ಇಂಧನ ಕೊರತೆಯಿಂದಾಗಿ ಜುಲೈವರೆಗೆ ಏರ್ ಇಂಡಿಯಾ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿದೆಯೇ? ಇಲ್ಲಿದೆ ಸತ್ಯಾಂಶ...Air India
- ಜುಲೈವರೆಗೆ ಅಂತರರಾಷ್ಟ್ರೀಯ ವಿಮಾನ ರದ್ಧತಿ ವದಂತಿಯನ್ನು ಏರ್ ಇಂಡಿಯಾ ತಳ್ಳಿಹಾಕಿದೆ
- ಸಾಮಾಜಿಕ ಜಾಲತಾಣದ ಸುಳ್ಳು ಪೋಸ್ಟ್‌ನಿಂದ ಪ್ರಯಾಣಿಕರಲ್ಲಿ ಭಾರಿ ಗೊಂದಲ ಸೃಷ್ಟಿಯಾಗಿತ್ತು
- ಇಂಧನ ಬೆಲೆ ಏರಿಕೆ ಹಿನ್ನೆಲೆ ಕೇವಲ ಕೆಲವು ಲಾಭದಾಯಕವಲ್ಲದ ಮಾರ್ಗಗಳ ಹಾರಾಟ ಮಾತ್ರ ಕಡಿತಗೊಂಡಿದೆ
- ಯುದ್ಧದ ಅನಿಶ್ಚಿತತೆಯಿಂದಾಗಿ ದೆಹಲಿ-ಟೆಲ್ ಅವಿವ್ ವಿಮಾನ ಸಂಚಾರ ಜೂನ್ ಅಂತ್ಯದವರೆಗೆ ರದ್ದು
Air India : ಇಂಧನ ಕೊರತೆಯ ಕಾರಣದಿಂದ ಏರ್ ಇಂಡಿಯಾ ತನ್ನೆಲ್ಲಾ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ರದ್ದುಗೊಳಿಸಿದೆ ಎಂಬ ಸುಳ್ಳು ಸುದ್ದಿಯನ್ನು ಸಂಸ್ಥೆಯು ತಳ್ಳಿಹಾಕಿದೆ. ಈ ಕುರಿತು ಟ್ವೀಟ್ ಮಾಡಿರುವ ಏರ್ ಇಂಡಿಯಾ, "ಜುಲೈವರೆಗೆ ಅಂತಾರಾಷ್ಟ್ರೀಯ ವಿಮಾನಗಳು ರದ್ದಾಗಿವೆ ಎಂಬ ವದಂತಿಗಳು ಕೇವಲ ಸೃಷ್ಟಿಸಿದ ಸುಳ್ಳಲ್ಲ, ಅವು ದುರುದ್ದೇಶಪೂರಿತವಾಗಿವೆ," ಎಂದು ಸ್ಪಷ್ಟಪಡಿಸಿದೆ. ಪ್ರಯಾಣಿಕರು ಇಂತಹ ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡಬಾರದು ಮತ್ತು ಅಧಿಕೃತ ಮಾಹಿತಿಗಾಗಿ ಏರ್ ಇಂಡಿಯಾದ ಅಧಿಕೃತ ಮೂಲಗಳನ್ನೇ ಅವಲಂಬಿಸಬೇಕು ಎಂದು ಸಂಸ್ಥೆ ಮನವಿ ಮಾಡಿದೆ.
ವೈರಲ್ ಪೋಸ್ಟ್ನಲ್ಲಿ ಏನಿದೆ?
ಇಂಧನ ಕೊರತೆಯ ಕಾರಣದಿಂದ ಏರ್ ಇಂಡಿಯಾ, ಜುಲೈ ತಿಂಗಳವರೆಗೆ ತನ್ನೆಲ್ಲಾ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ರದ್ದುಗೊಳಿಸಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. "ಇಂಧನ ಕೊರತೆಯಿಂದಾಗಿ ಏರ್ ಇಂಡಿಯಾ ಜುಲೈವರೆಗೆ ತನ್ನ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿದೆ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಈ ಪೋಸ್ಟ್ ಸಂಪೂರ್ಣ ಸುಳ್ಳು ಎಂದು ತಿಳಿದುಬಂದಿದೆ. ಇಂತಹ ವದಂತಿಗಳು ಪ್ರಯಾಣಿಕರಲ್ಲಿ ಗೊಂದಲ ಮೂಡಿಸುತ್ತಿದ್ದು, ಇದು ಕೇವಲ ಸೃಷ್ಟಿಸಿದ ಸುಳ್ಳು ಸುದ್ದಿಯಾಗಿದೆ.
ಕೆಲವು ಮಾಧ್ಯಮಗಳಲ್ಲಿ ಏರ್ ಇಂಡಿಯಾ ತನ್ನೆಲ್ಲಾ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿದೆ ಎಂದು ಹರಡುತ್ತಿರುವುದು ದುರುದ್ದೇಶಪೂರಿತ ಹಾಗೂ ಆಧಾರರಹಿತ ಸುಳ್ಳು ಸುದ್ದಿ ಎಂದು ಸಂಸ್ಥೆ ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಈ ಕುರಿತು ಯಾವುದೇ ಗೊಂದಲ ಬೇಡ ಎಂದು ತಿಳಿಸಿರುವ ಏರ್ ಇಂಡಿಯಾ, ನಿಖರ ಮತ್ತು ಅಧಿಕೃತ ಮಾಹಿತಿಗಾಗಿ ಪ್ರಯಾಣಿಕರು ಕೇವಲ ಏರ್ ಇಂಡಿಯಾದ ಅಧಿಕೃತ ಚಾನಲ್‌ಗಳನ್ನು ಮಾತ್ರ ಅವಲಂಬಿಸಬೇಕು ಎಂದು ಮನವಿ ಮಾಡಿದೆ.
ಏರ್ ಇಂಡಿಯಾದ ಸ್ಪಷ್ಟನೆಯಿಂದ ನಿರಾಳರಾದ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. "ಒಮ್ಮೆಲೇ ವಿಮಾನಗಳು ರದ್ದಾಗಿದ್ದರೆ ಪರಿಸ್ಥಿತಿ ಭಯಾನಕವಾಗುತ್ತಿತ್ತು, ವಿಷಯ ಸ್ಪಷ್ಟಪಡಿಸಿದ್ದಕ್ಕೆ ಧನ್ಯವಾದಗಳು" ಎಂದು ಒಬ್ಬರು ತಿಳಿಸಿದರೆ, ಇನ್ನೊಬ್ಬರು "ಪ್ರಯಾಣಿಸಬೇಕಾದವರು ಇಂತಹ ವದಂತಿಗಳಿಂದ ನಿಜಕ್ಕೂ ಆತಂಕಕ್ಕೊಳಗಾಗಿದ್ದರು" ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ವೇಳೆ, ಮತ್ತೊಬ್ಬ ವ್ಯಕ್ತಿಯು ಇಂತಹ ಸುಳ್ಳು ಸುದ್ದಿ ಹರಡುವವರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಊಹಾಪೋಹಕ್ಕೆ ಕಾರಣವೇನು?
ಈ ವದಂತಿಯು ಹೇಗೆ ಹರಡಿತು ಎಂಬುದು ಸ್ಪಷ್ಟವಾಗಿಲ್ಲವಾದರೂ, ಮುಂಬರುವ ತಿಂಗಳುಗಳಲ್ಲಿ ಏರ್ ಇಂಡಿಯಾ ತನ್ನ ಅಂತಾರಾಷ್ಟ್ರೀಯ ಜಾಲದ ಕೆಲವು ಭಾಗಗಳನ್ನು ಕಡಿತಗೊಳಿಸುತ್ತಿದೆ ಎಂಬ ವರದಿಗಳಿಗೂ ಇದಕ್ಕೂ ಸಂಬಂಧವಿರಬಹುದು ಎಂದು ಅಂದಾಜಿಸಲಾಗಿದೆ. ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಏರುತ್ತಿರುವ ಇಂಧನ ಬೆಲೆಗಳ ಹಿನ್ನೆಲೆಯಲ್ಲಿ, ಏರ್ ಇಂಡಿಯಾ ಈಗಾಗಲೇ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಕಡಿತಗೊಳಿಸಿದೆ.
ಏರ್ ಇಂಡಿಯಾ ತನ್ನ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿಲ್ಲವಾದರೂ, ಪಶ್ಚಿಮ ಏಷ್ಯಾದಲ್ಲಿನ ಅನಿಶ್ಚಿತತೆಯ ಕಾರಣದಿಂದಾಗಿ ದೆಹಲಿ-ಟೆಲ್ ಅವಿವ್ ನಡುವಿನ ವಿಮಾನ ಸೇವೆಯ ಸ್ಥಗಿತವನ್ನು ಜೂನ್ ಅಂತ್ಯದವರೆಗೆ ವಿಸ್ತರಿಸಿದೆ. ಇಸ್ರೇಲ್‌ನ ಕೆಲವು ವಿಮಾನಯಾನ ಸಂಸ್ಥೆಗಳನ್ನು ಹೊರತುಪಡಿಸಿ, ವಿಶ್ವದ ಅನೇಕ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಈ ಮಾರ್ಗದಲ್ಲಿ ತಮ್ಮ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿವೆ ಅಥವಾ ಕಡಿಮೆಗೊಳಿಸಿವೆ ಎಂದು ವರದಿಯಾಗಿದೆ.
ಈ ತಿಂಗಳ ಆರಂಭದಲ್ಲಿ ಏರ್ ಇಂಡಿಯಾದ ನಿರ್ಗಮಿತ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್ ವಿಲ್ಸನ್ ಅವರು ಉದ್ಯೋಗಿಗಳಿಗೆ ಆಂತರಿಕ ಸಂದೇಶವೊಂದನ್ನು ಕಳುಹಿಸಿದ್ದು, ಕೆಲವು ವಿಮಾನಯಾನ ಮಾರ್ಗಗಳು ಲಾಭದಾಯಕವಲ್ಲದ ಕಾರಣ ಅವುಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಿನ ಕೆಲವು ಹಾರಾಟಗಳನ್ನು ನಾವು ಕಡಿಮೆಗೊಳಿಸಿದ್ದೇವೆ. ವಿಮಾನ ಇಂಧನ ಬೆಲೆಯಲ್ಲಿನ ಭಾರಿ ಏರಿಕೆ, ವೈಮಾನಿಕ ವಲಯಗಳ ಮುಚ್ಚುವಿಕೆ ಮತ್ತು ಸುದೀರ್ಘ ಹಾರಾಟದ ಮಾರ್ಗಗಳಿಂದಾಗಿ ನಮ್ಮ ಅನೇಕ ಅಂತಾರಾಷ್ಟ್ರೀಯ ವಿಮಾನಯಾನಗಳ ಕಾರ್ಯಾಚರಣೆಯು ನಷ್ಟಕ್ಕೆ ಕಾರಣವಾಗುತ್ತಿದೆ ಎಂದು ವಿಲ್ಸನ್ ಸಿಬ್ಬಂದಿಗೆ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ವೈಮಾನಿಕ ವಲಯದ ಪರಿಸ್ಥಿತಿ ಮತ್ತು ವಿಮಾನ ಇಂಧನ ಬೆಲೆಗಳ ಏರಿಕೆ ಸವಾಲಾಗಿ ಮುಂದುವರಿದಿದ್ದು, ಜೂನ್ ಮತ್ತು ಜುಲೈ ತಿಂಗಳ ವಿಮಾನ ಹಾರಾಟದ ವೇಳಾಪಟ್ಟಿಯನ್ನು ಮತ್ತಷ್ಟು ಕಡಿತಗೊಳಿಸುವುದನ್ನು ಹೊರತುಪಡಿಸಿ ನಮಗೆ ಬೇರೆ ದಾರಿಯಿಲ್ಲ ಎಂದು ವಿಲ್ಸನ್ ತಿಳಿಸಿದ್ದಾರೆ. ಇದೇ ವೇಳೆ, ದೇಶೀಯ ವಿಮಾನಯಾನಗಳ ಲಾಭದ ಮೇಲೂ ಇದರ ಪರಿಣಾಮ ಬೀರಿದೆ ಆದರೆ, ಸರ್ಕಾರವು ದೇಶೀಯ ಇಂಧನ ಬೆಲೆ ಏರಿಕೆಯನ್ನು ಶೇ. 25ಕ್ಕೆ ಸೀಮಿತಗೊಳಿಸಿರುವುದರಿಂದ, ಅಂತಾರಾಷ್ಟ್ರೀಯ ವಿಮಾನಗಳಿಗೆ ಹೋಲಿಸಿದರೆ ದೇಶೀಯ ವಿಮಾನಗಳ ಮೇಲಿನ ಪರಿಣಾಮ ಸ್ವಲ್ಪ ಮಟ್ಟಿಗೆ ಕಡಿಮೆಯಿದೆ ಎಂದು ಅವರು ಸೇರಿಸಿದ್ದಾರೆ, (ಏಜೆನ್ಸೀಸ್).