Diamond Harbour | ಬಂಗಾಳವನ್ನು ಕರಾಚಿಗೆ ಹೋಲಿಸಿದ ಬಿಜೆಪಿ ವಿರುದ್ಧ ಟಿಎಂಸಿ ಗರಂ 
ದೇಶ

ಬಂಗಾಳವನ್ನು ಕರಾಚಿಗೆ ಹೋಲಿಸಿದ ಬಿಜೆಪಿ ವಿರುದ್ಧ ಟಿಎಂಸಿ ಗರಂ; ಏನಿದು 'ಲಿಯಾರಿ' ವಿವಾದ..? ದೀದಿ ಕೋಟೆಯಲ್ಲಿ ಶುರುವಾಯ್ತು ಹೊಸ ಸಮರ! | Diamond Harbour

ಕೊಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಅಬ್ಬರ ಮುಗಿಯುತ್ತಿದ್ದಂತೆಯೇ, ರಾಜಕೀಯ ಪಕ್ಷಗಳ ನಡುವಿನ ವಾಗ್ಯುದ್ಧ ಈಗ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಅಸ್ಮಿತೆಯ ಸಂಘರ್ಷಕ್ಕೆ ತಿರುಗಿದ್ದು, ತೃಣಮೂಲ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಭದ್ರಕೋಟೆಯಾಗಿರುವ ಡೈಮಂಡ್ ಹಾರ್ಬರ್ ( Diamond Harbour) ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಬಂಗಾಳದ ಲಿಯಾರಿ ಎಂದು ಕರೆಯುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದೆ.
ಪಾಕಿಸ್ತಾನದ ಕರಾಚಿಯಲ್ಲಿರುವ ಲಿಯಾರಿ ಪ್ರದೇಶವು ಅಪರಾಧ ಚಟುವಟಿಕೆಗಳು ಮತ್ತು ಗ್ಯಾಂಗ್‌ ವಾರ್‌ಗಳಿಗೆ ಕುಖ್ಯಾತಿ ಪಡೆದಿದ್ದು, ಡೈಮಂಡ್ ಹಾರ್ಬರ್ ಕ್ಷೇತ್ರವನ್ನು ಅಂತಹ ಪ್ರದೇಶಕ್ಕೆ ಹೋಲಿಸಿರುವುದಕ್ಕೆ ಟಿಎಂಸಿ ಕಿಡಿಕಾರಿದೆ.
ಬಿಜೆಪಿಯ ಈ ಹೇಳಿಕೆಯನ್ನು ಕಟುವಾಗಿ ಟೀಕಿಸಿರುವ ತೃಣಮೂಲ ಕಾಂಗ್ರೆಸ್, ಇದು ಬಂಗಾಳದ ಜನರಿಗೆ ಮತ್ತು ಸಂಸ್ಕೃತಿಗೆ ಮಾಡುತ್ತಿರುವ ಅವಮಾನ ಎಂದು ಆಕ್ರೋಶ ಹೊರಹಾಕಿದೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಟಿಎಂಸಿ, ಮೊದಲು ನಮ್ಮ ಭಾಷೆಯ ಕಾರಣಕ್ಕೆ ನಮ್ಮನ್ನು ಬಾಂಗ್ಲಾದೇಶಿಗಳು ಎಂದು ಕರೆದರು, ನಂತರ ನಮ್ಮ ಆಹಾರ ಪದ್ಧತಿಯನ್ನು ಟೀಕಿಸಿ ರೋಹಿಂಗ್ಯಾಗಳು ಎಂದು ಹಣೆಪಟ್ಟಿ ಕಟ್ಟಿದರು. ಈಗ ನೇರವಾಗಿ ಬಂಗಾಳವನ್ನು ಪಾಕಿಸ್ತಾನಕ್ಕೆ ಹೋಲಿಸುವ ಮೂಲಕ ಬಿಜೆಪಿ ತನ್ನ ದ್ವೇಷದ ರಾಜಕಾರಣವನ್ನು ಪ್ರದರ್ಶಿಸುತ್ತಿದೆ ಎಂದು ಕಿಡಿಕಾರಿದೆ. ರಾಜ್ಯದಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವಾಗದ ಕಾರಣ ಬಿಜೆಪಿ ಇಂತಹ ಕೆಳಮಟ್ಟದ ಹಗೆತನವನ್ನು ಸಾಧಿಸುತ್ತಿದೆ ಎಂದು ಪಕ್ಷವು ಆರೋಪಿಸಿದೆ.
ಚುನಾವಣಾ ಕಣದಲ್ಲೂ ಈ ಬಾರಿ ಸಿನಿಮಾ ಶೈಲಿಯ ಸಂಭಾಷಣೆಗಳು ಸದ್ದು ಮಾಡುತ್ತಿದ್ದು, ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದು ಕರೆಸಿಕೊಳ್ಳುವ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಕೆಲ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದಾಗ, ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್, ಅವರು ಸಿಂಗಂ ಆಗಿದ್ದರೆ, ನಾನು ಪುಷ್ಪಾ ಎಂದು ತಿರುಗೇಟು ನೀಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದರ ನಡುವೆ, ಮತದಾನದ ದಿನದಂದು ಇವಿಎಂಗಳ ಮೇಲೆ ಪಕ್ಷದ ಚಿಹ್ನೆಗಳನ್ನು ಅಂಟಿಸಿ ಮತದಾರರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಬಿಜೆಪಿ ಕೂಡ ದೂರಿದೆ. ಹೆಚ್ಚಿನ ಎಕ್ಸಿಟ್ ಪೋಲ್‌ಗಳು ಬಿಜೆಪಿಗೆ ಮುನ್ನಡೆ ನೀಡಿರುವ ಈ ಹೊತ್ತಿನಲ್ಲಿ, ಸೋಮವಾರ ನಡೆಯಲಿರುವ ಮತ ಎಣಿಕೆ ಹಾಗೂ ಫಲಿತಾಂಶದ ಮೇಲೆ ಇಡೀ ದೇಶದ ಕಣ್ಣು ನೆಟ್ಟಿದೆ(ಏಜೆನ್ಸೀಸ್​).