ಮುಂಬೈ: (Dhurandhar ) ರಣವೀರ್ ಸಿಂಗ್ ನಟನೆಯ ಮತ್ತು ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾದ 40 ದಿನಗಳಲ್ಲಿ ಈ ಸಿನಿಮಾ ಅನೇಕ ಐತಿಹಾಸಿಕ ದಾಖಲೆಗಳನ್ನು ಉಡೀಸ್ ಮಾಡಿದೆ.
ಟಿಕೆಟ್ ಮಾರಾಟದಲ್ಲಿ ದಾಖಲೆ:
ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 1,263 ಕೋಟಿ ರೂ. ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಚಿತ್ರದ ಒಟ್ಟು ಗಳಿಕೆ 860 ಕೋಟಿ ದಾಟಿದ್ದು, ಶೀಘ್ರದಲ್ಲೇ 900 ಕೋಟಿ ಕ್ಲಬ್ ಸೇರುವತ್ತ ಮುನ್ನುಗ್ಗುತ್ತಿದೆ. ಭಾರತದಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದ (Highest ticket sales) ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರ 5ನೇ ಸ್ಥಾನಕ್ಕೇರಿದೆ. ಇದುವರೆಗೆ ಸುಮಾರು 1.36 ಕೋಟಿಗೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ.
ಜಾಗತಿಕ ಗಳಿಕೆಯಲ್ಲಿ ಈ ಸಿನಿಮಾ ಪ್ರಶಾಂತ್ ನೀಲ್ ಅವರ 'KGF: Chapter 2' (1,215 ಕೋಟಿ) ಮತ್ತು ಎಸ್‌ಎಸ್ ರಾಜಮೌಳಿ ಅವರ 'RRR' (1,230 ಕೋಟಿ) ಚಿತ್ರಗಳ ದಾಖಲೆಯನ್ನು ಮೀರಿಸಿದೆ. ಈ ಮೂಲಕ ಭಾರತದ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ.
ಚೀನಾ ಬಾಕ್ಸ್ ಆಫೀಸ್ ಗಳಿಕೆಯನ್ನು ಹೊರತುಪಡಿಸಿ ನೋಡಿದರೆ, 'ಧುರಂಧರ್' ಈಗ ಜಾಗತಿಕವಾಗಿ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಅಕ್ಷಯ್ ಖನ್ನಾ, ಸಂಜಯ್ ದತ್ ಮತ್ತು ಆರ್. ಮಾಧವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ 'A' ಸರ್ಟಿಫಿಕೇಟ್ ಹೊಂದಿದ್ದರೂ ಸಹ, ಈ ಮಟ್ಟದ ಯಶಸ್ಸು ಕಂಡಿರುವುದು ಬಾಲಿವುಡ್ ವಿಶ್ಲೇಷಕರಲ್ಲಿ ಅಚ್ಚರಿ ಮೂಡಿಸಿದೆ.
ಹಳೆಯ ಕಾಲದ ಚಿತ್ರಗಳಿಗೆ ಹೋಲಿಸಿದರೆ ಈ ಚಿತ್ರಗಳ ಟಿಕೆಟ್ ಬೆಲೆ ಹೆಚ್ಚಿದ್ದರೂ ಸಹ, ಕೋಟ್ಯಂತರ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡಿರುವುದು ಚಿತ್ರರಂಗದ ಬೆಳವಣಿಗೆಯನ್ನು ತೋರಿಸುತ್ತದೆ.
ಭಾರತದ ಟಾಪ್ 5 ಟಿಕೆಟ್ ಮಾರಾಟವಾದ ಚಿತ್ರಗಳು (BMS ಅಂಕಿಅಂಶದಂತೆ): BookMyShow (ಬುಕ್ ಮೈ ಶೋ)
1) ಪುಷ್ಪ 2 - 20.41 ಮಿಲಿಯನ್
2) ಕೆಜಿಎಫ್ ಅಧ್ಯಾಯ 2 - 17.1 ಮಿಲಿಯನ್
3) ಬಾಹುಬಲಿ 2 - 16 ಮಿಲಿಯನ್
4) ಕಾಂತಾರ ಅಧ್ಯಾಯ 1 - 14.1 ಮಿಲಿಯನ್
5) ಧುರಂಧರ - 13.63 ಮಿಲಿಯನ್ (ಈಗ 5ನೇ ಸ್ಥಾನದಲ್ಲಿರುವ 'RRR' ಅನ್ನು ಹಿಂದಿಕ್ಕಿದೆ)