ದೇಶಕ್ಕೆ ಡೆಮೊಗ್ರಾಫಿಕ್ ಚೇಂಚ್ ಆಪತ್ತು!; ಗಡಿ ಜಿಲ್ಲೆಗಳಲ್ಲಿ ಜನಸಂಖ್ಯಾ ಬದಲಾವಣೆಯೇ ಅತಿದೊಡ್ಡ ಸವಾಲು: ಅಮಿತ್ ಷಾ ವಾರ್ನಿಂಗ್
ಅಹಮದಾಬಾದ್: ಭಾರತದ ಅಂತಾರಾಷ್ಟ್ರೀಯ ಗಡಿ ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ವೇಗವಾಗಿ ನಡೆಯುತ್ತಿರುವ ಜನಸಂಖ್ಯಾ ಬದಲಾವಣೆಗಳು ದೇಶದ ಆಂತರಿಕ ಭದ್ರತೆಗೆ ಎದುರಾಗಿರುವ ಅತ್ಯಂತ ಗಂಭೀರ ಹಾಗೂ ಭೀಕರ ಸವಾಲು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ(Amit Shah) ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಗುಜರಾತ್‌ನ ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ಕಚ್ ಜಿಲ್ಲೆಯ ಭುಜ್‌ನಲ್ಲಿ ಶುಕ್ರವಾರ ನಡೆದ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಷಾ, ದೇಶದ ಗಡಿಭಾಗದಲ್ಲಿ ಅಸ್ವಾಭಾವಿಕ ಕಾರಣಗಳಿಂದ ನಡೆಯುತ್ತಿರುವ ಈ ಬೆಳವಣಿಗೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕು ಮತ್ತು ದಿನನಿತ್ಯದ ವರದಿಯನ್ನು ಗೃಹ ಸಚಿವಾಲಯಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಖಡಕ್ ಆದೇಶ ನೀಡಿದ್ದಾರೆ.
ಇದೇ ವಾರವಷ್ಟೇ ಅಕ್ರಮ ವಲಸೆ ಹಾಗೂ ಇತರೆ ಅಸ್ವಾಭಾವಿಕ ಕಾರಣಗಳಿಂದ ದೇಶಾದ್ಯಂತ ಆಗುತ್ತಿರುವ ಜನಸಂಖ್ಯಾ ಏರುಪೇರುಗಳನ್ನು ಪತ್ತೆಹಚ್ಚಲು ಅಮಿತ್ ಷಾ ಅವರು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದ ಬೆನ್ನಲ್ಲೇ, ಗಡಿಭಾಗದಲ್ಲಿ ಈ ಭೀಕರ ಆಕ್ಷನ್ ಪ್ಲಾನ್ ಘೋಷಣೆಯಾಗಿದೆ.
ಗಡಿಯ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ‘ಝೀರೋ ಟಾಲರೆನ್ಸ್’; ಡ್ರೋನ್-ಡ್ರಗ್ಸ್ ಜಾಲಕ್ಕೆ ಬ್ರೇಕ್!
ಅಂತಾರಾಷ್ಟ್ರೀಯ ಗಡಿಯಿಂದ 15 ಕಿಲೋಮೀಟರ್ ಒಳಗಿನ ರಕ್ಷಣಾತ್ಮಕ ವಲಯದಲ್ಲಿ ಯಾವುದೇ ರೀತಿಯ ಅನಧಿಕೃತ ಒತ್ತುವರಿ ಅಥವಾ ಅಕ್ರಮ ವಲಸಿಗರ ಆಶ್ರಯ ತಾಣಗಳನ್ನು ಸಹಿಸುವುದಿಲ್ಲ ಎಂದು ಅಮಿತ್ ಷಾ ಗುಡುಗಿದ್ದಾರೆ. ಅಲ್ಲದೆ, ಗಡಿ ಜಿಲ್ಲೆಗಳ ಜನಸಂಖ್ಯಾ ಬದಲಾವಣೆಯು ದೇಶದ ಭವಿಷ್ಯಕ್ಕೆ ಕುತ್ತು ತರಬಲ್ಲದು. ಜಿಲ್ಲಾಧಿಕಾರಿಗಳು ಈ ಬಗ್ಗೆ ತೀವ್ರ ನಿಗಾ ವಹಿಸಬೇಕು. ಗಡಿಭಾಗದಲ್ಲಿ ತಲೆ ಎತ್ತುತ್ತಿರುವ ತೀವ್ರಗಾಮಿ ಕೇಂದ್ರಗಳ ಮೇಲೆ ಸದಾ ಕಣ್ಣಿಟ್ಟಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದೇಶದೊಳಗೆ ಈಗಾಗಲೇ ಅಕ್ರಮವಾಗಿ ನುಸುಳಿರುವವರನ್ನು ಗುರುತಿಸಿ ದೇಶದಿಂದ ಹೊರಹಾಕಲು ಪ್ರತ್ಯೇಕ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ರೂಪಿಸಲು ಗೃಹ ಸಚಿವರು ಆದೇಶಿಸಿದ್ದಾರೆ. ಇದರೊಂದಿಗೆ ಗಡಿಯುದ್ದಕ್ಕೂ ಪಾಕಿಸ್ತಾನಿ ಏಜೆಂಟರು ನಡೆಸುತ್ತಿರುವ ಡ್ರೋನ್ ದಾಳಿಗಳು ಮತ್ತು ಮಾದಕ ದ್ರವ್ಯಗಳ ಕಳ್ಳಸಾಗಣೆಯನ್ನು ಸಂಪೂರ್ಣವಾಗಿ ಮಟ್ಟಹಾಕಲು ತಂತ್ರಜ್ಞಾನ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹವಾಲಾ ದಂಧೆ ಹಾಗೂ ಶೆಲ್ ಕಂಪನಿಗಳ ಮೇಲೆ ‘ಇಡಿ-ಐಟಿ’ ಜಂಟಿ ಸರ್ಜರಿ!
ಗಡಿ ಜಿಲ್ಲೆಗಳಲ್ಲಿ ನಡೆಯುವ ಆರ್ಥಿಕ ಅಪರಾಧಗಳನ್ನು ತಡೆಯಲು ಅಮಿತ್ ಷಾ ಅವರು ಹೊಸದಾಗಿ ಭದ್ರತಾ ಸಮನ್ವಯ ಗುಂಪುಗಳನ್ನು ರಚಿಸಲು ಕರೆ ನೀಡಿದ್ದಾರೆ. ಈ ವಿಶೇಷ ತಂಡದಲ್ಲಿ ಗಡಿ ಭದ್ರತಾ ಪಡೆ (BSF), ಇಂಡಿಯನ್ ಕೋಸ್ಟ್ ಗಾರ್ಡ್, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ (ED) ಮತ್ತು ಪ್ರಮುಖ ಬ್ಯಾಂಕುಗಳ ವ್ಯವಸ್ಥಾಪಕರು ಒಟ್ಟಾಗಿ ಕೆಲಸ ಮಾಡಲಿದ್ದಾರೆ.
ಗಡಿಭಾಗದಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ಹವಾಲಾ ದಂಧೆ, ನಕಲಿ ಬ್ಯಾಂಕ್ ಖಾತೆಗಳು, ತೆರಿಗೆ ಕಳ್ಳತನಕ್ಕಾಗಿ ಸೃಷ್ಟಿಸಲಾಗಿರುವ ಶೆಲ್ ಕಂಪನಿಗಳು ಮತ್ತು ಜಿಎಸ್‌ಟಿ ವಂಚನೆಗಳ ಮೇಲೆ ತೀವ್ರ ನಿಗಾ ಇಡುವ ಜವಾಬ್ದಾರಿಯನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬಾರ್ಡರ್ ರೇಂಜ್ ಐಜಿಪಿ ಹೆಗಲಿಗೆ ಹೊರಿಸಲಾಗಿದೆ. ಆರ್ಥಿಕ ಅಪರಾಧಗಳನ್ನು ತಡೆಯಲು ರಿಸರ್ವ್ ಬ್ಯಾಂಕ್ ಸಹಯೋಗದೊಂದಿಗೆ ಆದಾಯ ತೆರಿಗೆ ಇಲಾಖೆಯು ಗಡಿ ಗ್ರಾಮಗಳಲ್ಲಿ ಬೃಹತ್ ಸರ್ವೆ ಕಾರ್ಯಾಚರಣೆ ನಡೆಸಲಿದೆ ಎಂದು ಅಮಿತ್ ಷಾ ಸ್ಪಷ್ಟಪಡಿಸಿದ್ದಾರೆ.
ಗುಜರಾತ್ ಗಡಿಯಲ್ಲಿ ಸಂಪೂರ್ಣ ಯಶಸ್ಸು; ವಿಜಯಪುರ ಮಾದರಿಯಲ್ಲಿ ವೈಬ್ರೆಂಟ್ ವಿಲೇಜ್!
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಗೃಹ ಸಚಿವ ಹರ್ಷ್ ಸಾಂಘ್ವಿ ಅವರ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ, ಗುಜರಾತ್ ಗಡಿಯಲ್ಲಿ ಬೇಲಿ ನಿರ್ಮಾಣ ಮತ್ತು ಬಲಿಷ್ಠ ರಾಜಕೀಯ ಇಚ್ಛಾಶಕ್ತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ನುಸುಳುವಿಕೆ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಶೂನ್ಯಕ್ಕೆ ಇಳಿದಿರುವುದನ್ನು ಅಮಿತ್ ಷಾ ಶ್ಲಾಘಿಸಿದ್ದಾರೆ. ಗಡಿಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುತ್ತಿರುವುದರಿಂದ ಜನರು ನಗರಗಳಿಂದ ಮತ್ತೆ ಗಡಿ ಗ್ರಾಮಗಳಿಗೆ ಮರಳುತ್ತಿರುವುದು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಶುಭ ಸೂಚನೆಯಾಗಿದೆ ಎಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಶೇ. 100 ರಷ್ಟು ಯೋಜನೆಗಳನ್ನು ಗಡಿ ಗ್ರಾಮಗಳಿಗೆ ತಲುಪಿಸುವ ವೈಬ್ರೆಂಟ್ ವಿಲೇಜಸ್ ಯೋಜನೆಗೆ ಮೊದಲ ಆದ್ಯತೆ ನೀಡಬೇಕು ಎಂದು ಅಮಿತ್ ಷಾ ಕರೆ ನೀಡಿದ್ದಾರೆ.
ಪೊಲೀಸ್ ಸ್ಟೇಷನ್‌ನಿಂದ ಹಿಡಿದು ಗ್ರಾಮ ಕಂದಾಯ ಅಧಿಕಾರಿ ಪ್ರತಿಯೊಬ್ಬರೂ ಒಗ್ಗಟ್ಟಾಗಿ ಕೆಲಸ ಮಾಡಿ, ದೇಶದಲ್ಲಿರುವ ಪ್ರತಿಯೊಬ್ಬ ಅಕ್ರಮ ನುಸುಳುಕೋರನನ್ನು ಗುರುತಿಸಿ ಗಡಿಪಾರು ಮಾಡಲೇಬೇಕು ಎಂದು ಅಮಿತ್ ಷಾ ಅಧಿಕಾರಿಗಳಿಗೆ ನೀಡಿರುವ ಕಟ್ಟುನಿಟ್ಟಿನ ಸಂದೇಶವು ಈಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ,(ಏಜೆನ್ಸೀಸ್).