ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ 
ದೇಶ

ಭಾರತಕ್ಕೆ ಮರಳಿದರೆ ಧ್ರುವ್ ರಾಠಿಗೆ ಕಾದಿದೆ ಸಂಕಷ್ಟ: ದೆಹಲಿ ಕೋರ್ಟ್‌ನಿಂದ ಹೊರಬಿತ್ತು ಮೂರನೇ ಶಾಕ್...! Dhruv Rathee

2018ರ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿಯ ಸಾಕೇತ್ ನ್ಯಾಯಾಲಯವು ಸೋಮವಾರ ರಾಠಿ ವಿರುದ್ಧ ಮೂರನೇ ಬಾರಿಗೆ ವಾರೆಂಟ್ ಜಾರಿಗೊಳಿಸಿದ್ದು, ಈ ಬಾರಿ ಜಾಮೀನು ರಹಿತ ವಾರೆಂಟ್ (NBW) ಹೊರಡಿಸುವ ಮೂಲಕ ದೊಡ್ಡ ಆಘಾತ ನೀಡಿದೆ.

ನವದೆಹಲಿ: ವಿವಾದಾತ್ಮಕ ವಿಡಿಯೋಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ( Dhruv Rathee ) ಅವರಿಗೆ ಇದೀಗ ಕಾನೂನಿನ ಉರುಳು ಮತ್ತಷ್ಟು ಬಿಗಿಯಾಗುತ್ತಿದೆ. ಇತ್ತೀಚೆಗಷ್ಟೇ 'ಕಾಕ್ರೋಚ್ ಜನತಾ ಪಾರ್ಟಿ' (CJP) ಚಳವಳಿಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದು, ದಿಢೀರ್ ವಿದೇಶಕ್ಕೆ ಹಾರಿದ್ದ ರಾಠಿ ಅವರು ಮುಂದಿನ ಬಾರಿ ಭಾರತಕ್ಕೆ ಕಾಲಿಟ್ಟರೆ ಬಂಧನಕ್ಕೊಳಗಾಗುವ ಸಾಧ್ಯತೆ ದಟ್ಟವಾಗಿದೆ.

2018ರ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿಯ ಸಾಕೇತ್ ನ್ಯಾಯಾಲಯವು ಸೋಮವಾರ ರಾಠಿ ವಿರುದ್ಧ ಮೂರನೇ ಬಾರಿಗೆ ವಾರೆಂಟ್ ಜಾರಿಗೊಳಿಸಿದ್ದು, ಈ ಬಾರಿ ಜಾಮೀನು ರಹಿತ ವಾರೆಂಟ್ (NBW) ಹೊರಡಿಸುವ ಮೂಲಕ ದೊಡ್ಡ ಆಘಾತ ನೀಡಿದೆ.

ವಿಕಾಸ್ ಸಂಕೃತ್ಯಾಯನ್ ಅಲಿಯಾಸ್ ವಿಕಾಸ್ ಪಾಂಡೆ ಅವರು 2018ರಲ್ಲಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಾಧೀಶ ಅನಮ್ ರೈಸ್ ಖಾನ್ (ಹಿಂದಿನ ವಿಚಾರಣೆಗಳಲ್ಲಿ ರಾಹುಲ್ ಜೈನ್) ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಅಕ್ಟೋಬರ್ 17 ಮತ್ತು ಅಕ್ಟೋಬರ್ 31 ರಂದು ನ್ಯಾಯಾಲಯವು ಎರಡು ಬಾರಿ ಜಾಮೀನು ಸಹಿತ ವಾರೆಂಟ್‌ಗಳನ್ನು ಜಾರಿಗೊಳಿಸಿತ್ತು.

ಆದರೆ, ನೋಟಿಸ್ ಜಾರಿ ಮಾಡಲು ಹರಿಯಾಣದ ಗುರುಗ್ರಾಮದಲ್ಲಿರುವ ರಾಠಿ ಅವರ ನಿವಾಸಕ್ಕೆ ತೆರಳಿದ್ದ ಸಿಬ್ಬಂದಿಗೆ ಮನೆಗೆ ಬೀಗ ಹಾಕಿರುವುದು ಕಂಡುಬಂದಿತ್ತು. ಪದೇಪದೆ ಸಮನ್ಸ್ ಮತ್ತು ವಾರೆಂಟ್‌ಗಳಿಗೆ ಸ್ಪಂದಿಸದ ಕಾರಣ, ಇದೀಗ ನ್ಯಾಯಾಲಯವು ಕಠಿಣ ನಿಲುವು ತಳೆದು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿ, ಮುಂದಿನ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಿದೆ.

ಈ ಪ್ರಕರಣದ ಹಿನ್ನೆಲೆಯನ್ನು ಗಮನಿಸುವುದಾದರೆ, ಮೇ 2018ರಲ್ಲಿ ಧ್ರುವ್ ರಾಠಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ "ಬಿಜೆಪಿ ಐಟಿ ಸೆಲ್ ಭಾಗ-2" ಎಂಬ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋದಲ್ಲಿ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಮಾನಹಾನಿ ಮಾಡಲಾಗಿದೆ ಎಂದು ದೂರಿ ವಿಕಾಸ್ ಪಾಂಡೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂಬಂಧ ನ್ಯಾಯಾಲಯವು ಮೊದಲ ಬಾರಿಗೆ ಜುಲೈ 2019ರಲ್ಲಿ ರಾಠಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ರಾಠಿ ವಿದೇಶದಲ್ಲಿ ವಾಸವಿದ್ದ ಕಾರಣ ಕಳೆದ ಹಲವು ವರ್ಷಗಳಿಂದ ಅವರಿಗೆ ಸಮನ್ಸ್ ತಲುಪಿಸಲು ದೂರುದಾರರು ಹರಸಾಹಸ ಪಡುತ್ತಿದ್ದರು.

ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ, ಅಕ್ಟೋಬರ್ ಆರಂಭದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲು ಧ್ರುವ್ ರಾಠಿ ಭಾರತಕ್ಕೆ ಆಗಮಿಸಿದ್ದರು. ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ, ಅಕ್ಟೋಬರ್ 10 ರಂದು ದೆಹಲಿಯಲ್ಲಿ ನಿಗದಿಯಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಾಜಧಾನಿಗೆ ತೆರಳಿದ್ದರು. ಈ ವೇಳೆ ಗುರುಗ್ರಾಮದ ಅವರ ನಿವಾಸದಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದು ಸುಮಾರು 20 ಗಂಟೆಗಳ ನಂತರ ಬಿಡುಗಡೆ ಮಾಡಿದ್ದರು. ತಮಗೆ ಕಿರುಕುಳ ನೀಡಲಾಗಿದೆ ಮತ್ತು ಮನೆಯಿಂದ "ಅಪಹರಣ" ಮಾಡಲಾಗಿದೆ ಎಂದು ಆರೋಪಿಸಿದ್ದ ರಾಠಿ, ಕೆಲವೇ ದಿನಗಳಲ್ಲಿ ದಿಢೀರ್ ಆಗಿ ಲಂಡನ್‌ಗೆ ಹಾರಿದ್ದರು.

ರಾಠಿ ಭಾರತಕ್ಕೆ ಬಂದಿದ್ದ ವಿಷಯ ತಿಳಿಯುತ್ತಿದ್ದಂತೆಯೇ ದೂರುದಾರ ವಿಕಾಸ್ ಪಾಂಡೆ ಪರ ವಕೀಲ ಸಮರ್ಥ್ ಶರ್ಮಾ ಅವರು ನ್ಯಾಯಾಲಯದ ಮೊರೆ ಹೋಗಿ, 8 ವರ್ಷಗಳ ಹಳೆಯ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದರು. ರಾಠಿ ಸಾಮಾನ್ಯವಾಗಿ ಆಸ್ಟ್ರಿಯಾದಲ್ಲಿ ವಾಸಿಸುತ್ತಿದ್ದು, ಸಿಜೆಪಿ ಪ್ರತಿಭಟನೆಗಾಗಿ ಭಾರತಕ್ಕೆ ಬಂದಿದ್ದಾರೆ ಎಂದು ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದರು. ಇದೀಗ ಮತ್ತೊಮ್ಮೆ ನೋಟಿಸ್​ ಜಾರಿಯಾಗಿದ್ದು, ಇದಕ್ಕೆ ರಾಠಿ ಯಾವ ರೀತಿ ಉತ್ತರಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

ಮೂಲತಃ ಹರಿಯಾಣದವರಾದ ಧ್ರುವ್ ರಾಠಿ ಜರ್ಮನಿಯಲ್ಲಿ ವ್ಯಾಸಂಗ ಮಾಡಿದ ನಂತರ ಯೂಟ್ಯೂಬ್ ಚಾನೆಲ್ ಆರಂಭಿಸಿ, ಭಾರತೀಯ ರಾಜಕೀಯದ ಕುರಿತಾದ ವಿಡಿಯೋಗಳ ಮೂಲಕ ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದಾರೆ. ಇದೀಗ ಜಾಮೀನು ರಹಿತ ವಾರೆಂಟ್ ಜಾರಿಯಾಗಿರುವುದರಿಂದ, ಅವರು ಭಾರತಕ್ಕೆ ಮರಳಿದ ತಕ್ಷಣ ಬಂಧನದ ಸಂಕಷ್ಟ ಎದುರಿಸಬೇಕಾಗಿದೆ, (ಏಜೆನ್ಸೀಸ್​).