Misbehave flights (ಸಾಂದರ್ಭಿಕ ಚಿತ್ರ) 
ದೇಶ

ವಿಮಾನದಲ್ಲಿ ಅಶಿಸ್ತು ತೋರಿದರೆ 2 ವರ್ಷ ನಿಷೇಧ: ಡಿಜಿಸಿಎ ಹೊಸ ಬ್ರಹ್ಮಾಸ್ತ್ರ! Misbehave flights

Misbehave flights : ವಿಮಾನ ಪ್ರಯಾಣದ ಸಂದರ್ಭದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಅಶಿಸ್ತಿನ ವರ್ತನೆಗಳನ್ನು ನಿಯಂತ್ರಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಅತ್ಯಂತ ಕಠಿಣ ಕ್ರಮಗಳಿಗೆ ಮುಂದಾಗಿದೆ. ವಿಮಾನಯಾನ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡುವ ನಿಟ್ಟಿನಲ್ಲಿ ಡಿಜಿಸಿಎ ನಿಯಮಗಳಿಗೆ ಮಹತ್ವದ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ.
ಡಿಜಿಸಿಎ ಪ್ರಸ್ತಾಪಿಸಿರುವ ಹೊಸ ಶಿಫಾರಸುಗಳ ಪ್ರಕಾರ, ಯಾವುದೇ ವ್ಯಕ್ತಿಯು ವಿಮಾನದಲ್ಲಿ ಅನುಚಿತವಾಗಿ ವರ್ತಿಸುವುದು ಕಂಡುಬಂದರೆ ವಿಮಾನ ಸಂಸ್ಥೆಯು ತಕ್ಷಣವೇ ಜಾರಿಗೆ ಬರುವಂತೆ 30 ದಿನಗಳವರೆಗೆ ನಿಷೇಧಿಸುವ ಅಧಿಕಾರವನ್ನು ಹೊಂದಿರುತ್ತವೆ.
ಇದು ವಿಮಾನ, ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಸುರಕ್ಷತೆಯನ್ನು ಖಚಿತಪಡಿಸುವ ಸಲುವಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯವು 'ಶೂನ್ಯ ಸಹಿಷ್ಣುತೆ ನೀತಿ'ಯನ್ನು ಜಾರಿಗೆ ತರುವ ಗುರಿಯನ್ನು ಹೊಂದಿದೆ.
ಹೊಸ ನಿಯಮಗಳ ಅಡಿಯಲ್ಲಿ, ಪ್ರತಿಯೊಂದು ವಿಮಾನ ಸಂಸ್ಥೆಯು ಅಶಿಸ್ತಿನ ಪ್ರಯಾಣಿಕರನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಲಿಖಿತ ನಿಯಮಾವಳಿಯನ್ನು ಹೊಂದಬೇಕು ಜೊತೆಗೆ DGCA ಗೆ ವರದಿ ಮಾಡಬೇಕು. ಆದಾಗ್ಯೂ, ಪ್ರಯಾಣಿಕರ ನಿಷೇಧ ಬಗ್ಗೆ ನಿರ್ಧರಿಸಲು ಏಕಪಕ್ಷೀಯವಾಗಿ ಕ್ರಮ ತೆಗೆದುಕೊಳ್ಳದೇ ಮತ್ತೊಂದು ವಿಮಾನಯಾನ ಸಂಸ್ಥೆಯ ಪ್ರತಿನಿಧಿಯನ್ನು ಒಳಗೊಂಡ ಸ್ವತಂತ್ರ ಸಮಿತಿಯನ್ನು ರಚಿಸಲಾಗುತ್ತದೆ.
ಕೆಲವು ಸಂದರ್ಭಗಳಲ್ಲಿ ವಿಮಾನಯಾನ ಸಂಸ್ಥೆಗಳು ಸ್ವತಂತ್ರ ಸಮಿತಿಗೆ ಉಲ್ಲೇಖಿಸದೆಯೇ ಪ್ರಯಾಣಿಕರ ಮೇಲೆ 30 ದಿನಗಳ ನಿಷೇಧವನ್ನು ಹೇರಬಹುದು ಎಂದು ತಿಳಿಸಿದ್ದಾರೆ.
ವಿಮಾನದಲ್ಲಿ ಧೂಮಪಾನ ಮಾಡುವುದು, ದೇಶೀಯ ವಿಮಾನಗಳಲ್ಲಿ ಮದ್ಯ ಸೇವಿಸುವುದು, ತುರ್ತು ನಿರ್ಗಮನ ದ್ವಾರಗಳ ದುರುಪಯೋಗ, ಲೈಫ್ ಜಾಕೆಟ್‌ಗಳು ಸೇರಿದಂತೆ ಜೀವರಕ್ಷಕ ಸಾಧನಗಳನ್ನು ಅಕ್ರಮವಾಗಿ ಬಳಸುವ ಮೂಲಕ ಕಾನೂನು ಉಲ್ಲಂಘಿಸುವವರ ವಿರುದ್ಧ ತ್ವರಿತ ಕ್ರಮ ತೆಗೆದುಕೊಳ್ಳಬಹುದು ಎಂದು ಉಲ್ಲೇಖಿಸಿದೆ.
ಪ್ರಸ್ತುತ ಕಾನೂನಿನಡಿಯಲ್ಲಿ, ಸ್ವತಂತ್ರ ಸಮಿತಿಯ ನಿರ್ಧಾರ ಬರುವವರೆಗೆ ಸಂಸ್ಥೆಗಳು 45 ದಿನಗಳವರೆಗೆ ನಿಷೇಧವನ್ನು ಹೇರಬಹುದು. ಆದಾಗ್ಯೂ, ಹೊಸ ತಿದ್ದುಪಡಿಯಲ್ಲಿ ಈ ನಿಬಂಧನೆಯನ್ನು ಉಳಿಸಿಕೊಳ್ಳಲಾಗಿದ್ದು, ಅಪರಾಧದ ತೀವ್ರತೆಯನ್ನು ಅವಲಂಬಿಸಿ ಪ್ರಯಾಣ ನಿಷೇಧವನ್ನು ನಾಲ್ಕು ಹಂತಗಳಲ್ಲಿ ವಿಂಗಡಿಸಲಾಗಿದೆ.
ಹಂತ 1: ಮೌಖಿಕ ನಿಂದನೆ, ಅಸಭ್ಯ ವರ್ತನೆ ಅಥವಾ ಸಿಬ್ಬಂದಿಯ ಸೂಚನೆ ಪಾಲಿಸದವರಿಗೆ 3 ತಿಂಗಳ ಕಾಲ ನಿಷೇಧ
ಹಂತ 2: ದೈಹಿಕ ಹಲ್ಲೆ (ತಳ್ಳುವುದು, ಹೊಡೆಯುವುದು, ಒದೆಯುವುದು) ಅಥವಾ ಲೈಂಗಿಕ ಕಿರುಕುಳಕ್ಕಾಗಿ ಆರು ತಿಂಗಳವರೆಗೆ ನಿಷೇಧ
ಹಂತ 3: ಮಾರಣಾಂತಿಕ ಹಲ್ಲೆ ಅಥವಾ ಅತ್ಯಂತ ಗಂಭೀರ ಸ್ವರೂಪದ ಕೃತ್ಯಗಳು ಕಂಡುಬಂದರೆ 2 ವರ್ಷಕ್ಕಿಂತ ಹೆಚ್ಚು ಕಾಲ ನಿಷೇಧ
ಹಂತ 4: ವಿಮಾನದ ಸುರಕ್ಷತೆಗೆ ನೇರ ಧಕ್ಕೆ, ಬಾಗಿಲು ತೆರೆಯುವ ಯತ್ನ, ಜೀವರಕ್ಷಕ ಸಾಧನಗಳ ದುರುಪಯೋಗ ಪಡಿಸಿದ್ದಲ್ಲಿ 2 ವರ್ಷಗಳ ಕಾಲ ನಿಷೇಧಿಸಲಿದೆ (ಏಜೆನ್ಸೀಸ್​).