ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಮಾತನಾಡುತ್ತಿರುವುದು 
ದೇಶ

"ಮತದಾನದ ಹಕ್ಕನ್ನು ಕಸಿದರೆ, ಪ್ರಜಾಪ್ರಭುತ್ವದ ಆತ್ಮವನ್ನೇ ಕಿತ್ತಂತೆ": SIR ವಿರುದ್ಧ ಗುಡುಗಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ! Ujjal Bhuyan

ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಪ್ರಜಾಪ್ರಭುತ್ವದ ಆತ್ಮವನ್ನೇ ಕಿತ್ತಂತೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಎಚ್ಚರಿಸಿದ್ದಾರೆ. ಎಸ್‌ಐಆರ್ (SIR) ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಸಂಪೂರ್ಣ ವರದಿ ಇಲ್ಲಿದೆ.

ಹೈದರಾಬಾದ್‌: ಮತದಾರರ ಪಟ್ಟಿಯಿಂದ ಲಕ್ಷಾಂತರ ಜನರ ಹೆಸರುಗಳು ಏಕಾಏಕಿ ನಾಪತ್ತೆಯಾಗುತ್ತಿರುವ ವರದಿಗಳ ಬೆನ್ನಲ್ಲೇ, ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ನೀಡಿರುವ ಖಡಕ್ ಎಚ್ಚರಿಕೆ ಈಗ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೈದರಾಬಾದ್‌ನ NALSAR ಮೂಟ್ ಕೋರ್ಟ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಜಸ್ಟೀಸ್ ಉಜ್ಜಲ್ ಭುಯಾನ್, ಕೇವಲ ಸಾಂವಿಧಾನಿಕ ವಿಚಾರಗಳನ್ನಷ್ಟೇ ಅಲ್ಲ, ನೇರವಾಗಿ ಜನಸಾಮಾನ್ಯರ ಧ್ವನಿಯಾಗಿ ಸರ್ಕಾರದ ಗಮನ ಸೆಳೆದಿದ್ದಾರೆ. "ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಅಂದರೆ ಮನುಷ್ಯನ ಶರೀರದಿಂದ ಆತ್ಮವನ್ನೇ ಹೊರತೆಗೆದಂತೆ" ಎಂದು ಅವರು ಬಣ್ಣಿಸಿರುವುದು ಪ್ರತಿಯೊಬ್ಬರ ಹುಬ್ಬೇರಿಸುವಂತೆ ಮಾಡಿದೆ.

ದೇಶದಲ್ಲೇ ದ್ವಿತೀಯ ದರ್ಜೆ ನಾಗರಿಕರು?

ಚುನಾವಣಾ ಆಯೋಗ ನಡೆಸುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ಹೆಸರಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ಕೈಬಿಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, "ಲಕ್ಷಾಂತರ ಭಾರತೀಯರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸುವ ಪ್ರಕ್ರಿಯೆ ಅದು ನಿರಂಕುಶವಾದವಾಗುತ್ತದೆ. ಇದಕ್ಕೆ ಎಷ್ಟೇ ಸಮರ್ಥನೆಗಳನ್ನು ನೀಡಿದರೂ ಅದನ್ನು ಒಪ್ಪಲು ಸಾಧ್ಯವಿಲ್ಲ" ಎಂದಿದ್ದಾರೆ. ಇದು ನಮ್ಮ ಸಂವಿಧಾನದ ಮೂಲ ಆಶಯಕ್ಕೇ ನೇರವಾದ ಧಕ್ಕೆಯಾಗಿದ್ದು, ನಮ್ಮದೇ ದೇಶದಲ್ಲಿ ಅರ್ಹ ನಾಗರಿಕರನ್ನು ದ್ವಿತೀಯ ದರ್ಜೆಯವರಂತೆ ನೋಡುವ ವ್ಯವಸ್ಥೆಯನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ" ಎಂದು ಎಚ್ಚರಿಸಿದ್ದಾರೆ.

ಸಂವಿಧಾನದ 14 ಮತ್ತು 326ನೇ ವಿಧಿ ಹೇಳುವುದೇನು?

ನಮ್ಮ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡಿದ್ದು, ಸಂವಿಧಾನದ ಪ್ರಕಾರ ಭಾರತದಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ವಿಧಿ 326 ಪ್ರಕಾರ 18 ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯರಿಗೂ ಯಾವುದೇ ತಾರತಮ್ಯವಿಲ್ಲದೆ ಮತದಾರರಾಗಿ ನೋಂದಾಯಿಸಿಕೊಳ್ಳಲು ಮತ್ತು ಓಟು ಹಾಕಲು ಹಕ್ಕನ್ನು ನೀಡುತ್ತದೆ. ವಿಧಿ 14 ಪ್ರಕಾರ ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಸರ್ಕಾರದ ನಿರಂಕುಶ ಕ್ರಮಗಳಿಂದ ಪ್ರತಿಯೊಬ್ಬರಿಗೂ ರಕ್ಷಣೆ ಒದಗಿಸುತ್ತದೆ.

"ಭಾರತೀಯ ಸಂವಿಧಾನವು ತನ್ನ ಜನರನ್ನು ಎಂದಿಗೂ 'ಓಟು ಇರುವವರು' ಮತ್ತು 'ಓಟು ಇಲ್ಲದವರು' ಎಂದು ಎರಡು ವರ್ಗಗಳಾಗಿ ವಿಂಗಡಿಸಿಲ್ಲ" ಎಂದು ಜಸ್ಟೀಸ್ ಭುಯಾನ್ ಸ್ಪಷ್ಟಪಡಿಸಿದ್ದಾರೆ. ಯಾವುದೇ ಪ್ರಾಧಿಕಾರವಾಗಲಿ ಅಥವಾ ನ್ಯಾಯಾಲಯವಾಗಲಿ 326ನೇ ವಿಧಿಯ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ. ಸಂವಿಧಾನಕ್ಕಿಂತ ದೊಡ್ಡವರು ಯಾರೂ ಇಲ್ಲ ಎಂದು ಅವರು ನುಡಿದಿದ್ದಾರೆ.

ಡಾ. ಅಂಬೇಡ್ಕರ್ ದೂರದೃಷ್ಟಿ ನೆನಪಿಸಿದ ಜಸ್ಟೀಸ್ ಭುಯಾನ್

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಿರಲು ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿಯೇ ಕಾರಣ ಎಂದಿದ್ದಾರೆ. ವಯಸ್ಕರ ಮತದಾನದ ಹಕ್ಕನ್ನು ಕೇವಲ ಸಂಸತ್ತಿನ ಕಾನೂನು ಬದಲಾವಣೆಗಳ ವ್ಯಾಪ್ತಿಗೆ ಬಿಡಬಾರದು ಎಂದಿದ್ದಾರೆ. ಬದಲಿಗೆ ಅದನ್ನು ಸಂವಿಧಾನದಲ್ಲೇ ಭದ್ರವಾಗಿ ಲಿಖಿತವಾಗಿ ಅಳವಡಿಸಬೇಕು ಎಂದು ಅಂಬೇಡ್ಕರ್ ವಾದಿಸಿದ್ದರು. ಅದನ್ನು ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಪ್ರಸ್ತಾಪಿಸಿ, ವಿದೇಶಿ ಆಳ್ವಿಕೆಯ ವಿರುದ್ಧ ನಮ್ಮವರು ನಡೆಸಿದ ಸುದೀರ್ಘ ಹೋರಾಟದ ಫಲವೇ ಈ ಸಾರ್ವತ್ರಿಕ ಮತದಾನದ ಹಕ್ಕು ಎಂದು ನೆನಪಿಸಿದ್ದಾರೆ, (ಏಜೆನ್ಸೀಸ್​).