M J Akbar | ಎಂ ಜೆ ಅಕ್ಬರ್ ಸಾಲಿಗೆ ಸೇರಿದ ಪ್ರಧಾನ್!; ಏನದು 2018ರ ಪ್ರಕರಣ..?
ನವದೆಹಲಿ: ನೀಟ್ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಇದು ಇತ್ತೀಚಿನ ಭಾರತೀಯ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಘಟನೆಯಾಗಿ ಹೊರಹೊಮ್ಮಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಚಿವರೊಬ್ಬರು ವಿವಾದಕ್ಕೀಡಾಗಿ ರಾಜೀನಾಮೆ ನೀಡಿದ ಇಂತಹ ಉದಾಹರಣೆ ಹುಡುಕಬೇಕೆಂದರೆ, ನಾವು 2018ರಲ್ಲಿ ಕೇಂದ್ರ ವಿದೇಶಾಂಗ ನಿಯೋಗದ ರಾಜ್ಯ ಸಚಿವ ಸ್ಥಾನಕ್ಕೆ ಎಂ ಜೆ ಅಕ್ಬರ್ (M J Akbar) ರಾಜೀನಾಮೆ ನೀಡಿದ ದಿನಗಳಿಗೆ ಹಿಂತಿರುಗಬೇಕಾಗುತ್ತದೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಬೃಹತ್ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದ್ದು, ಧರ್ಮೇಂದ್ರ ಪ್ರಧಾನ್ ನಿರ್ಗಮನವು ಈ ಚಳವಳಿಯ ಬಹುದೊಡ್ಡ ಗೆಲುವಾಗಿ ಹೊರಹೊಮ್ಮಿದೆ. ನೀಟ್ ಅಕ್ರಮದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡುವುದು ಹಾಗೂ ಸಂಸತ್ ಚಲೋ ಆಂದೋಲನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂಬ ಸರ್ಕಾರದ ಅಭಯದ ಹೊರತಾಗಿಯೂ, ಶಿಕ್ಷಣ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದ್ದ ಪ್ರತಿಭಟನಾಕಾರರು ತಮ್ಮ ಪಟ್ಟಿನಿಂದ ಹಿಂದೆ ಸರಿಯಲು ನಿರಾಕರಿಸಿದ್ದರು. ಅಲ್ಲದೆ, ಸಚಿವರ ರಾಜೀನಾಮೆಯನ್ನು ಮುಂದಿನ ಹಂತದ ಮಾತುಕತೆಗೆ ಪ್ರಮುಖ ಷರತ್ತನ್ನಾಗಿ ಮಾಡಿದ್ದರು.
ರಾಜೀನಾಮೆ ಬಳಿಕ ಪ್ರಧಾನ್ ಹೇಳಿದ್ದಿಷ್ಟು!...
ತಮ್ಮ ಹುದ್ದೆಯಿಂದ ಕೆಳಗಿಳಿದ ನಂತರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಧರ್ಮೇಂದ್ರ ಪ್ರಧಾನ್, ನೀಟ್ ಪೇಪರ್ ಸೋರಿಕೆಯ ನೈತಿಕ ಹೊಣೆಗಾರಿಕೆಯನ್ನು ತಾವು ವಹಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ನಾನು ಈ ಆಪಾದನೆಯಿಂದ ಎಂದಿಗೂ ಓಡಿಹೋಗಿಲ್ಲ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಕೆಲವು ವ್ಯಕ್ತಿಗಳು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಮತ್ತು ಅಡೆತಡೆಗಳನ್ನು ಸೃಷ್ಟಿಸಲು ಯತ್ನಿಸಿದರು.
ಜಂತರ್ ಮಂತರ್ ಹಾಗೂ ದೇಶಾದ್ಯಂತ ಇರುವ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು, ದೇಶದ್ರೋಹಿ ಶಕ್ತಿಗಳು ಇದನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು, ರಾಷ್ಟ್ರೀಯ ಐಕ್ಯತೆಯನ್ನು ಕಾಪಾಡಲು, ಯಾವುದೇ ಭಾರತೀಯ ವಿದ್ಯಾರ್ಥಿಯ ಭವಿಷ್ಯ ಕಾನೂನು ಸಂಕಷ್ಟದಲ್ಲಿ ಸಿಲುಕದಂತೆ ನೋಡಿಕೊಳ್ಳಲು ಮತ್ತು ಮಕ್ಕಳು ತಮ್ಮ ವ್ಯಾಸಂಗ ಹಾಗೂ ವೃತ್ತಿಜೀವನದತ್ತ ಗಮನಹರಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ನಾನು ಪ್ರಧಾನಮಂತ್ರಿಯವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ, ಸಾಲು ಸಾಲು ವಿವಾದಗಳು ಎದುರಾದರೂ ಸಚಿವರು ರಾಜೀನಾಮೆ ನೀಡುವುದಿಲ್ಲ ಹಾಗೂ ಕೇಂದ್ರ ಸರ್ಕಾರವು ಅಹಂಕಾರದ ಧೋರಣೆ ತಳೆದಿದೆ ಎಂದು ವಿರೋಧ ಪಕ್ಷಗಳು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದವು. ಆದರೆ ಧರ್ಮೇಂದ್ರ ಪ್ರಧಾನ್ ನಿರ್ಗಮನವು ಈ ಸುದೀರ್ಘ ಪರಿಪಾಟಕ್ಕೆ ಅಪರೂಪದ ವಿನಾಯಿತಿಯಂತೆ ಕಂಡುಬಂದಿದೆ.
ಇದಕ್ಕೂ ಮುನ್ನ ಆಗಿದ್ದೇನು..?
ಇದಕ್ಕೂ ಮುನ್ನ, 2018ರಲ್ಲಿ ಇದೇ ರೀತಿಯ, ಆದರೆ ಸಂಪೂರ್ಣ ವಿಭಿನ್ನ ಸ್ವರೂಪದ ಆರೋಪಗಳಿಂದಾಗಿ ಎಂ ಜೆ ಅಕ್ಬರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ದೇಶದಲ್ಲಿ ಸದ್ದು ಮಾಡಿದ್ದ ಮೀ ಟೂ ಅಭಿಯಾನದ ಸಮಯದಲ್ಲಿ, ಹಲವು ಪ್ರಮುಖ ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಅಕ್ಬರ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹಲವು ಮಹಿಳೆಯರು ಆರೋಪಿಸಿದ್ದರು.
ಅಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಅಕ್ಬರ್ ಅವರದ್ದೇ ಆಗಿತ್ತು ಮತ್ತು ಅವರು ಬಿಜೆಪಿಯಲ್ಲೇ ಮುಂದುವರಿಯಲಿದ್ದಾರೆ ಹಾಗೂ ಇದು ಯಾವುದೇ ಮುಂದಿನ ಉದಾಹರಣೆಯಾಗುವುದಿಲ್ಲ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿದ್ದವು. ರಾಜೀನಾಮೆಗೂ ಮುನ್ನ, ಸಾಕ್ಷ್ಯಾಧಾರಗಳಿಲ್ಲದ ಆರೋಪಗಳು ವೈರಲ್ ಜ್ವರದಂತಿವೆ ಎಂದು ಹೇಳುವ ಮೂಲಕ ಅಕ್ಬರ್ ರಾಜೀನಾಮೆ ಕರೆಯನ್ನು ತಳ್ಳಿಹಾಕಿದ್ದರು(ಏಜೆನ್ಸೀಸ್).