ಜೆಎಸ್‌ಡಬ್ಲುೃ ಫೌಂಡೇಷನ್‌ನಿಂದ ಆಯೋಜಿಸಿದ್ದ ಶಿಬಿರದಲ್ಲಿ ಚಾಲನಾ ತರಬೇತಿ ಪಡೆದವರಿಗೆ ಸಂಡೂರು ತಾಲೂಕಿನ ತೋರಣಗಲ್‌ನ ಜೆಎಸ್‌ಡಬ್ಲುೃ ಸಭಾಂಗಣದಲ್ಲಿ ಚಾಲನಾ ಪರವಾನಗಿ ನೀಡಲಾಯಿತು. ಜೆಎಸ್‌ಡಬ್ಲುೃ ಫೌಂಡೇಷನ್ ದಕ್ಷಿಣ ವಲಯ ಮುಖ್ಯಸ್ಥ ಪೆದ್ದಣ್ಣ ಬೀಡಲಾ, ಜೆಎಸ್‌ಡಬ್ಲುೃ ಎನರ್ಜಿ ಲಿ.ನ ಶ್ರೀಕಾಂತ್ ಹೆಗಡೆ, ಜೆಎಸ್‌ಡಬ್ಲುೃ ಫೌಂಡೇಷನ್‌ನ ಶ್ರೇಷ್ಠಾ ಭಟ್ಟಾಚಾರ್ಜಿ ಇದ್ದರು. 
ದೇಶ

ಕೌಶಲಯುತ ಚಾಲಕರಿಗೆ ಹೆಚ್ಚಿದೆ ಬೇಡಿಕೆ

ಪ್ರಮುಖ ಮುಖ್ಯಾಂಶಗಳು

  • ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ಸಿಇಒ ರವಿಕಾಂತಯ್ಯಮೂರ್ತಿ ಹೇಳಿಕೆ
ಸಂಡೂರು: ಎನ್‌ಎಸ್‌ಕ್ಯೂಎಫ್ ಹಂತ-4 ಪ್ರಮಾಣೀಕರಣವು ದ್ವಿತೀಯ ಪಿಯುಸಿ ವಿದ್ಯಾರ್ಹತೆಗೆ ಸಮಾನವಾಗಿದೆ ಎಂದು ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ಸಿಇಒ ರವಿಕಾಂತಯ್ಯಮೂರ್ತಿ ಹೇಳಿದರು.
ತೋರಣಗಲ್‌ನ ಜೆಎಸ್‌ಡಬ್ಲುೃ ಸಭಾಂಗಣದಲ್ಲಿ ಜೆಎಸ್‌ಡಬ್ಲುೃ ಫೌಂಡೇಷನ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಭಾರತದೊಂದಿಗೆ ಜರ್ಮನಿ ಸೇರಿದಂತೆ ನಾನಾ ದೇಶಗಳಲ್ಲಿ ಕೌಶಲಯುತ ಚಾಲಕರಿಗೆ ಹೆಚ್ಚಿನ ಬೇಡಿಕೆಯಿದ್ದು, ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಉದ್ಯೋಗಾವಕಾಶಗಳಿಗೆ ಅಗತ್ಯವಾದ ತರಬೇತಿಯನ್ನು ಸ್ಥಳೀಯ ಅಭ್ಯರ್ಥಿಗಳಿಗೆ ನೀಡುವ ಉದ್ದೇಶವಿದೆ ಎಂದರು.
ಈ ಯೋಜನೆಯಡಿ ಕಳೆದ ನವೆಂಬರ್‌ನಲ್ಲಿ ಆರಂಭಗೊಂಡ ತರಬೇತಿ ಪೂರ್ಣಗೊಳಿಸಿದ 100 ಅಭ್ಯರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಚಾಲನಾ ಪರವಾನಗಿ ವಿತರಿಸಲಾಯಿತು. ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ವೃತ್ತಿಪರ ಚಾಲನಾ ಕೌಶಲ, ರಸ್ತೆ ಸುರಕ್ಷತೆ ಹಾಗೂ ಉದ್ಯೋಗಕ್ಕೆ ಅಗತ್ಯವಾದ ತರಬೇತಿ ನೀಡಲಾಯಿತು.
ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ಹಾಗೂ ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ (ಎಲ್‌ಎಸ್‌ಎಸ್‌ಸಿ) ಮಾನ್ಯತೆ ಪಡೆದ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು (ಎನ್‌ಎಸ್‌ಕ್ಯೂಎಫ್) ಹಂತ-4ಕ್ಕೆ ಅನುಗುಣವಾಗಿ ತರಬೇತಿ ನೀಡಲಾಯಿತು.
75 ಅಭ್ಯರ್ಥಿಗಳು ಲಘು ಮೋಟಾರ್ ವಾಹನ ಹಾಗೂ 25 ಅಭ್ಯರ್ಥಿಗಳು ಭಾರಿ ಮೋಟಾರ್ ವಾಹನ ಚಾಲನಾ ತರಬೇತಿ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಸಜ್ಜಾಗಿದ್ದಾರೆ. 100 ಅಭ್ಯರ್ಥಿಗಳ ಪೈಕಿ 32 ಮಹಿಳಾ ಅಭ್ಯರ್ಥಿಗಳಿದ್ದಾರೆ. ಸಾರಿಗೆ ಕ್ಷೇತ್ರದಲ್ಲಿ ಮಹಿಳೆಯರು ಹೊಸ ಅವಕಾಶಗಳನ್ನು ಸ್ವೀಕರಿಸುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.
ಜೆಎಸ್‌ಡಬ್ಲುೃ ಸ್ಟೀಲ್ಸ್ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್ ಮಾತನಾಡಿ, ಇಂದಿನ ಅಭಿವೃದ್ಧಿ ಚಕ್ರಗಳ ಮೇಲೆ ಸಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಅಭ್ಯರ್ಥಿಗಳಿಗೆ ಗೌರವಯುತ ಮತ್ತು ಶಾಶ್ವತ ಜೀವನೋಪಾಯದ ಅವಕಾಶಗಳನ್ನು ಕಲ್ಪಿಸುವುದರೊಂದಿಗೆ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಕೆಲಸ ಮಾಡುತ್ತವೆ ಎಂದರು. ತೋರಣಗಲ್ ಗ್ರಾಮದ ಅಭ್ಯರ್ಥಿ ಕೀರ್ತಿ ಮಾತನಾಡಿದರು. ಡಿಬಿ ಸ್ಕಿಲ್ಸ್ ಫೌಂಡೇಷನ್‌ನ ಗೋಪಾಲ್ ಮಣಿ ಮುಂತಾದವರಿದ್ದರು.