ವಿದ್ಯಾರ್ಥಿಯ ತಲೆಯನ್ನೇ ವಾದ್ಯದಂತೆ ಬಾರಿಸಿದ ಶಿಕ್ಷಕ ದಿನೇಶ್ ಕುಮಾರ್ ಮಾಥುರ್ 
ದೇಶ

ವಿದ್ಯಾರ್ಥಿಯ ತಲೆಯನ್ನೇ ‘ತಬಲಾ’ ಮಾಡಿದ ವಿಕೃತ ಶಿಕ್ಷಕ: ವಿಡಿಯೋ ವೈರಲ್ ಬೆನ್ನಲ್ಲೇ ಶಿಕ್ಷಣ ಇಲಾಖೆಯಿಂದ ಗೇಟ್‌ಪಾಸ್! Teacher Suspended

ಉತ್ತರ ಪ್ರದೇಶದ ಇಟಾವಾದಲ್ಲಿ ಮುಗ್ಧ ಶಾಲಾ ವಿದ್ಯಾರ್ಥಿಯ ತಲೆಯನ್ನೇ ತಬಲಾ ಬಾರಿಸಿ ವಿಕೃತಿ ಮೆರೆದ ಸರ್ಕಾರಿ ಶಿಕ್ಷಕ ದಿನೇಶ್ ಕುಮಾರ್ ಮಾಥುರ್ ಅಮಾನತು. ವೈರಲ್ ವಿಡಿಯೋ ಹಾಗೂ ಸಂಪೂರ್ಣ ವರದಿ ಇಲ್ಲಿದೆ.

ಇಟಾವಾ: ಶಾಲೆ ಅಂದರೆ ಅದು ಮಕ್ಕಳಿಗೆ ಜ್ಞಾನ ನೀಡುವ ದೇಗುಲ. ಅಲ್ಲಿ ಶಿಕ್ಷಕರು ಮಕ್ಕಳಿಗೆ ಪ್ರೀತಿಯಿಂದ ಪಾಠ ಹೇಳಿಕೊಟ್ಟು ದಾರಿದೀಪವಾಗಬೇಕು. ಆದರೆ ಇಲ್ಲೊಬ್ಬ ಸರ್ಕಾರಿ ಶಾಲಾ ಶಿಕ್ಷಕ ಮಾಡಿರುವ ಅಮಾನವೀಯ ಕೃತ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪಾಠ ಮಾಡಬೇಕಾದ ಶಿಕ್ಷಕ ವಿದ್ಯಾರ್ಥಿಯೊರ್ವನ ತಲೆಯನ್ನೇ ‘ತಬಲಾ’ ಮಾಡಿಕೊಂಡು ಬಾರಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

ವಿಡಿಯೋನಲ್ಲೇನಿದೆ?

ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ದಿನೇಶ್ ಕುಮಾರ್ ಮಾಥುರ್ ಎಂಬ ಶಿಕ್ಷಕ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ತರಗತಿಯೊಳಗೆ ಶಿಕ್ಷಕ ಮಾಥುರ್ ಕುರ್ಚಿಯ ಮೇಲೆ ಕುಳಿತಿದ್ದರೆ, ಎದುರಿಗೆ ಬಾಲಕನೊಬ್ಬ ನೆಲದ ಮೇಲೆ ಕುಳಿತ್ತಿದ್ದಾನೆ.

ನಂತರ ಶಿಕ್ಷಕ ಮಾಥುರ್​, ಆ ವಿದ್ಯಾರ್ಥಿ ತಲೆಯ ಮೇಲೆ ಕೈಗಳನ್ನಿಟ್ಟು ತಬಲಾ ನುಡಿಸುವ ಶೈಲಿಯಲ್ಲಿ ಬಾರಿಸಲು ಶುರು ಮಾಡಿದ್ದಾರೆ. ಮಗುವಿನ ತಲೆಯನ್ನೇ ವಾದ್ಯದಂತೆ ಬಳಸಿಕೊಂಡು ಅಪಹಾಸ್ಯ ಮಾಡಲಾಗಿದೆ. ವಿಪರ್ಯಾಸವೆಂದರೆ, ಈ ಸಂಪೂರ್ಣ ದೃಶ್ಯವನ್ನು ಸ್ವತಃ ಶಿಕ್ಷಕ ದಿನೇಶ್ ಕುಮಾರ್ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರಂತೆ.

ಶಿಕ್ಷಕನಿಂದಲೇ ವಿಡಿಯೋ ಅಪ್​ಲೋಡ್​!

ತಾನು ಮಾಡಿದ್ದು ತಪ್ಪು ಎನ್ನುವ ಕಿಂಚಿತ್ತೂ ಅರಿವಿಲ್ಲದ ಈ ಶಿಕ್ಷಕ, ಆ ವಿಡಿಯೋವನ್ನು ಹೆಮ್ಮೆಯಿಂದ ತಮ್ಮದೇ ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಕೂಡ ಮಾಡಿಕೊಂಡಿದ್ದಾರೆ. ಇಂಟರ್‌ನೆಟ್‌ನಲ್ಲಿ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ ವೈರಲ್​ ಹರಿದಾಡಿದೆ. ಮುಗ್ಧ ಮಗುವಿನ ಮೇಲೆ ಈ ರೀತಿ ಅಮಾನವೀಯವಾಗಿ ನಡೆದುಕೊಂಡಿದ್ದನ್ನು ಕಂಡ ನೆಟ್ಟಿಗರು ಶಿಕ್ಷಕನ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಶಿಕ್ಷಣ ಇಲಾಖೆಯ ಖಡಕ್ ಆಕ್ಷನ್: ಶಿಕ್ಷಕ ಸಸ್ಪೆಂಡ್

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿ ಸಾರ್ವಜನಿಕರ ಆಕ್ರೋಶ ಭುಗಿಲೇಳುತ್ತಿದ್ದಂತೆ, ಈ ವಿಷಯ ಉತ್ತರ ಪ್ರದೇಶದ ಶಿಕ್ಷಣ ಇಲಾಖೆ ಗಮನಕ್ಕೆ ಬಂದಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತವಾಗಿದೆ. ಶಿಕ್ಷಕನ ಈ ನಡೆ ಶಿಸ್ತುಭಂಗ ಎಂದು ಪರಿಗಣಿಸಿದ ಶಿಕ್ಷಣ ಇಲಾಖೆ, ದಿನೇಶ್ ಕುಮಾರ್ ಮಾಥುರ್​ರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ತನಿಖೆಗೆ ಆದೇಶ, ಕಠಿಣ ಕ್ರಮದ ಎಚ್ಚರಿಕೆ

ಶಿಕ್ಷಕನನ್ನು ಕೇವಲ ಅಮಾನತು ಮಾಡಿ ಕೈತೊಳೆದುಕೊಳ್ಳದ ಶಿಕ್ಷಣ ಇಲಾಖೆ, ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆಗೂ ಆದೇಶಿಸಿದೆ. ತರಗತಿ ಕೊಠಡಿಯಲ್ಲಿ ಇಂತಹ ಅಶಿಸ್ತು ಮತ್ತು ಬೇಜವಾಬ್ದಾರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತನಿಖಾ ವರದಿ ಕೈಸೇರಿದ ನಂತರ ಶಿಕ್ಷಕನ ವಿರುದ್ಧ ಮುಂದಿನ ಕಠಿಣ ಕಾನೂನು ಮತ್ತು ಇಲಾಖಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್).