ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ನವಿ ಪಿಳ್ಳೈಗೆ ಅಭಿನಂದನೆ ಸಲ್ಲಿಸದ ಕೇಂದ್ರ ಸರ್ಕಾರ.
ಆರು ದಿನ ಕಳೆದರೂ ಮೌನವಾಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಶಶಿ ತರೂರ್ ಕಿಡಿ.
ಶಶಿ ತರೂರ್ ಪೋಸ್ಟ್ ವಿರುದ್ಧ ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಲ್ ಸಿಬಲ್ ಕೆಂಡ.
Shashi Tharoor: 'ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಭಾರತ ಮೂಲದ, ದಕ್ಷಿಣ ಆಫ್ರಿಕಾದ ಪ್ರಸಿದ್ಧ ನ್ಯಾಯಶಾಸ್ತ್ರಜ್ಞೆ ನವಿ ಪಿಳ್ಳೈ ಅವರಿಗೆ ಕೇಂದ್ರ ಸರ್ಕಾರ ಅಭಿನಂದನೆ ಸಲ್ಲಿಸಿಲ್ಲ. ಪ್ರಶಸ್ತಿ ಪ್ರದಾನವಾಗಿ ಆರು ದಿನ ಕಳೆದಿದೆ. ಇಲ್ಲಿಯವರೆಗೂ ಸರ್ಕಾರ ಮೌನಾಗಿದೆ ಎಂದು ಸಂಸದ ಶಶಿ ತರೂರ್ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡು ಕಿಡಿಕಾರಿದ್ದಾರೆ.
ನವನೀತಮ್ ನವಿ ಪಿಳ್ಳೈ ಪೂರ್ವಜರು 130 ವರ್ಷಗಳ ಹಿಂದೆ ಭಾರತ ತೊರೆದರು. ಮೊದಲು ಶ್ರೀಲಂಕಾದಲ್ಲಿ ನೆಲೆಸಿದ್ದ ಅವರು..ಕೊನೆಗೆ ದಕ್ಷಿಣ ಆಫ್ರಿಕಾಕ್ಕೆ ತೆರಳಿ ಅಲ್ಲಿಯೇ ನೆಲೆಯೂರಿದರು. 1941 ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್ನಲ್ಲಿ ನವಿ ಪಿಳ್ಳೈ ಜನಿಸಿದರು. ಅಲ್ಲಿ ಬಡತನ ಮತ್ತು ವರ್ಣಭೇದ ನೀತಿಯ ತಾರತಮ್ಯವನ್ನು ಎದುರಿಸುತ್ತಾ ಬೆಳೆದರು. ನವಿ ಪಿಳ್ಳೈ ಅವರಿಗೆ ಅಂತರರಾಷ್ಟ್ರೀಯ ಕಾನೂನು ಮತ್ತು ಮಾನವ ಹಕ್ಕುಗಳ ರಕ್ಷಣೆಯಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗಾಗಿ 2026ರ ನೋಬೆಲ್ ಶಾಂತಿ ಪ್ರಶಸ್ತಿ ದಕ್ಕಿದ್ದು, ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಅವರ ಸಂಬಂಧಿಕರಲ್ಲಿ ಸಂಭ್ರಮ ಮೂಡಿತ್ತು.
ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ AI-ಸೃಷ್ಟಿಸಿದ ವಿಡಿಯೋದೊಂದಿಗೆ ಪೋಸ್ಟ್ ಹಂಚಿಕೊಂಡಿದ್ದ ಶಶಿ ತರೂರ್, ಭಾರತ ಮೂಲದ ಈ ಅದ್ಭುತ ಮಹಿಳೆ ನೊಬೆಲ್ ಶಾಂತಿ ಪ್ರಶಸ್ತಿ ಪಡೆದು ಆರು ದಿನ ಕಳೆದಿದೆ. ಆದರೆ, ಈಕೆಯ ಪೂರ್ವಜರ ತಾಯ್ನಾಡಾದ ಭಾರತ. ಇಲ್ಲಿನ ಕೇಂದ್ರ ಸರ್ಕಾರ ಇವರನ್ನು ಕನಿಷ್ಠ ಅಭಿನಂದಿಸಿಯೂ ಇಲ್ಲವೇ? ಇಂತಹ ಹೀನ ನಿರ್ಧಾರ ಕೈಗೊಂಡ ವ್ಯಕ್ತಿಗಳಿಗೆ ಧಿಕ್ಕಾರವಿರಲಿ" ಎಂದು ಆಕ್ರೋಶ ಹೊರಹಾಕಿದ್ದರು. ಈ ಪೋಸ್ಟ್ ಸದ್ಯ ರಾಜಕೀಯ ವಲಯದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ತರೂರ್ ಅವರ ಈ ಪೋಸ್ಟ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾದವು. ಪ್ರಿಯಾಂಕಾ ಎಂಬ ಎಕ್ಸ್ ಬಳಕೆದಾರರು, ತರೂರ್ ಅವರ ರಾಜಕೀಯ ನಿಲುವುಗಳನ್ನು ಟೀಕಿಸಿ, ನೊಬೆಲ್ ಕಪಟತನ ಪ್ರಶಸ್ತಿ ನೀಡಿದರೆ ಆ ಬಿರುದು ನಿಮಗೆ ಸಿಗಬೇಕು.
ಅಲ್ಲದೆ, ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಲ್ ಸಿಬಲ್ ತರೂರ್ ಅವರ ನಿಲುವನ್ನು ಕಟುವಾಗಿ ಟೀಕಿಸಿದರು. ನವಿ ಪಿಳ್ಳೈ ಅವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉನ್ನತ ಆಯುಕ್ತರಾಗಿದ್ದ ಅವಧಿಯಲ್ಲಿ (2008-2014) ಭಾರತದ ವಿರುದ್ಧ ಮಾನವ ಹಕ್ಕುಗಳ ವಿಚಾರವಾಗಿ ನಿರಂತರವಾಗಿ ಟೀಕೆಗಳನ್ನು ಮಾಡಿದ್ದರು. ಕೇವಲ ಭಾರತೀಯ ಮೂಲದವರಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಭಾರತ ಸರ್ಕಾರ ಅವರನ್ನು ಅಭಿನಂದಿಸಬೇಕೆ? ಅವರ ಅವಧಿಯಲ್ಲಿ ಭಾರತದೊಂದಿಗೆ ಅನೇಕ ನೀತಿ ಸಂಘರ್ಷಗಳು ನಡೆದಿದ್ದವು. ಎಂದು ಸಿಬಲ್ ಸಮರ್ಥಿಸಿಕೊಂಡರು, (ಏಜೆನ್ಸೀಸ್).