ದೇಶ

ಸಿಇಸಿ ರಾಜೀನಾಮೆ ಬೇಡಿಕೆ ರಾಷ್ಟ್ರಪತಿ ಅಂಗಳಕ್ಕೆ: ರಾತ್ರಿ 8 ಗಂಟೆಗೆ ಇಂಡಿಯಾ ಕೂಟದ ನಾಯಕರಿಂದ ದ್ರೌಪದಿ ಮುರ್ಮು ಭೇಟಿ| INDIA bloc

ಎಸ್​ಐಆರ್ ವಿವಾದ ಮತ್ತು ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಬೇಡಿಕೆ ರಾಷ್ಟ್ರಪತಿ ಅಂಗಳ ತಲುಪಿದ್ದು, ಇಂದು(ಅ. 09) 8 ಗಂಟೆಗೆ ಇಂಡಿಯಾ ಕೂಟದ ನಾಯಕರ ನಿಯೋಗ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ರಾಜೀನಾಮೆ ಪಡೆಯುವಂತೆ ಒತ್ತಾಯಿಸಲಿದೆ ಎಂದು ವರದಿಯಾಗಿದೆ.

ನವದೆಹಲಿ: ಎಸ್​ಐಆರ್ ವಿವಾದ ಮತ್ತು ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಬೇಡಿಕೆ ರಾಷ್ಟ್ರಪತಿ ಅಂಗಳ ತಲುಪಿದ್ದು, ಇಂದು(ಅ. 09) 8 ಗಂಟೆಗೆ ಇಂಡಿಯಾ ಕೂಟದ ನಾಯಕರ ನಿಯೋಗ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ರಾಜೀನಾಮೆ ಪಡೆಯುವಂತೆ ಒತ್ತಾಯಿಸಲಿದೆ ಎಂದು ವರದಿಯಾಗಿದೆ.

ಸಿಇಸಿ ರಾಜೀನಾಮೆ ಮತ್ತು ಎಸ್​ಐಆರ್ ವಿವಾದದ ಬಗ್ಗೆ ಮಧ್ಯಪ್ರವೇಶಿಸಿ ಪರಿಹರಿಸುವಂತೆ ಒತ್ತಾಯಿಸಲು ರಾಷ್ಟ್ರಪತಿ ಮುರ್ಮು ಅವರನ್ನು ಭೇಟಿ ಮಾಡಲು ವಿಪಕ್ಷಗಳ ಇಂಡಿಯಾ ಕೂಟದ ನಾಯಕರು ಸಮಯಾವಕಾಶ ಕೋರಿದ್ದರು. ಮತ್ತು ಇಂದು ರಾತ್ರಿ 8 ಗಂಟೆಗೆ ರಾಷ್ಟ್ರಪತಿಗಳು ಸಮಯ ನೀಡಿದ್ದನ್ನು ರಾಷ್ಟ್ರಪತಿ ಭವನ ದೃಢಪಡಿಸಿದೆ.

ನಿಯೋಗದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಇತರರು ಇದ್ದಾರೆ.

ಇಂಡಿಯಾ ಕೂಟದ ನಾಯಕರು ಇಂದು ಸಂಜೆ 5 ಗಂಟೆಗೆ ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ಸಭೆ ಸೇರಲಿದ್ದು, ನಂತರ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ನಡೆಸುವ ಸಾಧ್ಯತೆಯಿದೆ.

ಇನ್ನೂ ರಾಷ್ಟ್ರಪತಿ ಭೇಟಿ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್, ವಿರೋಧ ಪಕ್ಷದ ಮೈತ್ರಿಕೂಟವು ಅ. 2ರಂದು ರಾಷ್ಟ್ರಪತಿಯವರ ಭೇಟಿಗೆ ಸಮಯಾವಕಾಶ ಕೋರಿತ್ತು. ಬಳಿಕ ರಾಷ್ಟ್ರಪತಿ ಭವನವು ಸಭೆಯಲ್ಲಿ ಭಾಗವಹಿಸುವ ನಾಯಕರ ಹೆಸರುಗಳನ್ನು ಕೇಳಿತು. ಅ. 5ರಂದು ಇಂಡಿಯಾ ಬ್ಲಾಕ್ ಹೆಸರುಗಳನ್ನು ಸಲ್ಲಿಸಿತು. ಮತ್ತು ಅ. 7, 8 ಅಥವಾ 9 ರಂದು ಸಮಯಾವಕಾಶಕ್ಕಾಗಿ ಮತ್ತೆ ಮನವಿ ಮಾಡಲಾಗಿದೆ ಎಂದು ಹೇಳಿದ್ದರು (ಏಜೆನ್ಸೀಸ್).