ಪ್ರಧಾನಿ ಮೋದಿ ಮತ್ತು ಸಿಎಂ ವಿಜಯ್ 
ದೇಶ

ಚೆನ್ನೈನಲ್ಲಿ ಸುಪ್ರೀಂಕೋರ್ಟ್‌ನ ಶಾಶ್ವತ ಪೀಠ ಸ್ಥಾಪನೆ ಬೇಡಿಕೆ: ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ವಿಜಯ್ | CM Vijay

ಚೆನ್ನೈನಲ್ಲಿ ಸುಪ್ರೀಂಕೋರ್ಟ್‌ನ ಶಾಶ್ವತ ಪೀಠವನ್ನು ಸ್ಥಾಪಿಸಬೇಕೆಂಬ ದೀರ್ಘಕಾಲದ ಬೇಡಿಕೆಯನ್ನು ಮತ್ತೊಮ್ಮೆ ಎತ್ತಿರುವ ತಮಿಳುನಾಡು ಸಿಎಂ ವಿಜಯ್, ಈ ಸಂಬಂಧ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಮತ್ತು ಬಹಳ ಕಾಲದಿಂದ ಬಾಕಿಯಿರುವ ವಿಷಯವನ್ನು ಸುಪ್ರೀಂಕೋರ್ಟ್ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ.

ಚೆನ್ನೈ: ಚೆನ್ನೈನಲ್ಲಿ ಸುಪ್ರೀಂಕೋರ್ಟ್‌ನ ಶಾಶ್ವತ ಪೀಠವನ್ನು ಸ್ಥಾಪಿಸಬೇಕೆಂಬ ದೀರ್ಘಕಾಲದ ಬೇಡಿಕೆಯನ್ನು ಮತ್ತೊಮ್ಮೆ ಎತ್ತಿರುವ ತಮಿಳುನಾಡು ಸಿಎಂ ವಿಜಯ್, ಈ ಸಂಬಂಧ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಮತ್ತು ಬಹಳ ಕಾಲದಿಂದ ಬಾಕಿಯಿರುವ ವಿಷಯವನ್ನು ಸುಪ್ರೀಂಕೋರ್ಟ್ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ.

ಸಿಎಂ ವಿಜಯ್ ಅವರು ಬರೆದ ಪತ್ರದಲ್ಲಿ, ಚೆನ್ನೈನಲ್ಲಿ ಪೀಠವೊಂದನ್ನು ಸ್ಥಾಪಿಸುವುದರಿಂದ ದಕ್ಷಿಣ ಭಾರತದ ಜನರಿಗೆ ನ್ಯಾಯ ಪಡೆಯುವುದು ಸುಲಭವಾಗುತ್ತದೆ. ಮತ್ತು ಇದು ದೇಶದ ಒಕ್ಕೂಟ ವ್ಯವಸ್ಥೆಯ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಈ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್‌ನೊಂದಿಗೆ ಹೊಸದಾಗಿ ಚರ್ಚಿಸಿ, ಅನುಕೂಲಕರ ನಿರ್ಧಾರವನ್ನು ಪಡೆಯುವಂತೆ ಪ್ರಧಾನಿ ಮೋದಿಯವರಿಗೆ ಒತ್ತಾಯಿಸಿರುವ ಅವರು, ಸುಪ್ರೀಂ ಕೋರ್ಟ್ ಪೀಠವನ್ನು ಸ್ಥಾಪಿಸುವುದರಿಂದ ಕೇವಲ ತಮಿಳುನಾಡಿಗೆ ಮಾತ್ರವಲ್ಲದೆ, ದಕ್ಷಿಣದ ಎಲ್ಲಾ ರಾಜ್ಯಗಳಿಗೂ ಪ್ರಯೋಜನವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.

ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ದೆಹಲಿ ಹೊರತುಪಡಿಸಿ ಬೇರೆಡೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಲು ಅವಕಾಶ ನೀಡುವ ಸಂವಿಧಾನದ 130ನೇ ವಿಧಿಯನ್ನು ಉಲ್ಲೇಖಿಸಿರುವ ವಿಜಯ್, ತಮಿಳುನಾಡು 1980ರಲ್ಲಿ ಈ ಪ್ರಸ್ತಾವನೆಯನ್ನು ಮೊದಲು ಪ್ರಸ್ತಾಪಿಸಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ನ್ಯಾಯಾಧೀಶರಿಗೆ ವಸತಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ್ದರೂ, ಸುಪ್ರೀಂಕೋರ್ಟ್‌ನ ಪೂರ್ಣ ಪೀಠವು 2007ರಲ್ಲಿ ಅದನ್ನು ತಿರಸ್ಕರಿಸಿತು. ದೆಹಲಿಯಿಂದ ದೂರ ಮತ್ತು ಪ್ರಯಾಣ ಮತ್ತು ಮೊಕದ್ದಮೆಯ ವೆಚ್ಚದಿಂದಾಗಿ ದಕ್ಷಿಣ ರಾಜ್ಯಗಳ ಜನರಿಗೆ 32 ನೇ ವಿಧಿಯ ಅಡಿಯಲ್ಲಿ ಸಾಂವಿಧಾನಿಕ ಪರಿಹಾರವು ಪ್ರಾಯೋಗಿಕವಾಗಿ ಕಷ್ಟಕರವಾಗಿದೆ ಎಂದಿದ್ದಾರೆ.

2004, 2006, 2008 ಮತ್ತು 2021ರಲ್ಲಿ ಸಂಸದೀಯ ಸ್ಥಾಯಿ ಸಮಿತಿಗಳು ನೀಡಿದ ಶಿಫಾರಸುಗಳನ್ನು ಮತ್ತು ಶಾಶ್ವತ ಪ್ರಾದೇಶಿಕ ಪೀಠಗಳ ಪರವಾಗಿ ಕಾನೂನು ಆಯೋಗದ ವರದಿಗಳನ್ನು ವಿಜಯ್ ಉಲ್ಲೇಖಿಸಿದ್ದು, ಸುಪ್ರೀಂಕೋರ್ಟ್‌ನ ಪ್ರಾದೇಶಿಕ ಪೀಠಗಳನ್ನು ಸ್ಥಾಪಿಸುವ ಕುರಿತಾದ ಪ್ರಕರಣವೊಂದರಲ್ಲಿ, ಈ ವಿಷಯವನ್ನು 2016ರಲ್ಲಿ ಐವರು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠಕ್ಕೆ ಪರಿಶೀಲನೆಗೆ ಒಪ್ಪಿಸಲಾಯಿತು ಎಂದು ತಿಳಿಸಿದ್ದಾರೆ.

ಚೆನ್ನೈನ ಕಾನೂನು ಪರಂಪರೆಯನ್ನು ಎತ್ತಿ ತೋರಿಸಿರುವ ವಿಜಯ್, 1862ರಲ್ಲಿ ಸ್ಥಾಪನೆಯಾದ ಮದ್ರಾಸ್ ಹೈಕೋರ್ಟ್, ಭಾರತದ ಅತ್ಯಂತ ಹಳೆಯ 'ಚಾರ್ಟರ್ಡ್' ಹೈಕೋರ್ಟ್‌ಗಳಲ್ಲಿ ಒಂದಾಗಿದೆ. ಅಲ್ಲದೆ, ಮದ್ರಾಸ್ ಹೈಕೋರ್ಟ್ ಬಾರ್ ಕೌನ್ಸಿಲ್‌ನ ವೃತ್ತಿಪರ ಸಾಮರ್ಥ್ಯವನ್ನು ಎತ್ತಿ ತೋರಿಸಿ ದಕ್ಷಿಣ ರಾಜ್ಯಗಳಿಗೆ ಸೇವೆ ಸಲ್ಲಿಸಲು ಈ ನಗರವು ಆಯಕಟ್ಟಿನ ಸ್ಥಳದಲ್ಲಿದೆ ಎಂದು ಹೇಳಿದ್ದಾರೆ.

ಈ ಹಿನ್ನೆಲೆ ಪ್ರಾದೇಶಿಕ ಪೀಠವೊಂದನ್ನು ಸ್ಥಾಪಿಸುವುದರಿಂದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ, ಏಕೆಂದರೆ ಅದರ ಮೇಲಿನ ನಿಯಂತ್ರಣವು ಭಾರತದ ಮುಖ್ಯ ನ್ಯಾಯಮೂರ್ತಿಗಳ ಕೈಯಲ್ಲೇ ಇರುತ್ತದೆ ಎಂದು ಪ್ರತಿಪಾದಿಸಿದ್ದಾರೆ (ಏಜೆನ್ಸೀಸ್).