72 Hour Ultimatum | 72 ಗಂಟೆಗಳ ಅಂತಿಮ ಎಚ್ಚರಿಕೆಗೆ ಮಣಿಯಿತೇ ಕೇಂದ್ರ ಸರ್ಕಾರ..? ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿಂದಿನ ಇನ್‌ಸೈಡ್ ರಿಪೋರ್ಟ್ ಇಲ್ಲಿದೆ!
ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ತಮ್ಮ ಹುದ್ದೆಗೆ ನೀಡಿದ ರಾಜೀನಾಮೆಯು ವಿದ್ಯಾರ್ಥಿಗಳು ಮತ್ತು ಕಾಕ್ರೋಚ್ ಜನತಾ ಪಾರ್ಟಿಗೆ ಸಿಕ್ಕ ಬಹುದೊಡ್ಡ ವಿಜಯವಾಗಿದೆ. ಶುಕ್ರವಾರದವರೆಗೂ ಸಚಿವರೊಬ್ಬರನ್ನು ಕೈಬಿಡುವ ಯಾವುದೇ ಸುಳಿವನ್ನು ಕೇಂದ್ರ ಸರ್ಕಾರ ನೀಡಿರಲಿಲ್ಲ. ಆದರೆ, ಕೇವಲ 24 ಗಂಟೆಗಳ ಅಂತರದಲ್ಲಿ ಪ್ರಧಾನ್ ರಾಜೀನಾಮೆ ನೀಡಿದ್ದು, ಸರ್ಕಾರ ವಿದ್ಯಾರ್ಥಿಗಳೊಂದಿಗೆ ಮರು ಮಾತುಕತೆ ನಡೆಸಿ, ವಾರಗಳ ಕಾಲದ ಬೃಹತ್ ಆಂದೋಲನ ಸುಖಾಂತ್ಯ ಕಂಡಿದೆ.
ಇಷ್ಟೊಂದು ಅಲ್ಪಾವಧಿಯಲ್ಲಿ ಇಂಥದ್ದೊಂದು ನಾಟಕೀಯ ಬದಲಾವಣೆಗೆ ಕಾರಣವಾಗಿದ್ದೇನು ಎಂಬ ಬಗ್ಗೆ ಆಂತರಿಕ ವರದಿಗಳು ಕುತೂಹಲಕಾರಿ ಮಾಹಿತಿಯನ್ನು ತೆರೆದಿಟ್ಟಿವೆ.
ಶುಕ್ರವಾರ ಕೇಂದ್ರ ಸರ್ಕಾರ ಮತ್ತು ಸಿಜೆಪಿ ಪ್ರತಿನಿಧಿಗಳ ನಡುವೆ ನಡೆದ ಎರಡನೇ ಸುತ್ತಿನ ಸಭೆ ಈ ಇಡೀ ಬೆಳವಣಿಗೆಯ ಟರ್ನಿಂಗ್ ಪಾಯಿಂಟ್ ಆಗಿತ್ತು. ಕೇಂದ್ರ ಸಚಿವರಾದ ಜೆ ಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ನೇತೃತ್ವದಲ್ಲಿ ನಡೆದ ಈ ಸಭೆ ಯಾವುದೇ ಒಪ್ಪಂದವಿಲ್ಲದೆ, ಬಿಗುವಿನ ವಾತಾವರಣದಲ್ಲಿ ಅಂತ್ಯಗೊಂಡಿತ್ತು ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿದ್ದ ಸಿಜೆಪಿ ನಿಯೋಗದ ನಿಲುವು ಅತ್ಯಂತ ಕಠಿಣವಾಗಿತ್ತು. ಇಬ್ಬರು ಹಿರಿಯ ಸಚಿವರ ಮುಂದೆಯೇ ಕುಳಿತಿದ್ದ ವಿದ್ಯಾರ್ಥಿ ನಾಯಕರು, ನಮ್ಮದು ಒಂದೇ ಬೇಡಿಕೆ, ಅದು ಧರ್ಮೇಂದ್ರ ಪ್ರಧಾನ್ ರಾಜೀನಾಮೆ. ಅದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಖಡಕ್ ಆಗಿ ಸ್ಪಷ್ಟಪಡಿಸಿದ್ದರು. ಮೂಲಗಳ ಪ್ರಕಾರ, ಸಚಿವರನ್ನು ವಜಾಗೊಳಿಸಲು ಸಿಜೆಪಿ ಸರ್ಕಾರಕ್ಕೆ 72 ಗಂಟೆಗಳ ಡೆಡ್‌ಲೈನ್ ನೀಡಿತ್ತು. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಜುಲೈ 20ರಂದು ನಡೆದಂತೆಯೇ ಮತ್ತೊಮ್ಮೆ ಬೃಹತ್ ಸಂಸತ್ ಚಲೋ ನಡೆಸುವುದಾಗಿ ಹಾಗೂ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಈ ಡೆಡ್‌ಲೈನ್ ಅನ್ನು ಬಹಿರಂಗವಾಗಿ ಘೋಷಿಸುವುದಾಗಿ ಎಚ್ಚರಿಕೆ ನೀಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ನಡ್ಡಾ ಮತ್ತು ಜಿತೇಂದ್ರ ಸಿಂಗ್, ತಾವು ವರಿಷ್ಠರೊಂದಿಗೆ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಹೇಳಿ ಸಭೆ ಮುಕ್ತಾಯಗೊಳಿಸಿದರು ಹಾಗೂ ಗೃಹ ಸಚಿವ ಅಮಿತ್ ಷಾ ಅವರಿಗೆ ಪರಿಸ್ಥಿತಿಯನ್ನು ವಿವರಿಸಿದರು ಎಂದು ತಿಳಿದುಬಂದಿದೆ. ತೆರೆಯ ಹಿಂದೆ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿರುವಾಗಲೇ, ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಸರ್ಕಾರ ಹಲವು ಪರ್ಯಾಯ ತಂತ್ರಗಳನ್ನು ರೂಪಿಸಿತು. ಪ್ರತಿಭಟನಾಕಾರರಿಗೆ ಬಲವಾದ ಸಂದೇಶ ರವಾನಿಸಲು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (NTA) 47 ಅಧಿಕಾರಿಗಳನ್ನು ವಜಾಗೊಳಿಸಲಾಯಿತು. ಪೇಪರ್ ಸೋರಿಕೆ ವಿರುದ್ಧ ಕಠಿಣ ಕಾನೂನು ತರುವ ತಿದ್ದುಪಡಿ ಮಸೂದೆಗೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿತು. ಶಿಕ್ಷಣ ಕಾರ್ಯದರ್ಶಿಯ ವರ್ಗಾವಣೆ ಮತ್ತು ತ್ವರಿತಗತಿಯ ನ್ಯಾಯಾಲಯಗಳ ಸ್ಥಾಪನೆಯ ಭರವಸೆ ನೀಡಲಾಯಿತು.
ಆದರೆ, ಈ ಯಾವ ಕ್ರಮಗಳೂ ವಿದ್ಯಾರ್ಥಿಗಳನ್ನು ತೃಪ್ತಿಪಡಿಸಲಿಲ್ಲ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹೊರತುಪಡಿಸಿ ಬೇರಾವ ಷರತ್ತಿಗೂ ಸಿಜೆಪಿ ಒಪ್ಪಲಿಲ್ಲ.
ಶನಿವಾರದ ಕ್ಷಿಪ್ರ ಬೆಳವಣಿಗೆಗಳು!...
ಶನಿವಾರ ಮಧ್ಯಾಹ್ನ ಸಿಜೆಪಿ ತನ್ನ ಆಂತರಿಕ ಸಭೆ ನಡೆಸುವ ಮುನ್ನ, ನಡ್ಡಾ ಮತ್ತು ಜಿತೇಂದ್ರ ಸಿಂಗ್ ಮತ್ತೊಮ್ಮೆ ಅಮಿತ್ ಷಾರನ್ನು ಭೇಟಿಯಾದರು. ಸರಿಸುಮಾರು ಅದೇ ಹೊತ್ತಿಗೆ, ಪ್ರಧಾನ್ ಪ್ರಧಾನಿ ಮೋದಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದರು. ಪ್ರಧಾನ್ ರಾಜೀನಾಮೆ ಸುದ್ದಿ ಹೊರಬಿದ್ದ ನಂತರವಷ್ಟೇ ಮೂರನೇ ಸುತ್ತಿನ ಸಭೆ ನಡೆಯಿತು. ರಾಜೀನಾಮೆಯಿಂದಾಗಿ ಸ್ಥಗಿತಗೊಂಡಿದ್ದ ಮಾತುಕತೆ ಮತ್ತೆ ಜೀವಪಡೆದುಕೊಂಡಿತು.
ಇದರ ಬೆನ್ನಲ್ಲೇ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಿಜೆಪಿ, ಜಂತರ್ ಮಂತರ್ ಸೇರಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯನ್ನು ಅಂತ್ಯಗೊಳಿಸುವುದಾಗಿ ಘೋಷಿಸಿತು. ಸರ್ಕಾರ ಕೂಡ ತನ್ನ ಎರಡು ಪ್ರಮುಖ ಭರವಸೆಗಳನ್ನು ಈಡೇರಿಸುವ ವಾಗ್ದಾನ ನೀಡಿತು.
ಸರ್ಕಾರ ದಿಢೀರ್ ಮಣಿದಿದ್ದೇಕೆ?
ಹಿಂದೆ ನಡೆದ ಸಿಎಎ ಅಥವಾ ಕೃಷಿ ಕಾಯ್ದೆ ವಿರೋಧಿ ಹೋರಾಟಗಳಿಗಿಂತ ಈ ಆಂದೋಲನ ಸಂಪೂರ್ಣ ಭಿನ್ನವಾಗಿದೆ ಎಂಬುದನ್ನು ಸರ್ಕಾರ ಅರಿತಿತ್ತು. ಇದು ಯುವಜನತೆ ಮತ್ತು ವಿದ್ಯಾರ್ಥಿಗಳು ಮುನ್ನಡೆಸುತ್ತಿರುವ ಚಳವಳಿಯಾಗಿದ್ದು, ಭವಿಷ್ಯವನ್ನು ರೂಪಿಸುವ ಪೀಳಿಗೆಯೊಂದಿಗೆ ನಿರಂತರ ಸಂಘರ್ಷಕ್ಕಿಳಿಯುವುದು ರಾಜಕೀಯವಾಗಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬ ಆತಂಕ ಸರ್ಕಾರಕ್ಕಿತ್ತು. ಮತ್ತೊಂದೆಡೆ ಸಂಸತ್ತಿನ ಲೆಕ್ಕಾಚಾರವೂ ಇದರ ಹಿಂದಿತ್ತು. ಪ್ರಸ್ತುತ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಪ್ರಮುಖ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸುಗಮವಾಗಿ ಅಂಗೀಕರಿಸುವ ಗುರಿ ಸರ್ಕಾರಕ್ಕಿದೆ. ಪ್ರಧಾನ್ ರಾಜೀನಾಮೆಯಿಂದ ವಿಪಕ್ಷಗಳ ಕೈಯಲ್ಲಿದ್ದ ಬಹುದೊಡ್ಡ ಅಸ್ತ್ರವನ್ನು ಕಸಿದುಕೊಂಡಂತಾಗಿದ್ದು, ಅಧಿವೇಶನ ಸುಗಮವಾಗಿ ನಡೆಯಲಿದೆ ಎಂಬುದು ಸರ್ಕಾರದ ಲೆಕ್ಕಾಚಾರ.
ಮೋದಿ ಆಡಳಿತದಲ್ಲಿ ಅತಿ ಅಪರೂಪದ ಹೆಜ್ಜೆ!...
2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗಿನಿಂದ, ಸಾರ್ವಜನಿಕರ ಪ್ರತಿಭಟನೆಯ ಒತ್ತಡಕ್ಕೆ ಮಣಿದು ಸಚಿವರೊಬ್ಬರು ರಾಜೀನಾಮೆ ನೀಡಿದ್ದು ಅತ್ಯಂತ ವಿರಳ. 2018ರಲ್ಲಿ ಮೀಟೂ ಆರೋಪದಡಿ ಎಂ ಜೆ ಅಕ್ಬರ್ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಬಿಟ್ಟರೆ, ಇದೀಗ ಪ್ರಧಾನ್ ಅವರದ್ದೇ ಎರಡನೇ ಬಹುದೊಡ್ಡ ನಿರ್ಗಮನ.
ಆದರೆ ಅಕ್ಬರ್ ಮೇಲಿದ್ದಂತೆ ಪ್ರಧಾನ್ ಮೇಲೆ ಯಾವುದೇ ವೈಯಕ್ತಿಕ ಆರೋಪಗಳಿರಲಿಲ್ಲ, ಆದರೂ ಅವರು ನೈತಿಕ ಹೊಣೆ ಹೊತ್ತು ನಿರ್ಗಮಿಸಿದ್ದಾರೆ ಎಂದು ಬಿಜೆಪಿ ನಾಯಕರು ವಾದಿಸುತ್ತಾರೆ. ಅದೇನೇ ಇದ್ದರೂ, ವಿವಾದ ಭುಗಿಲೆದ್ದ ತಕ್ಷಣವೇ ಪ್ರಧಾನ್ ಅವರಿಂದ ರಾಜೀನಾಮೆ ಪಡೆದಿದ್ದರೆ, ವಾರಗಳ ಕಾಲ ನಡೆದ ಬೃಹತ್ ಪ್ರತಿಭಟನೆ, ಸರ್ಕಾರದ ಮೇಲಿನ ಸಾರ್ವಜನಿಕ ಆಕ್ರೋಶ ಮತ್ತು ರಾಜಕೀಯ ಹಾನಿಯನ್ನು ಮೊದಲೇ ತಪ್ಪಿಸಬಹುದಿತ್ತು ಎಂಬ ಮಾತುಗಳು ಈಗ ಸರ್ಕಾರದ ಆಂತರಿಕ ವಲಯದಲ್ಲೇ ಕೇಳಿಬರುತ್ತಿವೆ(ಏಜೆನ್ಸೀಸ್).