Student Protests | ಜಂತರ್ ಮಂತರ್‌ನ ವಿಡಿಯೋ ವೈರಲ್, ರಾಂಚಿಯ ಕಣ್ಣೀರು ಕಾಣದಾಗಿದ್ದೇಕೆ..?
ಸಾಮಾಜಿಕ ಜಾಲತಾಣಗಳು ಕೇವಲ ಸುದ್ದಿ ಹಂಚಿಕೊಳ್ಳುವ ವೇದಿಕೆಗಳಷ್ಟೇ ಆಗುಳಿದಿವೆಯೇ ಅಥವಾ ದೇಶದ ಚಳವಳಿಗಳ ಭವಿಷ್ಯ ನಿರ್ಧರಿಸುವ ಹಿನ್ನೆಲೆ ನಿರ್ದೇಶಕನಾಗಿ ಕೆಲಸ ಮಾಡುತ್ತಿವೆಯೇ..?. ಜಾರ್ಖಂಡ್ ವಿದ್ಯಾರ್ಥಿಗಳ ಹೋರಾಟ ಮತ್ತು ದೆಹಲಿಯ ಜಂತರ್ ಮಂತರ್ ಪ್ರತಿಭಟನೆಯನ್ನು ಇನ್‌ಸ್ಟಾಗ್ರಾಮ್ ನಡೆಸಿಕೊಂಡ ರೀತಿ ನೋಡಿದರೆ ಈ ಅನುಮಾನ ಬಲವಾಗುತ್ತದೆ. ಒಂದೇ ಸ್ವರೂಪದ ವಿದ್ಯಾರ್ಥಿ ಹೋರಾಟಗಳಾಗಿದ್ದರೂ, ದೆಹಲಿಯ ಪ್ರತಿಭಟನೆ ಇನ್‌ಸ್ಟಾಗ್ರಾಮ್ ಆಲ್ಗರಿದಮ್‌ನಲ್ಲಿ ಟ್ರೆಂಡಿಂಗ್ ಸೆನ್ಸೇಷನ್ ಆದರೆ, ಜಾರ್ಖಂಡ್‌ನ ರಕ್ತಸಿಕ್ತ ಲಾಠಿಚಾರ್ಜ್ ಡಿಜಿಟಲ್ ಜಗತ್ತಿನಲ್ಲಿ ಕಣ್ಮರೆಯಾಗಿದೆ.
ಎನ್‌ಡಿಟಿವಿಯ ಇಂಡಿಯಾ ಮ್ಯಾಟರ್ಸ್ ನಡೆಸಿದ ದತ್ತಾಂಶ ವಿಶ್ಲೇಷಣೆ, ಸೋಷಿಯಲ್ ಮೀಡಿಯಾ ಆಲ್ಗರಿದಮ್‌ನ ನೈಜ ಮುಖ ಮತ್ತು ಅದರ ಪ್ರಾದೇಶಿಕ ತಾರತಮ್ಯವನ್ನು ಬಿಚ್ಚಿಟ್ಟಿದೆ. ಡೇಟಾಬೀಂಗ್ಸ್ ಸಂಸ್ಥೆಯ ದತ್ತಾಂಶದ ಪ್ರಕಾರ, ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಸನ್ನಿವೇಶದಲ್ಲಿ ಬರೋಬ್ಬರಿ ಐದು ಸಾವಿರಕ್ಕೂ ಹೆಚ್ಚು ಪೋಸ್ಟ್‌ಗಳು ಹಂಚಿಕೆಯಾಗಿದ್ದವು. ಆದರೆ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಲಾಠಿಚಾರ್ಜ್ ಕುರಿತು ಬಂದಿದ್ದು ಕೇವಲ ಸಾವಿರದಷ್ಟು ಪೋಸ್ಟ್‌ಗಳು ಮಾತ್ರ.
ತಲುಪಿದ ವ್ಯಾಪ್ತಿಯಲ್ಲೂ ಬೃಹತ್ ವ್ಯತ್ಯಾಸ ಕಂಡುಬಂದಿದ್ದು, ದೆಹಲಿ ಪ್ರತಿಭಟನೆಯ ಪೋಸ್ಟ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 1.8 ಕೋಟಿ ಜನರನ್ನು ತಲುಪಿದರೆ, ಜಾರ್ಖಂಡ್ ಪ್ರತಿಭಟನೆಯ ವೀಡಿಯೋಗಳು ತಲುಪಿದ್ದು ಕೇವಲ 6 ಲಕ್ಷ ಜನರನ್ನು ಮಾತ್ರ!. ಇಷ್ಟೇ ಅಲ್ಲದೆ, ಪ್ರಮುಖ ಇನ್‌ಫ್ಲುಯೆನ್ಸರ್‌ಗಳು ಹಾಗೂ ಕ್ರಿಯೇಟರ್‌ಗಳು ಸಹ ದೆಹಲಿಯ ವಿಷಯಕ್ಕೇ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು. ಇನ್‌ಸ್ಟಾಗ್ರಾಮ್‌ನ ಟಾಪ್ 100 ಖಾತೆಗಳಲ್ಲಿ ಪ್ರತಿ ಮೂರರಲ್ಲಿ ಒಂದು ವೀಡಿಯೋ ದೆಹಲಿ ಪ್ರತಿಭಟನೆಯದ್ದಾಗಿತ್ತು. ಆದರೆ ಜಾರ್ಖಂಡ್ ವಿಷಯದಲ್ಲಿ ಅವರ ಪಾಲ್ಗೊಳ್ಳುವಿಕೆ ಶೇಕಡಾ ಮೂರಕ್ಕೆ ಸೀಮಿತವಾಗಿತ್ತು.
ದೆಹಲಿ ಪ್ರತಿಭಟನಾಕಾರರು ಟ್ರೆಂಡಿಂಗ್ ಆಡಿಯೋ ಮತ್ತು ಹ್ಯಾಶ್‌ಟ್ಯಾಗ್ ಬಳಸಿದ್ದರಿಂದ ಆಲ್ಗರಿದಮ್ ಅದನ್ನು ಸುಲಭವಾಗಿ ಪ್ರಚಾರ ಮಾಡಿತು. ಆದರೆ ರಾಂಚಿಯ ವಿದ್ಯಾರ್ಥಿ ಧ್ವನಿ ಈ ಡಿಜಿಟಲ್ ತಂತ್ರಗಳಿಗೆ ಹೊಂದಿಕೊಳ್ಳಲಾಗದೆ ಕಣ್ಮರೆಯಾಯಿತು.
ಈ ವರದಿಯ ಬಳಿಕ ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು ಮೆಟಾ ಸಂಸ್ಥೆಯ ನೀತಿಯನ್ನು ತೀವ್ರವಾಗಿ ಖಂಡಿಸಿದ್ದು, ರಾಜಧಾನಿಯಲ್ಲಿ ನಡೆಯುವ ಅಭಿಯಾನಗಳಿಗೆ ಆಲ್ಗರಿದಮ್ ಬೂಸ್ಟ್ ನೀಡಿ, ಜಾರ್ಖಂಡ್‌ನಂತಹ ರಾಜ್ಯಗಳ ನೈಜ ವಿದ್ಯಾರ್ಥಿ ಚಳವಳಿಗಳನ್ನು ಮುಚ್ಚಿಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಂತಿಮವಾಗಿ ಸೋಷಿಯಲ್ ಮೀಡಿಯಾ ಪ್ರಜಾಪ್ರಭುತ್ವದ ಮುಕ್ತ ವೇದಿಕೆಯಾಗಿದೆಯೇ ಅಥವಾ ಆಲ್ಗರಿದಮ್‌ಗಳೇ ದೇಶದ ಚರ್ಚೆಗಳನ್ನು ನಿಯಂತ್ರಿಸುತ್ತಿವೆಯೇ ಎಂಬ ದೊಡ್ಡ ಪ್ರಶ್ನೆ ಈಗ ಮೂಡಿದೆ(ಏಜೆನ್ಸೀಸ್).