದು ಎಂದು ವಿಜಯ್ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ,(ಏಜೆನ್ಸೀಸ್).