ದೇಶ

'ನಿಮ್ಮಿಂದ ದೀಪಾವಳಿ ಹೇಗೆ ಆಚರಿಸ್ಬೇಕು ಎನ್ನುವ ಪಾಠ ಬೇಡ'; ದಿಯಾ ಮಿರ್ಜಾ ಪಟಾಕಿ ಜಾಗೃತಿ ವಿಡಿಯೋಗೆ BJP ಗರಂ

  • ಪಟಾಕಿ ಹಚ್ಚುವುದು, ಶಬ್ಧ ಮಾಲಿನ್ಯದ ಬಗ್ಗೆ ದಿಯಾ ಮಿರ್ಜಾ ಜಾಗೃತಿ .

  • ಬೃಹನ್ಮುಂಬೈ ಮಹಾನಗರ ಪಾಲಿಕೆ ಹಂಚಿಕೊಂಡಿದ್ದ ಜಾಗೃತಿ ವಿಡಿಯೋ ಡಿಲೀಟ್.

  • ಬಿಜೆಪಿ ನಾಯಕರ ಈ ನಡೆ ವಿರುದ್ಧ ನೆಟ್ಟಿಗರಿಂದ ಕಿಡಿ.

ಮುಂಬೈ: ದೀಪಾವಳಿ ಅಭಿಯಾನದ ಭಾಗವಾಗಿ ಮುಂಬೈ ಪಾಲಿಕೆ ಹಂಚಿಕೊಂಡಿದ್ದ, ನಟಿ ದಿಯಾ ಮಿರ್ಜಾ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಿದೆ. ಆಡಳಿತಾರೂಢ ಬಿಜೆಪಿಯು ಪಾಲಿಕೆ ಮೇಲೆ ಒತ್ತಡ ಹೇರಿರುವುದೇ ಇದಕ್ಕೆ ಕಾರಣ ಎಂದು ಆರೋಪಿಸಲಾಗುತ್ತಿದ್ದು, ನೆಟ್ಟಿಗರಿಂದ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ.

ಬೃಹನ್ಮುಂಬೈ ಮಹಾನಗರ ಪಾಲಿಕೆಯು, ನಾಗರಿಕರಿಗೆ ಪಟಾಕಿಗಳನ್ನು ಸಿಡಿಸುವುದು ಮತ್ತು ಶಬ್ದ ಮಾಲಿನ್ಯವನ್ನು ತಪ್ಪಿಸುವಂತೆ ಕೋರಿ ತನ್ನ ಸಾಮಾಜಿಕ ಜಾಲತಾಣದ ಪುಟದಲ್ಲಿ ಜಾಗೃತಿ ಮೂಡಿಸುವ ವಿಡಿಯೋ ಹಂಚಿಕೊಂಡಿತ್ತು.

ದಿಯಾ ಮಿರ್ಜಾ ವಿಡಿಯೋ ಮಾತ್ರ ಡಿಲೀಟ್

ಬಿಎಂಸಿಯ ಈ ಅಭಿಯಾನದಲ್ಲಿ ನಟಿಯರಾದ ಮಾಧುರಿ ದೀಕ್ಷಿತ್, ನಿಶಿಗಂಧ ವಾಡ್ ಮತ್ತು ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರೂ ಕೂಡ ಕಾಣಿಸಿಕೊಂಡಿದ್ದಾರೆ. ಅವರ ವೀಡಿಯೊಗಳು ನಾಗರಿಕ ಸಂಸ್ಥೆಯ ಸಾಮಾಜಿಕ ಜಾಲತಾಣದ ಪುಟದಲ್ಲಿ ಇರಿಸಿಕೊಂಡು, ನಟಿ ದಿಯಾ ಮಿರ್ಜಾ ಅವರ ವಿಡಿಯೋವನ್ನು ಮಾತ್ರ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಿಂದ ತೆಗೆದುಹಾಕಿದೆ. ಅವರ ಈ ನಡೆಯು ಸಾಕಷ್ಟು ಚರ್ಷೆಗೆ ಕಾರಣವಾಗಿದೆ.

ಅಮಿತ್ ಸಾತಮ್ ಕಿಡಿ

ಬಿಜೆಪಿ ಶಾಸಕ, ಮುಂಬೈ ಬಿಜೆಪಿ ಅಧ್ಯಕ್ಷ ಅಮಿತ್ ಸಾತಮ್ ಅವರು ಎಕ್ಸ್​ನಲ್ಲಿ ಹಂಚಿಕೊಂಡಿರುವ ಪೋಸ್ಟ್​ನಲ್ಲಿ ಲ ದಿಯಾ ಮಿರ್ಜಾ ಅವರ ವೀಡಿಯೊವನ್ನು ವಿರೋಧಿಸಿ, ಮುಂಬೈ ನಾಗರಿಕ ಸಂಸ್ಥೆಯನ್ನು ಟ್ಯಾಗ್​ ಮಾಡಿ ಬರೆದುಕೊಂಡಿದ್ದು ಹೀಗೆ, ದಿಯಾ ಮಿರ್ಜಾ ಅವರಿಂದ ದೀಪಾವಳಿಯನ್ನು ಹೇಗೆ ಆಚರಿಸಬೇಕು ಎಂಬುದರ ಕುರಿತು ನಮಗೆ ಯಾವುದೇ ಪಾಠಗಳ ಅಗತ್ಯವಿಲ್ಲ. ನಮ್ಮ ಸಂಪ್ರದಾಯಗಳು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿವೆ ಎಂದು ಕಿಡಿಕಾರಿದ್ದಾರೆ.

ಶಿವಸೇನೆಯಿಂದ ಬೆಂಬಲ

'ದೀಪಾವಳಿಯು ದೀಪಗಳ ಹಬ್ಬ. ದಿಯಾ ಮಿರ್ಜಾ, ಅವರ ಹೆಸರಿನಲ್ಲಿಯೇ 'ದಿಯಾ' ಇದೆ. ಯಾರೂ ಕೂಡ ಮಾಲಿನ್ಯವನ್ನು ಉತ್ತೇಜಿಸುತ್ತಿಲ್ಲ ಅಥವಾ ಪಟಾಕಿಗಳನ್ನು ಸಿಡಿಸುತ್ತಿಲ್ಲ, ಆದರೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಮುಂಬೈಯವರಾಗಿ ನಾವು ಏನು ಮಾಡಬೇಕು ಎಂಬುದರ ಕುರಿತು ನಮಗೆ ಇತರರಿಂದ ಯಾವುದೇ ಪಾಠದ ಅಗತ್ಯವಿಲ್ಲ' ಎಂದು ಒಟ್ಟಾರೆಯಾಗಿ ಶಿವಸೇನಾ ವಕ್ತಾರರಾದ ಶೈನಾ ಮಾತನಾಡಿದ್ದಾರೆ

ನೆಟ್ಟಿಗರಿಂದ ಟೀಕೆ ವ್ಯಕ್ತ

ದಿಯಾ ಮಿರ್ಜಾ ಅವರ ವಿಡಿಯೋ ಮಾತ್ರ ಡಿಲೀಟ್ ಮಾಡಲು ಒತ್ತಡ ಹೇರಿದ್ಯಾಕೆ. ಯಾಕಂದ್ರೆ ಅವರ ಹೆಸರು ಮುಸ್ಲಿಂ ಹೆಸರನ್ನು ಹೋಲುವ ಕಾರಣದಿಂದ , ಆದರೆ ಅದೇ ಅಭಿಯಾನದಲ್ಲಿದ್ದ ಮಾಧುರಿ ದೀಕ್ಷಿತ್, ನಿಶಿಗಂಧ ವಾಡ್ ಅಥವಾ ಅಜಿಂಕ್ಯ ರಹಾನೆ ಅವರ ಬಗ್ಗೆ ಯಾಕೆ ಪ್ರಸ್ತಾಪಿಸಲಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಅವರು ಬಿಜೆಪಿ ವಿರುದ್ಧ ಈ ಹಿಂದೆ ಮಾತನಾಡಿದ್ದರು. ಹೀಗಾಗಿ ಅವರ ಪಟಾಕಿ ಜಾಗೃತಿ ವಿಡಿಯೋವನ್ನು ಅಪ್ಲೋಡ್ ಮಾಡಿರುವುದು ಸಹಿಸಲಾಗುತ್ತಿಲ್ಲ ಎಂದು ದಿಯಾ ಅವರ ಪರ ನಿಂತಿದ್ದಾರೆ. ಮುಂಬೈಯು ಬಿಎಂಸಿಯನ್ನು ಬಿಜೆಪಿಗೆ ನೀಡಿತೇ? ರಿತು ತಾವ್ಡೆರವರಿಗೆ ಬಿಎಂಸಿಯ ಮೇಲೆ ಯಾವುದೇ ನಿಯಂತ್ರಣವಿಲ್ಲವೇ ಅಥವಾ ಇದು ಸಂಪೂರ್ಣವಾಗಿ 'ಓಪನ್ ದರ್ಬಾರ್' ಆಗಿದೆಯೇ ಎಂದು ಪ್ರಶ್ನಿಸಿದರು, (ಏಜೆನ್ಸೀಸ್).