ವಿಮಾನ ಪತನದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ದುರ್ಮರಣ
- ನಿನ್ನೆ (ಜ.28) ಬೆಳಗ್ಗೆ ಪುಣೆ ಜಿಲ್ಲೆಯ ಬಾರಾಮತಿ ಬಳಿ ಸಂಭವಿಸಿದ ಲಘು ವಿಮಾನ ದುರಂತ
- ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರು ಮಂದಿ ದುರ್ಮರಣ
- ಅಜಿತ್ ಪವಾರ್ ಸಾವಿನ ಬಗ್ಗೆ ನಾನು ಮೊದಲೇ ಭವಿಷ್ಯ ನುಡಿದಿದ್ದೇ ಎಂದು ಜ್ಯೋತಿಷಿ
- ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ಭವಿಷ್ಯವಾಣಿ
ಪುಣೆ: ನಿನ್ನೆ (ಜ.28) ಬೆಳಗ್ಗೆ ಪುಣೆ ಜಿಲ್ಲೆಯ ಬಾರಾಮತಿ ಬಳಿ ಸಂಭವಿಸಿದ ಲಘು ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ( Ajit Pawar ) ನಿಧನರಾದರು. ಈ ಸುದ್ದಿ ಮಹಾರಾಷ್ಟ್ರದಲ್ಲಿ ಭಾರೀ ಆಘಾತ ಮೂಡಿಸಿದ್ದು, ರಾಜ್ಯದ ರಾಜಕೀಯ ನಾಯಕರನ್ನು ದುಃಖಕ್ಕೆ ದೂಡಿದೆ. ರಾಜ್ಯವು ನೇರ ನುಡಿಯ ನಾಯಕನನ್ನು ಕಳೆದುಕೊಂಡು ಬಡವಾಗಿದೆ. ಇದರ ಮಧ್ಯೆ ಒಂದು ಜ್ಯೋತಿಷ್ಯವಾಣಿ ಬಹಳ ಚರ್ಚೆಯಾಗುತ್ತಿದೆ. ಅಜಿತ್ ಪವಾರ್ ಸಾವಿನ ಬಗ್ಗೆ ನಾನು ಮೊದಲೇ ಭವಿಷ್ಯ ನುಡಿದಿದ್ದೇ ಎಂದು ಜ್ಯೋತಿಷಿ ಒಬ್ಬರು ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
2025, ನವೆಂಬರ್ 8ರಂದು ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಮಾಡಿದ್ದರು. ಆ ಪೋಸ್ಟ್ನಲ್ಲಿ ಏನಿತ್ತು ಅಂದರೆ, ಒಮ್ಮೆ ಮುಖ್ಯಮಂತ್ರಿ ಅಥವಾ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಕೆಲವು ಭಾರತೀಯ ಅನುಭವಿ ರಾಜಕಾರಣಿಗಳು ಡಿಸೆಂಬರ್ 2025 ರಿಂದ ಫೆಬ್ರವರಿ 2026 ರ ನಡುವೆ ನಿಧನರಾಗಬಹುದು ಎಂದು ಬರೆಯಲಾಗಿತ್ತು.
ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವಿನ ಬೆನ್ನಲ್ಲೇ ತಮ್ಮ ಭವಿಷ್ಯ ನಿಜವಾಯಿತು ಎಂದು ಪ್ರಶಾಂತ್ ಕಿಣಿ ಅವರು ಹೇಳಿಕೊಂಡಿದ್ದಾರೆ. 2025ರ ಡಿಸೆಂಬರ್ನಿಂದ 2026ರ ಫೆಬ್ರವರಿ ನಡುವೆ ಓರ್ವ ಹಿರಿಯ ರಾಜಕಾರಣಿ ಸಾಯುತ್ತಾರೆ ಎಂದು ನಾನು ಭವಿಷ್ಯ ನುಡಿದಿದ್ದೆ. ಇದೀಗ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನರಾದರು ಎಂದು ಇತ್ತೀಚಿನ ಪೋಸ್ಟ್ನಲ್ಲಿ ಪ್ರಶಾಂತ್ ಕಿಣಿ ಬರೆದುಕೊಂಡಿದ್ದಾರೆ.
ಆದರೆ, ನೆಟ್ಟಿಗರು ಕಿಣಿ ಅವರ ಭವಿಷ್ಯವಾಣಿಯನ್ನು ಪ್ರಶ್ನಿಸುತ್ತಿದ್ದಾರೆ. ನೀವು ಹೇಳಿದಂತೆ ಅಜಿತ್ ಪವಾರ್ ಅವರು ಮುಖ್ಯಮಂತ್ರಿಯೂ ಆಗಿರಲಿಲ್ಲ ಅಥವಾ ಕೇಂದ್ರದ ಮಂತ್ರಿಯೂ ಆಗಿರಲಿಲ್ಲ. ನಿಮ್ಮದು ಬೋಗಸ್ ಭವಿಷ್ಯ ಎಂದು ಓರ್ವ ನೆಟ್ಟಿಗ ಕಾಮೆಂಟ್ ಮೂಲಕ ಕಿಡಿಕಾರಿದ್ದಾರೆ. ಇನ್ನೊರ್ವ ನೆಟ್ಟಿಗ, ಕೆಲವು ಅಂತಾ ಹೇಳೋದು ತುಂಬಾ ಸುಲಭ. ನೀವು ಪಕ್ಕಾ ಜ್ಯೋತಿಷಿಯಾಗಿದ್ದರೆ, ರಾಜಕಾರಣಿ ಯಾವ ರಾಜ್ಯದವರು ಎಂದು ಮೊದಲೇ ಹೇಳಬೇಕಿತ್ತು ಎಂದು ಕಾಮೆಂಟ್ ಮಾಡಿ ಟೀಕಿಸಿದ್ದಾರೆ. ಈ ಭವಿಷ್ಯವಾಣಿಯನ್ನು ನೋಡಿ ನಾಸ್ಟ್ರಡಾಮಸ್ ಕೂಡ ಶಾಕ್ ಆಗುತ್ತಿದ್ದರು ಎಂದು ಮಗದೊಬ್ಬ ನೆಟ್ಟಿಗ ಹೇಳಿದ್ದಾನೆ.
ನಿನ್ನೆ ಆಗಿದ್ದೇನು?
ಮುಂಬೈನಿಂದ ಬೆಳಗ್ಗೆ 8.10 ಕ್ಕೆ ಹೊರಟ ವಿಮಾನ 8.50ಕ್ಕೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, 8.45ರ ಸುಮಾರಿಗೆ ವಿಮಾನ ಪತನಗೊಂಡಿದೆ. ಈ ದುರಂತದಲ್ಲಿ ಡಿಸಿಎಂ ಅಜಿತ್ ಪವಾರ್ ಸೇರಿ ಒಟ್ಟು 5 ಮಂದಿ ಸಾವಿಗೀಡಾಗಿದ್ದಾರೆ. ಮೃತಪಟ್ಟವರನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ಅವರ ಪಿಎಸ್ಒ ವಿದಿಪ್ ಜಾಧವ್, ಪೈಲಟ್‌ಗಳಾದ ಸುಮಿತ್ ಕಪೂರ್ ಮತ್ತು ಸಂಭವಿ ಪಾಠಕ್ ಮತ್ತು ವಿಮಾನ ಸಹಾಯಕಿ ಪಿಂಕಿ ಮಾಲಿ ಎಂದು ಗುರುತಿಸಲಾಗಿದೆ.
ವಿಮಾನ ಪತನ ಹೇಗೆ ಸಂಭವಿಸಿತು ಎಂಬುವುದರ ಕಂಪ್ಲೀಟ್ ಡೀಟೆಲ್ಸ್ ಈ ಕೆಳಕಂಡಂತಿದೆ
* ನಿನ್ನೆ (ಜ.28) ಬೆಳಗ್ಗೆ ಪುಣೆ ಮತ್ತು ಬಾರಾಮತಿ ಪ್ರದೇಶದಲ್ಲಿ ದಟ್ಟ ಮಂಜು ಆವರಿಸಿತ್ತು. ಇದರಿಂದ ಪೈಲಟ್ಗೆ ಏನು ಕಾಣುತ್ತಿರಲಿಲ್ಲ.
* ಬಾರಾಮತಿ ವಿಮಾನ ನಿಲ್ದಾಣದ ಏರ್ಸ್ಟ್ರಿಪ್ ತುಂಬಾ ಚಿಕ್ಕದಾಗಿದೆ ಮತ್ತು ಯಾವುದೇ ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ ಸೌಲಭ್ಯಗಳನ್ನು ರನ್‌ವೇ ಹೊಂದಿಲ್ಲ. ಇದು ಕೂಡ ಲ್ಯಾಂಡಿಂಗ್ಗೆ ಸಮಸ್ಯೆಯಾಯಿತು.
* ವಿಮಾನ ನಿಲ್ದಾಣದ ಹತ್ತಿರ ಬರುತ್ತಿದ್ದಂತೆ ಪೈಲಟ್ ಶಾಂಭವಿ ಪಾಠಕ್, ಸ್ವಯಂ ಚಾಲಿತ ಮತ್ತು ವಿಸುವಲ್ ಲ್ಯಾಂಡಿಂಗ್ಗೆ ಪ್ರಯತ್ನಿಸಿದರು.
* ಲ್ಯಾಂಡಿಂಗ್ ಮಾಡುವಾಗ ವಿಮಾನ ನೇರವಾಗಿ ರನ್‌ವೇ ಸಮೀಪ ಬರಲಿಲ್ಲ ಹೀಗಾಗಿ ವಿಮಾನ, ಒಂದು ದೊಡ್ಡ ಟರ್ನ್ ತೆಗೆದುಕೊಂಡಿತು. ಇದರಿಂದ ಮೊದಲ ಲ್ಯಾಂಡಿಂಗ್ ಫೇಲ್ ಆಯಿತು.
* ದಟ್ಟ ಮಂಜಿನಿಂದಾಗಿ ವಿಮಾನವನ್ನು ರನ್ವೇಗೆ ಸರಿಯಾಗಿ ಹೊಂದಿಸುವುದು ತುಂಬಾ ಕಷ್ಟಕರವಾಗಿತ್ತು.
* ಮೊದಲ ಪ್ರಯತ್ನ ವಿಫಲವಾದಾಗ ಪೈಲಟ್ ಎರಡನೇ ಲ್ಯಾಂಡಿಂಗ್ ಪ್ರಯತ್ನವನ್ನು ಮಾಡಿದರು.
* ಎರಡನೇ ಪ್ರಯತ್ನದ ವೇಳೆ ಪೈಲಟ್ ಮೇಡೇ ಕರೆಯನ್ನು ನೀಡಿದರು. ಮೇಡೇ ಕರೆ ಎಂದರೆ, ವಿಮಾನ ಅಥವಾ ಹಡಗುಗಳಲ್ಲಿ ಗಂಭೀರ ತುರ್ತು ಸಂದರ್ಭದಲ್ಲಿ ರೇಡಿಯೋ ಮೂಲಕ ನೀಡುವ ಅಂತಾರಾಷ್ಟ್ರೀಯ ತುರ್ತು ಸಿಗ್ನಲ್ ಅಥವಾ ಸಹಾಯಕ್ಕಾಗಿ ಮಾಡುವ ಕರೆಯಾಗಿದೆ.
* ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ಮೂಲಗಳ ಪ್ರಕಾರ ಬಾರಾಮತಿ ಒಂದು ಟೇಬಲ್ ಟಾಪ್ ರನ್‌ವೇ. ಅಂದರೆ, ಗುಡ್ಡ ಅಥವಾ ಎತ್ತರದ ಚಪ್ಪಟೆ ಜಾಗದ ಮೇಲೆ ನಿರ್ಮಿಸಲಾದ ರನ್‌ವೇ ಆಗಿದೆ.
* ಎರಡನೇ ಪ್ರಯತ್ನದ ಲ್ಯಾಂಡಿಂಗ್ ವೇಳೆ ವಿಮಾನವು ರನ್‌ವೇ ಅಂಚಿನ ಬಳಿಯೇ ನೆಲಕ್ಕೆ ಅಪ್ಪಳಿಸಿತು.
* ಅಂದಾಜು 100 ಅಡಿ ಎತ್ತರದಲ್ಲಿ ಇರುವಾಗಲೇ ವಿಮಾನವೂ ತನ್ನ ನಿಯಂತ್ರಣವನ್ನು ಕಳೆದುಕೊಂಡಿತು.
* ನಿಯಂತ್ರಣ ತಪ್ಪಿದ ವಿಮಾನ, ರನ್‌ವೇ ತಲುಪುವ ಮುಂಚೆಯೇ ನೆಲಕ್ಕೆ ಅಪ್ಪಳಿಸಿತು.
* ನೆಲಕ್ಕೆ ಅಪ್ಪಳಿಸಿದ ಪರಿಣಾಮ, ತಕ್ಷಣ ಆ ಸ್ಥಳದಲ್ಲಿ ದೊಡ್ಡ ಸ್ಫೋಟ ಸಂಭವಿಸಿತು. ಇದಾದ ಬಳಿಕ ಅನೇಕ ಸಣ್ಣ ಸ್ಫೋಟಗಳು ಕೂಡ ಸಂಭವಿಸಿದವು.
* ಸರಣಿ ಸ್ಫೋಟಗಳಿಂದಾಗಿ ವಿಮಾನವು ಬೆಂಕಿಯ ಉಂಡೆಯಾಗಿ ಸ್ಥಳದಲ್ಲೇ ಹೊತ್ತಿ ಉರಿಯಿತು.
* ಬೆಂಕಿ ಆವರಿಸಿಕೊಂಡಿದ್ದರಿಂದ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಧ್ಯವಾಗಲಿಲ್ಲ.
* ಸದ್ಯ ಅಪಘಾತದ ತನಿಖೆ ಮುಂದುವರೆದಿದ್ದು, ಅಂತಿಮ ಕಾರಣವನ್ನು ಡಿಜಿಸಿಎ ವರದಿಯಲ್ಲಿ ದೃಢಪಡಿಸಲಾಗುತ್ತದೆ.
ಯಾವ ಕಾರಣಕ್ಕೆ ಅಜಿತ್ ಪವಾರ್ ವಿಮಾನದಲ್ಲಿ ಹೊರಟ್ಟಿದ್ದರು?
ಜಿಲ್ಲಾ ಪರಿಷತ್ ಚುನಾವಣೆಗಾಗಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಲು ಅಜಿತ್ ಪವಾರ್ ಅವರು ಬಾರಾಮತಿಗೆ ಪ್ರಯಾಣಿಸುತ್ತಿದ್ದರು. ಮಂಗಳವಾರ, ಅಜಿತ್ ಪವಾರ್ ಮುಂಬೈನಲ್ಲಿದ್ದರು, ಅಲ್ಲಿ ಅವರು ಮೂಲಸೌಕರ್ಯ ಕುರಿತ ಮಹಾರಾಷ್ಟ್ರ ಸಚಿವ ಸಂಪುಟ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದರು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಸಚಿವ ಚಂದ್ರಶೇಖರ್ ಬವಾಂಕುಲೆ ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಭೆ ಮುಗಿಸಿ, ಇಂದು ಬಾರಾಮತಿಗೆ ಹೊರಟರು. ಆದರೆ, ವಿಮಾನ ಲ್ಯಾಂಡಿಂಗ್ ವೇಳೆ ದುರಂತ ಸಾವಿಗೀಡಾಗಿದ್ದಾರೆ, (ಏಜೆನ್ಸೀಸ್).