Departure of influential people 
ದೇಶ

ಪ್ರಭಾವಿಗಳ ನಿರ್ಗಮನ

ಕಳೆದ ಕೆಲವೇ ತಿಂಗಳ ಅವಧಿಯಲ್ಲಿ ಅನುಭವಿ ಮತ್ತು ವಯಸ್ಸಿನಲ್ಲಿ ಹಿರಿಯರಾದ ಹಲವು ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಂಡಿದ್ದು, ಈ ರಾಜಕೀಯ ಸ್ಥಿತ್ಯಂತರ ಹೊಸ ಸಮೀಕರಣ ಹುಟ್ಟುಹಾಕಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಕೇರಳದಲ್ಲಿ ಪಿಣರಾಯಿ ವಿಜಯನ್, ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್, ಬಿಹಾರದಲ್ಲಿ ನಿತೀಶ್ ಕುಮಾರ್, ಕರ್ನಾಟಕದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸಿದ್ದಾರೆ. ಈ ಎಲ್ಲ ನಾಯಕರು ದೀರ್ಘಾವಧಿ ಆಡಳಿತ ನಡೆಸಿದ್ದಾರೆ. ಅದೇನಿದ್ದರೂ ರಾಜಕೀಯದ ಪ್ರವಾಹದಲ್ಲಿ ಯಾವುದೂ ಶಾಶ್ವತವಲ್ಲ ಎಂಬುದಕ್ಕೆ ಈ ಬೆಳವಣಿಗೆ ಸಾಕ್ಷಿಯಾಗಿದೆ.
ಆಡಳಿತದ ಖದರ್, ಕಠಿಣ ಮತ್ತು ದಿಟ್ಟ ನಿರ್ಧಾರಗಳು, ಐತಿಹಾಸಿಕ ಕ್ರಮಗಳು ಜತೆಗೆ ಒಂದಿಷ್ಟು ವಿವಾದಗಳು-ಟೀಕೆಗಳು... ಭಾರತದ ರಾಜಕೀಯವನ್ನು ಅವಲೋಕಿಸಿದರೆ ಇಂಥ ಅನೇಕ ಅಧ್ಯಾಯಗಳು ಕಾಣಸಿಗುತ್ತವೆ ಮತ್ತು ಈ ಮರೆಯಲಾಗದ ಅಧ್ಯಾಯಗಳ ನಾಯಕ/ನಾಯಕಿಯೇ ಮುಖ್ಯಮಂತ್ರಿ. ಗುಜರಾತ್‌ನಲ್ಲಿ ಹನ್ನೆರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ ನರೇಂದ್ರ ಮೋದಿ ವರ್ಚಸ್ಸು ದೇಶಾದ್ಯಂತ ಹರಡಿತು. ಹಾಗಾಗಿಯೇ, ಕಳೆದ 12 ವರ್ಷಗಳಿಂದ ಅವರು ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಆದ್ದರಿಂದಲೇ, ಆಯಾ ರಾಜ್ಯಗಳು ಮತ್ತು ಮುಖ್ಯಮಂಟ್ರಿಯನ್ನು ನೆನಪಿಸಿಕೊಂಡಾಕ್ಷಣ ಕೆಲವು ನಾಯಕರ ಆಡಳಿತ ತಕ್ಷಣ ಕಣ್ಮುಂದೆ ಸುಳಿಯುತ್ತದೆ. ರಾಜಕೀಯದಲ್ಲಿ ಅನುಭವಕ್ಕೆ ಮನ್ನಣೆ ಇದ್ದೇ ಇದೆ. ಹೀಗೆ ಬಹುಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರು, ದಿಢೀರನೆ ಸಿಎಂ ಕುರ್ಚಿಯಿಂದ ಕೆಳಗಿಳಿದಾಗ ಒಂದು ಬಗೆಯ ರಾಜಕೀಯ ನಿರ್ವಾತ ಸೃಷ್ಟಿಯಾಗುತ್ತದೆ. ಆಡಳಿತದಲ್ಲಿ ಮಾಗಿದ ಅನುಭವಿ ಮುಖ್ಯಮಂತ್ರಿಗಳು ಕಾಕತಾಳೀಯ ಎಂಬಂತೆ ಕಳೆದ ಕೆಲವೇ ತಿಂಗಳಲ್ಲಿ ಅಧಿಕಾರದಿಂದ ನಿರ್ಗಮಿಸಿದ್ದಾರೆ. ಈ ಮೂಲಕ ಹಳೆಯ ತಲೆಮಾರುಗಳ ರಾಜಕೀಯ ಪಯಣವೂ ಅಂತ್ಯಗೊಂಡಿದೆ. ಈ ಸ್ಥಿತ್ಯಂತರ ಒಂದು ಬಗೆಯ ಖಾಲಿತನವನ್ನಂತೂ ಸೃಷ್ಟಿಸಿದೆ. ಅಲ್ಲದೆ, ಪ್ರಜಾಪ್ರಭುತ್ವದಲ್ಲಿ ಯಾರಿಗೂ ಅಧಿಕಾರ ಶಾಶ್ವತವಲ್ಲ ಎಂಬ ಸಂದೇಶವನ್ನೂ ರವಾನಿಸಿದೆ ಎಂದಿದ್ದಾರೆ ರಾಜಕೀಯ ವಿಶ್ಲೇಷಕರು.

ಸ್ಟಾಲಿನ್‌ಗೆ ವಿರಾಮ

ವಯಸ್ಸು: 73
ರಾಜೀನಾಮೆ: 2026ರ ಮೇ 5
ತಮಿಳುನಾಡಿನಲ್ಲಿ ಟಿವಿಕೆ ಮೂಲಕ ಬೀಸಿದ ರಾಜಕೀಯದ ಹೊಸ ಗಾಳಿ ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿದೆ. ಐದು ವರ್ಷಗಳ ಕಾಲ (2021ರ ಮೇನಿಂದ 2026ರ ಮೇ) ಮುಖ್ಯಮಂತ್ರಿಯಾಗಿದ್ದ ಎಂ.ಕೆ.ಸ್ಟಾಲಿನ್‌ಗೆ ಈಗ ಅನಿವಾರ್ಯವಾದ ರಾಜಕೀಯ ಬಿಡುವು ದೊರೆತಿದೆ. ಡಿಎಂಕೆ ಸಂಸ್ಥಾಪಕ, ತಂದೆ ಎಂ.ಕರುಣಾನಿಧಿ ಗರಡಿಯಲ್ಲೇ ಬೆಳೆದ ಸ್ಟಾಲಿನ್ ಮೊದಲಿಗೆ ಚೆನ್ನೈ ಮೇಯರ್ ಆಗಿದ್ದವರು. ಹೀಗಾಗಿ ನಗರಾಭಿವೃದ್ಧಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದರು.
ಮುಂದೇನು?: ಡಿಎಂಕೆ ಈಗ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಸ್ಟಾಲಿನ್ ಚುನಾವಣೆಯಲ್ಲಿ ಸೋತಿರುವುದರಿಂದ ವಿಧಾನಸಭೆ ಪ್ರವೇಶಿಸಿಲ್ಲ. ಸದ್ಯ, ಪಕ್ಷ ಸಂಘಟನೆಯೇ ಅವರ ಮುಂದಿನ ಗುರಿ ಮತ್ತು ಸವಾಲು ಆಗಿದೆ.
ಕೊಡುಗೆಗಳು
1. ಬಡ ಮಹಿಳೆಯರಿಗೆ ಆರ್ಥಿಕ ನೆರವು.
2. ಕಾಲಮಿತಿಯಲ್ಲಿ ಯೋಜನೆಗಳ ಜಾರಿ.
3. ತಮಿಳುನಾಡಿಗೆ ಹೂಡಿಕೆ ಆಕರ್ಷಿಸಿದ್ದು.

ಗ್ಯಾರಂಟಿ ಸಿದ್ದರಾಮಯ್ಯ

ವಯಸ್ಸು: 77
ರಾಜೀನಾಮೆ: 2026ರ ಮೇ 28
ಕರ್ನಾಟಕವನ್ನು ದೀರ್ಘಾವಧಿಗೆ ಆಳಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದು. 2013ರಿಂದ 2018ರವರೆಗೆ ಪೂರ್ಣಾವಧಿ ಮತ್ತು 2023ರ ಮೇನಿಂದ 2026ರ ಮೇವರೆಗೆ ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣದಲ್ಲೂ ‘ಗ್ಯಾರಂಟಿ ಯೋಜನೆ’ಗಳಿಂದ ಗುರುತಿಸಲ್ಪಡುತ್ತಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಬಡ ಮಹಿಳೆಯರಿಗೆ ಆರ್ಥಿಕ ನೆರವು, ನಿರುದ್ಯೋಗಿ ಪದವೀಧರರಿಗೆ ಸಹಾಯಧನ, ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಮತ್ತು ಬಡ ಕುಟುಂಬಗಳಿಗೆ ಹೆಚ್ಚುವರಿ ಉಚಿತ ಆಹಾರಧಾನ್ಯ (ಅನ್ನಭಾಗ್ಯ) ವಿತರಣೆಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಸಿದ್ದರಾಮಯ್ಯ ಕರ್ನಾಟಕದಲ್ಲಿ ಮಾಸ್ ಲೀಡರ್. ‘ಗ್ಯಾರಂಟಿ ಯೋಜನೆ’ಗಳನ್ನು ಪ್ರತಿಪಕ್ಷಗಳು ವಿರೋಧಿಸಿದ್ದು ಹೌದಾದರೂ, ಇತ್ತೀಚಿನ ದಿನಗಳಲ್ಲಿ ಯಾವುದೇ ರಾಜ್ಯದ ವಿಧಾನಸಭೆ ಚುನಾವಣೆಗೆ ‘ಗ್ಯಾರಂಟಿ’ಗಳೇ ಗೆಲುವಿನ ಸೂತ್ರವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಹಳ್ಳಿಸೊಗಡಿನ ನಾಯಕ ಸಿದ್ದರಾಮಯ್ಯ ಎರಡು ಬಾರಿ ಪ್ರತಿಪಕ್ಷ ನಾಯಕರಾಗಿ, ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಬಳಿಕ, ಕೇಂದ್ರ ರಾಜಕೀಯ ಪ್ರವೇಶಿಸುವ ಅವಕಾಶವಿದ್ದರೂ, ರಾಜ್ಯ ರಾಜಕಾರಣದಲ್ಲೇ ಮುಂದುವರಿಯಲು ನಿರ್ಧರಿಸಿದ್ದಾರೆ.

ನೆನಪಿನಲ್ಲಿ ಉಳಿಯುವ ಸಾಧನೆಗಳು

1. ದಾಖಲೆ 17 ಬಾರಿ ಬಜೆಟ್ ಮಂಡನೆ.
2. ಆಡಳಿತದ ಮೇಲೆ ಬಿಗಿ ಹಿಡಿತ.
3. ಸಮರ್ಥ ತಂಡವನ್ನು ರೂಪಿಸಿ, ಅದನ್ನು ಮುನ್ನಡೆಸುವ ಕಲೆಗಾರಿಕೆ.
4. ಹಲವು ಯೋಜನೆಗಳ ಯಶಸ್ವಿ ಅನುಷ್ಠಾನ.
ಮುಂದೇನು?: ಶಾಸಕತ್ವ ಅವಧಿ ಇನ್ನು ಎರಡು ವರ್ಷವಿದ್ದು, ಅಧಿಕಾರದಲ್ಲಿ ಇಲ್ಲದಿದ್ದರೂ ರಾಜಕೀಯದಲ್ಲಿ ಸಕ್ರಿಯವಾಗಿರಲಿದ್ದಾರೆ.

ಮೇಲ್ಮನೆಯಲ್ಲಿ ನಿತೀಶ್

ವಯಸ್ಸು: 75
ರಾಜೀನಾಮೆ: 2026ರ ಏಪ್ರಿಲ್ 14
ಬಿಹಾರವನ್ನು ದೀರ್ಘಾವಧಿಗೆ ಆಳಿದ ಹೆಗ್ಗಳಿಕೆ ನಿತೀಶ್ ಕುಮಾರ್ ಅವರದ್ದು. 20 ವರ್ಷಕ್ಕೂ ಅಧಿಕ ಅವಧಿ ಸಿಎಂ ಆಗಿದ್ದ ಅವರು, ಒಟ್ಟು ಹತ್ತು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 21 ವರ್ಷಗಳ ಹಿಂದೆ ನಿತೀಶ್ ಮೊದಲಬಾರಿ ಸಿಎಂ ಆಗಿ ಪತ್ರಿಕಾಗೋಷ್ಠಿ ನಡೆಸಿದಾಗ, ‘ಬಿಹಾರದಲ್ಲಿ ಕಾನೂನು ರಾಜ್ (ಆಡಳಿತ) ಜಾರಿಗೆ ತರಲಾಗುವುದು’ ಎಂದು ಹೇಳಿದರು. ಇದನ್ನು ಕೇಳುತ್ತಿದ್ದಂತೆ ಪತ್ರಿಕಾಗೋಷ್ಠಿಯಲ್ಲಿದ್ದ ಪತ್ರಕರ್ತರೇ ವ್ಯಂಗ್ಯವಾಗಿ ನಕ್ಕಿದ್ದರು. ಆದರೆ, ನಿತೀಶ್ ಅಪರಾಧಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಿದರು. ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು ಆರಂಭಿಸಿದರು. ಎರಡೇ ವರ್ಷಗಳಲ್ಲಿ 27 ಸಾವಿರ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಯ್ತು. ಮಹಿಳೆಯರಿಗೆ ಪಂಚಾಯಿತಿಗಳಲ್ಲಿ ಶೇಕಡ 50ರಷ್ಟು ಮತ್ತು ಸರ್ಕಾರಿ ನೌಕರಿಯಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸಿದರು. ಬಿಹಾರವನ್ನು ಆರ್ಥಿಕವಾಗಿಯೂ ಬೆಳವಣಿಗೆಯ ಹಾದಿಯಲ್ಲಿ ತಂದು ನಿಲ್ಲಿಸಿದರು. ಕೇಂದ್ರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ನಿತೀಶ್, ನಿರ್ಧಾರ ತಳೆಯುವುದರಲ್ಲಿ ಮತ್ತು ಅದನ್ನು ಅನುಷ್ಠಾನಕ್ಕೆ ತರುವಲ್ಲಿ ನಿಸ್ಸೀಮರು. ವಯಸ್ಸಿನ ಕಾರಣದಿಂದ ನಿತೀಶ್ ಗೌರವಯುತವಾಗಿಯೇ ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸಿದರು. ಉಪಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಸಾಮ್ರಾಟ್ ಚೌಧರಿ ಈಗ ಬಿಹಾರದ ಸಿಎಂ. ನಿತೀಶ್ ಅವರ ರಾಜಕೀಯ ಅನುಭವದ ಬಗ್ಗೆ ಗೌರವ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ, ನಿತೀಶ್‌ರನ್ನು ಮೇಲ್ಮನೆಯಾದ ರಾಜ್ಯಸಭೆಗೆ ಬರಮಾಡಿಕೊಂಡಿದ್ದಾರೆ.
ಪ್ರಮುಖ ಕೊಡುಗೆಗಳು: ಬಿಹಾರದ ಮಹಿಳೆಯರು ನಿತೀಶ್ ಕುಮಾರ್ ಕೆಲಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಸಾರಾಯಿ ನಿಷೇಧ ಮಾಡಬೇಕು ಎಂಬ ಮಹಿಳೆಯರ ಹಲವು ವರ್ಷಗಳ ಬಹುದೊಡ್ಡ ಬೇಡಿಕೆಯನ್ನು ಈಡೇರಿಸಿದವರು ನಿತೀಶ್. ಮಾತ್ರವಲ್ಲ, ಬಿಹಾರದಲ್ಲಿ ಶಾಲೆಯನ್ನು ಮಧ್ಯದಲ್ಲೇ ತೊರೆಯುವವರ ಸಂಖ್ಯೆ 25 ಲಕ್ಷದಷ್ಟಿತ್ತು. ನಿತೀಶ್ ಕಾಲಾವಧಿಯಲ್ಲಿ ಈ ಸಂಖ್ಯೆ 2 ಲಕ್ಷಕ್ಕೆ ತಗ್ಗಿತು. 2006ರಲ್ಲಿ ಶಾಲಾ ಬಾಲಕಿಯರಿಗಾಗಿ ಉಚಿತವಾಗಿ ಬೈಸಿಕಲ್ ವಿತರಿಸಿ, ಅವರ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು.
ಮುಂದೇನು?: ರಾಜ್ಯಸಭೆ ಸದಸ್ಯರಾಗಿ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ.

ಹೋರಾಟದ ಮಮತೆ

ವಯಸ್ಸು: 71
ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರ ಭದ್ರಕೋಟೆಯನ್ನು ಕೆಡವಿದ ಮಮತಾ ಬ್ಯಾನರ್ಜಿ ನಿರಂತರವಾಗಿ ಮೂರು ಅವಧಿಗೆ ಅಂದರೆ 15 ವರ್ಷಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿದರು. ಮಹಿಳಾ ಮುಖ್ಯಮಂತ್ರಿಯೊಬ್ಬರು ಒಂದೂವರೆ ದಶಕದ ಕಾಲ ರಾಜ್ಯದ ಆಳ್ವಿಕೆ ನಡೆಸಿದ್ದು ಭಾರತೀಯ ರಾಜಕಾರಣದಲ್ಲಿ ದಾಖಲೆಯೇ ಸರಿ. ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಕೂಡ ಮೂರು ಅವಧಿಗೆ ದೆಹಲಿಯ ಮುಖ್ಯಮಂತ್ರಿಯಾಗಿದ್ದರು. ಮೂಲಸೌಕರ್ಯ ಹಾಗೂ ಆರೋಗ್ಯ ಸೇವೆಗಳನ್ನು ಗ್ರಾಮಗಳಿಗೂ ವಿಸ್ತರಿಸಿದ ಮಮತಾ, ಬಡ ಮಹಿಳೆಯರಿಗೆ ‘ಲಕ್ಷ್ಮಿ ಭಂಡಾರ’ ಯೋಜನೆಯಡಿ ಆರ್ಥಿಕ ನೆರವು ಒದಗಿಸಿದ್ದರು. ಆದರೆ, ರಾಜ್ಯದಲ್ಲಿ ಹೆಚ್ಚಳಗೊಂಡ ಅಪರಾಧ ಚಟುವಟಿಕೆಗಳು, ಮಹಿಳೆಯರಿಗೆ ಸುರಕ್ಷತೆ ಇಲ್ಲದಿರುವುದು ಸೇರಿದಂತೆ ಹಲವು ಅಂಶಗಳು ಆಡಳಿತ ವಿರೋಧಿ ಅಲೆಯನ್ನು ತೀವ್ರಗೊಳಿಸಿ, ಮಮತಾರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿದವು. ಮೇ 4ರಂದು ಪ್ರಕಟಗೊಂಡ ಫಲಿತಾಂಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಂಡರೂ, ಸೋಲನ್ನು ಅರಗಿಸಿಕೊಳ್ಳದ ಮಮತಾ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ. ಕೊನೆಗೆ, ರಾಜ್ಯಪಾಲರೇ ವಿಧಾನಸಭೆಯನ್ನು ವಿಸರ್ಜಿಸಿ, ಹೊಸ ಸರ್ಕಾರ ರಚನೆಯ ಪ್ರಕ್ರಿಯೆ ಪೂರ್ಣಗೊಳಿಸಿದರು.
ಮುಂದೇನು?: ಮಮತಾ ಈಗ ಶಾಸಕಿಯೂ ಅಲ್ಲ. ಹೀಗಾಗಿ, ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಮತ್ತೆ ತಳಮಟ್ಟದಿಂದ ಸಂಘಟಿಸಬೇಕಾದ ಸವಾಲು ಅವರ ಮುಂದಿದೆ.

ಸಾಧನೆಗಳು

1. ದಿಟ್ಟ ನಿರ್ಧಾರಗಳು ಮತ್ತು ಅನುಷ್ಠಾನ.
2. ಮೂಲ ಸೌಕರ್ಯಗಳ ವಿಸ್ತರಣೆ.

ವಿಜಯನ್ ಪದತ್ಯಾಗ

ವಯಸ್ಸು: 81
ರಾಜೀನಾಮೆ: 2026ರ ಮೇ 4
ಸತತ ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಪಿಣರಾಯಿ ವಿಜಯನ್, ಎಲ್‌ಡಿಎಫ್ ಒಕ್ಕೂಟವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಜನಕಲ್ಯಾಣದ ಹಲವು ಯೋಜನೆಗಳ ಮೂಲಕ ವಿಜಯನ್ ಜನಪ್ರಿಯರಾದರು. ಆದರೆ, ಎರಡನೇ ಅವಧಿಯಲ್ಲಿ ಕೇಳಿಬಂದ ಭ್ರಷ್ಟಾಚಾರದ ಆರೋಪಗಳು ಮತ್ತು ಆರ್ಥಿಕ ನಿರ್ವಹಣೆಯ ವೈಫಲ್ಯ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸಿದವು.
ಮುಂದೇನು?: ಪಿಣರಾಯಿ ವಿಜಯನ್ ವಿರೋಧ ಪಕ್ಷದಲ್ಲಿದ್ದು, ಪ್ರಮುಖ ವಿಷಯಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಆದರೆ, ವಯಸ್ಸಿನ ಕಾರಣ ಅವರು ಮುಂಬರುವ ವಿಧಾನಸಭೆ ಚುನಾವಣೆ ಸ್ಪರ್ಧಿಸುವ ಸಾಧ್ಯತೆ ಕಡಿಮೆ.

ಸಾಧನೆಗಳು

ಆಡಳಿತಕ್ಕೆ ತಂತ್ರಜ್ಞಾನದ ಸ್ಪರ್ಶ.
ಜನಕಲ್ಯಾಣ ಯೋಜನೆಗಳ ಜಾರಿ.
ಕೇರಳವನ್ನು ಕಡು ಬಡತನ ಮುಕ್ತ ರಾಜ್ಯವಾಗಿಸಿದ್ದು.